Sunday, February 26, 2023

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ.

                ನಿಮಗೆ ಭೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂದರೆ ಯಾರು ಎಂದು ತಿಳಿಯಲು ಸ್ವಲ್ಪ ಯೋಚಿಸಬಹುದು. ಅದೇ ಬಿ.ಎ.ವೈ ಎಂದರೆ ಥಟ್ ಎಂದು ನೆನಪಾಗುವುದು ರಾಜ್ಯ ಕಂಡ ಧೀಮಂತ ನಾಯಕ, ಹುಟ್ಟು ಹೋರಾಟಗಾರ,  ಹಠವನ್ನು ಬಿಡದ ಛಲವಂತ, ನಂಬಿ ಬಂದವರನ್ನು ಎಂದು ಕೈ ಬಿಡದ, ಹಲವಾರು ನಾಯಕರನ್ನು ಬೆಳೆಸಿದ ಯಡಿಯೂರಪ್ಪನವರು. ಬದುಕೇ ಹಾಗೆ ಹಲವಾರು ಸವಾಲುಗಳನ್ನು ಎಸೆಯುತ್ತಿರುತ್ತದೆ. ಅವುಗಳನ್ನು ಮೆಟ್ಟಿ ನಿಲ್ಲುವುದೇ ಒಂದು ಸವಾಲು. ಅಂತಹದರಲ್ಲಿ ರಾಜಕೀಯ ಎಂದರೆ ಹೇಗಿರಬೇಡ ! ಅಲ್ಲಿ ಎಲ್ಲಾ ರೀತಿಯ ಸವಾಲನ್ನು ಸ್ವೀಕರಿಸಲು ನಾವು ಸಿದ್ಧರಿರಬೇಕು. ಅದು ಎಲ್ಲರಿಂದ ಸಾಧ್ಯವಿಲ್ಲ ಆ ಸವಾಲನ್ನು ಸ್ವೀಕರಿಸಿ ನಿಂತವರು ಶ್ರೀಯುತ ಯಡಿಯೂರಪ್ಪನವರು ಅವರು ಬೆಳೆದು ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ.
           ಬಿಎಸ್ ವೈ ಅವರು 27 ನೇ ಫೆಬ್ರವರಿ 1943ರಲ್ಲಿ ಮಂಡ್ಯ ಜಿಲ್ಲೆಯ ಭೂಕನಕೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಪ್ಪ ತಾಯಿ ಪುಟ್ಟತಾಯಮ್ಮ. ನಾಲ್ಕು ವರ್ಷಗಳಲ್ಲೇ ತಾಯನ್ನು ಕಳೆದುಕೊಂಡ ಯಡಿಯೂರಪ್ಪನವರು, ಮಂಡ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1960ರಲ್ಲಿ ವಿದ್ಯಾಭ್ಯಾಸ ಮುಗಿಸಿದರು. 1965 ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸವು ಸಿಕ್ಕಿತ್ತು. ತನಗೆ ಒಗ್ಗದ ಕೆಲಸ ಬಿಟ್ಟು ಅಲ್ಲಿಂದ ನೇರವಾಗಿ ಶಿಕಾರಿಪುರಕ್ಕೆ ಹೋದರು. ಅಲ್ಲಿ ವೀರಭದ್ರ ಶಾಸ್ತ್ರಿಯವರ ಶಂಕರ ರೈಸ್ ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಅವರ ಪ್ರಾಮಾಣಿಕತೆ ಕಾರ್ಯ ವೃತ್ತಿಯನ್ನು ಗಮನಿಸಿದ ಮಾಲೀಕರು ತಮ್ಮ ಮಗಳಾದ ಮೈತ್ರಿದೇವಿಯನ್ನು ಕೊಟ್ಟು ಮದುವೆ ಮಾಡಿದರು.
          ತಮ್ಮ ರಾಜಕೀಯ ಜೀವನವನ್ನು ಶಿಕಾರಿಪುರದಿಂದ ಆರಂಭಿಸಿದ ಬಿಎಸ್‌ವೈ 1972ರ ಶಿಕಾರಿಪುರದ ಪುರಸಭೆಗೆ ಆಯ್ಕೆಯಾಗುವುದರ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ಎಮರ್ಜೆನ್ಸಿಯ ಸಮಯದಲ್ಲಿ ಅವರನ್ನು ಬಳ್ಳಾರಿಯ ಹಾಗೂ ಶಿವಮೊಗ್ಗ ಜೈಲಿನಲ್ಲಿ ಇರಿಸಲಾಯಿತು. 1983ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ಜಯಗಳಿಸಿದರು. 1985ರಲ್ಲಿ ಅವರನ್ನು ಬಿಜೆಪಿಯ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಯಿತು. 1994ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ನಿರಂತರ ಹೋರಾಟದ ಪ್ರತಿಫಲವಾಗಿ ಅಕ್ಟೋಬರ್ 2007ರಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲು ಕಾರಣಿಭೂತರಾದರು. ಯಡಿಯೂರಪ್ಪನವರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ತೆರೆದಂತಾಯಿತು. ಬಿಜೆಪಿಯಲ್ಲಿನ ಕೆಲವು ಕುತಂತ್ರಿಗಳ ಫಲವಾಗಿ 30 ನವಂಬರ್ 2012ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದರು. ಅಲ್ಲೂ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ ಬಿಎಸ್ ವೈ ಬಿಜೆಪಿ ಒಳಗಿದ್ದ ಕುತಂತ್ರಿಗಳಿಗೆ ತಾನು ಏನೆಂದು ತೋರಿಸಿಕೊಟ್ಟರು. ಆನಂತರ ಬಿಜೆಪಿಯ ಕೇಂದ್ರ ನಾಯಕರು ಹಾಗೂ ರಾಜ್ಯದ ಹಲವು ನಾಯಕರು ಒತ್ತಾಸೆಯ ಮೇರೆಗೆ ಪುನ ಬಿಜೆಪಿಗೆ ಸೇರ್ಪಡೆಯಾದರು. ಮತ್ತೆ ಮುಖ್ಯಮಂತ್ರಿಗಾದಿ ಅವರಿಗೆ ಒಲಿದು ಬಂತು. ಅವರು ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಒಬ್ಬ ಉತ್ತಮ ನಾಯಕ ಮಾತ್ರ ಹಲವರನ್ನು ಬೆಳೆಸಲು ಸಾಧ್ಯ. ಕಾರ್ಯಕರ್ತರನ್ನು ಬಳಸಿಕೊಳ್ಳುವ ಹಲವು ಸ್ವಯಂಘೋಷಿತ ನಾಯಕರ ಮಧ್ಯೆ, ಕಾರ್ಯಕರ್ತರನ್ನು ಬೆಳೆಸುವ ಮನಸ್ಥಿತಿ ಇರುವಂತ ಯಡಿಯೂರಪ್ಪನವನಂತವರು ತುಂಬಾ ಅಪರೂಪ. ಅದಕ್ಕಾಗಿ ಅವರು ಇಂದು ನೆಚ್ಚಿನ ನಾಯಕರಾಗಿ ಉಳಿದಿರುವುದು. ಅವರನ್ನು ಹೊರಗಿನವರಿಗಿಂತ ಅವರ ಜೊತೆಗಿದ್ದು ಹಿತ ಶತ್ರುಗಳಾಗಿ ಕೆಲಸ ಮಾಡಿದ ವಿರೋಧಿಗಳ ಕೈಯಲ್ಲಿ ಏನು ಸಾಧಿಸಲಾಗಲಿಲ್ಲ. ನೇರ ಶತ್ರುಗಳನ್ನು ಗೆಲ್ಲಬಹುದು ಹಿತ ಶತ್ರುಗಳನ್ನು ಸಂಭಾಳಿಸುವುದು ಸುಲಭವಲ್ಲ. ಅವರನ್ನು ವಿರೋಧಿಸಿದ ಗುಂಪು ಇಂದು ಅವರ ಮುಂದೆ ಕೈಕಟ್ಟಿ ನಿಂತಿದೆ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ದೊಡ್ಡ ಮಟ್ಟದ ಅಭಿವೃದ್ಧಿಯನ್ನು ಕಂಡಿತು. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಯಾಗುತ್ತಿದೆ. ಅದು ಅವರ ಕನಸು, ಅವರಿಗೆ ಗೊತ್ತಿತ್ತು ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆಂದು ಹಾಗಾಗಿ ಅವರು ಟೀಕೆಗಳಿಗೆ ಕಿವಿ ಕೊಡಲಿಲ್ಲ ಕೆಲಸದ ಬಗ್ಗೆ ನಿಗವಹಿಸಿದರು.

No comments: