Wednesday, April 30, 2025

ಪ್ರೀತಿ ಸುಧೀರ್ಘವಾಗಿ.....


           ಪ್ರೀತಿ ಎಂಬುದು ಪ್ರತಿ ಮನುಷ್ಯನಲ್ಲೂ ಉಂಟಾಗುವ ಒಂದು ಭಾವನಾತ್ಮಕ ಪ್ರಕ್ರಿಯೆ. ಪ್ರೀತಿ ಇಲ್ಲದ ಜೀವ ಇಲ್ಲವೆಂದರೆ ತಪ್ಪಾಗಬಹುದು. ಪ್ರಾಣಿ ಪಕ್ಷಿಗಳಿಂದ ಹಿಡಿದು ಮನುಷ್ಯನವರೆಗೂ ಎಲ್ಲರೂ ಒಂದಲ್ಲ ಒಂದು ರೀತಿಯ ಪ್ರೀತಿಯ ಸಂಕೋಲೆಯಲ್ಲಿ ಬದುಕು ನಡೆಯುತ್ತದೆ. ಪ್ರೀತಿ ಎಂಬುದು ಒಂದು ಶಕ್ತಿ ಚೈತನ್ಯ. ಅದು ಕೂಡ ಒಂದು ಹೆಣ್ಣು ಗಂಡಿನ ಪ್ರೀತಿಯಿಂದ ಅಸಾಧ್ಯವಾದದ್ದನ್ನು ಸಾಧಿಸಲು ನೆರವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ನಿಷ್ಕಲ್ಮಶವಾದ ಪ್ರೀತಿಯು ಕಡಿಮೆಯಾಗುತ್ತಿದೆ. ಇಂದು ಸ್ವಾರ್ಥ ಲಾಭ ನಷ್ಟದ ಲೆಕ್ಕಾಚಾರವನ್ನು ನೋಡಿಕೊಂಡು ಪ್ರೀತಿಯನ್ನು ಮಾಡುವ ಸಂಬಂಧಗಳು ಹೆಚ್ಚಾಗಿವೆ.
          ನಿಜ ಪ್ರೀತಿಯನ್ನು ಸುಧೀರ್ಘವಾಗಿ ಉಳಿಸಿಕೊಳ್ಳಬೇಕೆಂದರೆ ಪ್ರೀತಿಸುವ ಮೊದಲೇ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಅದು ಸುಧೀರ್ಘವಾಗಿರಲು ಸಾಧ್ಯ. ಪ್ರೀತಿ ಮಾಡುವಾಗ ಎದುರುದಾರರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಸುವುದು ಒಳಿತು. ಹುಡುಗ ಹುಡುಗಿ ಯಾರೇ ಆದರೂ ಪ್ರೀತಿಯನ್ನು ತಕ್ಷಣ ವ್ಯಕ್ತಪಡಿಸಬಾರದು. ಪ್ರೀತಿ ಮೊದಲು ಸ್ನೇಹವಾಗಬೇಕು ಸ್ನೇಹ ಸುಧೀರ್ಘವಾಗಿ ನೆಲೆ ನಿಂತರೆ ಮಾತ್ರ ಪ್ರೀತಿ ಉಳಿಯಲು ಸಾಧ್ಯ. ಸ್ನೇಹ ಸಾಧ್ಯವಾಗದಿದ್ದಾಗ ಪ್ರೀತಿ ಉಳಿಯಲು ಹೇಗೆ ಸಾಧ್ಯ.....? ಪ್ರೀತಿಯಲ್ಲಿ ಬೀಳುವಾಗ ನೀವು ನಿಮ್ಮತನವನ್ನು ಉಳಿಸಿಕೊಂಡರೆ ಪ್ರೀತಿ  ಸುದೀರ್ಘವಾಗಿ ಉಳಿಯುತ್ತದೆ. 
           ಕೆಲವರು ಪ್ರೀತಿಯಲ್ಲಿ ಬಿದ್ದಾಗ ಅವರ ನೈಜತೆಯನ್ನು ಅಂದರೆ ಇಲ್ಲದ ಗುಣಗಳನ್ನು ರೂಡಿಸಿಕೊಂಡು ಪ್ರೀತಿಯನ್ನು ಮಾಡುತ್ತಾರೆ. ಪರಸ್ಪರ ಜೊತೆ ಎಲ್ಲಿ ಇದ್ದಾಗ ಅವರ ನೈಜ ಗುಣಗಳು ಅನಾವರಣಗೊಂಡು ಪ್ರೀತಿಯಲ್ಲಿ ಬಿರುಕು ಮೂಡಿ ಮದುವೆ ನಂತರ ವಿಚ್ಛೇದನಗಳು ಆಗುತ್ತವೆ. ಅದಕ್ಕೆ ಹೇಳುವುದು ಪ್ರೀತಿಗೂ ಮುಂಚೆ ಸುದೀರ್ಘಸ್ನೇಹ ಅನಿವಾರ್ಯ ವೆಂದು, ನಿಮ್ಮ ಪ್ರೀತಿ ಸುಧೀರ್ಘವಾಗಿ ಉಳಿಯಬೇಕೆಂದರೆ ನೈಜತೆ ಅದಕ್ಕೆ ಶ್ರೀರಕ್ಷೆ. ಪ್ರೀತಿಯಲ್ಲಿ ನಿಷ್ಕಲ್ಮಶ ಭಾವವಿರಲಿ ಸ್ವಾರ್ಥ ಲೆಕ್ಕಾಚಾರದ ಪ್ರೀತಿಗಳು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಕಾಲಚಕ್ರದಲ್ಲಿ ಅವು ಮಾಯವಾಗಿ ಬಿಡುತ್ತವೆ. ಪ್ರೀತಿ ಮಾಡಿದಾಗ ಎಂತಹ ಕಷ್ಟದ ಸಮಯದಲ್ಲೂ ಜೊತೆಯಾಗಿ ನಿಲ್ಲಬೇಕು ಆಗ ಮಾತ್ರ ನಿಮ್ಮ ಪ್ರೀತಿಗೂ ಒಂದು ಬೆಲೆ ಸಿಗುತ್ತದೆ. ನಿಮ್ಮ ಪ್ರೀತಿ ಕೊನೆವರೆಗೂ ಉಳಿಯಬೇಕೆಂದರೆ ನಿಮ್ಮ ಭಾವ ಶುದ್ಧವಿರಲಿ ಅಂತರಂಗದಿಂದ ಮಾಡುವ ಪ್ರೀತಿ ಶಾಶ್ವತ. ಪ್ರೀತಿಯನ್ನು ಸುಧೀರ್ಘವಾಗಿ ಉಳಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿದೆ ಹೊರತು ಅದು ಹೊರಗಿನ ಏರುವಂತದ್ದಲ್ಲ. ಸುದೀರ್ಘವಾದ ಪ್ರೀತಿಗೆ ತ್ಯಾಗದ ಅವಶ್ಯಕತೆಯಂತೂ ಇದ್ದೇ ಇದೆ. ಆ ತ್ಯಾಗ ಇಬ್ಬರಿಂದಾದರೂ ಅಂತೂ ಇನ್ನೂ ಒಳಿತು. ನಿಷ್ಕಲ್ಮಶವಾದ ಪ್ರೀತಿಗೆ ಸಾವಿಲ್ಲ......

No comments: