Monday, September 28, 2020

ಕೃಷಿ ವಿಧೇಯಕ 2020: ಮರಣಶಾಸನ ಆಗದಿರಲಿ ರೈತರ ಬದುಕು.


ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾ ಹಳ್ಳಿ ಇಂದ ರಾಜಕಾರಣವನ್ನು ಶುರುಮಾಡಿ ದಿಲ್ಲಿ ಗದ್ದುಗೆಯನ್ನು ಹಲವರು ಏರಿದರು. ನಾವು ಯಾರಿಂದ ಆಯ್ಕೆ ಆದೆವು ಎನ್ನುವುದನ್ನೇ ಮರೆತು ಬಿಟ್ಟರು. ರೈತ ಮಾತ್ರ ವೋಟ್ ಬ್ಯಾಂಕ್ ಆಗಿ ಉಳಿದುಬಿಟ್ಟ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವನು ಹೇಳಿಕೊಳ್ಳುವಂತಹ ಪ್ರಗತಿಯನ್ನು ಕಾಣಲಿಲ್ಲ . ರೈತ ಹೋರಾಟದ ಆದಿಯನ್ನು ತಿಳಿಯಲಿಲ್ಲ ತನ್ನ ಪಾಡಿಗೆ ತಾನು ಲೋಕಕ್ಕೆ ಅನ್ನವನ್ನು ನೀಡುವ ಕಾಯಕವನ್ನು ಮಾಡಿಕೊಂಡು ಬದುಕುತ್ತಿದ್ದ. ಕಾಲ ಬದಲಾದಂತೆ ರೈತ ವೋಟ್ ಬ್ಯಾಂಕ್ ಆದಕಾರಣ ರೈತ ಸಂಘಟನೆಗಳು ಹುಟ್ಟಿಕೊಂಡವು. ರೈತ ಚಳುವಳಿಯ ಬಿಸಿ ಏರುತ್ತಿದ್ದಂತೆ ಅದರೊಳಗೆ ರಾಜಕೀಯ ಮೆತ್ತಿಕೊಂಡು ರಾಜಕೀಯ ಶಕ್ತಿಗಳು ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಸಂಘಟನೆಗಳನ್ನು ಅಸ್ತ್ರವಾಗಿ ಉಪಯೋಗಿಸಲು ಶುರು ಮಾಡಿದವು. ರಾಜಕೀಯದಿಂದ ರೈತಸಂಘಟನೆಗಳು ಚೆದುರಿ ಹೋದವು. ಕಾಲಕಳೆದಂತೆ ರೈತ ಸಂಘಟನೆಗಳ ಶಕ್ತಿ ಕಳೆದುಕೊಂಡು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡವು. ರಾಜಕೀಯ ಹಿತಾಸಕ್ತಿಗಾಗಿ ಕೆಲಸ ಮಾಡುವಂತಹ ನಾಯಕರುಗಳು ಹುಟ್ಟಿಕೊಂಡರು. ಅದರ ಫಲವೇ ಇಂದಿನ ರೈತ ಹೋರಾಟವನ್ನು ಬಿಜೆಪಿ ಸರ್ಕಾರ ರಾಜಕೀಯ ಹೋರಾಟ ಎಂದು ಕರೆದಿರುವುದು. ರೈತರ ಮೇಲೆ ಗುಂಡು ಹಾರಿಸಿದ ಸರ್ಕಾರದಿಂದ ಇದರ ಹೊರತಾಗಿ ಏನನ್ನಾದರೂ ನಿರೀಕ್ಷಿಸಲು ಸಾಧ್ಯವೇ ? ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವನ್ನು ಪ್ರಶ್ನೆ ಮಾಡುವ ಧೈರ್ಯ ಆ ಪಕ್ಷದ ನಾಯಕರುಗಳಿಗೆ ಉಳಿದಿಲ್ಲ ಏಕೆಂದರೆ ಇಂದು ಬಿಜೆಪಿ ಕೂಡ ಎಲ್ಲಾ ಪಕ್ಷಗಳಂತೆ ಸ್ವಜನಪಕ್ಷಪಾತ, ಸ್ವಾರ್ಥದಿಂದ ತುಂಬಿಹೋಗಿದೆ. ರೈತರ ಪರ ಧ್ವನಿ ಎತ್ತಲು ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆ ಇದೆ. ಇನ್ನು ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ಮುಳುಗಿ ಹೋಗಿದೆ. ಇಂದು ನಿಜವಾಗಿ ರೈತ ಪರ ಹೋರಾಟ ಮಾಡುವ ನಾಯಕರು ಯಾರು ಹೇಳಿಕೊಳ್ಳುವಂತಹವರು ಉಳಿದಿಲ್ಲ. ಅದರ ಲಾಭ ವಾಗುತ್ತಿರುವುದು ದುಡ್ಡು ತೆಗೆದುಕೊಂಡು ಹೋರಾಟ ಮಾಡುತ್ತಿರುವವರಿಗೆ, ಇನ್ನೂ ದುರ್ಬಲ ನಾಯಕತ್ವದಿಂದ ಪ್ರಬಲ ಹೋರಾಟಗಳು ನಡೆಯುತ್ತಿಲ್ಲ.
            ಇನ್ನು ರೈತರ ಹೆಸರು ಹೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿದ ರಾಜ್ಯ ಬಿಜೆಪಿಯು ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಂದು ರೈತರ ಜಮೀನನ್ನು ಕಾರ್ಪೊರೇಟ್ ಕಂಪನಿಗಳು ಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿಧಾನಪರಿಷತ್ತಿನಲ್ಲಿ ಅನುಮೋದನೆ ಸಿಗದೆ ಬಾಕಿ ಉಳಿದಿದೆ. ಇದೇ ಸಮಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಮೂರು ರೈತ ವಿರೋಧಿ ಮಸೂದೆಗಳನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿದೆ.
1 ) ಎಪಿಎಂಸಿ ಬೈಪಾಸ್ ಅಡ್ರಿನನ್ಸ್ ಮಾದರಿಯಲ್ಲಿ "ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020."
2 ) ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರಿವಾಗ್ನೆ 2020 "ಇದನ್ನು ಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯ ಸುಗ್ರಿವಾಗ್ನೆ" ಎಂದು ಭಾವಿಸಬಹುದು.
3 ) "ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಒಪ್ಪಂದದ ಬರವಸೆ ಮತ್ತು ಕೃಷಿ ಸೇವೆಗಳ ಸುಗ್ರಿವಾಗ್ನೆ 2020" ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯಾಗಿ ಪರಿಗಣಿಸಲಾಗಿದೆ.
        ಇನ್ನು ಇರುವ ಕಾಯ್ದೆಗಳನ್ನು ಸೂಕ್ತರೀತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ವಿಫಲವಾಗಿರುವುದರಿಂದ ಹೊಸ ಕಾಯ್ದೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸುಗ್ರೀವಾಜ್ಞೆಗಳು ರೈತರ ಬದುಕನ್ನು ಬೇರೆಯವರಿಗೆ ಮಾರಿಕೊಳ್ಳುವಂತಹ ಸ್ಥಿತಿಗೆ ತಂದು ನಿಲ್ಲಿಸಲು ಅನುವು ಮಾಡಿಕೊಡುತ್ತವೆ. ಕೇಂದ್ರ ಸರ್ಕಾರವು ಕೃಷಿ ವಿಧೇಯಕಗಳನ್ನು ರಾಜಕೀಯಗೊಳಿಸಿ, ಕೃಷಿ ಎಂದರೇನು ಎಂಬುದನ್ನು ತಿಳಿಯದ ಮೂರ್ಖ ಮಬ್ಬು ಭಕ್ತರಿಂದ ಶಂಖನಾದವನ್ನು ಬಾರಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರವು ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯಲು ಮಾಡಿರುವಂತಹ ಶಾಸನವೇ ಕೃಷಿ ವಿಧೇಯಕಗಳು 2020. ಕಾರ್ಪೊರೇಟ್ ಕ್ಷೇತ್ರ ಕೃಷಿಯನ್ನು ಒಂದು ಬಾರಿ ನಿಯಂತ್ರಣ ತೆಗೆದುಕೊಂಡರೆ, ರೈತರನ್ನು ಸಾಮಾನ್ಯ ಜನರನ್ನು ತನಗೆಬೇಕಾದಂತೆ ಕುಣಿಸುತ್ತದೆ. ಮುಂದಿನ ದಿನಗಳಲ್ಲಿ ರೈತರು ಬೆಳೆಯುವ ತರಕಾರಿ ದವಸಧಾನ್ಯಗಳ ಹಕ್ಕುಸ್ವಾಮ್ಯ ಕಾರ್ಪೊರೇಟ್ ಕಂಪನಿಗಳದಾಗುತ್ತದೆ. ಕಾರ್ಪೊರೇಟ್ ಕಂಪನಿಗಳು ಕೃತಕ ಅಭಾವವನ್ನು ಸೃಷ್ಟಿಸಿ ದವಸ ಧಾನ್ಯಗಳ ಬೆಲೆಯನ್ನು ಎರಡು-ಮೂರು ಪಟ್ಟು ಹೆಚ್ಚಿಗೆ ಮಾಡಿ ಮಾಡುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸುತ್ತವೆ. ವಿಧಿ ಇಲ್ಲದೆ ಗ್ರಾಹಕರು ಕೂಡ ಅದನ್ನು ಕೊಳ್ಳುವಂತಹ ಅನಿವಾರ್ಯತೆ ಬಿಳುತ್ತಾರೆ. ಮತ್ತದೇ ಬೆಳೆಯುವ ರೈತನಿಗೆ ಏನು ಸಿಗದು ಕೊಳ್ಳುವ ಗ್ರಾಹಕನಿಗೂ ಏನು ಸಿಗುವುದಿಲ್ಲ. ಹೊಸ ವಿಧೇಯಕ ಕೃಷಿಗೆ ಬೆಂಬಲ ಬೆಲೆಯನ್ನು ಕೊಡುವ ವಿಚಾರವಾಗಿ ಯಾವುದನ್ನು ಸ್ಪಷ್ಟಪಡಿಸಿಲ್ಲ. ರೈತ ಸಂಕಷ್ಟಕ್ಕೆ ಸಿಲುಕಿದಾಗ ಬೆಂಬಲ ಬೆಲೆ ಅವನ ನೆರವಿಗೆ ಬರುತ್ತಿತ್ತು. ರಾಷ್ಟ್ರೀಯ ಆಹಾರ ಭದ್ರತೆ ಮಾರಕವಾದ ಇಂತಹ ಕೃಷಿ ವಿಧೇಯಕವನ್ನು ಗಟ್ಟಿಧ್ವನಿಯಲ್ಲಿ ದನಿಯಲ್ಲಿ ವಿರೋಧಿಸುವಂತಹ ವಿರೋಧಪಕ್ಷಗಳು ಇಲ್ಲದ ಕಾರಣ ರೈತರಿಗೆ ಮಾರಕವಾದ ಈ ಕೃಷಿ ವಿಧೇಯಕ ಅನುಷ್ಠಾನಕ್ಕೆ ಬರುತ್ತಿದೆ.

2 comments: