ದೇಶದ್ರೋಹ ಕಾನೂನು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆಯೇ ಎಂದು ನೋಡುವುದಾದರೆ, ನಮಗೆ ರಾಜದ್ರೋಹ ಹಾಗೂ ದೇಶದ್ರೋಹದ ಬಗ್ಗೆ ಸ್ಪಷ್ಟ ಅರಿವು ಇರಬೇಕಾಗುತ್ತದೆ. ರಾಜದ್ರೋಹವು ಜನರನ್ನು ಆಳುವ ವ್ಯಕ್ತಿ ಅಥವಾ ಪದವಿಯ ಮಾನ್ಯತೆ ಆಧಾರದ ಮೇಲೆ ರಚನೆಗೊಂಡ, ಪ್ರಜಾಪ್ರಭುತ್ವವಲ್ಲದ ವ್ಯಕ್ತಿಕೇಂದ್ರಿಕೃತವಾಗಿ ಸ್ಥಾಪನೆಗೊಂಡ ಪರಂಪರೆಯ ಸರ್ಕಾರದ ವಿರುದ್ಧ ಮಾತನಾಡಿದರೆ ಅದು ರಾಜದ್ರೋಹವೆನಿಸುತ್ತದೆ. ಆದರೆ ಒಂದು ಭೌಗೋಳಿಕ ಪ್ರದೇಶದ (ದೇಶವಾಸಿಗಳ) ಜನರು ತಮಗೆ ತಾವೇ ಎಲ್ಲರೂ ಒಟ್ಟಿಗೆ ಸೇರಿ ರಚಿಸಿಕೊಂಡ ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ಮಾತನಾಡಿದರೆ ಅದನ್ನು ದೇಶದ್ರೋಹ ಎಂದು ಹೇಳಲು ಬರುವುದಿಲ್ಲ ದೇಶದ್ರೋಹವಾಗಬೇಕೆಂದರೆ ಒಂದು ಭೌಗೋಳಿಕ ಪ್ರದೇಶದ, ತನ್ನ ದೇಶದ ಗಡಿಯ ವ್ಯಾಪ್ತಿಯ ಒಳಗೆ ವಾಸಿಸುವ ಜನರ ಸಮೂಹದ ಹಿತಾಸಕ್ತಿಯ ವಿರುದ್ಧವಾಗಿ ನಡೆದುಕೊಳ್ಳುವಂತಹ ಹಾಗೂ ಸಮಾಜದ ಸ್ವಾಸ್ತ್ಯ ಹಾಳು ಮಾಡುವಂತಹ ಯಾವುದೇ ಕಾರ್ಯವನ್ನು ನಾವು ದೇಶದ್ರೋಹವೆನ್ನಬಹುದು. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಶಾಂತಿಭಂಗಮಾಡುವಂತಹ ಹೇಳಿಕೆಗಳು, ದೇಶವನ್ನು ತುಂಡರಿಸುವಂತಹ ಪ್ರಚೋದನಕಾರಿ ಮಾತುಗಳು ಇವು ದೇಶದ್ರೋಹದ ವ್ಯಾಪ್ತಿಗೆ ಬರುವಂತಹವು ಆಗಿದೆ. ಇನ್ನು ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವಿಷಯಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸ್ವಾತಂತ್ರ್ಯದ ಪರಿಮಿತಿಯನ್ನು ವ್ಯಾಖ್ಯಾನಿಸುವುದಾದರೆ ನಮ್ಮ ಸ್ವಾತಂತ್ರ್ಯ ಬೇರೆ ಜನರ ಅಥವಾ ಸಮೂಹ ಹಿತಾಸಕ್ತಿಯ ವಿರುದ್ಧವಾಗಿ ಹೋಗುವುದನ್ನು ಸ್ವಾತಂತ್ರ್ಯದ ಪರಿಮಿತಿಗೆ ತರಲಾಗುವುದಿಲ್ಲ. ಪ್ರಜಾಪ್ರಭುತ್ವದ ವಿಷಯದಲ್ಲಿ ದೇಶದ ಏಕತೆ, ಸಮಗ್ರತೆ ಹಾಗೂ ಹಿತಾಸಕ್ತಿಯ ವಿರುದ್ಧವಾದ ನಡವಳಿಕೆಗಳು ಹಾಗೂ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ವಿರುದ್ಧವಾದ ಮಾತುಗಳು ಹಾಗೂ ದೇಶವನ್ನು ತುಂಡರಿಸುವಂತಹ ಪ್ರಚೋದನಕಾರಿ ಭಾಷಣಗಳು ಪ್ರಜಾಪ್ರಭತ್ವಕ್ಕೆ ಮಾರಕವಾಗುವಂತಹುಗಳಾಗಿವೆ. ಇಂತಹುಗಳನ್ನೆಲ್ಲ ಹತ್ತಿಕ್ಕಲು ದೇಶದ್ರೋಹದ ಕಾನೂನು ಅತ್ಯಗತ್ಯವಾಗಿದೆ.
ದೇಶದ್ರೋಹ
ದೇಶದ್ರೋಹ ಕಾನೂನು ಎಂದರೇನು ಮತ್ತು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬುದನ್ನು ನೋಡುವುದಾದರೆ, ದೇಶದ್ರೋಹವೆಂಬುದು ಒಂದು ಸಮೂಹದ ಬೌಗೋಳಿಕ ಪ್ರದೇಶದಲ್ಲಿ ವಾಸವಾಗಿರುವ ಜನರು ತಮ್ಮ ಹಾಗೂ ತಾವು ವಾಸಿಸುವ ಪ್ರದೇಶದ ಸುರಕ್ಷತೆಗಾಗಿ ತಾವೇ ರಚಿಸಿಕೊಂಡಂತಹ ಒಂದು ನಿಯಮವಾಗಿರುತ್ತದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದಾಗ ಅದನ್ನು ನಿಯಂತ್ರಿಸಲು ಒಂದು ಕಾನೂನಿನ ಅಗತ್ಯತೆ ಇರುತ್ತದೆ ಹಾಗಾಗಿ ಅದರ ಹಿತಾಸಕ್ತಿಗೆ ಪೂರಕವಾಗಿ ಕಾನೂನನ್ನು ರೂಪಿಸಿ ಜಾರಿಗೆ ತರುವುದೇ ದೇಶದ್ರೋಹದ ಕಾನೂನಾಗಿರುತ್ತದೆ. ಹಿಂದಿನ ರಾಜಮನೆತನದ ಆಳ್ವಿಕೆ ಕಾಲದ ರಾಜದ್ರೋಹ ಕಾನೂನು ಕಾಲಾನಂತರದಲ್ಲಿ ಸುಧಾರಣೆಗೊಂಡು ಪ್ರಜೆಗಳಿಂದ ಅಸ್ತಿತ್ವಕ್ಕೆ ಬಂದ ಪ್ರಜಾಪ್ರಭುತ್ವದ ಸರ್ಕಾರದಲ್ಲಿ ದೇಶದ್ರೋಹ ಕಾನೂನಾಗಿ ಅಸ್ತಿತ್ವಕ್ಕೆ ಬಂದಿರುತ್ತದೆ.
ಸ್ವಾತಂತ್ರ್ಯ
ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವುದಾದರೆ, ಒಂದು ನಿರ್ದಿಷ್ಟ ಪ್ರದೇಶದಲ್ಲಿ, ಒಬ್ಬ ವ್ಯಕ್ತಿಯು ತನ್ನ ಇಚ್ಚೆಯಂತೆ ನಿರ್ಧಾರಗಳನ್ನು ಕೈಗೊಳ್ಳುವುದಾಗಿದೆ. ನಮ್ಮ ಸರ್ವೋಚ್ಚ ನ್ಯಾಯಾಲಯವು ಭಾರತದ ಸಂವಿಧಾನ ನೀಡಿರುವ ಸ್ವಾತಂತ್ರ್ಯ ವನ್ನು ವ್ಯಾಖ್ಯಾನಿಸುವಾಗ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ವ್ಯಕ್ತಪಡಿಸುವುದು ಸೂಕ್ತ ಎಂದು ತನ್ನ ಅಭಿಪ್ರಾಯದಲ್ಲಿ ಹೇಳಿದೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ವಿರುದ್ಧ ನೀತಿ ನಿಲುವುಗಳು ಹಾಗೂ ಪ್ರಚೋದನಕಾರಿ ಮಾತುಗಳನ್ನು ಆಡಿದರೆ ಅದನ್ನು ಸ್ವಾತಂತ್ರ್ಯದ ಪರಿಮಿತಿಯಲ್ಲಿ ತರಲು ಸಾಧ್ಯವಿಲ್ಲ ಅದು ದೇಶದ ಅಖಂಡತೆ ಹಾಗೂ ಸಾರ್ವಭೌಮತೆಗೆ ಸವಾಲಾಗಿ ನಿಲ್ಲುತ್ತದೆ. ಆದುದರಿಂದ ಅದನ್ನು ದೇಶದ್ರೋಹವೆಂದು ಕರೆಯಬಹುದು.
ಪ್ರಜಾಪ್ರಭುತ್ವ
ಜನರಿಂದ ನೇರವಾಗಿ ಆಯ್ಕೆಯಾದ ವ್ಯಕ್ತಿಗಳು ರಚಿಸುವ ಸರ್ಕಾರವನ್ನು ನಾವು ಪ್ರಜಾಪ್ರಭುತ್ವ ಸರ್ಕಾರವೆಂದು ಕರೆಯಬಹುದು. ಸರ್ಕಾರಗಳ ವಿಫಲ ಆಡಳಿತದ ವಿರುದ್ಧ ಹೇಳಿಕೆ ನೀಡುವುದು ದೇಶದ್ರೋಹ ಆಗುವುದಿಲ್ಲ. ಆದರೆ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ದೇಶದ ವಿರುದ್ದ ನಡೆಯುವ ಸಂಚುಗಳಲ್ಲಿ ಭಾಗಿಯಾಗುವುದು ಸ್ವಾತಂತ್ರ್ಯದ ಪರಿಮಿತಿಯಲ್ಲಿ ತರಲು ಬರುವುದಿಲ್ಲ. ಪ್ರಜಾಪ್ರಭುತ್ವದ ಸರ್ಕಾರವು ಜನರ ಆಶೊತ್ತರಗಳಿಗೆ ಅನುಗುಣವಾಗಿ ದೇಶದ್ರೋಹದ ಕಾನೂನನ್ನು ರಚಿಸಿರುತ್ತವೆ ಮತ್ತು ಇದರ ಮೂಲ ಉದ್ದೇಶವೇ ದೇಶದ ಸಾರ್ವಭೌಮತೆಗೆ ಧಕ್ಕೆಯಾಗಬಾರದೆಂಬುದಾಗಿದೆ.
ಹಿಂದೆಂದಿಗಿಂತಲೂ ಇಂದು ದೇಶದ್ರೋಹದ ಕಾನೂನು ಇನ್ನು ಹೆಚ್ಚು ಪ್ರಸ್ತುತವೆನಿಸುತ್ತದೆ. ಏಕೆಂದರೆ ಇಂದು ಅಂತಾರಾಷ್ಟ್ರೀಯ ಕಾನೂನುಗಳು ರೂಪಗೊಂಡಿರುವುದು ದೇಶಗಳ ಆಧಾರದ ಮೇಲೆ ಅದು ಅಲ್ಲದೆ, ಇಂದು ಮತೀಯವಾದ ಹೆಚ್ಚುತ್ತಿರುವ ಈ ಸಂಧರ್ಭದಲ್ಲಿ ಒಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಜನರಿಂದ ಆಯ್ಕೆಯಾದ ಸರ್ಕಾರಗಳ ಅಸ್ತಿತ್ವವನ್ನು ಪ್ರಶ್ನಿಸುವಂತಹ ಮತ್ತು ಸರ್ಕಾರವನ್ನೇ ಬೀಳಿಸುವಂತಹ ಕಾರ್ಯಗಳು ನಡೆಯುತ್ತಿವೆ. ಸ್ವಾತಂತ್ರ್ಯದ ಹೆಸರಿನಲ್ಲಿ ಒಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಆಗುವಂತೆ ನಡೆದುಕೊಳ್ಳುವುದು ಸಮರ್ಥನೀಯವಲ್ಲ.
ಭಾರತೀಯ ದಂಡ ಸಂಹಿತೆ 124ಎ ಕಲಂ ಪ್ರಕಾರ “ಯಾವುದೇ ವ್ಯಕ್ತಿಯ ಪದಗಳಿಂದ ಮಾತನಾಡುವ ಅಥವಾ ಬರೆದ ಚಿಹ್ನೆಗಳಿಂದ, ಅಂಗಿಕ ಸನ್ನೆಗಳಿಂದ , ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ಬಗ್ಗೆ ಕುಂದುಂಟು ಮಾಡುವ ಪ್ರಯತ್ನಗಳು, ಕುತಂತ್ರವನ್ನು ನಡೆಸುವುದು, ಬಾಹ್ಯಶಕ್ತಿಗಳ ಜೊತೆಯಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವುದು ದೇಶದ್ರೋಹ ಎನಿಸಿಕೊಳ್ಳುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.”
“ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ಬಗ್ಗೆ ಕುಂದುಂಟು ಮಾಡುವ ಪ್ರಯತ್ನಗಳು” ಹಾಗೂ “ಬಾಹ್ಯಶಕ್ತಿಗಳ ಜೊತೆಯಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವುದು” ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ. ಅಂದು ಬ್ರಿಟೀಷರ ಕಾಲದಲ್ಲಿ ಸರ್ಕಾರವು ಜನರಿಂದ ಆಯ್ಕೆಯಾಗಿ ಪ್ರತಿನಿಧಿಸುತ್ತಿರಲಿಲ್ಲ ಆದರೆ, ಸ್ವಾತಂತ್ರ್ಯ ಭಾರತದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವು ಅಸ್ತಿತ್ವದಲ್ಲಿರುತ್ತದೆ. ಅಂದರೆ ಇಲ್ಲಿ ಜನರ ಅಭಿಪ್ರಾಯಕ್ಕೆ ಮಾನ್ಯತೆ ಇದೆ ಎಂದಾಯಿತು.
ಇನ್ನು ಈ ಕಾಯ್ದೆಯೂ ಇಂಗ್ಲೆಂಡಿನಲ್ಲಿ 1839 ರಂದು ರಾಜದ್ರೋಹದ ಕಾನೂನಾಗಿ ಜಾರಿಗೆ ತರಲಾಯಿತು. ಆ ಕಾಯ್ದೆಯು ಇಂಗ್ಲೆಂಡಿನಲ್ಲಿ ಅಸ್ತಿತ್ವದಲ್ಲಿ ಇಲ್ಲ ಎಂಬುದು ಕೆಲವರ ವಾದವಾಗಿದೆ. ಇಂಗ್ಲೆಂಡಿನಲ್ಲಿ ಇಂದು ಕೂಡ ಸಣ್ಣ ಪ್ರಮಾಣದಲ್ಲಿ ಅರಸೊತ್ತಿಗೆಯನ್ನು ಕಾಣಬಹುದು. ಇಂಗ್ಲೆಂಡಿನಲ್ಲಿ ವರ್ಷದ ಪ್ರಥಮ ಸಂಸತ್ತನ್ನು ಇಂಗ್ಲೆಂಡಿನ ರಾಣಿ ತಮ್ಮ ಭಾಷಣದ ಮೂಲಕ ಉದ್ಘಾಟಿಸುತ್ತಾರೆ. ಆದರೆ ಭಾರತದಲ್ಲಿ ಈ ಕಾರ್ಯವನ್ನು ಸಂಸದರು ಆಯ್ಕೆ ಮಾಡಿದ ರಾಷ್ಟ್ರಪತಿಯವರು ಮಾಡುತ್ತಾರೆ. ಆದಕಾರಣ ಭಾರತ ಮತ್ತು ಇಂಗ್ಲೆಂಡನ್ನು ತುಲನೆ ಮಾಡುವುದು ಸಮಂಜಸವಲ್ಲ.
ಅಮೇರಿಕಾದಲ್ಲಿ 1798 ರಂದು ದೇಶದ್ರೋಹ ಕಾನೂನು ಜಾರಿಗೆ ಬರುತ್ತದೆ. ಆದರೆ ಅದನ್ನು 1820 ರಲ್ಲಿ ರದ್ದು ಮಾಡುತ್ತಾರೆ ಆನಂತರ 1918 ರಲ್ಲಿ ಮತ್ತೆ ಅದನ್ನು ಮರುಸ್ಥಾಪಿಸಲಾಗುತ್ತದೆ. ಇನ್ನು ಆಸ್ಟ್ರೇಲಿಯಾ 1984 ರಲ್ಲಿ ದೇಶದ್ರೋಹದ ಕಾನೂನನ್ನು ರದ್ದು ಮಾಡುತ್ತದೆ. ಮತ್ತೆ ಅದನ್ನು 2010 ರಲ್ಲಿ “ಅರ್ಜಿಂಗ್ ವೈಲೆನ್ಸ್ ಅಫೆನ್ಸಸ್” ಎನ್ನುವ ಹೆಸರಿನಲ್ಲಿ ಮತ್ತೆ ಮರುಸ್ಥಾಪಿಸುತ್ತದೆ. ದೇಶದ್ರೋಹದ ಕಾನೂನನ್ನು ತೆಗೆದು ಅದರಿಂದಾದ ಅನಾನುಕೂಲಗಳಿಂದಾಗಿ ಮತ್ತೆ ಮರುಸ್ಥಾಪಿಸಿರುವುದನ್ನು ಕಾಣಬಹುದು.
ರಾಷ್ಟ್ರೀಯ ಕಾನೂನು ಆಯೋಗ ದೇಶದ್ರೋಹದ ಕುರಿತು ಇತ್ತೀಚಿನ ಸಮಾಲೋಚನ ಕ್ರಿಯೆಯಲ್ಲಿ “ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಅಥವಾ ಹಿಂಸಾಚಾರ ಮತ್ತು ಕಾನೂನುಬಾಹಿರ ವಿಧಾನಗಳಿಂದ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಮಾಡಿದ ಕೃತ್ಯಗಳಲ್ಲಿ ಮಾತ್ರ ಈ ಕಾಯ್ದೆಯನ್ನು ಬಳಸಬಹುದು ಎಂದು ಹೇಳಲಾಗಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯವು ದೇಶದ್ರೋಹದ ಕಾನೂನಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ಎತ್ತಿ ಹಿಡಿದಿದೆ. ಕೇದಾರನಾಥ್ ಸಿಂಗೆ ವಿರುದ್ಧ ಬಿಹಾರ ಸರ್ಕಾರ ಪ್ರಕರಣ “ಒಬ್ಬ ವ್ಯಕ್ತಿಯ ಅವನ ಕೃತ್ಯಗಳು ಹಿಂಸಾಚಾರ ಅಥವಾ ಪ್ರಚೋದನೆ ಅಥವಾ ಸಾರ್ವಜನಿಕ ಹಾನಿ ಉಂಟುಮಾಡುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಪ್ರವೃತ್ತಿಯನ್ನು ಉಂಟುಮಾಡಿದರೆ ದೇಶ ದ್ರೋಹಕ್ಕಾಗಿ ಕಾನೂನು ಕ್ರಮ ಜರುಗಿಸಬಹುದೆಂದು ಹೇಳಿದೆ.
ಈ ಮೇಲಿನ ಸರ್ವೋಚ್ಚ ನ್ಯಾಯಾಲಯದ ಹೇಳಿಕೆಗಳನ್ನು ಗಮನಿಸಿದರೆ ಎಲ್ಲೂ ಕೂಡ ಸರ್ಕಾರದ ವಿರುದ್ಧ ಲೇಖನವನ್ನು ಬರೆಯುವ ಟೀಕಿಸುವ ಹಕ್ಕನ್ನು ಕೊಡಮಾಡಿ ದೇಶದ್ರೋಹದ ಕಾನೂನಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ನೀಡಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಶಾಶ್ವತವಲ್ಲ ಯಾವುದೋ ಒಂದು ಅನಿರೀಕ್ಷಿತ ಸಮಯದಲ್ಲಿ ಸರ್ಕಾರಗಳು ಕಾನೂನನ್ನು ದುರುಪಯೋಗ ಮಾಡಿಕೊಂಡ ಮಾತ್ರಕ್ಕೆ ದೇಶದ ಸಂವಿಧಾನಾತ್ಮಕ ಕಾನೂನನ್ನು ರದ್ದು ಮಾಡುವುದು ಸಮಂಜಸವಲ್ಲ, ದೇಶದೊಳಗಿದ್ದು ದೇಶದ ಬಗ್ಗೆ ದ್ರೋಹ ಮಾಡುವವರನ್ನು ಶಿಕ್ಷಿಸಲು ಭಯೊತ್ಪಾದನಾ ಚಟುವಟಿಕೆಗಳನ್ನು ತಡೆಯಲು ಕಾನೂನು ರೀತ್ಯಾ ಸ್ಥಾಪಿತವಾದ ಸರ್ಕಾರವನ್ನು ಉಳಿಸಿಕೊಳ್ಳಲು ದೇಶದ್ರೊಹದ ಕಾಯ್ದೆ ಪ್ರಸ್ತುತ ಎಂದು ಹೇಳಬಹುದು.
ದೇಶದ್ರೋಹದ ಕಾನೂನಿನ ಬಗ್ಗೆ ಸಮಗ್ರವಾಗಿ ನೋಡುವುದಾದರೆ ಈ ಕಾನೂನಿನ ಅಗತ್ಯತೆ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಕಾಣಬಹುದಾಗಿದೆ ಏಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ವಿರುದ್ಧದ ಸಂಚುಗಳಿಗೆ ಹಾಗೂ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ದೇಶದಲ್ಲಿನ ಆಂತರಿಕ ಗಲಭೆಗಳಿಗೆ ಪ್ರಚೋದಿಸುತ್ತಿರುವ ಈ ಸಂಧರ್ಭದಲ್ಲಿ ದೇಶದ್ರೋಹ ಕಾನೂನು ಅತ್ಯಗತ್ಯವಾಗಿ ಬೇಕಾಗಿದೆ. ಆದ್ದರಿಂದ ದೇಶದ್ರೋಹ ಕಾನೂನು ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿಲ್ಲ ಎಂದು ಹೇಳಬಹುದು.
No comments:
Post a Comment