Saturday, February 19, 2022

ಸಮಯ ಸರಿದಾಗ....

            
                   ಕೆಲವೊಮ್ಮೆ ಅನ್ನಿಸುವುದುಂಟು, ನಾನು ಒಬ್ಬಂಟಿಯಾಗಿ ಇದ್ದೇನೆಂದು. ಸತ್ಯವೇನೆಂದರೆ ನೀವು ಯಾವಾಗಲೂ ಒಬ್ಬಂಟಿ. ಆ ಸತ್ಯದ ಅರಿವನ್ನು ಹುಡುಕುವುದೇ ಈ ಲೇಖನದ ಉದ್ದೇಶ. ಹೌದು ಮನುಷ್ಯ ಸಂಘಜೀವಿ ಎಲ್ಲಿಯವರೆಗೆ ಎಂದು ಕೇಳಿದರೆ ಕೆಲವರಿಗೆ ಉತ್ತರ ದೊರಕುವುದಿಲ್ಲ. ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಸಂಘದಲ್ಲೇ ಇರುತ್ತಾನೆ ಆದರೆ ಯಾವಾಗಲೂ ಒಬ್ಬಂಟಿಯಾಗಿ ಇರುತ್ತಾನೆ ಹೌದು ತನ್ನ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಹಾಗು ತನ್ನ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅವನಿಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದೆ. ಆವಾಗ ಮನುಷ್ಯ ಸಂಘಜೀವಿಯಾಗುತ್ತಾನೆ ತಾನು ತನ್ನವರು ನನ್ನವರು ಎಂದು ಎಲ್ಲರೂ ಬೇಕಾಗುತ್ತಾರೆ. ಏಕೆಂದರೆ ಅಲ್ಲಿ ಅವನಿಗೆ ಬೇಕಾಗಿದ್ದನ್ನು  ಸಾಧಿಸುವ ಉದ್ದೇಶವಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತಾನೆ. ಆವಾಗಲೇ ಹುಟ್ಟುವುದು ಸಂಬಂಧಗಳೆಂಬ ಕೊಂಡಿ ಅದಕ್ಕೆ ಹಲವಾರು ಹೆಸರುಗಳು ಸ್ನೇಹ, ರಕ್ತಸಂಬಂಧಿ,ಜಾತಿ ಸಂಬಂಧಿ, ನೆಂಟರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹೀಗೆ ಹಲವಾರು ಸಂಬಂಧಗಳು.
            ಈ ಸಂಬಂಧಗಳು ಅನಿವಾರ್ಯತೆಗೆ ಅವಶ್ಯಕತೆಗೆ ಸೃಷ್ಟಿಯಾಗುತ್ತವೆ. ಉದಾಹರಣೆಗೆ ಹೇಳುವುದಾದರೆ ಕಾಲೇಜಿನಲ್ಲಿ ಸಹಪಾಠಿ ಎಂಬ ಸಂಬಂಧದಿಂದ ಆರಂಭವಾಗಿ ಸಂಬಂಧಗಳು  ಸ್ನೇಹಕ್ಕೆ ತಿರುಗುತ್ತದೆ ಆನಂತರ ಕೆಲ ವರ್ಷಗಳ ನಂತರ ಒಮ್ಮೆ ಹಿಂದೆ ತಿರುಗಿ ನೋಡಿ ಕಾಲೇಜು ದಿನಗಳಲ್ಲಿ ಗುಂಪುಗುಂಪಾಗಿ ಹುಡುಗರನ್ನು ಹುಡುಗಿಯರನ್ನು ಕಟ್ಟಿಕೊಂಡು ತಿರುಗುತ್ತಿದ್ದವ ಇಂದು ಒಂಟಿಯಾಗಿ ನಿಂತಿರುತ್ತಾನೆ, ಇನ್ನು ರಾಜಕೀಯದಲ್ಲಿ ಜಾತಿ ಸಂಬಂಧಗಳು, ಬದ್ಧ ವೈರಿಗಳಾಗಿರುತ್ತಾರೆ. ಅಂದರೆ ಅಲ್ಲಿ ರಾಜಕೀಯ ಲಾಭದ ಲೆಕ್ಕಾಚಾರಗಳಿರುತ್ತವೆ. ಇನ್ನು ನೆಂಟರಿಗೆ ಒಮ್ಮೆ ಸಾಲವನ್ನು ಕೊಟ್ಟು ನೋಡಿ ಹಣವನ್ನು ವಾಪಸ್ ಕೇಳಿದಾಗ ಅವರ ಮುಖವನ್ನು ಒಮ್ಮೆ ನೋಡಬೇಕು ಆವಾಗ ರಕ್ತ ಸಂಬಂಧಗಳು ಏನು ಎನ್ನುವುದು ಗೊತ್ತಾಗುತ್ತದೆ. ಇನ್ನು ಅಣ್ಣ-ತಮ್ಮಂದಿರ ದಾಯಾದಿ ಕಲಹ ಇಂದು-ನಿನ್ನೆಯದಲ್ಲ ಯುಗಗಳ ಇತಿಹಾಸವಿದೆ ಇನ್ನು ಅಕ್ಕತಂಗಿಯರು ಮದುವೆಯಾಗಿ ಹೋಗುವವರೆಗೂ ಸುಮ್ಮನಿದ್ದು ಗಂಡನ ಮನೆಗೆ ಹೋದ ಕೂಡಲೇ ಅಪ್ಪನ ಆಸ್ತಿಯ ಮೇಲೆ ಕಣ್ಣಿಟ್ಟಿರುತ್ತಾರೆ.
             ಇನ್ನು ಪ್ರೀತಿಯ ವಿಷಯವಂತೂ ಇತ್ತೀಚಿನ ದಿನಗಳಲ್ಲಿ ದೈಹಿಕ ಆಕರ್ಷಣೆಯ ಕೇಂದ್ರಬಿಂದು. ಪ್ರೀತಿ ಎಂಬ ಎರಡು ಅಕ್ಷರ ಇಟ್ಟುಕೊಂಡು ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಕೊಂಡು ದೈಹಿಕ ಅವಶ್ಯಕತೆ ಮುಗಿದ ಮೇಲೆ ಆಕರ್ಷಣೆ ಕಡಿಮೆಯಾಗಿ ಪ್ರೀತಿಯೆಂಬ ಎರಡಕ್ಷರ ಕಡಿಮೆಯಾಗುತ್ತದೆ. ಇನ್ನೂ ವಿಶೇಷವಾದ ಪ್ರೀತಿ ಗಳಿರುತ್ತವೆ ಲೆಕ್ಕಚಾರದ ಪ್ರೀತಿಗಳು ಹುಡುಗ ಸರ್ಕಾರಿ ನೌಕರದಲ್ಲಿದ್ದಾರೆ ಅವನ ಹತ್ತಿರ ಹಣವೊ, ಕಾರು, ಬಂಗಲೆಗಳು ಇದ್ದರೆ ಪ್ರೀತಿಯು ಉಕ್ಕಿ ಹರಿಯುತ್ತದೆ. ಇನ್ನು ಹುಡುಗಿಯರು ದೈಹಿಕ ಆಕರ್ಷಣೆಗೆ ಮರುಳಾಗುತ್ತಾರೋ ಎಂದು ನೋಡಿ ಕೆಲವು ಹುಡುಗರ ಪ್ರೀತಿ ಹುಟ್ಟುತ್ತದೆ.
           ಒಟ್ಟಿನಲ್ಲಿ ಸಂಬಂಧಗಳ ಅನಿವಾರ್ಯತೆ ಅವಶ್ಯಕತೆ ಮುಗಿದ ಮೇಲೆ ಸಂಬಂಧಗಳು ಬೇಡವಾಗುತ್ತವೆ. ಒಮ್ಮೆ ಪ್ರೀತಿಪಾತ್ರರಾದವರು ಇದ್ದಕ್ಕಿದ್ದಂತೆ ಬೇಡವೆನ್ನಿಸಿ ಬಿಡುತ್ತಾರೆ. ಕೆಲವು ಜನ ಅವರಿಗೆ ಬೇಕಾದಂತೆ ಸಂಬಂಧಗಳನ್ನು ಸಮಯಕ್ಕೆ ಅನುಗುಣವಾಗಿ ಸ್ನೇಹಕ್ಕೂ ಪ್ರೀತಿಗೂ ತಿರುಗಿಸಿ ಬೇಕಾದಂತೆ ಸಂಬಂಧಗಳನ್ನು ಬಳಸಿಕೊಂಡು ಮುಂದೆ ಸಾಗುತ್ತಾರೆ. ಒಟ್ಟಿನಲ್ಲಿ ಎಲ್ಲಾ ಸಂಬಂಧಗಳ ಹಿಂದೆ ಒಂದು ಸಣ್ಣ ಪ್ರಮಾಣದ ಸ್ವಾರ್ಥವಿರುತ್ತದೆ. ಅದಕ್ಕೆ ಸ್ನೇಹವೆಂದು, ಪ್ರೀತಿಯೆಂದು, ಸಂಬಂಧವೆಂದು ನಾಮಕರಣ ಮಾಡಿರುತ್ತಾರೆ.
             ಸಮಯ ಸರಿದಾಗ ಸಂಬಂಧಗಳು ಬೇಡವಾಗುತ್ತವೆ. ಏಕೆಂದರೆ ಅನಿವಾರ್ಯತೆಯಾಗಲಿ, ಅವಶ್ಯಕತೆಯಾಗಲಿ, ಇರುವುದಿಲ್ಲ.ಒಮ್ಮೆ ಕಣ್ಣು ಮುಚ್ಚಿಕೊಂಡು ಎಲ್ಲ ಸಂಬಂಧಗಳನ್ನು ನೆನಪಿಸಿಕೊಳ್ಳಿ ನಿಮಗೆ ಬೆರಳೆಣಿಕೆಯಷ್ಟು ಸಂಬಂಧಗಳು ಉಳಿದಿರುವುದು ತಿಳಿಯುತ್ತದೆ. ಏಕೆಂದರೆ ಅಲ್ಲಿ ಇನ್ನೂ ನಿಮ್ಮ ಅನಿವಾರ್ಯತೆ ಹಾಗೂ ಅವಶ್ಯಕತೆ ಇರುತ್ತದೆ. ಅನಿವಾರ್ಯತೆ ಇಲ್ಲವೆಂದರು  ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಎಂಬ ಕೃತಕತೆಯಲ್ಲಿ ಇಂದಲ್ಲ ನಾಳೆ ಇವರಿಂದ ಯಾವುದಾದರೂ ಸಹಾಯವಾಗಬಹುದೇನೋ ಎಂಬ ಲೆಕ್ಕಾಚಾರದಲ್ಲಿ ಆ ಸಂಬಂಧಗಳು ಇರುತ್ತವೆಯೋ ಹೊರತು ನಿಮ್ಮ ಮೇಲಿನ ಗೌರವದಿಂದ ಅಲ್ಲ. ಸಮಯ ಸರಿದಂತೆ ಸಂಬಂಧಗಳು ನಿಧಾನವಾಗಿ ಹೋಗುತ್ತವೆ. ಕೊನೆಗೆ ಉಳಿಯುವುದು ನೀವು ಒಬ್ಬಂಟಿ ಎಂಬುವ ಸತ್ಯ ಮಾತ್ರ. ನೀವು ಹುಟ್ಟಿದಾಗ ಇದ್ದದ್ದು ಒಬ್ಬರೇ ಸಾಯುವಾಗ ಇರುವುದು ಒಬ್ಬರೇ ಆದರೆ ಮಧ್ಯ ಬಂದವರೆಲ್ಲರೂ ಅವರ ಅನಿವಾರ್ಯತೆ ಮತ್ತು ಅವಶ್ಯಕತೆಯ ಭಾಗವಾಗಿದ್ದರೆಂದು.

1 comment:

Unknown said...

ಅರ್ಥಗರ್ಭಿತ ಒಂಟಿತನದ ವಿಶ್ಲೇಷಣೆ,ಸ್ವಾರ್ಥಕ್ಕಾಗಿ ಜೀವನ ಸ್ವಂತಕ್ಕಾಗಿ ಸಂಪಾದನೆ,ದುಡ್ಡಿದರೆ ಜೀವನ ಅಷ್ಟೇ ಅಣ್ಣ, ಸಂಬಂದ ಎಂಬ ಸಂಕೋಲೇ ಅಲ್ಲಿ ಬದುಕುವುದೇ ಒಂದು ಹೋರಾಟ ಅಷ್ಟೇ🔥🚩🚩