ಭಾರತದ ಭವ್ಯ ಪರಂಪರೆಗೆ ಕಾರಣ, ಈ ನೆಲದ ಮಣ್ಣಿನ ಗುಣವಾದ ಪ್ರಾಕೃತಿಕ ಸೊಬಗಿನ ಸಂಸ್ಕೃತಿ .ಭಾರತ ವಿಶ್ವಕ್ಕೆ ಬದುಕನ್ನು ಹೇಳಿಕೊಟ್ಟ ದೇಶ. ವಿವಿಧತೆಯಲ್ಲಿ ಏಕತೆಯನ್ನು ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದ, ವಿಶ್ವಕ್ಕೆ ಸಹಬಾಳ್ವೆಯ ಮಹತ್ವವನ್ನು ಸಾರಿದ, ವಿಶ್ವವೇ ಒಂದು ಮನೆಯೆಂದು ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯವನ್ನು ಕೊಟ್ಟ ದೇಶ. ಇಂತಹ ದೇಶದ ರಾಜಕೀಯ ಇತಿಹಾಸ ಇಂದು ನೆನ್ನೆಯದಲ್ಲ ಅದಕ್ಕೆ ಅದರದೇ ಆದ ಅಮೋಘ ಇತಿಹಾಸವಿದೆ. ರಾಮಾಯಣ ಕಾಲದಿಂದ ಆರಂಭವಾಗಿ ಮಹಾಭಾರತದಿಂದ ಇಂದಿನ ಕಲಿಯುಗದಲೂ ತನ್ನದೇ ರಾಜಕೀಯ ಇತಿಹಾಸ ಇರುವ ದೇಶ ಯಾವುದಾದರೂ ಇದ್ದರೆ ? ಅದು ಭಾರತ ಮಾತ್ರ . ಭಾರತವು ಇಂದಿನವರೆಗೆ ಪ್ರೌಢತೆಯ ಪ್ರಬುದ್ಧತೆಯ ರಾಜಕೀಯ ಆಡಳಿತವನ್ನು ಮಾಡಿಕೊಂಡು ಬಂದ ದೇಶ. ಈ ದೇಶವನ್ನು ಇದುವರೆಗೂ ಯಾರೂ ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಲಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು ? ಅದಕ್ಕೆ ಉತ್ತರ ನಮ್ಮ ಭೂತಾಯಿಯ ಆತ್ಮವೇ ಈ ನಮ್ಮ ಭಾರತ ದೇಶ. ಆತ್ಮವಿಲ್ಲದ ದೇಹ ಹೇಗೆ ಕಾರ್ಯಾಚರಿಸುವುದು ಇಲ್ಲವೋ ಅದೇ ರೀತಿ ಭಾರತದ ಬೆಳಕಿಲ್ಲದೆ ವಿಶ್ವವು ಉನ್ನತಿಗೆ ಹೋಗಲು ಸಾಧ್ಯವಿಲ್ಲ. ಭಾರತವು ಪ್ರಕೃತಿಯೊಂದಿಗೆ ಬೆರೆತ ದೇಶ ಪ್ರಕೃತಿಯ ಒಂದು ಭಾಗವೂ ಹೌದು. ಪ್ರಕೃತಿ ಬಯಸುವುದು ಧರ್ಮವನ್ನು, ಧರ್ಮವೆಂದರೆ ಪ್ರಕೃತಿಯೊಂದಿಗೆ ಕೂಡಿಬಾಳುವ ಒಂದು ಅನುಬಂಧ. ಅದೇ ಸಂಸ್ಕೃತಿಯೇ ಮುಂದೆ ಧರ್ಮವಾಯಿತು.
ಈ ಅನುಬಂಧ ಏರುಪೇರಾದರೆ ಈ ಪುಣ್ಯಭೂಮಿಯು ತನ್ನ ಸೇವಕರನ್ನು ತನ್ನ ನೆಲದ ಮೇಲೆ ಕರೆಸಿಕೊಳ್ಳುತ್ತದೆ. ಹಾಗೆಯೇ ನಮ್ಮ ದೇಶಕ್ಕೆ ಅವನತಿ ಬಂದಾಗ ಒಬ್ಬರ ಅಧಿಪತ್ಯ ಸಾಧಿಸುವಂತಹ ಪ್ರಸಂಗಗಳು ಎದುರಾದಾಗ ಪರ್ಯಾಯ ನಾಯಕರುಗಳು ಬರುತ್ತಾರೆ. ಹಾಗೆಯೇ ಇತಿಹಾಸ ನೋಡಿಕೊಂಡು ಹೋದಾಗ ನಮಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಹಿಂದುತ್ವ ಅವನತಿಯ ಹಾದಿ ಹಿಡಿಯುವ ಸಮಯದಲ್ಲಿ ಆಧ್ಯಾತ್ಮಿಕ ಕ್ರಾಂತಿಗಳು ಆಗಿದ್ದುಂಟು. ಅದಕ್ಕೆ ಉತ್ತಮ ಉದಾಹರಣೆ ಶಂಕರಾಚಾರ್ಯರು ಸನಾತನ ಧರ್ಮವನ್ನು ಮತ್ತೆ ಉಳಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದು. ಉತ್ತರಭಾರತದಲ್ಲಿ ಮುಸಲ್ಮಾನರ ದಾಳಿಗಳ ಆದಾಗ ದಕ್ಷಿಣ ಭಾರತದಲ್ಲಿ ನಾರಾಯಣಗುರು ಅವರ ಮುಖಾಂತರ ಆಧ್ಯಾತ್ಮಿಕ ಕ್ರಾಂತಿಯಾಗಿದ್ದು ಉಂಟು. ಒಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಈ ಮಣ್ಣಿನ ಗುಣಲಕ್ಷಣ. ಅದೇ ಕಾರಣ ಇಂದಿನವರೆಗೂ ಈ ದೇಶದಲ್ಲಿ ಯಾರಿಗೂ ಸರ್ವಾಧಿಕಾರಿಯಾಗಿ ಮರೆಯಲು ಸಾಧ್ಯವಾಗಿಲ್ಲ.
ಸ್ವಾತಂತ್ರ ಭಾರತದ ನಂತರ ದೇಶವು ಸಂಸ್ಕೃತಿಯ ಹೊರತಾಗಿ ರಾಜಕೀಯ ಧರ್ಮದ ( ಅಂದರೆ ರಾಜಕೀಯ ಸ್ವಾರ್ಥವನ್ನು ಇಟ್ಟುಕೊಂಡು ವೋಟ್ ಬ್ಯಾಂಕಿಗಾಗಿ ಹೆಸರಿಸುವ ಧರ್ಮ ) ವಿಚಾರವಾಗಿ ದೇಶ ಇಬ್ಭಾಗವಾಗಿ ಹೋಯಿತು. ಪಾಕಿಸ್ತಾನ ಮುಸಲ್ಮಾನರ ದೇಶವಾಗಿ ಭಾರತವು ಅರ್ಥವಿಲ್ಲದ ಪದವಾದ ಸೆಕ್ಯುಲರ್ ದೇಶವಾಗಿ ಹೊರಹೊಮ್ಮಿದಾಗ ಸಹಜವಾಗಿ ಹಿಂದುಗಳ ಸಹನೆಯ ಕಟ್ಟೆ ಒಡೆಯಿತು. ಅದರ ಫಲವೇ ಮುಂದಿನ ದಿನಗಳಲ್ಲಿ ಬಂದ ಜನ ಸಂಘ. ಜನ ಸಂಗವು ರೂಪಾಂತರಗೊಂಡು ಭಾರತೀಯ ಜನತಾ ಪಾರ್ಟಿ ಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅದು ಯಾವ ಹೆಸರಿನಲ್ಲಿ ಅಧಿಕಾರ ಹಿಡಿಯಿತೋ ಅದರ ಮೂಲ ಸತ್ವವನ್ನೇ ಮರೆತುಬಿಟ್ಟಿತು. ಹಿಂದುತ್ವಕ್ಕೆ ಪೂರಕವಾದ ಯಾವ ಕೆಲಸಗಳು ಆಗಲಿಲ್ಲ. ಮತ್ತೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿತು. ಆನಂತರ ವಿದೇಶಿ ಮಹಿಳೆ ನಮ್ಮ ಭಾರತ ಭೂಮಿಯನ್ನು ಅನ್ಯಮಾರ್ಗದಿಂದ ಆಳಿದರು. ಅದರ ಪ್ರತಿಫಲ ಎನ್ನುವಂತೆ ದೇಶವು ಅವನತಿ ಹಾದಿಯನ್ನು ಹಿಡಿಯಿತು. ಕಾಲಕಳೆದಂತೆ ಹಿಂದುತ್ವದ ಆದರ್ಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಪಕ್ಷಕ್ಕಾಗಿ ಹಗಲು ಇರುಳು ಎನ್ನದೆ ದುಡಿದ ಕಾರ್ಯಕರ್ತರು, ನಾಯಕರು ನೈಪಥ್ಯಕ್ಕೆ ಸರಿದರು. ಅನ್ಯ ಪಕ್ಷಗಳಿಂದ ಬಂದು ಬಿಜೆಪಿಯಲ್ಲಿ ಅಧಿಕಾರ ಅನುಭವಿಸುತ್ತಿರುವವರು ಒಂದು ಕಾಲದಲ್ಲಿ ಬಿಜೆಪಿಯ ನಿಷ್ಠಾವಂತರಿಗೆ ನೋವು ಕೊಟ್ಟವರೇ. ನಿಸ್ವಾರ್ಥದಿಂದ ದುಡಿದವರನ್ನು ಬಿಜೆಪಿ ಮರೆಯಿತು. ಜಾತಿ ಆಧಾರದ, ಸ್ವಜನಪಕ್ಷಪಾತದ, ಹಿಂಬಾಲಕರಿಗೆ ಮಣೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜನಸಂಘದ ಧ್ಯೇಯಗಳು ಬಿಜೆಪಿಯಲ್ಲಿ ಉಳಿದಿಲ್ಲ ಎಲ್ಲವೂ ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ.
ಇಂದು ಬಿಜೆಪಿಯಲ್ಲಿ ನೈತಿಕತೆ ಕಡಿಮೆಯಾಗಿರುವ ಪರಿಣಾಮ ಕೆಲವರು ಬಿಜೆಪಿ ಬಿಡಲು ಸಿದ್ಧರಿದ್ದರು ಅವರಿಗೆ ಹಿಂದೂ ರಾಷ್ಟ್ರೀಯವಾದದ ನೆಲೆಗಟ್ಟಿನ ಪಕ್ಷ ಸಿಗುತ್ತಿಲ್ಲ. ಹಿಂದೂ ರಾಷ್ಟ್ರೀಯವಾದ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಭಾರತದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರದಲ್ಲಿದ್ದರು ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸುತ್ತಿಲ್ಲ. ಇದು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ. ಅದರ ಹಿಂದುತ್ವದ ಅಜೆಂಡಾ ಬರಿ ವೋಟ್ ಬ್ಯಾಂಕಿಗಾಗಿ ಸೀಮಿತವಾಗಿದೆ. ಇನ್ನೂ ಅದರ ಆರ್ಥಿಕ ನೀತಿಯಲ್ಲಿನ ಅಸಮತೋಲನ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಅದನ್ನು ಪ್ರಶ್ನಿಸುವ ಗಟ್ಟಿ ದ್ವನಿ ಸಂಸತ್ತಿನಲ್ಲಿ ಇಲ್ಲದಂತಾಗಿದೆ. ಅದರ ವೈಫಲ್ಯಗಳನ್ನು ಹೇಳಿದರೆ ಅದು ಹಿಂದುತ್ವ ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಬಿಜೆಪಿಯ ವಿರುದ್ಧ ಮಾತನಾಡಿದರೆ ಅದು ದೇಶ ವಿರುದ್ಧ ಮಾತನಾಡಿದಂತೆ ಎಂದು ಬಿಂಬಿಸಲಾಗುತ್ತಿದೆ. ಅದನ್ನು ಪ್ರಶ್ನಿಸುವ ದೇಶದ ಪರವಾಗಿ ಹೋರಾಡುವ ಇನ್ನೊಂದು ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶದಲ್ಲಿ ಬಹಳ ಇದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾಗಿದೆ. ಹಿಂದುತ್ವವೆಂಬುದು ಬಿಜೆಪಿ ಬರುವುದಕ್ಕಿಂತಲೂ ಮೊದಲೇ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ..... ಏಕೆಂದರೆ ಹಿಂದುತ್ವ ಸನಾತನ ಹಾಗೂ ಅನಂತ.....
No comments:
Post a Comment