Wednesday, April 30, 2025

ಧರ್ಮದ ಗುರುಗಳು


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಸದ್ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತೊಂದಿದೆ. ಗುರು ಎಂದರೆ ಯಾರು ಎಂದು ಹುಡುಕುತ್ತ ಹೊರಟರೆ ಹಲವಾರು ಮಂದಿ ಸಿಗಬಹುದು. ಆದರೆ ನಿಜವಾದ ಧರ್ಮವನ್ನು ಪಾಲಿಸುವ ಸದ್ಗುರು ಸಿಗಲು ಹಲವು ಜನ್ಮಗಳ ಪುಣ್ಯವೇ ಬೇಕಾಗುತ್ತದೆ. ಬದುಕಿನಲ್ಲಿ ಈ ಪ್ರತಿಯೊಂದುಕ್ಕೂ ಅರ್ಹತೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಒಬ್ಬ ಉತ್ತಮ ಗುರುವಾಗಲು ಅರ್ಹತೆ ಬೇಕೇ ಬೇಕು ಎಂಬ ಪರಿಜ್ಞಾನ ಇಲ್ಲದ ಹಲವಾರು ಜನರು ಸಿಕ್ಕಸಿಕ್ಕವರನ್ನು ಗುರುಗಳೆಂದು ಸಂಬೋಧಿಸುತ್ತಾರೆ ಹಾಗೂ ಹೋಗಿ ಅವರ ಕಾಲಿಗೆ ದೀರ್ಘದಂಡ ನಮಸ್ಕಾರವನ್ನು ಹಾಕುತ್ತಾರೆ. ಇಂದು ಗುರುಗಳ ರೂಪದಲ್ಲಿ ಹಲವಾರು ಜನರು ಇರಬಹುದು ಅವರಿಗೆ ಬೇಕಾದಂತೆ ಬೋಧನೆಗಳನ್ನು ಮಾಡುತ್ತ ಹಣ ಸಂಪಾದಿಸಿಕೊಂಡು ಇಂದು ಮಹಾನ್ ವ್ಯಕ್ತಿಗಳಂತೆ ಬಿಂಬಿಸಿಕೊಳ್ಳುತ್ತಾ ಧರ್ಮ ಕಾರ್ಯವನ್ನು ಮರೆತು ನಿಂತಿದ್ದಾರೆ. ಕಲಿಯ ಪ್ರಭಾವ ಎಲ್ಲಿಯವರೆಗೆ ಬಂದಿದೆ ಎಂದರೆ ಅಂಥವರಿಗೆ ಜನರು ದೀರ್ಘ ದಂಡ ನಮಸ್ಕಾರವನ್ನು ಹಾಕುತ್ತ ಕೈಮುಗಿಯುತ್ತ ತಮ್ಮ ಪಾಪಕರ್ಮಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಧರ್ಮ ದಾರಿಯಿಂದ ವಿಮುಖರಾಗಿ ವಿಲಾಸಿ ಜೀವನದಲ್ಲಿ ಮುಳುಗಿ ನಾವು ಮಹಾನ್ ಗುರುಗಳ ಭಕ್ತರು ಎಂಬಂತೆ ಬಿಂಬಿಸಿಕೊಳ್ಳುತ್ತಾ ನಾವು ಮಹಾನ್ ದೈವದ ಭಕ್ತರೆಂದು ತೋರಿಸಿಕೊಳ್ಳುತ್ತಾ ಅತ್ಯಾಚಾರ ಅನಾಚಾರಗಳನ್ನು ಮಾಡುತ್ತಾ ಯಥಾ ಗುರು ತಥಾ ಶಿಷ್ಯ ಎನ್ನುವಂತೆ ಇರುತ್ತಾರೆ. ಧರ್ಮ ಕಾಯುವ ಗುರುಗಳನ್ನು ನಮ್ಮ ನಾಡು ಕಂಡಿರುವುದು ಬಲ ಅಪರೂಪವೆಂದೆ ಹೇಳಬಹುದು. ಅಂತಹ ಧರ್ಮ ಗುರುಗಳನ್ನು ಹುಡುಕುತ್ತಾ ಹೊರಟಾಗ ಸಿಗುವುದು ಕೇವಲ ಇಬ್ಬರು ಮಾತ್ರ.
              ಕರ್ನಾಟಕ ಕಂಡ ಶ್ರೇಷ್ಠ ಗುರುಗಳು ಈ ನಾಡಿನಲ್ಲಿ ಸತ್ಯ ನ್ಯಾಯದಿಂದ ಧರ್ಮವನ್ನು ಉಳಿಸಿದ್ದಾರೆ ಅಂತಹ ಧರ್ಮಗುರುಗಳ ಪೈಕಿ ನಾಯಕನಹಟ್ಟಿಯ ತಿಪ್ಪೇರುದ್ರ ಸ್ವಾಮಿಯವರು ಹಾಗೂ ರಾಜ ಬಪ್ಪನಗೌಡಪುರದ ಮಂಟೇಸ್ವಾಮಿಗಳು ಪ್ರಮುಖರು. ಧರ್ಮದ ಮಜಲುಗಳನ್ನು ತಿಳಿದ ಗುರುಗಳಾಗಿದ್ದವರು ಅವರ ಧರ್ಮ ಪರಿಪಾಲನೆ ಯಾವ ಪರಿಯ ಇತ್ತು ಎನ್ನುವುದು ಕೆಲವು ಘಟನೆಗಳಿಂದ ತಿಳಿಯಬಹುದಾಗಿದೆ.
                 ಮೊದಲನೆಯದಾಗಿ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ಅವರ ಧರ್ಮ ಪ್ರಜ್ಞೆ ಬಗ್ಗೆ ತಿಳಿಯೋಣ. ಅವರು ಶಿವ ಕೈಲಾಸದಿಂದ ಬಂದ ಶಿವಗಣದವರೆಂದು ಹೇಳುವುದುಂಟು, ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ಸಾಮಾನ್ಯ ಜನರಿಗೆ ಬದುಕನ್ನು ಕಟ್ಟಿಕೊಟ್ಟವರಲ್ಲಿ ಪ್ರಮುಖರು. ಹೀಗೆ ಅವರು ಕೈಲಾಸದಿಂದ ಲೋಕ ಕಾರ್ಯ ಮಾಡುತ್ತಾ ಬಂದು ನಮ್ಮ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿ ಬರಡಾಗಿದ್ದ  ಪ್ರದೇಶದಲ್ಲಿ ಒಂದು ದೊಡ್ಡ ಕೆರೆಯನ್ನು ಕಟ್ಟಲು ಸಂಕಲ್ಪವನ್ನು ಮಾಡಿದರು. ಅದರಂತೆ ಕೆಲಸವೂ ಶುರುವಾಯಿತು. ಅವರು ಯಾರಿಂದಲೂ ಉಚಿತವಾಗಿ ಕೆಲಸ ಮಾಡಿಸಿಕೊಂಡವರಲ್ಲ. ಕೆರೆಯನ್ನು ಕಟ್ಟಲು ಕೂಲಿ ಆಳುಗಳನ್ನು ನೇಮಿಸಿದರು. ಕೆಲಸ ಮುಗಿಸಿ ಸಂಬಳ ಪಡೆಯಲು ಗುರುಗಳ ಹತ್ತಿರ ಕೂಲಿ ಆಳುಗಳು ಹೋದಾಗ ಅವರು ಕೂಲಿ ಆಳುಗಳಿಗೆ ನಿಮ್ಮ ಮುಂದೆ ಎಲ್ಲರೂ ಮಣ್ಣಿನ ಗುಡ್ಡೆ ( ದಿಬ್ಬ) ಯನ್ನು ಮಾಡಿಕೊಳ್ಳಿ ಎಂಬ ಆದೇಶವನ್ನು ಇದ್ದರು. ಅದರಂತೆ ಎಲ್ಲರೂ ಮಣ್ಣಿನ ಗುಡ್ಡೆಯನ್ನು ಮಾಡಿದರು. ಆಗ ಗುರುಗಳು ತಮ್ಮ ಕೈಯಲ್ಲಿದ್ದ ಬೆತ್ತದ ಕೋಲಿನಿಂದ ಗುಡ್ಡೆ ಒಳಗೆ ತಿವಿಯುತ್ತಾ ಬಂದರು. ಆನಂತರ ನಿಮ್ಮ ಫಲವನ್ನು ನೀವು ತೆಗೆದುಕೊಂಡು ಹೋಗಬಹುದು ಎಂದರು. ಅದು ಕೂಲಿ ಆಳುಗಳಿಗೆ ಅರ್ಥವಾಗಲಿಲ್ಲ. ನಂತರ ಗುರುಗಳು ನಿಮ್ಮ ಫಲ ಅದರಲ್ಲಿ ಅಡಕವಾಗಿದೆ ತೆಗೆದುಕೊಂಡು ಹೋಗಿ ಎನ್ನಲು ಕೂಲಿ ಆಳುಗಳು ಗುಡ್ಡೆಯನ್ನು ಕದಡಿದಾಗ ಕೆಲವರಿಗೆ ಅದರಲ್ಲಿ ಹೆಚ್ಚು ಹಣ ಮತ್ತು ಕೆಲವರಿಗೆ ಕಡಿಮೆ ಹಣವು ಇದ್ದೀತು. ಇದನ್ನು ನೋಡಿ ಎಲ್ಲರೂ ಆಶ್ಚರ್ಯ ಚಿಕಿತರಾದರು. ಅದರಲ್ಲಿ ಒಬ್ಬ ಭಕ್ತ ಕೇಳಿಯೇ ಬಿಟ್ಟ ಎಲ್ಲರೂ ಕೆಲಸ ಮಾಡಿದರು ಏಕೆ ಒಬ್ಬರಿಗೆ ಹೆಚ್ಚು ಮತ್ತೆ ಒಬ್ಬರಿಗೆ ಕಡಿಮೆ ಹಣವು ಬಂದಿದೆ ಎಂದು, ಅದಕ್ಕೆ ಗುರುಗಳು ಹೇಳಿದರು ಅವರವರ ಬೆವರಿನ ಫಲ ಅವರಿಗೆ ಸಂದಾಯವಾಗಿದೆ. ಕಷ್ಟಪಟ್ಟು ನಿಯತ್ತಾಗಿ ಕೆಲಸ ಮಾಡಿದವನಿಗೆ ಹೆಚ್ಚು ಹಣ ಹಾಗೂ ಕಳ್ಳಾಟ ಮಾಡಿದವನಿಗೆ ಕಡಿಮೆಯಾಗಿದೆ ಬೇಕಿದ್ದರೆ ಅವರವರನ್ನೇ ಕೇಳಿ ನೋಡಿ ಎಂದರು ಇದರಿಂದ ಕಳ್ಳಾಟ ಆಡಿ ಕೆಲಸವನ್ನು ಕದ್ದಂತಹ ಕೂಲಿ ಆಳುಗಳಿಗೆ ಮುಖ ಇಲ್ಲದಂತಾಯಿತು. ಒಟ್ಟಿನಲ್ಲಿ ನ್ಯಾಯದ ತೀರ್ಪನ್ನಿತ್ತರು. ತಪ್ಪಿಗೆ ಶಿಷ್ಯರಾದರೂ ಶಿಕ್ಷೆ, ಅಂದರೆ ನ್ಯಾಯದ ಫಲವನ್ನು ಮಾತ್ರ ನೀಡಿದರು ಹೀಗೆ ಧರ್ಮ ಸಂರಕ್ಷಣೆಯಲ್ಲಿ  ರಾಜಿ ಇಲ್ಲದಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು.
             ಇನ್ನು ಮಂಟೇಸ್ವಾಮಿಯವರ ಧರ್ಮದ ಬಗ್ಗೆ ತಿಳಿಯುತ್ತ ಹೋಗೋಣ, ಅವರು ಮತ್ತಾರು ಅಲ್ಲ ಇಂದು  ನಾವು ಏನು ಜಗಜ್ಯೋತಿ ಬಸವಣ್ಣವೆಂದು ಕರೆಯುತ್ತೇವೆ. ಅಂತಹ ಬಸವಣ್ಣನವನಿಗೆ ಗುರುಗಳಾಗಿದ್ದವರು. ಅವರಿಗೆ ಅಲ್ಲಮಪ್ರಭು ಎಂದು ಕರೆಯುವುದುಂಟು. ಅವರು ಶಿವ ಸ್ವರೂಪದ ಜ್ಯೋತಿಯಾಗಿ ಬಸವಣ್ಣನಿಗೆ ಕಂಡು ಕಾಲಜ್ಞಾನವನ್ನು ಹೇಳಿ ಬಸವಣ್ಣನು ಐಕ್ಯ ಆಗಲು ನೆರವಾದವರು. ಅವರು ಯಾತ್ರೆಯನ್ನು ಮಾಡುತ್ತ ತನ್ನ ಪ್ರಿಯ ಶಿಷ್ಯನನ್ನು ಹುಡುಕುತ್ತಾ ದಕ್ಷಿಣದ ಕಡೆ ಹೆಜ್ಜೆ ಇಡಲು ಪ್ರಿಯ ಶಿಷ್ಯ ಸಿಗುತ್ತಾನೆ. ಅವನು ಚಿನ್ನ ಮಾಡುವ ಕುಲದಲ್ಲಿ ಹುಟ್ಟಿ ಅಹಂಕಾರ, ಮದ ಮತ್ಸರದಲ್ಲಿ ತನ್ನ ಹುಟ್ಟಿನ ಗುಟ್ಟನ್ನೇ ತಿಳಿಯದವನಾಗಿರುತ್ತಾನೆ. ತನ್ನ ಪ್ರಿಯ ಶಿಷ್ಯನನ್ನು ಕಾಣಲು ಹೋದಾಗ ಅವನು ಆಡಿದ ತಾಳಿಗೆ ಅಪಮಾನ ಆಗುವಂತೆ ಆಡಿದ  ಮಾತಿನ ಅವನ ದುರಂಕಾರವನ್ನು ತಿಳಿದ ಗುರುಗಳು. ತನ್ನ ಶಿಷ್ಯನು ಇವನು ಎನ್ನುವುದನ್ನು ನೋಡದೆ ಅವನು ಜೀವನ ಪರ್ಯಂತ ಮದುವೆಯಾಗದಂತೆ ಹಾಗೂ ಆ ಮಾತನ್ನು ಅಂದ ಮಾತಿಗೆ ತಪ್ಪಿಗೆ ಶಿಕ್ಷೆಯಾಗಿ ಅವನನ್ನು ಗವಿಯೊಳಗೆ ಕೂಡಿ ಅವನ ಅಹಂಕಾರವನ್ನು ಭಸ್ಮ ಮಾಡಿ ಅವನನ್ನು ಪರಿಪೂರ್ಣನಾಗಿ ಮಾಡುತ್ತಾರೆ. ಅವರೇ ಮುಂದೆ ಸಿದ್ದಪ್ಪಾಜಿ ಆಗಿ ಹಳೆ ಮೈಸೂರು ಭಾಗದಲ್ಲಿ ಹಲವಾರು ಮನೆಗಳ ಕುಲದೈವವಾಗಿ ಇಂದಿಗೂ ಪೂಜ್ಯರಾಗಿದ್ದಾರೆ. ಹೀಗೆ ಧರ್ಮವೆಂಬುವುದು ಪಾಲಿಸುವುದು ಬಲು ಕಠಿಣವಾದ ಕೆಲಸ ತನ್ನ ಶಿಷ್ಯರೇ ಆಗಲಿ ಸಂಬಂಧಿಕರೇ ಆಗಲಿ ತಪ್ಪಿಗೆ ಶಿಕ್ಷೆಯನ್ನು ನೀಡಬಲ್ಲವನಿಂದ ಮಾತ್ರ ಧರ್ಮ ರಕ್ಷಣೆ ಸಾಧ್ಯ. ಹೀಗೆ ಧರ್ಮವನ್ನು ಎತ್ತಿ ಹಿಡಿದು ಕೆಲಸ ಮಾಡಿದ ಗುರುಗಳು ಮಾತ್ರ ಸರ್ವಕಾಲಕ್ಕೂ ಪೂಜೆಗೆ ಹಾಗೂ ಅನುಕರಣೆಗೆ ಅರ್ಹರಾಗಿರುತ್ತಾರೆ. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು.

No comments: