ಸ್ನೇಹ ಜಗತ್ತಿನ ಅದ್ಭುತವಾದ ಸಂಬಂಧ ಅಲ್ಲಿ ಯಾವ ಅಳತೆಗಳು ಇರುವುದಿಲ್ಲ .ಕುಚೇಷ್ಟೆಯಿಂದ ಹಿಡಿದು ಪ್ರೀತಿ ,ಮಮತೆ ,ವಿಶ್ವಾಸ ಎಲ್ಲ ಇರುತ್ತದೆ .ಅದು ನಿಷ್ಕಲ್ಮಶ, ಎಲ್ಲಾ ಸಂಬಂಧಗಳಿಗೆ ಮೀರಿದ ಬಂದವದು. ಸ್ನೇಹ ಪ್ರತಿಯೊಂದು ಜೀವಿಗೆ ಬದುಕಿನಲ್ಲಿ ಅವಶ್ಯವಾಗಿ ಬೇಕಾಗಿರುವ ಅನುಭೂತಿ, ಅನುಬಂಧ. ಅಂತಹ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಸಂಬಂಧಗಳು ಜಾಗತೀಕರಣದ ಪ್ರಭಾವದಿಂದ ತಮ್ಮ ಸಂಬಂಧದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದವೆ. ಅದರೊಳಗೆ ಸ್ನೇಹ ಸೇರಿರುವುದು ಇಂದಿನ ಸಮಾಜದ ದುರಂತ. ಇಂದಿನ ದಿನಮಾನದಲ್ಲಿ ಸಂಬಂಧಗಳು ಲಾಭದ ಆಧಾರದಲ್ಲಿ ನಡೆಯುತ್ತಿರುವುದರಿಂದ ನಿಷ್ಕಲ್ಮಶ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಕೃತಕತೆ ಸತ್ಯವಾಗಿ ಕಾಣುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರೊಳಗೆ ನಾವು ಉತ್ತಮ ಸ್ನೇಹಿತರನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ನೋಡೋಣ. ಉತ್ತಮ ಸ್ನೇಹಿತರನ್ನು ತಿಳಿಯುವ ಮೊದಲು ನಾವು ಉತ್ತಮ ಸ್ನೇಹಿತರಾಗಿದೇವ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಉತ್ತಮ ಸ್ನೇಹವೆಂದರೆ ಏನು ಎಂಬ ಪ್ರಶ್ನೆ ಕಾಡುವುದು ಸಹಜ. ಬದುಕಿನಲ್ಲಿ ಹಲವಾರು ಜನರು ಬರುತ್ತಾರೆ. ಕೆಲವರು ವರವಾಗಿ ಬಂದರೆ ಕೆಲವರು ಶಾಪವಾಗಿ ಬರುತ್ತಾರೆ .ಕೆಲವರು ನಿಮ್ಮ ಸತ್ವವನ್ನೇ ಹೀರಿದರೆ ಮತ್ತೆ ಕೆಲವರು ನಿಮ್ಮ ಅಂತರಂಗದ ಶಕ್ತಿಯನ್ನು ಪ್ರಚೋದಿಸುತ್ತಾರೆ.
ನಾವು ಇಲ್ಲಿ ಹುಡುಕ ಬೇಕಾಗಿರುವುದು ನಿಜ ಸ್ನೇಹಿತರನ್ನು ,ನಿಜ ಸ್ನೇಹಿತರು ಎಂದರೆ ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ನಮ್ಮ ಜೊತೆ ಊಟ ಮಾಡಿ ಹರಟೆ ಹೊಡೆದವರೆಲ್ಲ ಹಾಗೂ ನಮ್ಮ ಜೊತೆ ಸುತ್ತುವವರೆಲ್ಲ ನಿಜ ಸ್ನೇಹಿತರಾಗಲು ಸಾಧ್ಯವಿಲ್ಲ. ನಿಜ ಸ್ನೇಹದಲ್ಲಿ ಸ್ನೇಹಿತನ ಏಳಿಗೆಯನ್ನು ಪ್ರಚೋದಿಸುವಂತ ಶಕ್ತಿ ಇರಬೇಕು. ಅವನ ಅಂತರಂಗದ ಶಕ್ತಿಯನ್ನು ತಿಳಿದು ಅವನ ಉನ್ನತಿಗೆ ಸಹಕಾರ ಕೊಡುವ ಮನೋಭಾವವಿರಬೇಕು. ಅದು ಬಿಟ್ಟು ಅವನ ಮುಂದೆ ನಯವಾಗಿ ಮಾತನಾಡಿ ಅವನ ಬೆನ್ನ ಹಿಂದೆ ಮಾತನಾಡುವ ಚಾಳಿ ಇರಬಾರದು, ಬೇರೆಯವರ ಮುಂದೆ ತಾವು ಒಳ್ಳೆಯವರಾಗಲು ಅವರು ಕೆಟ್ಟವರಂತೆ ಚಿತ್ರಿಸಬಾರದು. ಸ್ನೇಹದ ಏಳಿಗೆಯನ್ನು ಸಹಿಸದೆ ಹಿತ ಶತ್ರುವಿನ ರೀತಿ ಇರಬಾರದು. ಅಂತಹ ಸಂಬಂಧಗಳು ಸುದೀರ್ಘಕಾಲ ಬಾರದಂತೆ ಮುರಿದು ಬೀಳುತ್ತವೆ.
ಸ್ನೇಹವೆಂಬುದು ಒಂದು ಮಧುರ ಸಂಬಂಧ. ಅದನ್ನು ನಾವು ಪುರಾಣ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ಅದಕ್ಕೆ ಉತ್ತಮ ಉದಾಹರಣೆ ಕೃಷ್ಣ ಕುಚೇಲನ ಸ್ನೇಹ. ಕೃಷ್ಣ ರಾಜಪರಂಪರೆಯಲ್ಲಿ ಬಂದಿದ್ದರು . ಆತನ ಬಡ ಸ್ನೇಹಿತನನ್ನು ಮರೆಯಲಿಲ್ಲ ಅದು ಶ್ರೇಷ್ಠ ಸ್ನೇಹ. ಸ್ವಾರ್ಥ ಸ್ನೇಹಕ್ಕೆ ಉತ್ತಮ ಉದಾಹರಣೆ ದುರ್ಯೋಧನ ಹಾಗೂ ಕರ್ಣನ ಸ್ನೇಹ. ಅದು ಲಾಭಕ್ಕಾಗಿ ಆದ ಸ್ನೇಹ ಹಾಗಾಗಿ ಕರ್ಣ ಧರ್ಮ ಮಾರ್ಗದಲ್ಲಿ ನಡೆದರು ಅವನ ಸಾವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮತ್ತು ಮುಂದುವರೆದು ಹೇಳುವುದಾದರೆ ದ್ರುಪದ ಹಾಗೂ ದ್ರೋಣಾಚಾರ್ಯರ ಸ್ನೇಹ. ಅವರಿಬ್ಬರೂ ಸಹಪಾಠಿಗಳು ಒಂದೇ ಗುರುಕುಲದಲ್ಲಿ ಬೆಳೆದವರು. ಸ್ನೇಹಕ್ಕೆ ಬೆಲೆ ಕೊಡದ ದ್ರುಪದ ತನ್ನ ಅಧಿಕಾರದ ಅಹಂನಿಂದ ಸಹಾಯ ಕೇಳಿಬಂದ ದ್ರೋಣಾಚಾರ್ಯರನ್ನು ಅವಮಾನಿಸಿದ ಅದರ ಪ್ರತಿಫಲವೇ ದ್ರೋಣಾಚಾರ್ಯರ ಕ್ಷಮೆ ಕೇಳುವಂತಹ ಸಂದರ್ಭ ಒದಗಿ ಬಂತು. ಐತಿಹಾಸಿಕ ಕಥೆಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಸ್ನೇಹವಿದ್ದರೆ ಕೃಷ್ಣ ಕುಚೇಲನಂತೆ ಇರಬೇಕು. ಅದು ನಿಷ್ಕಲ್ಮಶ ಸ್ವಾರ್ಥದ ಸ್ನೇಹ ವಾಗಲಿ ,ಲಾಭದ ಸ್ನೇಹವಾಗಲಿ ಬಹಳ ಕಾಲ ಉಳಿಯುವುದಿಲ್ಲ .ಕಾಲಕಳೆದಂತೆ ಸ್ವಾರ್ಥದ ಲಾಭದ ಸ್ನೇಹಗಳು ಅಳಿಯುತ್ತವೆ .ಆದರೆ ನಿಜ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ .ಸ್ನೇಹದಲ್ಲಿ ಅಪೇಕ್ಷೆಯು ಇರಬಾರದು. ಅಪೇಕ್ಷೆಯೂ ಸ್ನೇಹವನ್ನು ಮಾತ್ರವಲ್ಲ ಎಲ್ಲಾ ಸಂಬಂಧಗಳನ್ನು ಹಾಳು ಮಾಡಿಬಿಡುತ್ತದೆ. ಎಲ್ಲ ಸಂಬಂಧಗಳ ಜೀವಾಳ ನಂಬಿಕೆ. ನಂಬಿಕೆ ಕಳೆದುಹೋಗದಂತೆ ನಡೆದುಕೊಂಡರೆ ಸ್ನೇಹವು ಸುದೀರ್ಘವಾಗಿ ಉಳಿಯುತ್ತದೆ. ನಂಬಿಕೆ ಕಳೆದುಕೊಂಡ ಸಂಬಂಧಗಳು ಉಳಿಯುವುದು ಅಸಾಧ್ಯ .ಯಾವುದೇ ಸಂಬಂಧ ಉಳಿಯಬೇಕಾದರೆ ಎರಡು ಕಡೆಯ ಪ್ರಯತ್ನದಿಂದ ಮಾತ್ರ ಸಾಧ್ಯ .ಯಾವುದೇ ಸಂಬಂಧಗಳನ್ನು ಒತ್ತಾಯಪೂರ್ವಕವಾಗಿ ಉಳಿಸಿಕೊಳ್ಳುವಂತ ಕೆಲಸ ಮಾಡಬಾರದು. ನಂಬಿಕೆ ಇಲ್ಲದ ಮೇಲೆ ಅವು ಕೃತಕ ಸಂಬಂಧಗಳ ಆಗಿಬಿಡುತ್ತವೆ. ಕೃತಕತೆಯ ಬದುಕು ಮನಸ್ಸಿಗೆ ಮುದ ನೀಡಲು ಸಾಧ್ಯವಿಲ್ಲ . ಆ ಸಂಬಂಧಗಳು ಇದ್ದೂ ಇಲ್ಲದಂತೆ ಇರುತ್ತವೆ. ಇದ್ದು ಇಲ್ಲದಿರುವುದಕ್ಕಿಂತ ಇಲ್ಲದಿರುವುದೇ ಉತ್ತಮ. ಉತ್ತಮ ಸ್ನೇಹಿತರನ್ನು ಕಳೆದುಕೊಂಡರೆ ವಜ್ರವನ್ನು ಎಸೆದ ಕಲ್ಲನ್ನು ಎತ್ತಿ ಕೊಂಡಂತೆ. ಕೃತಕ ಸ್ನೇಹ ಉಳಿಯುವುದಿಲ್ಲ .ನಿಜ ಸ್ನೇಹ ಅಳಿಯುವುದಿಲ್ಲ....