ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದಿದ್ದರೂ ಅನ್ಯಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದೆ ಅದರ ಸಾಧನೆಯಾಯಿತು. ಮೊದಲ ಬಾರಿಗೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ದಕ್ಷಿಣ ಭಾರತದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಪಕ್ಷ ಮೊದಲು ಒಳ್ಳೆಯ ಅಧಿಕಾರ ನೀಡುವ ಭರವಸೆಯನ್ನು ನೀಡಿ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿತ್ತು. ಅದರ ಬರವಸೆಯನ್ನು ನಂಬಿದ ಜನ ಒಳ್ಳೆಯ ಆಡಳಿತ ನೀಡಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 20- 20 ಮ್ಯಾಚ್ ಆಡಿದ ಅಂದಿನ ಜೆಡಿಎಸ್ ಹಾಗೂ ಬಿಜೆಪಿ ಪರಸ್ಪರ ತೆಗಳುವುದರೊಂದಿಗೆ ಆರಂಭವಾಗಿ ಕೊನೆಗೆ ಸರ್ಕಾರ ಪತನದೊಂದಿಗೆ ಅಂತ್ಯವಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡು ಪಕ್ಷಗಳ ಕಾರ್ಯಕರ್ತರ ಪರಿಶ್ರಮ ಜೆಡಿಎಸ್ ಸಂಸ್ಕೃತಿಗೂ ಹಾಗೂ ಬಿಜೆಪಿ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ.
ಬಿಜೆಪಿಯದ್ದು ಸಿದ್ಧಾಂತಾಧರಿತ ಪಕ್ಷವೆಂದು ಹೇಳಲಾಗುತ್ತಿತ್ತು. ಜೆಡಿಎಸ್ ನದು ಜಾತ್ಯತೀತವೆಂದರೂ ಅಲ್ಲಿ ಜಾತಿಗಳದೇ ಕಾರುಬಾರು. ಬಿಜೆಪಿ ಹಿಂದುತ್ವದ ಆಧಾರದಲ್ಲಿ ಅಧಿಕಾರ ಹಿಡಿಯುವ ಇಚ್ಛೆಯೊಂದಿಗೆ ಇದ್ದು ತನ್ನ ಎರಡನೇ ಅವಧಿಯ ಚುನಾವಣೆ ಪ್ರಚಾರದಲ್ಲಿ ಹಿಂದುತ್ವವನ್ನು ಮರೆಯಿತು. ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಡದಿದ್ದೇ ದೊಡ್ಡ ವಿಚಾರವೆಂಬಂತೆ ಬಿಂಬಿಸಿತು. ಕರ್ನಾಟಕದ ಪ್ರಜ್ಞಾವಂತ ಮತದಾರ ಆಗಲೂ ಕೂಡ ಬಿಜೆಪಿಗೆ ಪೂರ್ಣಬಹುಮತ ಕೊಡಲಿಲ್ಲ. ಏಕೆಂದರೆ ಬಿಜೆಪಿ ಅಷ್ಟರಲ್ಲಾಗಲೇ ಹಿಂದುತ್ವದಿಂದ ಜಾತಿಯ ಕಡೆಗೆ ವಾಲಿಯಾಗಿತ್ತು. ಬಿಜೆಪಿಯಲ್ಲೂ ಜಾತಿ ಆಧಾರದ ಮೇಲೆ ಟಿಕೆಟ್ ನೀಡುವ ಸಂಸ್ಕೃತಿ ಆರಂಭವಾಯಿತು. ಪಕ್ಷಕ್ಕಾಗಿ ತ್ಯಾಗಮಾಡಿದ ನಾಯಕರು ಮನೆ ಸೇರುವಂತಾಯಿತು. ಹೊಗಳು ಭಟ್ಟರಿಂದ ಕೂಡಿದ ಮಂದಿಗೆ ಮಣ್ಣೆ ಹಾಕಲು ಬಿಜೆಪಿಯ ದೇವದುರ್ಲಭ ಕಾರ್ಯಕರ್ತರನ್ನು ಬಲಿಕೊಡಲು ಹಿಂದುಮುಂದು ನಾಯಕರು ಯೋಚಿಸಲಿಲ್ಲ. ಸಂಸ್ಕೃತಿ ಸಂಸ್ಕಾರ ಇಲ್ಲದವರ ಪಕ್ಷವಾಗುವತ್ತ ಬಿಜೆಪಿ ತನ್ನ ಕಾರ್ಯವನ್ನು ಶುರು ಮಾಡಿತು. ಮೂಲ ಬಿಜೆಪಿಗರು ಕಾಣೆಯಾಗತೊಡಗಿದರು. ಬಿಜೆಪಿಯ ಒಳಗೆ ಜಾತಿಗಳ ಕಾರುಬಾರು ಶುರುವಾಯಿತು. ದೇಶಕ್ಕಾಗಿ ರಾಜಕಾರಣ ಎಂದು ಹೇಳುತ್ತಾ ಭ್ರಷ್ಟರು ಬಿಜೆಪಿಯನ್ನು ಅಳಲು ಶುರುಮಾಡಿದರು. ಕೊನೆಗೆ ಎಲ್ಲಾ ಪಕ್ಷಗಳಂತೆ ಬಿಜೆಪಿಯು ವಿಶೇಷವಾಗಿ ಕರ್ನಾಟಕದ ಬಿಜೆಪಿ ಅಧಿಕಾರಕ್ಕೆ ಕೇಂದ್ರೀಕೃತ ಪಕ್ಷವಾಗಿ ಹೊರಹೊಮ್ಮಿತು. ನಿಜವಾದ ಹಿಂದುತ್ವ ತೆರೆಮರೆಗೆ ಸರಿದು ಜಾತಿ ನಾಯಕರು ಬಿಜೆಪಿಯನ್ನು ಅಳಲು ಶುರುಮಾಡಿದರು ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ರೋಸಿಹೋದ ಬಿಜೆಪಿಯ ನಿಷ್ಠರು ಸುಮ್ಮನಾದರು.
ಮೊದಲೇ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡ ಅಧಿಕಾರಕ್ಕೆ ಬರಲು ಸಾಧ್ಯವೇ! ಜಾತಿಗಳ ಪ್ರತಿಷ್ಠೆಯಲ್ಲಿ ಎಲ್ಲಾ ಪಕ್ಷಗಳಂತೆ ಆಗಿ ಬಿಜೆಪಿಯು ಮತ್ತೆ ಅಧಿಕಾರ ಹಿಡಿಯಲು ವಿಫಲವಾಯಿತು. ಹಿಂದುತ್ವದ ಹೆಸರು ಹೇಳಿಕೊಂಡು ಜಾತಿ ರಾಜಕಾರಣ ಮಾಡಿದ ಪಕ್ಷದ ನಾಯಕರು ಕೊನೆಗೇ ಪೂರ್ಣಬಹುಮತ ತರುವಲ್ಲಿ ವಿಫಲವಾದರು. ಕಾರ್ಯಕರ್ತರು ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡರು. ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಯಿತು. ಜಾತಿ ನಾಯಕರು ಬಿಜೆಪಿಯ ಮುಂಚೂಣಿಯಲ್ಲಿ ನಿಂತಿದ್ದೆ ಪಕ್ಷಕೇ ಬಹುಮತ ಬರದಿರಲು ಕಾರಣವಾಯಿತು.
ಇನ್ನು ತನ್ನ ಮೂರನೇ ಅವಧಿಯನ್ನು ಆಪರೇಷನ್ ಕಮಲದ ಮೂಲಕ ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡ ನಾಯಕರಿಗೆ ಬಿಜೆಪಿಯ ಕಾರ್ಯಕರ್ತರು ಬೇಡವಾದರು. ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಲು ಸಹಕಾರವಾಗುವಂತಹ ಗ್ರಾಮ ಪಂಚಾಯಿತಿ ಹಂತದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ನೇಮಿಸುವ ಅವಕಾಶವಿದ್ದರೂ ಪ್ರಜಾಪ್ರಭುತ್ವ-ವಿರೋಧಿ ನಿಲ್ಲುವಾದ ಆಡಳಿತಾಧಿಕಾರಿ ನೇಮಿಸುವ ನಿರ್ಧಾರದೊಂದಿಗೆ ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾಮಾನ್ಯ ಕಾರ್ಯಕರ್ತನಿಗೆ ಸಮಾಧಿ ಮಾಡಲಾಯಿತು. ವಂಶಪಾರಂಪರ್ಯ ರಾಜಕಾರಣ ಬಿಜೆಪಿಯಲ್ಲಿ ಶುರುವಾಗಿ ಬಹಳ ಕಾಲವಾಗಿದೆ. ದೇವದುರ್ಲಭ ಕಾರ್ಯಕರ್ತರನ್ನು ಕಳೆದುಕೊಂಡು ಬಿಜೆಪಿ ಬಡವಾಗುತ್ತಿದೆ . ಸಂಸ್ಕಾರ-ಸಂಸ್ಕೃತಿ ಇಲ್ಲದ ಜನರು ಬಿಜೆಪಿಯನ್ನು ಆಳುತ್ತಿದ್ದಾರೆ. ಅದೇ ರೀತಿ ಮುಂದುವರೆದಿದ್ದು ಆದರೆ ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿಯೊಂದು ಉದಯ ಆಗುವುದರಲ್ಲಿ ಸಂಶಯವೇ ಬೇಡ. ಈಗಲಾದರೂ ಬಿಜೆಪಿ ತನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ. ಇಲ್ಲವಾದರೆ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧವಾಗಬೇಕಾಗುತ್ತದೆ.
Author : Rakesh Bhagiratha.
No comments:
Post a Comment