Friday, June 26, 2020

ಪ್ರೇಮದ ಅನ್ವೇಷಣೆ ಭಾಗ-3



ಪ್ರೇಮದ ಅನ್ವೇಷಣೆ ಭಾಗ-3





        ನೆತ್ತಿಯ ಮೇಲಿನ ಸೂರ್ಯ ತನ್ನ ಪೂರ್ವದ ಪಯಣವನ್ನು ಮುಗಿಸಿ ಪಶ್ಚಿಮದತ್ತ ತನ್ನ ಪಥವನ್ನು ಆರಂಭಿಸಿದ್ದ. ಬಿಸಿಲಿನ ಝಳ ಕಿಟಕಿಯ ಮುಖಾಂತರ ಒಳಪ್ರವೇಶಿಸಲು, ಬಿಸಿಲಿನ ಝಳ ತಡೆಯುವ ವ್ಯರ್ಥ ಪ್ರಯತ್ನವನ್ನು ಆ ಹುಡುಗಿ ಬಟ್ಟೆ ಹಿಡಿಯುವುದರ ಮುಖಾಂತರ ಮಾಡುತ್ತಿದ್ದಳು. ಆಕೆಯ ವ್ಯರ್ಥ ಪ್ರಯತ್ನಕ್ಕೆ ತೆರೆ ಎಳೆಯುವಂತೆ ಅವರ ತಂದೆ ಕಿಟಕಿಯಲ್ಲಿ ಗಾಳಿ ಬರುವಂತೆ ಕಿಟಕಿಯನ್ನು ಮುಚ್ಚಿದರು. ಆ ಕುಟುಂಬದ ಮಾತು ಮುಂದುವರೆಯುತ್ತಾ ಹೋಯಿತು. ಸಾಮಾನ್ಯವಾಗಿ ರೈಲಿನಲ್ಲಿ ಹಾಗೂ ಬಸ್ಸಿನಲ್ಲಿ ಸಹ ಪ್ರಯಾಣಿಕರೊಂದಿಗೆ ಹರಟೆ ಹೊಡೆಯುತ್ತಿದ್ದ ವಿಧು ಈಚಿನ ದಿನಗಳಲ್ಲಿ ಹರಟೆ ಹೊಡೆಯುವುದನ್ನು ನಿಲ್ಲಿಸಿದ್ದ. ನಾವು ಸಮಾಜದ ಬಗ್ಗೆ ಮಾತನಾಡುವುದರಿಂದ ಏನು ಬದಲಾವಣೆ ಮಾಡಲಾಗುವುದಿಲ್ಲ ಎಂಬ ಧೋರಣೆ ಮೌನವಾಗಿ ಪ್ರಯಾಣ ಮಾಡುವ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ರೈಲು ಗಾಡಿಯ ವೇಗ ಹೆಚ್ಚಾದಂತೆ ತಂಪಾದ ಗಾಳಿ ಪಕ್ಕದ ಕಿಟಕಿಯಿಂದ ಬೀಸತೊಡಗಿದ್ದರಿಂದ ನಿಧಾನವಾಗಿ ನಿದ್ರೆಯ ಮಂಪರಿಗೆ ಜಾರಿದ. ಹಾಗೆಯೇ ಗಾಢ ನಿದ್ರೆಗೆ ಜಾರುವ ಹೊತ್ತಿಗೆ ಹಿಂದಿನಿಂದ ಟಿಕೆಟ್ ಟಿಕೆಟ್ ಎನ್ನುವ ಶಬ್ದ ಕಿವಿಗೆ ಅಪ್ಪಳಿಸಿತು. ನಿದ್ದೆಯ ಮಂಪರಿನಲ್ಲಿಲ್ಲೇ ಮುಚ್ಚಿದ್ದ ಕಣ್ಣು ಬಿಟ್ಟು ನೋಡಿದಾಗ ಟಿಕೆಟ್ ಚೆಕಿಂಗ್ ಆಫೀಸರ್ ವಿಧುವಿನ ಕಣ್ಣ ಮುಂದೆ ನಿಂತಿದ್ದ.

         ಟಿಕೆಟ್ ಕೇಳಿದ ಕೂಡಲೇ ಟಿಕೆಟ್ ಕೊಡಲು ಜೇಬಿನೊಳಗೆ ಕೈಹಾಕಿದ, ಟಿಕೆಟ್ ಸಿಗದೇ ಹೋಯಿತು. ಅಯ್ಯೋ ಏನು ಮಾಡುವುದು ಇವಾಗ ಟಿಕೆಟ್ ಕೂಂಡೆನಲ್ಲ ಎಂದು ಟಿಕೆಟ್ಗಾಗಿ ತನ್ನ ಕಿಸೆ ಹಾಗೂ ಬ್ಯಾಗನ್ನು ಹುಡುಕಿದರೂ ಟಿಕೆಟ್ ಸಿಗದೇ ಹೋಯಿತು. ಇನ್ನೇನು ದಂಡ ಕಟ್ಟುವುದೇ ಗಟ್ಟಿ ಎಂದುಕೊಳ್ಳುತ್ತಿರುವಾಗಲೇ ಜೇಬಿನಲ್ಲಿದ್ದ ಟಿಕೆಟ್ ಅರಿವಿಗೆ ಬಾರದ ಹಾಗೆ ಕೆಳಗೆ ಬಿದ್ದದ್ದನ್ನು ನೋಡಿದ ಎದುರುಗಡೆ ಕುಳಿತಿದ್ದ ಹುಡುಗಿ ಟಿಕೆಟ್ಟನ್ನು ತೆಗೆದುಕೊಂಡು ವಿಧುವಿನ ಕೈಗೆ ಕೊಟ್ಟಳು. ಅಬ್ಬಾ ಬದುಕಿದೆ! ಇಲ್ಲ ಎಂದರೆ ಈ ಟಿಕೆಟ್ ಚೆಕಿಂಗ್ ಆಫೀಸರುಗಳು ಸಿಕ್ಕಿದಷ್ಟು ಕಬಳಿಸಲು ಯತ್ನಿಸುತ್ತಿದ್ದರು ಎಂದು ಬೇರೆಯವರಿಗೆ ಆದ ಅನುಭವವನ್ನು ನೋಡಿದ್ದ ವಿಧು ಮನಸ್ಸಿನಲ್ಲಿ ನೆನೆಸಿಕೊಂಡು ನಿಟ್ಟಿಸಿರುಬಿಟ್ಟನು. ಆ ತಕ್ಷಣ ವಿಧುವಿನ ಕಣ್ಣಿಗೆ ಹುಡುಗಿ ದೇವತೆಯಂತೆ ಕಂಡಳು.  ಟಿಕೆಟ್ಟನ್ನು ಆಫೀಸರಿಗೆ ತೋರಿಸಿ ಮತ್ತೆ ಜೇಬಿನಲ್ಲಿಟ್ಟುಕೊಳ್ಳುವಾಗ ಮುಗುಳ್ನಕ್ಕಳು. ಅದಕ್ಕೆ ಪ್ರತಿಯಾಗಿ ಇವನು ಕೂಡ ಮುಗುಳ್ನಕ್ಕ ಆನಂತರ ಅವರ ತಾಯಿಯವರು ಮಾತನಾಡಲು ಶುರು ಮಾಡಿದರು.

            “ಯಾವ ಊರಪ್ಪ ನಿಂದು?” ಎಂದು ಕೇಳಿದರು. ಅದಕ್ಕೆ ಅಜ್ಜಂಪುರ ಎಂದು ಹೇಳಿದ. ಅವರಿಂದ ಬಂದ ಮರುಪ್ರಶ್ನೆ ಯಾವ ಅಜ್ಜಂಪುರವೆಂದು. ಅದು ಎಲ್ಲಿ ಬರುತ್ತದೆ? ಎಂದು… ಹೇಗೆ ಹೇಳುವುದು? ಇವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕಲ್ಲ,  ಎಂದು ಯೋಚಿಸಿದವನೇ “ಅದು ನೀವು ಹುಬ್ಬಳ್ಳಿ ಮಾರ್ಗದಲ್ಲಿ ರೈಲಿನಲ್ಲಿ ಹೋಗುವಾಗ ಸಿಗುತ್ತದೆ. ನಿಮಗೆ ಗೊತ್ತಿಲ್ಲವೇ?” ಎಂದು ಕೇಳಿದ. ಅದಕ್ಕವರು “ನಾವು ಹೆಚ್ಚಿನ ಸಮಯ ರಾತ್ರಿ ಪ್ರಯಾಣ ಮಾಡುವುದು. ಹಾಗಾಗಿ ನಮಗೆ ತಿಳಿದಿಲ್ಲ” ಎಂದರು. ಇವರಿಗೆ ನಮ್ಮ ಊರು ನೆನಪಿಟ್ಟುಕೊಳ್ಳುವಂತೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ರೈಲಿನಲ್ಲಿ ಚರುಮುರಿ ಅವನಿಗೆ ಈರುಳ್ಳಿ ಜಾಸ್ತಿ ಹಾಕಪ್ಪ ಎಂದು ಯಾರೋ ಹೇಳಿದ್ದು ಕೇಳಿಸಿತು. “ಅಮ್ಮ ನಿಮಗೆ ಗೊತ್ತಲ್ವಾ, ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಬೆಳೆಯುವ ಪ್ರದೇಶ ನಮ್ಮದು” ಎಂದು ಹೆಮ್ಮೆಯಿಂದ ಹೇಳಿದ. ಮಾತು ಮುಂದುವರೆದು ಮಹಾರಾಷ್ಟ್ರದ ನಾಸಿಕ್ ಇಂದ ಈರುಳ್ಳಿ ಬರುವವರೆಗೂ ನಮ್ಮ ಕಡೆ ಬೆಳೆಯುವ ಈರುಳ್ಳಿಗೆ ಬೇಡಿಕೆ ಎಂದು ಹೇಳುವಾಗಲೇ ಅವರು ನಿನ್ನ ಹೆಸರೇನು ಎಂದು ಕೇಳಿದರು. ವಿಧು ತನ್ನ ಪರಿಚಯವನ್ನು ಮಾಡಿಕೊಂಡು ಅವರ ಪರಿಚಯವನ್ನು ಕೇಳಿದ. ಅವರು ತನ್ನ ಪರಿಚಯ ಮಾಡಿಕೊಳ್ಳುತ್ತಾ “ನಾನು ಸತ್ಯವತಿ, ನಮ್ಮ ಮನೆಯವರ ಹೆಸರು ಚಿದಾನಂದ, ಹಾಗೂ ಈಕೆಯ ಹೆಸರು…..


Author : Rakesh Bhagiratha.

No comments: