ಪ್ರತಿ ಆರಂಭಕ್ಕೂ ಒಂದು ಅಂತ್ಯವಿರುತ್ತದೆ. ಅಂತ್ಯವೆಂದರೆ ಮತ್ತೊಂದು ಹೊಸ ಆರಂಭಕ್ಕೆ ನಾಂದಿ. ಅಂತಹ ನಿವೃತ್ತಿ ಜೀವನಕ್ಕೆ ಕಾಲಿಟ್ಟುತ್ತಿರುವ ನನ್ನ ಪ್ರೀತಿಯ ಗುರುಗಳಿಗೆ ಅನಂತ ಧನ್ಯವಾದಗಳು. ಬದುಕಿನಲ್ಲಿ ಹಲವಾರು ಗುರುಗಳನ್ನು ನಾವು ಕಾಣಬಹುದು ಆದರೆ ಆ ಗುರುವಿನ ಅರ್ಥವನ್ನು ಪರಿಪೂರ್ಣಗೊಳಿಸುವುದು ಕೆಲವರು ಮಾತ್ರ ಅಂತಹ ಗುರುಗಳಲ್ಲಿ ನೀವು ಒಬ್ಬರು. ಉತ್ತಮ ಗುರುವಿನ ಮಾರ್ಗದರ್ಶನ ನನ್ನ ಎಲ್.ಎಲ್. ಬಿ ಜೀವನ ದುದ್ದಕ್ಕೂ ತುಂಬಾ ಅವಶ್ಯಕವಾಗಿ ಬೇಕಾಗಿತ್ತು. ರಾಜಕೀಯ ಹಿನ್ನಲೆಯಿಂದ ಬಂದು ಎಲ್.ಎಲ್.ಬಿ ಸೇರಿದಾಗ ರಾಜಕೀಯಕ್ಕಾಗಿಯೇ ಕಾನೂನನ್ನು ಓದಲು ನಿಶ್ಚಯಿಸಿ ಬಂದೆ. ಕಾನೂನು ಪದವಿಯನ್ನು ಸೇರಿದಾಗ ಯಾವುದೇ ಕಾರಣಕ್ಕೂ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುವ ಯಾವುದೇ ಯೋಚನೆ ಕೂಡ ಇರಲಿಲ್ಲ. ಆದರೆ ನಿಮ್ಮ ಮಾರ್ಗದರ್ಶನದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಮೊದಲನೆಯ ವರುಷ ಕಾಲೇಜಿನ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವಿರೋಧವಾಗಿ ಕ್ಲಾಸ್ ರೆಪ್ರೆಸೆಂಟೇಟಿವ್ ಆಗಿ ಆಯ್ಕೆಯಾಗಿದ್ದು ನನ್ನ ರಾಜಕೀಯ ಆಸೆಗಳಿಗೆ ಕೊನೆ ಎಂಬಂತೆ ಆಯಿತು. ನಿಮ್ಮ ಪ್ರತಿ ಹಂತದ ಮಾರ್ಗದರ್ಶನ ಅದರಲ್ಲೂ ಕರಾರು ಅಧಿನಿಯಮದ ಉಪನ್ಯಾಸಗಳು ಇಂದು ಗುಯ್ಗೂಡುತ್ತಿದೆ . ನೀವು ಹೇಳಿಕೊಟ್ಟ ಎಷ್ಟು ಉದಾಹರಣೆಗಳು ಯಾವುದೇ ಬಾಯಿ ಪಾಠ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳದೆ ಹಾಗೆ ಅಜರಾಮಜರಾಮವಾಗಿ ಉಳಿದಿದೆ. ಕಾರಣ ನಿಮ್ಮ ಅದ್ಭುತವಾದ ಪಾಠ. ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಉಪನ್ಯಾಸದ ಪ್ರಾವಿಣ್ಯ ಹೊಂದಿದ್ದ ನೀವು ಕನ್ನಡದ ಮಕ್ಕಳಿಗೆ ಅನ್ಯಾಯವಾಗಬಾರದೆಂದು ಕನ್ನಡದಲ್ಲಿ ಹಾಗೂ ಇಂಗ್ಲಿಷ್, ಎರಡು ಭಾಷೆಯಲ್ಲಿ ನಮಗೆ ಪಾಠ ಹೇಳುತ್ತಿದ್ದಿದ್ದು ಇವತ್ತಿಗೂ ಪ್ರತಿ ಅಕ್ಷರವು ನೆನಪಿನಲ್ಲಿ ಉಳಿಯುವಂತೆ ಮಾಡಿದೆ.
ನೀವು ಎಂದರೆ ಇಡೀ ಕಾಲೇಜಿನಲ್ಲಿ ಒಂದು ರೀತಿಯ ಭಯ ಇದ್ದೇ ಇತ್ತು. ಆದರೆ ನನಗದು ಇರಲಿಲ್ಲ ಏಕೆಂದರೆ ಪ್ರಾಮಾಣಿಕತೆಗೆ ನೀವು ಕೊಡುವ ಬೆಲೆಯ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದ್ದೇನು. ಪ್ರಾಮಾಣಿಕವಾಗಿ ಓದು ಹಾಗೂ ಬರಹದಲ್ಲಿ ಮುಂದಿದ್ದ ನನಗೆ ಹೆಚ್ಚಿನ ಅಂಕಗಳನ್ನು ನೀಡಿದಾಗ ಬೇರೆ ಉಪನ್ಯಾಸಕರು ಸೋಜುಗದಿಂದ ಆ ಅಂಕಗಳನ್ನು ತಿರುವಿ ನೋಡಿದಾಗ ನನಗೆ ಸ್ಪಷ್ಟವಾಗಿತ್ತು ನಾನು ನಿಮಗೆ ಪ್ರಿಯ ಶಿಷ್ಯನಾಗಿದ್ದೇನೆಂದು. ಅದನ್ನು ಉಳಿಸಿಕೊಳ್ಳಲು ನಾನು ಕೊನೆವರೆಗೂ ಹೋರಾಡಿದೆ. ನೀವು ಮಾಡಿದ ಪಾಠ, ವಕೀಲರು ಹೇಗೆ ವರ್ತಿಸಬೇಕೆಂಬುದು ನನಗೆ ಒಂದು ಉತ್ತಮ ದಾರಿಯಾಗಿ ತೋರಿದೆ. ನಿಮ್ಮ ಮಾರ್ಗದರ್ಶನದಲ್ಲಿ ನಾನು ಉತ್ತಮ ಅಂಕಗಳನ್ನು ಗಳಿಸುತ್ತ ಹೋದೆ. ನೀವು ಎಂದೂ ಯಾವ ವಿದ್ಯಾರ್ಥಿಗಳಲ್ಲಿ ಭೇದ ಭಾವ ಮಾಡಿದವರಲ್ಲ ಬೇರೆಯವರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದವರಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ತುಂಬ ಅಚ್ಚುಕಟ್ಟಾದ ಶಿಸ್ತಿನ ಜೀವನದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ, ಅಂತಹ ಮಾರ್ಗದರ್ಶನವೇ ನಮ್ಮನ್ನು ಉತ್ತಮ ದಾರಿಗೆ ಕೊಂಡೊಯ್ಯುತ್ತಿದೆ.
ನಾನು ಅಂತಿಮ ವರ್ಷ ತಲುಪಿದಾಗ ನಿಮ್ಮ ಸಲಹೆ ಮೇರೆಗೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಎಲ್ಲಾ ಅವಕಾಶಗಳಿದ್ದು ಹಾಗೂ ಒತ್ತಾಯಗಳಿದ್ದರೂ ಹಿಂದೆ ಸರಿದೆ. ನೀವು ಬದುಕಿನ ಪಾಠವನ್ನು ಹೇಳುತ್ತಾ ಬದುಕನ್ನು ಕಟ್ಟಿಕೊಳ್ಳಲು ಉಪಯುಕ್ತವಾಗುವಂತಹ ಸಲಹೆಗಳನ್ನು ಕೊಡುತ್ತಾ ಬಂದಿರಿ. ನನ್ನ ಮೇಲಿನ ನಂಬಿಕೆಯಿಂದ ಕಾಲೇಜಿನಲ್ಲಿ ಹಲವಾರು ಕಾರ್ಯಕ್ರಮಗಳ ಉಸ್ತುವಾರಿಯನ್ನು ಕೂಡ ನನಗೆ ವಹಿಸಿದಿರಿ, ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದಿರಿ. ಕಾಲೇಜಿಗೆ ಸೇರಿದಾಗ ಇದ್ದ ರಾಜಕೀಯ ಆಸಕ್ತಿ ಕಾಲೇಜು ಮುಗಿದು ಹೊರಗೆ ಬರುವುದರಲ್ಲಿ ನಿಮ್ಮ ಮಾರ್ಗದರ್ಶನದಿಂದ ಕಡಿಮೆಯಾಗಿತ್ತು. ನಿಮ್ಮ ಬದುಕಿನ ಪಾಠ ಬದುಕು ಕಟ್ಟಿಕೊಳ್ಳಲು ದಾರಿಯನ್ನು ತೋರುತ್ತಿತ್ತು. ಹಾಗಾಗಿ ಕಾನೂನಿನಲ್ಲಿ ನನ್ನ ವೃತ್ತಿ ಜೀವನವನ್ನು ಕಂಡುಕೊಂಡೆ . ಅದರಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದೇನೆ. ಒಬ್ಬ ಶಿಷ್ಯನಿಗೆ ಸೂಕ್ತವಾದ ಮಾರ್ಗವನ್ನು ತೋರಿಸುವ ಗುರುವಾದ ನೀವು ನನಗೆ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಕೊನೆಯದಾಗಿ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಶ್ಲೋಕದಿಂದ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ನಿಮ್ಮ ವೃತ್ತಿಗೆ ಜೀವನವು ಮತ್ತಷ್ಟು ವಿದ್ಯಾರ್ಥಿಗಳಿಗೆ ಬೆಳಕಾಗಲಿ.
No comments:
Post a Comment