ಪ್ರೇಮದ ಅನ್ವೇಷಣೆ ಭಾಗ-1

ಬೆಂಗಳೂರು ಎಂಬ ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದಿಂದ ಹೊರಟು ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗವಾಗಿ ಬೆಂಗಳೂರು ಕೇಂದ್ರ ಬಸ್ ನಿಲ್ದಾಣವಾದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುವ ಹೊತ್ತಿಗೆ 3:00 ಗಂಟೆ ಸರಿದಿತ್ತು. ಮೆಜೆಸ್ಟಿಕ್ ನಿಲ್ದಾಣದಿಂದ ಹೊರಟು ರೈಲು ನಿಲ್ದಾಣಕ್ಕೆ ಹೋಗಿ ಬೆಂಗಳೂರು-ಹುಬ್ಬಳ್ಳಿ ಇಂಟರ್ ಸಿಟಿ ರೈಲಿನಲ್ಲಿ ಜಾಗ ಹಿಡಿಯುವಷ್ಟರಲ್ಲಿ ಮತ್ತೆ ಅರ್ಧಗಂಟೆ ಸಮಯ ಸರಿದು ಹೋಯಿತು. ಆ ರೈಲಿನಲ್ಲಿ ದಿನವೂ ತುಂಬಾ ಜನರು ಪ್ರಯಾಣಿಸುತ್ತಿದ್ದರಿಂದ ಅರ್ಧ ಗಂಟೆ ಮೊದಲೇ ತಲುಪಬೇಕೆಂಬ ಲೆಕ್ಕಾಚಾರ ತಲೆಕೆಳಗಾಯಿತು. ಬೆಂಗಳೂರು ಎಂಬ ಮಹಾನಗರದ ಜನಸಂದಣಿಯ ಟ್ರಾಫಿಕ್ ಸಮಸ್ಯೆ ನಮ್ಮ ಸಮಯದ ಲೆಕ್ಕಾಚಾರವನ್ನೇ ಪರಿಶೀಲಿಸುವಂತೆ ಮಾಡುತ್ತದೆ ಎಂದು ಕೇಳಿದ್ದ, ಆದರೆ ಅದರ ಅನುಭವವಾಯಿತು. ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಸಂಚರಿಸಿ ಅನುಭವವಿದ್ದ ವಿಧುವಿಗೆ ಇನ್ನು ಯಾವ ಕಾಲಕ್ಕೆ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸಂಚಾರ ಆರಂಭವಾಗುವುದೋ ಎಂದು ಅಂದುಕೊಳ್ಳುತ್ತಿರುವಾಗಲೇ, ಮನಸ್ಸಿನಲ್ಲಿ ಬೆಂಗಳೂರಿನಲ್ಲಿ ಯಾಕೆ ಈ ರೀತಿ ಜನಸಂಖ್ಯೆ ಎಂದು ಯೋಚಿಸತೊಡಗಿದಾಗ ‘ಬೆಂಗಳೂರು ಎಂಬ ಮಹಾನಗರದಲ್ಲಿ ಎಲ್ಲಿಂದ ಬಂದರೂ ಜೀವಿಸಬಹುದು’ ಎಂಬ ಮಾತು ನೆನಪಿಗೆ ಬಂತು.
ಮೆಜೆಸ್ಟಿಕ್ ನಿಲ್ದಾಣದಿಂದ ಅಂಡರ್ ಪಾಸ್ ಮುಖಾಂತರ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಯಾರೋ ಹಣ್ಣುಗಳನ್ನು ಮಾರುತ್ತಿರುವ ಕೂಗು ಕೇಳಿಸಿತು. ತಿರುಗಿ ನೋಡಿದರೆ ಒಂದು ಬಿದಿರಿನ ಬುಟ್ಟಿಯ ತುಂಬಾ ಹಣ್ಣುಗಳನ್ನು ತುಂಬಿಕೊಂಡು ಕುಳಿತಿರುವ ಕಪ್ಪುವರ್ಣದ, ತನ್ನ ಮುಖದಲ್ಲಿ ಬದುಕಿನ ಅನುಭವವನ್ನು ಹೂತ್ತು ಕುಳಿತಿರುವ ಹಿರಿಯ ಜೀವ. ತನ್ನ ಇಳಿವಯಸ್ಸಿನಲ್ಲೂ ಬೇರೆಯವರ ಮುಂದೆ ತುತ್ತು ಅನ್ನಕ್ಕಾಗಿ ಕೈಯನ್ನು ಚಾಚದೆ ತನ್ನ ಸ್ವಂತ ದುಡಿಮೆಯಲ್ಲಿ ಜೀವನ ನಡೆಸುತ್ತಿರುವ ಅಜ್ಜಿಯನ್ನು ಕಂಡು ಖುಷಿಯಾಯಿತು. ವಿಧುವಿನ ಸೂಕ್ಷ್ಮ ಮನಸ್ಸಿಗೆ ಇಂದಿನ ಸಾಮಾಜಿಕ ಪರಿಸ್ಥಿತಿಯ ಬದಲಾವಣೆ ಕಂಡು ಖೇದವೂ ಉಂಟಾಯಿತು. ಗಟ್ಟಿಯಾಗಿದ್ದು ಕೈತುಂಬ ಸಂಪಾದನೆ ಇದ್ದರೆ ಮಾತ್ರ ಮನುಷ್ಯನಿಗೆ ಬೆಲೆ ಎನ್ನುವ ಮಾತು ಅಕ್ಷರಶಃ ಸತ್ಯ ಎಂದು ಅರಿವಿಗೆ ಬಂತು. ಅಜ್ಜಿಯ ಪರಿಸ್ಥಿತಿ ಕಂಡು ಮನಸ್ಸು ಮುರುಗಿದ್ದರಿಂದ ಅಜ್ಜಿಗೆ ಹಣ ಸಹಾಯವನ್ನು ಮಾಡಲು ಹೋದರೆ, ಆ ಸ್ವಾಭಿಮಾನಿ ಅಜ್ಜಿ ಹಣ್ಣನ್ನು ಕೊಂಡರೆ ಮಾತ್ರ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಅವರ ಸ್ವಾಭಿಮಾನಕ್ಕೆ ಮನಸ್ಸಿನಲ್ಲೇ ಶಿರಬಾಗಿದ ವಿಧು, ಸರಿ ಹಾಗಾದರೆ ಹಣ್ಣನ್ನು ಕೊಡಿ ಎಂದು ಹಣ್ಣನ್ನು ತೆಗೆದುಕೊಂಡ. ಚಿಲ್ಲರೆ ನಿಮ್ಮಲ್ಲೇ ಇರಲಿ ಎಂದರೂ ಅಜ್ಜಿ ಅದನ್ನು ಸ್ವೀಕರಿಸಲು ಒಪ್ಪಲಿಲ್ಲ.ಅಜ್ಜಿಯ ಸ್ವಾಭಿಮಾನ ಕಂಡು ಅಜ್ಜಿಯ ಮೇಲಿನ ಗೌರವ ನೂರ್ಮಡಿಗೊಂಡಿತು. ಹಣ್ಣನ್ನು ತೆಗೆದುಕೊಂಡು ಮುಂದೆ ಸ್ವಲ್ಪ ದೂರ ಸಾಗುತ್ತಿರುವಾಗಲೇ ಕಣ್ಣು ಕಾಣದ ಕುರುಡ ವ್ಯಕ್ತಿಯೊಬ್ಬ ದೇಹ ತೂಕದ ಯಂತ್ರವನ್ನು ಹಿಡಿದು ಕುಳಿತಿದ್ದ.ಅಲ್ಲಿ ಕೆಲವರು ಎರಡು ರೂಪಾಯಿಗಳನ್ನು ಅವನ ಕೈಗೆ ಕೊಟ್ಟು ತಮ್ಮ ತೂಕವನ್ನು ಪರಿಶೀಲಿಸಿಕೊಳ್ಳುತ್ತಿದ್ದರು. ತಾನು ತೂಕವನ್ನು ಪರಿಶೀಲಿಸಿ ಕೊಳ್ಳುವ ಅವಶ್ಯಕತೆ ಇಲ್ಲದಿದ್ದರೂ ಅವರ ಸ್ವಾಭಿಮಾನದ ದುಡಿಮೆಗೆ ನನ್ನದೊಂದು ಸಣ್ಣ ಸಹಾಯವಾಗಲಿ ಎಂದುಕೊಂಡು ತಾನೂ ಕೂಡ ತನ್ನ ತೂಕವನ್ನು ಪರಿಶೀಲಿಸಿಕೊಂಡು ಮುನ್ನಡೆದನು. ಎದುರಿಗೆ ಬೆಂಗಳೂರು ರೈಲು ನಿಲ್ದಾಣಕ್ಕೆ ದಾರಿ ಎಂಬ ನಾಮಫಲಕ ಸಿಕ್ಕಿತ್ತು. ವಿಧು ಅದನ್ನು ಅನುಸರಿಸಿ ನಡೆದು ಅಂಡರ್ ಪಾಸ್ ನಿಂದ ಹೂರಗಡೆ ಬರುವುದರಲ್ಲಿ ಹಿರಿಯ ಜೀವ ಹಾಗೂ ಕಣ್ಣುಕಾಣದ ವ್ಯಕ್ತಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದು ನೋಡಿ, ಮತ್ತೊಮ್ಮೆ ‘ಬೆಂಗಳೂರು ಯಾರಿಗಾದರೂ ಬದುಕು ಕೊಡುತ್ತದೆ’ ಎಂಬುದರ ಅರಿವಾಯಿತು.
ಅಂತೂ ರೈಲು ನಿಲ್ದಾಣಕ್ಕೆ ಬಂದು ನೋಡಿದರೆ ಹಾವಿನ ಬಾಲದಂತೆ ಸರತಿ ಸಾಲು ನೋಡಿ ಅವಾಕ್ಕಾದ. ಯಾವಾಗಲೂ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ನೇರವಾಗಿ ಹೋಗುತ್ತಿದ್ದ ವಿಧುವಿಗೆ ಸ್ವಲ್ಪ ಕಿರಿಕಿರಿ ಎನಿಸಿದರೂ, ಒಂದು ಹೊಸ ಅನುಭವ ಒದಗಿಸಿಕೊಟ್ಟಿತು. ಅಂತೂ ರೈಲಿನ ಟಿಕೆಟ್ ಖರೀದಿಸಿ ಪ್ಲಾಟ್ಫಾರ್ಮ್ ಹುಡುಕಿ ಹೋಗಿ ರೈಲಿನಲ್ಲಿ ಜಾಗಕ್ಕೆ ಹುಡುಕತೊಡಗಿದ. ಸುಡುಬಿಸಿಲಿನ ಬೇಸಿಗೆಯ ಸೆಕೆಯ ಕಾಲವಾಗಿದ್ದರಿಂದ ಕಿಟಕಿಯ ಪಕ್ಕ ಕೂರಲು ಜಾಗಕ್ಕಾಗಿ ಹುಡುಕಿದರೂ ಎಲ್ಲಾ ಸೀಟುಗಗಳೂ ಭರ್ತಿಯಾಗಿದ್ದವು. ರೈಲಿನ ಹಿಂದಿನ ಭೋಗಿಯಿಂದ ಇಂಜಿನ್ ವರೆಗೆ ತಡಕಾಡಿದರೂ ಕಿಟಕಿಯ ಪಕ್ಕ ಜಾಗ ಸಿಗದೇ ಹೋಯಿತು. ಇನ್ನೂ ಹುಡುಕಿದರೆ ಇರುವ ಜಾಗವೂ ಇಲ್ಲದಂತಾಗುತ್ತದೆಂದು ನಿರ್ಧರಿಸಿ ಬರುವಷ್ಟರಲ್ಲಿ ಇರುವ ಜಾಗಗಳೂ ಬರ್ತಿ ಆಗಿದ್ದವು. ಉಳಿದ ಜಾಗಕ್ಕಾಗಿ ಹುಡುಕಾಡಿದರೆ ಮಧ್ಯಭಾಗದಲ್ಲಿ ಮಾತ್ರ ಇದ್ದವು. “ಅಯ್ಯೋ… ನಾನು ಮೊದಲೇ ಕುಳಿತುಕೊಂಡಿದ್ದರೆ ಇಬ್ಬರ ಮಧ್ಯದಲ್ಲಿ ಸಿಕ್ಕಿ ಒದ್ದಾಡುವ ಪರಿಸ್ಥಿತಿ ಬರುತ್ತಿರಲಿಲ್ಲವಲ್ಲ” ಎಂದು ಅಂದುಕೊಂಡು ಇದ್ದ ಸ್ವಲ್ಪ ಸ್ಥಳಾವಕಾಶದಲ್ಲೇ ಕುಳಿತುಕೊಂಡ.......

Author : Rakesh Bhagiratha.
No comments:
Post a Comment