Sunday, June 25, 2023

ನಿರೀಕ್ಷೆ


           ಹೌದು ನಾವು ಕೆಲವೊಮ್ಮೆ ಒಂಟಿಯಾಗಿ ಬಿಡುವುದುಂಟು, ಬದುಕಿನಲ್ಲಿ ಎಲ್ಲರಿಂದ ದೂರವಾಗಿ ಬಿಡಬೇಕು ಅನಿಸುತ್ತದೆ. ಹಾಗೆ ಆಗಲು ಹಲವಾರು ಕಾರಣಗಳಿರಬಹುದು ಅದರಲ್ಲಿ ಮುಖ್ಯವಾಗಿದ್ದು ನಾವು ಬೇರೆಯವರ ಮೇಲೆ ಇಟ್ಟಿರುವ ನಿರೀಕ್ಷೆ ನಮ್ಮನ್ನು ಒಂಟಿಯನ್ನಾಗಿ ಮಾಡಿಬಿಡುತ್ತದೆ. ನಿರೀಕ್ಷೆ ಏಕೆ ಮೂಡುತ್ತದೆ ಎಂದು ನೋಡುವುದಾದರೆ ಎಲ್ಲಾ ಸಂಬಂಧಗಳು ನಿಂತಿರುವುದೇ ಅನಿವಾರ್ಯತೆಯ ಮೇಲೆ, ಅನಿವಾರ್ಯತೆ ನಿರೀಕ್ಷೆಗಳಿಗೆ ದಾರಿ ಮಾಡಿಕೊಡುತ್ತದೆ. ತಂದೆ ತಾಯಿಗಳಿಗೆ ಮಕ್ಕಳು ನಮಗೆ ವಯಸ್ಸಾದ ನಂತರ ನೋಡಿಕೊಳ್ಳಲಿ ಎಂಬ ನಿರೀಕ್ಷೆ., ಹುಡುಗ ಹುಡುಗಿಯರಲ್ಲಿ ಆಕರ್ಷಣೆ ಹಾಗೂ ಪ್ರೀತಿಯ ನಿರೀಕ್ಷೆ. ಸಂಬಂಧಗಳಲ್ಲಿ ಲಾಭವಾಗುತ್ತದೆ ಎನ್ನುವ ನಿರೀಕ್ಷೆ ಒಟ್ಟಿನಲ್ಲಿ ಅನಿವಾರ್ಯತೆಗೆ ಆಗುವ ಸಂಬಂಧಗಳು ನಿರೀಕ್ಷೆ ಮೆಟಿಲನ್ನೇ ಏರಿಬಿಡುತ್ತವೆ. ಇಂತಹ ನಿರೀಕ್ಷೆಗಳು ಸುಳ್ಳಾದಾಗ ಜಗತ್ತು ಬೇಡವೆನಿಸುತ್ತದೆ. ನಾವು ಒಂಟಿಯಾಗಿ ಬಿಟ್ಟೆವೆಲ್ಲ ಎಂದು ಅನಿಸುವುದುಂಟು ಸಂಬಂಧಗಳ ಬಗ್ಗೆ ಬೇರೆಯವರಿಗೆ ಪಾಠ ಮಾಡುವುದು ಸುಲಭ ಅದೇ ಜಾಗದಲ್ಲಿ ಪಾಠ ಹೇಳುವವರು ಆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ. ಅನಿವಾರ್ಯತೆಯ ಸಂಬಂಧಗಳು ಅವಲಂಬಿತವಾದಾಗ ನಿರೀಕ್ಷೆಗಳು ಹುಸಿಯಾಗುತ್ತವೆ. ಮನುಷ್ಯ ಸಂಘ ಜೀವಿ ಅವನಿಗೆ ಜೊತೆಗಾರರು ಬೇಕೇ ಬೇಕು ಆ ಜತೆಗಾರರು ತನ್ನ ಅನುಕೂಲಕ್ಕಾಗಿ ಜೊತೆಗಿರುವವರನ್ನು ತೊರೆದಾಗ ಅವನಿಗೆ ದುಃಖ ಜಾಸ್ತಿಯಾಗುತ್ತದೆ. ಅವನು ನಿರೀಕ್ಷ ಕಡಿಮೆ ಮಾಡಿ ಒಂಟಿತನ  ರೂಢಿಸಿಕೊಂಡಷ್ಟು ಅವನ ದುಃಖ ಕಡಿಮೆಯಾಗುತ್ತ ಹೋಗುತ್ತದೆ. ಒಂಟಿತನ ಎನ್ನುವುದು ತನ್ನ ಆತ್ಮ ತೃಪ್ತಿಗೆ ಸಹಕಾರಿ.  ಒಂಟಿತನ ಹೇಗೆ ಸಹಕಾರಿಯಾಗುತ್ತದೆ ಎಂಬ ಪ್ರಶ್ನೆ ಹೇಳುವುದು ಸಹಜ? ಒಂಟಿತನವೆಂಬುವುದು ಒಂದು ವರ ಅದು ಶಾಪ ಎಂದುಕೊಂಡಷ್ಟು ದುಃಖವೇ ಹೆಚ್ಚು. ಒಂಟಿತನ ನಿಭಾಯಿಸುವುದರ ಮೇಲೆ ನಮ್ಮ ಆತ್ಮ ತೃಪ್ತಿ ಹಾಗೂ ಖುಷಿಯು ನಿಂತಿರುತ್ತದೆ. ಆತ್ಮತೃಪ್ತಿ ಎಂದರೆ ನಿರೀಕ್ಷೆಗಳಿಂದ ಮುಕ್ತಿ ನಿರೀಕ್ಷೆಯಿಂದ ಮುಕ್ತಿ ಹೊಂದಿದಷ್ಟು ಖುಷಿ ಹೆಚ್ಚು. ಖುಷಿ ಇರುವುದು ನಮ್ಮ ಒಳಗೆ ಅದು ಬೇರೆಯವರಿಂದ ಸಿಗುವಂತದ್ದಲ್ಲ. ಅದು ನಮ್ಮದೇ ಆಯ್ಕೆ ಎಲ್ಲವನ್ನು ಕಳೆದುಕೊಂಡ ಮೇಲೆ ಖುಷಿಯಾಗಿರುವುದೇ ಆಧ್ಯಾತ್ಮ ಅದೇ ಸತ್ಯ ಅದೇ ನಿತ್ಯ ಅದೇ ನಿರಂತರ.....

No comments: