ಭಾನುಪ್ರಕಾಶ್ ಹೆಸರು ಹೇಳುವಂತೆ ಅವರು ತಮ್ಮ ಬದುಕಿನ ಕೊನೆವರೆಗೂ ಜನಗಳ ಕತ್ತಲೆಯನ್ನು ದೂರ ಮಾಡಿ ಪ್ರಕಾಶಿಸಿದವರು. ಇನ್ನೂ ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಚಿರಪರಿಚಿತ ಹೆಸರು. ಇನ್ನು ಅವರು ರಾಜ್ಯಕ್ಕೆ ಪರಿಚಯವಾದದ್ದು ( ಮಾಧ್ಯಮದಲ್ಲಿ ) ಬಿಜೆಪಿ ಸರ್ಕಾರವು ತನ್ನ ಪಕ್ಷ ಸಿದ್ಧಾಂತದಿಂದ ಸ್ವಲ್ಪ ದೂರವಾಗುತ್ತಿದೆ ಎಂದಾಗ ಅವರ ಸ್ನೇಹಿತರಾದ ಈಶ್ವರಪ್ಪ ಅವರೊಟ್ಟಿಗೆ ಸುದ್ದಿಗೋಷ್ಠಿಯನ್ನು ನಡೆಸಿ ಅದನ್ನು ಖಂಡಿಸಿದಾಗಲೇ . ಒಬ್ಬ ವ್ಯಕ್ತಿ ಬದುಕಿನುದ್ದಕ್ಕೂ ಒಂದು ತತ್ವ ಸಿದ್ಧಾಂತವಿಲ್ಲದೆ ಅನುಕೂಲ ಸಿಂಧು ರಾಜಕಾರಣ ಮಾಡುತ್ತ ಇರುವ ಈ ಕಾಲಘಟ್ಟದಲ್ಲಿ ಅದಕ್ಕೆ ಅಪವಾದ ಎನ್ನುವಂತೆ ಅವರು ಎಂದಿಗೂ ತತ್ವ ಸಿದ್ಧಾಂತಕ್ಕೆ ರಾಜಿಯಾದವರಲ್ಲ. ರಾಜ್ಯದ್ಯಂತ ಪ್ರಚಾರಗಿಟ್ಟಿಸಿಕೊಳ್ಳುವ ಅವಕಾಶವಿದ್ದರೂ ಎಲೆ ಮರೆಯ ಕಾಯಿಯಂತೆ ಜನಸೇವೆ ಮಾಡುತ್ತಾ ಕಳೆದವರು. ಅವರು ಅಧಿಕಾರಕ್ಕಾಗಿ ಕೇಸರಿ ಶಾಲು ಹಾಕಿದವರಲ್ಲ. ತಮ್ಮ ಹೋರಾಟದ ಮನೋಭಾವನೆ ಮೂಲಕ ಕಾರ್ಯಕರ್ತರಲ್ಲಿ ಜನರಲ್ಲಿ ಜಾಗೃತಿ ಮೂಡಿ ಸುತ್ತ ಬಂದವರು.
ಅವರು ಆರ್.ಎಸ್.ಎಸ್ ಮುಖಾಂತರ ರಾಜಕೀಯ ಪ್ರವೇಶ ಮಾಡಿದವರು. ಸ್ವಚ್ಛಾರಿತವನ್ನು ಇಟ್ಟುಕೊಂಡು ಕೊನೆವರೆಗೂ ರಾಜಕಾರಣವನ್ನು ಮಾಡಿದ ವಿರಳಾತಿ ವೀರರಲ್ಲಿ ಅವರು ಒಬ್ಬರು. ಭಾನುಪ್ರಕಾಶ್, ಈಶ್ವರಪ್ಪ, ಯಡಿಯೂರಪ್ಪ ಎಲ್ಲರೂ ಸಮಕಾಲಿನವರು. ಭಾರತೀಯ ಜನ ಸಂಘದಲ್ಲಿ ಗುರುತಿಸಿಕೊಂಡಿದ್ದ ಭಾನುಪ್ರಕಾಶ್ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿ ಬಂದವರು. ಭಾರತೀಯ ಜನತಾ ಪಾರ್ಟಿ ಆರಂಭದ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಕೆಲಸ ಬಲು ಜೋರಾಗಿ ನಡೆಯುತ್ತಿದ್ದ ಕಾಲ. ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡುತ್ತಿದ್ದ ಕಾಲಘಟ್ಟದಲ್ಲಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬಂದರೆ ಅವರ ಮುಂದಿನ ಪ್ರವಾಸ ಅನುಕೂಲವಾಗಲು ಬಸ್ಸಿನಲ್ಲಿ ಟಿಕೆಟ್ ಸ್ಥಳವನ್ನು ಕಾಯ್ದಿರಿಸಿ ಅವರಿಗೆ ಬಿಟ್ಟುಕೊಡುತ್ತಿದ್ದರು. ಯಡೂರಪ್ಪ, ಈಶ್ವರಪ್ಪ ಇಬ್ಬರೊಟ್ಟಿಗೂ ಒಳ್ಳೆಯ ಸ್ನೇಹ ಸಂಬಂಧವನ್ನು ಇಟ್ಟುಕೊಂಡು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾನುಪ್ರಕಾಶ್ ಎಂದರೆ ಪಕ್ಷದ ಸಭೆ ಸಮಾರಂಭಗಳಲ್ಲಿ ಶೋಭೆ ಇರುತ್ತಿತ್ತು .
ರಾಜಕೀಯ ಹೊರತದ ಅವರ ವ್ಯಕ್ತಿತ್ವ ವಿರೋಧಿಗಳನ್ನು ಮಂತ್ರಮುಗ್ಧಗೊಳಿಸುವಂತಿತ್ತು. ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪನವರ ವಿರುದ್ಧ ಬಿಜೆಪಿ ಪಕ್ಷವು ಭಾನುಪ್ರಕಾಶ್ ಅವರನ್ನು ಕಣಕ್ಕಿಳಿಸಿದ್ದ ಸಮಯ, ಅಚಾನಕ್ಕಾಗಿ ಬಂಗಾರಪ್ಪ ಹಾಗೂ ಭಾನುಪ್ರಕಾಶ್ ಅವರು ಚುನಾವಣಾ ಪ್ರಚಾರ ಸಮಯದಲ್ಲಿ ಎದುರು ಬದುರು ಬರುವಂತಹ ಸನ್ನಿವೇಶ ಉದ್ಭವವಾಯಿತು. ಭಾನುಪ್ರಕಾಶ್ ಹಾಗೂ ಬಂಗಾರಪ್ಪನವರು ಪರಸ್ಪರ ಶುಭ ಹಾರೈಸಿದರು. ಇಬ್ಬರ ಗೆಲುವಿಗಾಗಿ ಹೋರಾಡುತ್ತಿದ್ದರು ಪರಸ್ಪರ ಶುಭ ಹಾರೈಕೆ ಬಹು ವಿರಳವೆಂದು ಹೇಳಬಹುದು. ರಾಜಕೀಯವನ್ನು ತೀರ ವ್ಯಕ್ತಿಗತವಾಗಿ ತೆಗೆದುಕೊಂಡು ಯಾರನ್ನು ವಿರೋಧಿಸಿದವರಲ್ಲ. ಅವರದು ಏನಿದ್ದರೂ ತಾಯಿ ಭಾರತೀಯ ಸೇವೆ, ದೇಶದ ಪ್ರಜೆಗಳೆಲ್ಲ ತಾಯಿ ಭಾರತಾಂಬೆಯ ಮಕ್ಕಳು ಎಂಬ ನಿಲುವು ಹೊಂದಿದ್ದವರು.
ಭಾನುಪ್ರಕಾಶ್ ಅವರು ಪಕ್ಷದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದವರು ಎಂದು ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ರಾಜಕೀಯಕ್ಕಾಗಿ ಬೇರೆಯವರನ್ನು ತುಳಿದವರಲ್ಲ ಹಾಗಾಗಿ ರಾಜಕೀಯ ವಿರೋಧಿಗಳು ಕೂಡ ಅವರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಪಕ್ಷ ನಿಷ್ಠೆಯನ್ನು ನೋಡಿ ಪಕ್ಷವೂ ಅವರನ್ನು ಎಮ್ಎಲ್ಸಿ ಮಾಡಿದ್ದು, ಆ ಅಧಿಕಾರವನ್ನು ಉಪಯೋಗಿಸಿಕೊಂಡು ಅವರ ಕಾರ್ಯವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಅವರು ಎಂದು ಕೂಡ ಹಿರಿಯರು, ಕಿರಿಯರಲ್ಲಿ ಬೇಧ ಭಾವವನ್ನು ಮಾಡಿದವರಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಅಧಿಕಾರ ಇರುವವರನ್ನು ಕೂಡ ಸಮನಾಗಿ ನೋಡುತ್ತಿದ್ದ ಸರಳ ಸಜ್ಜನ ರಾಜಕಾರಣಿ, ತಮ್ಮ ದೀನ ದಲಿತರ ಪರವಾದ ಹೋರಾಟದ ಮುಖಾಂತರವೇ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸುತ್ತಾ ತಾಯಿ ಭಾರತಾಂಬೆಗೆ ಸಮರ್ಪಿತವಾದರು.