ಅವಳು ಪಂಜರದ ಗಿಳಿಯಂತೆ ನೋಡಲು ಬಲು ಸುಂದರ ಗಿಳಿಯ ಪಂಜರವು ಅಷ್ಟೇ ಸುಂದರ. ಆದರೇನು ಮಾಡುವುದು ಅವಳು ಪಂಜರದಲ್ಲಿ ಬಂಧನವಾದ ಗಿಣಿ. ಅವಳ ಅಂತರಂಗದಲ್ಲಿ ಸ್ವಾತಂತ್ರ್ಯದ ಕಿಚ್ಚು. ಸುಂದರ ಕುಟುಂಬ ಒಬ್ಬಳೇ ಮಗಳು ಒಬ್ಬನೇ ಮಗ ಯಾವುದಕ್ಕೂ ಕೊರತೆಯಿಲ್ಲ. ಸಣ್ಣ ವಯಸ್ಸಿನಿಂದಲೂ ಅಪ್ಪನ ಮುದ್ದಿನ ಮಗಳಾಗಿ ಅಪ್ಪನ ಪ್ರೀತಿ ಕಾಳಜಿಯಲ್ಲಿ ಬೆಳೆದವಳು. ಅಪ್ಪನಷ್ಟು ಮಗಳನ್ನು ಮತ್ತಿನ್ಯಾರು ಪ್ರೀತಿಸಲು ಸಾಧ್ಯ. ಅದೇ ಅವಳಿಗೆ ಜೈಲುಶಿಕ್ಷೆ. ಅಪ್ಪನ ಪ್ರೀತಿ ಎಂದರೆ ಅವಳಿಗೆ ಉಸಿರುಗಟ್ಟಿಸುತ್ತಿದೆ.
ಅವಳಿಗೆ ಸ್ವಾತಂತ್ರ್ಯವಾಗಿ ಇರಬೇಕೆನ್ನುವ ಬಯಕೆ, ಸಮಾಜವನ್ನು ಅರಿತ ತಂದೆ ತಮ್ಮ ಕಟ್ಟುಪಾಡುಗಳಲ್ಲಿ ಬೆಳೆಸಲು ಬಯಸಿದರು. ಅವಳದು ಉದಾತ್ತ ಚಿಂತನೆ. ಜೊತೆಯಲ್ಲೇ ಹುಟ್ಟಿ ಬೆಳೆದ ತಮ್ಮನಿಗಿರುವ ಸ್ವಾತಂತ್ರ್ಯ ನನಗೆ ಇಲ್ಲ ಎನ್ನುವ ಪ್ರಶ್ನೆ ? ಅವಳಿಗೆ ಚಂದದ ಆಟ ಆಡುವ ಕನಸು ಆದರೆ ಕಳಿಸಲಿಲ್ಲ. ಅವಳಿಗೆ ಭರತನಾಟ್ಯ ಕಲಿಯುವ ಆಸೆ, ವೀಣೆ ನುಡಿಸುವ ಆಸೆ ಆದರೆ ಆಕೆಗೆ ನಿರ್ಬಂಧ. ಓದಿನಲ್ಲಿ ಅವಳು ಯಾರಿಗೂ ಕಮ್ಮಿ ಇಲ್ಲವೇನೋ ಅನ್ನುವಂತೆ ಇದ್ದವಳು. ಅವಳು ಬಹಿರಂಗವಾಗಿ ವಿರೋಧಿಸಲಿಲ್ಲ ಅಪ್ಪನನ್ನು ಏಕೆಂದರೆ ಅಪ್ಪನ ಕಾಳಜಿಯೇ ಆಕೆಗೆ ಭಯವಾಗಿತ್ತು. ಅಪ್ಪನ ಮೇಲೆ ಇಲ್ಲದ ಕೋಪ ಆದರೆ ತೋರಿಸಿಕೊಳ್ಳುವುದಿಲ್ಲ ಅಪ್ಪನೆದುರು, ಏಕೆಂದರೆ ಅಪ್ಪ ಆಶ್ರಯದಾತ.
ಕಾಲೇಜಿನ ದಿನಗಳು ಆರಂಭವಾದವು ಮತ್ತೆ ಸ್ವಾತಂತ್ರ್ಯದ ಆಸೆ ಆದರೇನು ಮಗಳನ್ನು ದೂರ ಕಳಿಸಲು ಒಪ್ಪದ ತಂದೆ ಮನೆಯ ಹತ್ತಿರ ಇರುವ ಕಾಲೇಜಿಗೆ ಸೇರಿಸಿದ. ಆಗಲೂ ಮಾತನಾಡಲಿಲ್ಲ ಅವಳು, ಅಪ್ಪನಿಗೆ ಹಿಡಿಶಾಪ ಅಪ್ಪ ಸ್ವಾತಂತ್ರವನ್ನು ಕೊಟ್ಟಿಲ್ಲವೆಂದು.
ಬದುಕಿನ ರಾಜಕುಮಾರ ನಿಗಾಗಿ ಕನಸು, ರಾಜಕುಮಾರ ಬರುತ್ತಾನೆ ನನ್ನ ಈ ಮನೆಯೆಂಬ ಪಂಜರದಿಂದ ಬಿಡುಸುತ್ತಾನೆಂದು, ಆದರೆ ವಯಸ್ಸು ಕಳೆಯುತ್ತಿದೆ. ಮದುವೆಯ ಆಸೆ ಮುಗಿಯುತ್ತಿದೆ. ದೇವರಿಗೂ ಕೇಳಿಸಲಿಲ್ಲ ಆಕೆಯ ಕೂಗು ಏಕೆಂದರೆ ಅವಳು ಎಂದು ಮಾತನಾಡಲಿಲ್ಲ ಮನಸ್ಸಿನಲ್ಲಿ ಬಯಸಿದಳು ಎಲ್ಲವನ್ನು, ದೂರಿದಳು ಕಾಣದ ದೇವರನ್ನು ಆಕಾಶ ನೋಡುತ್ತ, ಆದರೆ ಮರೆತಳು ದೇವರು ಮಾತು ಕೊಟ್ಟಿದ್ದು ತನ್ನ ಇಷ್ಟವನ್ನು ಹೇಳಲೆಂದು. ದೂರುತ್ತಲೇ ಇದ್ದಳು ಅಪ್ಪ ಸ್ವಾತಂತ್ರ ಕೊಟ್ಟಿಲ್ಲವೆಂದು ಆದರೆ ಮರೆತೇಬಿಟ್ಟಳು ಸ್ವಾತಂತ್ರ ಕೊಡುವುದಲ್ಲ ದಕ್ಕಿಸಿಕೊಳ್ಳುವುದೆಂದು....
No comments:
Post a Comment