ಹಿಂದುತ್ವ ಜಗತ್ತಿಗೆ ಪ್ರಕೃತಿಯೊಂದಿಗೆ ಬದುಕುವ ಪಾಠವನ್ನು ಹೇಳಿಕೊಟ್ಟ ಧರ್ಮ. ಅದು ಸನಾತನ ಹಿಂದುತ್ವ ಎಂಬ ಪದವೆ ಒಂದು ರೋಮಾಂಚನ ತನ್ನ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ವಿಶ್ವದಲ್ಲೆಡೆ ಪಸರಿಸಿ ಭಾರತದ ಮಣ್ಣಿನ ಪರಂಪರೆಯನ್ನು ವಿಶ್ವಕ್ಕೆ ತಿಳಿಸಿದ ಧರ್ಮ. ಹಿಂದುತ್ವ ಪದದ ಮೂಲವನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವುದು ಸಿಂಧೂ ನಾಗರಿಕತೆ, ಆ ನಾಗರಿಕತೆಯ ಫಲವೇ ಅನ್ಯ ಖಂಡಗಳ ಜನರು ಭಾರತದ ಭೂಭಾಗವನ್ನು ಸಿಂಧೂ ನಾಗರಿಕತೆಯ ನಾಡು ಎಂದು ಕರೆದದ್ದು. ಅದು ಕಾಲಕ್ರಮೇಣ ಜನಗಳ ಉಚ್ಚಾರ ಸ್ಥಿತಿಯಲ್ಲಿ ಹಿಂದೂ ಆಯಿತು. ಹಿಂದೂ ಧರ್ಮಕ್ಕೆ ಆದಿಯಾಗಲಿ ಅಂತ್ಯವಾಗಲಿ ಇಲ್ಲ ಅದು ಸನಾತನ. ಸನಾತನ ಎಂದರೆ ಅಂತ್ಯವಿಲ್ಲದ್ದು ಎಂದು ಅರ್ಥ. ಹಿಂದೂ ಪದ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಇಂದಿನ ದಿನಮಾನದಲ್ಲಿ ಕರೆಯುವ ಹಿಂದೂ ಸಂಪ್ರದಾಯದ ರೀತಿ-ರಿವಾಜುಗಳು ಅಸ್ತಿತ್ವದಲ್ಲಿದ್ದವು.
ಹಿಂದೂ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಸನಾತನ ಎಂದು ಕೂಡ ಕರೆಯಬಹುದು. ಅದು ಯಾರಿಂದಲೂ ಸ್ಥಾಪಿತವಾದ ಅಥವಾ ಯಾರದೋ ಮಾರ್ಗದರ್ಶನದಲ್ಲಿ ಮೂಡಿಬಂದ ಸಂಸ್ಕಾರ ಸಂಸ್ಕೃತಿ ಪರಂಪರೆಯಲ್ಲ .ಅದು ಪ್ರಾಕೃತಿಕವಾಗಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಒಂದು ಜೀವನ ವಿಧಾನ. ಆ ಜೀವನ ವಿಧಾನ ಸಹಬಾಳ್ವೆ, ಸಮೃದ್ಧಿ ಹಾಗೂ ಶಾಂತಿಯನ್ನು ಬದುಕಿನೊಂದಿಗೆ ಜೋಡಿಸಿ ಕೊಟ್ಟಿದ್ದು .ಅದರ ಪರಿಣಾಮವೇ ಇಂದು ನಾವು ನಮ್ಮ ದೇಶದಲ್ಲಿ ವಿವಿಧತೆಯನ್ನು ಕಾಣಬಹುದು. ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಿರುವುದು. ಹಿಂದೂ ಸಂಸ್ಕೃತಿಯು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತೆ ಹೇಳಿಕೊಡುವ ಧರ್ಮ .ಅದೇ ಕಾರಣ ಇಂದು ಭಾರತದಲ್ಲಿ ವಿವಿಧ ಧರ್ಮದ ( ಮತದ ) ಜನರು ವಾಸಿಸಲು ಸಾಧ್ಯವಾಗಿರುವುದು. ಈ ಪರಂಪರೆ ಪ್ರಕೃತಿಯೊಂದಿಗೆ ಬದಲಾವಣೆಯಾಗುತ್ತಾ ಹೋಗಿದ್ದರ ಫಲವೇ ಇಂದು ಕೂಡ ತನ್ನ ಸಂಸ್ಕೃತಿಯನ್ನು ಹಾಗೂ ತನ್ನ ಇತಿಹಾಸವನ್ನು ಉಳಿಸಿಕೊಳ್ಳಲು ಹಿಂದೂ ಧರ್ಮಕ್ಕೆ ಸಾಧ್ಯವಾಗಿರುವುದು.
ಇಂತಹ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಅನ್ಯ ಮತಗಳು ನಿರಂತರವಾಗಿ ಆಕ್ರಮಣ ನಡೆಸುತ್ತಾ ಸಂಸ್ಕೃತಿಯನ್ನು ನಾಶ ಮಾಡಲು ಅವಣಿಸುತ್ತಾ ಬಂದರು ಏನು ಮಾಡಲು ಸಾಧ್ಯವಾಗಿಲ್ಲ ಕಾರಣ ಹುಡುಕುತ್ತ ಹೊರಟರೆ ನಮಗೆ ಸಿಗುವುದು ಹಿಂದುತ್ವವನ್ನು ಉಳಿಸಿಕೊಂಡು ಬರುತ್ತಿರುವ ಸಮಾಜ ಅಂದರೆ ಅದನ್ನು ವಾಸ್ತವದ ರೂಪದಲ್ಲಿ ಅನುಷ್ಠಾನಕ್ಕೆ ತಂದು ಅದರೊಟ್ಟಿಗೆ ಬದುಕನ್ನು ನಡೆಸುತ್ತಿರುವ ಸಾಮಾನ್ಯ ಜನರಿಂದ ಇಂದು ಹಿಂದೂ ಧರ್ಮವು ಉಳಿದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಾವು ಹಿಂದೂ ಧರ್ಮದ ರಾಯಭಾರಿಗಳು ಎನ್ನುವಂತೆ ಬಿಂಬಿಸಿಕೊಂಡು ಧರ್ಮವನ್ನೇ ಹೈಜಾಕ್ ಮಾಡಿ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ನಮ್ಮ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ಯಾವುದೇ ರಾಜಕೀಯ ಪಕ್ಷದಿಂದ ಧರ್ಮ ಉಳಿಯಲಾರದು ಏಕೆಂದರೆ ರಾಜಕೀಯ ಪಕ್ಷ ಹುಟ್ಟುವ ಮೊದಲೇ ಹಿಂದೂ ಧರ್ಮವು ಅಸ್ತಿತ್ವದಲ್ಲಿತ್ತು .ಮುಂದಿನ ದಿನಗಳಲ್ಲಿ ಹಿಂದುತ್ವದ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷ ಇಲ್ಲದಿದ್ದರೂ ಹಿಂದುತ್ವ ಉಳಿಯುತ್ತದೆ. ಆದಿ-ಅಂತ್ಯ ಇಲ್ಲದ್ದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಇಂದಿಗೂ ನಿಜವಾದ ಹಿಂದುತ್ವದ ರಾಯಭಾರಿಗಳು ಸಾಮಾನ್ಯ ಜನರೇ. ಹಿಂದುತ್ವವು ರಾಜಕೀಯ ವಿಚಾರವಾಗದೆ ಸಾಮಾನ್ಯ ಜನರೊಳಗೆ ಶಾಶ್ವತವಾಗಿ ಉಳಿಯಲಿ.
No comments:
Post a Comment