Sunday, October 4, 2020

ಪ್ರೇಮದ ಅನ್ವೇಷಣೆ ಭಾಗ - 16


ನನಗೆ ಪ್ರೀತಿ ತೋರದ ತಂದೆ-ತಾಯಿ ಸಿಗದಿದ್ದರೂ ಪರವಾಗಿಲ್ಲ ಪ್ರೀತಿ ಹಾಗೂ ಕಾಳಜಿ ತೋರುವ ಸ್ನೇಹಿತ ಸಿಕ್ಕಿದನಲ್ಲ ಎಂಬುದೇ ದೊಡ್ಡ ವಿಷಯವಾಗಿತ್ತು. ಆದರೆ ಅವನ ಮನಸ್ಸಿನಲ್ಲಿ ಪ್ರೀತಿಯ ಹಿಂದೆ ಇದ್ದ ದ್ವೇಷ, ಕಾಳಜಿ ಹಿಂದೆ ಇದ್ದ ಸ್ವಾರ್ಥ ಅವನ ನಾಟಕೀಯತೆಯ ಪ್ರೀತಿ ಮತ್ತು ಕಾಳಜಿ ತಿಳಿದು ವಿಧುವಿಗೆ ದೊಡ್ಡ ಆಘಾತವಾಯಿತು. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದ ವಿಧುವಿನ ಏಳಿಗೆ ಸಹಿಸದ ಕುಶಾಲ್ ವಿಧುವಿನ ಜೊತೆಗಾರರಿಗೆ ಮತ್ತು ಕಾಲೇಜಿನ ಸಹಪಾಠಿಗಳಿಗೆ ಇಲ್ಲದ ವಿಷಯಗಳನ್ನು ಹೇಳಿ ವಿಧುವಿನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದ ಕುಶಾಲ್ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದ ಅವನಿಗೆ ತಿಳಿಯದಂತೆ ಅವನ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಕುಶಾಲ್ ನ ಮೋಸದ ಹರಿವು ನಿಧಾನವಾಗಿ ತಿಳಿಯಲು ಪ್ರಾರಂಭಿಸಿದ ಕೂಡಲೆ ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದ. ವಿಧು ಉತ್ತಮವಾಗಿ ಓದಬೇಕು ಎಂಬ ಏಕಮಾತ್ರ ಉದ್ದೇಶದಿಂದ ಕಾಲೇಜು ಸೇರಿದ್ದರಿಂದ ಅವನ ಮುಂದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದಷ್ಟೇ  ಆಯ್ಕೆಯಾಗಿತ್ತು. ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು. ಅದರ ಅನಿವಾರ್ಯತೆ ಅವನಿಗಿತ್ತು. ಹಾಗಾಗಿ ವಿದ್ಯಾಭ್ಯಾಸದ ಕಡೆ ಪೂರ್ತಿಯಾಗಿ ಗಮನಹರಿಸಲು  ಉತ್ತಮ ಅಂಕ ಬರಲು ಶುರುವಾಯಿತು. ವಿಧುವಿನ ನಿರೀಕ್ಷೆ ಇಲ್ಲದೆ ತರಗತಿಗೆ ಮೊದಲನೆಯವನಾಗಿ ಬಂದ. ಅದನ್ನು ಸ್ನೇಹಿತ ಎನಿಸಿಕೊಂಡಿದ್ದ ಕುಶಾಲ್ ಗೆ ತಡೆಯಲಾಗಲಿಲ್ಲ ಎಂಬ ಸತ್ಯದ ಅರಿವಾದಾಗ ವಿಧುವಿಗೆ ಆಘಾತವಾಯಿತು. ಅವನನ್ನು ನೇರವಾಗಿ ಎದುರಿಸಲು ಆಗದ ಕುಶಾಲ್ ಬೇರೆ ರೀತಿಯಲ್ಲಿ ಅವನ ಏಳಿಗೆಯನ್ನು ತಡೆಯಬೇಕೆಂದು ಸಹಪಾಠಿಗಳಿಂದ ಯಾವುದೇ ರೀತಿಯ ಶೈಕ್ಷಣಿಕ ಸಹಕಾರ ಸಿಗದಂತೆ ಮಾಡಬೇಕು ಎಂಬ ದೃಷ್ಟಿಕೋನದಲ್ಲಿ ಯೋಚಿಸಿ ಅವನಿಗೆ ಅರ್ಥವಾಗದ ಪಾಠವನ್ನು ಹೇಳಿಕೊಡುವ ಹುಡುಗರಿಗೆ ಪಾಠವನ್ನು ಹೇಳಿಕೊಡಬೇಡಿ ಎಂದು ತಾಕಿತು ಮಾಡುತ್ತಿದ್ದ .
          ಆದರೂ ವಿಧುವಿನ ಸಹಪಾಠಿಗಳು ವಿದ್ಯಾಭ್ಯಾಸದ ವಿಚಾರಗಳನ್ನು ಹೇಳಿಕೊಡುತ್ತಿದ್ದರು. ಕುಶಾಲ್ನ ಒತ್ತಡ ಹೆಚ್ಚಿದ ಮೇಲೆ ಈ ವಿಚಾರವನ್ನು ವಿಧುವಿಗೆ ತಿಳಿಹೇಳಿದರು. ಅವನು ಎರಡನೆಯ ಬಾರಿಯೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿದರು ಫಲವಾಗಿ ತರಗತಿಗೆ ಮೊದಲನೆಯವನಾಗಿ ಬಂದ. ಅಷ್ಟರಲ್ಲಾಗಲೇ ಕಾಲೇಜಿನಲ್ಲಿ ಉತ್ತಮ ಸಹಪಾಠಿಗಳನ್ನು ಎಲ್ಲ ವಿಭಾಗಗಳಲ್ಲಿ ಸಂಪಾದಿಸಿದ್ದ ವಿಧು ಎಲ್ಲ ವಿಭಾಗಗಳಿಗೆ ಚಿರಪರಿಚಿತನಾಗಿದ್ದ. ಡಿಪ್ಲೋಮೋ ತರಗತಿಯ ಮೂರನೇ ವರ್ಷಕ್ಕೆ ಕಾಲಿಟ್ಟಾಗ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯುವ ಚರ್ಚೆಗಳು ಆರಂಭವಾದವು. ಎಲ್ಲಾ ವಿಭಾಗದ ಸ್ನೇಹಿತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರಿಂದ ವಿಧುವಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಬರುತ್ತಿತ್ತು. ಆದರೆ ಅವನಿಗೆ ಯಾವುದೇ ಚುನಾವಣೆ ಬೇಡವಾಗಿತ್ತು. ಏಕೆಂದರೆ ಅವನ ಉದ್ದೇಶ ಓದುವುದರ ಮುಖಾಂತರ ಡಿಪ್ಲೋಮಾ ಮುಗಿಸಿ ಹೋಗುವುದಾಗಿತ್ತು. ಅದೇ ಸಮಯದಲ್ಲಿ ಕುಶಾಲ್ ವಿಧುವಿನ ಹತ್ತಿರ ಸಹಾಯ ಕೇಳಿಕೊಂಡು ಬಂದ, ಅವನು ಉದ್ದೇಶವಿದ್ದು ವಿಧವನ್ನು ಹಿಡಿದರೆ ವೋಟು ತೆಗೆದುಕೊಳ್ಳಲು ಅನುಕೂಲ ಆಗಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಇದನ್ನು ಅರಿಯದ ವಿಧು ಸ್ನೇಹಿತ ಸಹಾಯ ಕೇಳಿಬಂದಾಗ ಸಹಾಯ ಮಾಡುವುದು ನಿಜ ಸ್ನೇಹಿತನ ಲಕ್ಷಣವೆಂದು ಅವನ ಚುನಾವಣೆಗೆ ಸಹಾಯ ಮಾಡಲು ಒಪ್ಪಿದ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕುಶಾಲ್ ನ ಗೆಲುವಿಗೆ ಪ್ರಮುಖ ಕಾರಣನಾದ. ಕುಶಾಲ್ ಗೆಲ್ಲುವೆ ವಿಧುವಿಗೆ ಮುಳುವಾಗಿ ಕಾಡಿತು. ಕುಶಾಲ್ ನ ಇತರೆ ಸ್ನೇಹಿತರೆ ಅವನನ್ನು ಸೋಲಿಸಲು ಸಿದ್ಧವಿದ್ದ ಪರಿಸ್ಥಿತಿಯಲ್ಲಿ ಅವರನ್ನೆಲ್ಲ ಸಂಬಾಳಿಸಿ ಕುಶಾಲ್ ಗೆಲುವಿಗೆ ಕಾರಣನಾದ, ಕುಶಾಲ್ ತನ್ನ ಬುದ್ಧಿಯನ್ನು ಚುನಾವಣೆಯಲ್ಲಿ ಗೆದ್ದ ಮರುದಿನದಿಂದಲೇ ತೋರಿಸಲು ಶುರು ಮಾಡಿದ. ಚುನಾವಣೆಯಲ್ಲಿ ಗೆದ್ದ ಮರುದಿನ ಸಿಹಿ ಹಂಚುವ ಸಮಯದಲ್ಲಿ ಕುಶಾಲ್ ಗೆ ಕೇಡು ಬಯಸಿದವರನ್ನ ವೇದಿಕೆಯ ಮೇಲೆ ಕರೆದು ವಿಧವನ್ನು ಕರೆಯದಂತೆ ಅವಮಾನಿಸಿ ಬಿಟ್ಟ........

No comments: