Friday, June 26, 2020

ಪ್ರೇಮದ ಅನ್ವೇಷಣೆ ಭಾಗ-2

ಪ್ರೇಮದ ಅನ್ವೇಷಣೆ ಭಾಗ-2

        ಕಿಟಕಿ ಪಕ್ಕ ದಡೂತಿ ದೇಹದ ಮನುಷ್ಯ ಕುಳಿತಿದ್ದ.ಈ ತುದಿಯ ಪಕ್ಕದಲ್ಲಿ ಸಾಮಾನ್ಯ ಗಾತ್ರದ ವ್ಯಕ್ತಿ ಕುಳಿತಿದ್ದ. ವಿಧು ಕುಳಿತುಕೊಳ್ಳುವುದಕ್ಕೂ ಅವನು ಕುಳಿತುಕೊಂಡ ಹಿಂದಿನ ನಾಲ್ಕನೆಯ ಸಾಲಿನಲ್ಲಿ ಜಾಗಕ್ಕಾಗಿ ಜಗಳ ಶುರುವಾಯಿತು. ಜಾಗಕ್ಕಾಗಿ ನಡೆಯುವ ಜಗಳವನ್ನು ನೋಡಿ ನಗುವನ್ನು ತಡೆಯಲಾರದೆ ಮಂದಸ್ಮಿತನಾಗಿ ನಕ್ಕು ಸುಮ್ಮನಾದ. ಕೆಲವೇ ಗಂಟೆಗಳ ಪ್ರಯಾಣಕ್ಕಾಗಿ ಕುಳಿತುಕೊಳ್ಳುವ ಜಾಗಕ್ಕಾಗಿ ಈ ರೀತಿ ಕಿತ್ತಾಡುವಾಗ, ಇನ್ನು ಅಧಿಕಾರದಾಹದ ನಮ್ಮ ರಾಜಕಾರಣಿಗಳು ಮಂತ್ರಿಗಿರಿಗಾಗಿ ಕುರ್ಚಿಗಾಗಿ ಹೊಡೆದಾಡುವುದುರಲ್ಲಿ ಅರ್ಥವಿದೆಯೇನೋ ಅನಿಸಿತು. ರೈಲು ಹೊರಡುವ ಸಮಯದ ಹೊತ್ತಿಗೆ ಯಥಾಪ್ರಕಾರ ರೈಲುಗಾಡಿಯು ತುಂಬಿ ತುಳುಕುತ್ತಾ ತನ್ನ ಚುಕುಬುಕು ಸದ್ದಿನೊಂದಿಗೆ ಹೊರಡುವ ಹೊತ್ತಿಗೆ ನೆತ್ತಿಯ ಮೇಲಿನ ಸೂರ್ಯ ಸರಿಯುತ್ತಲಿದ್ದ.
           ರೈಲಿನ ವೇಗ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದ ವಿಧುವಿಗೆ ರೈಲು ತನ್ನ ನಿಲ್ದಾಣವನ್ನು ಬಿಟ್ಟು, ಇನ್ನೂ ವೇಗವನ್ನು ಹೆಚ್ಚಿಸುತ್ತಿರುವವಾಗಲೇ ತಾನು ಪ್ರತಿಬಾರಿಯೂ ಪ್ರಯಾಣದಲ್ಲಿ ತೆಗೆದುಕೊಂಡು ಹೋಗುವ ಯಾವುದಾದರೂ ಪುಸ್ತಕವನ್ನು ತನ್ನ ಬ್ಯಾಗಿನಲ್ಲಿ ಇಡುವಂತೆ ತನ್ನ ರೂಮಿನ ಸಹಪಾಠಿಗೆ ಹೇಳಿದ್ದು ನೆನಪಾಯಿತು. ವಿಧುವಿನ ಪುಸ್ತಕದ ಗೀಳನ್ನು ಬಲ್ಲವನಾಗಿದ್ದ ಆತನ ರೂಮಿನ ಸಹಪಾಠಿ ತ್ರಿಭುವನ್ ಹಿಂದಿನ ರಾತ್ರಿ ಓದುತ್ತಿದ್ದ ಪುಸ್ತಕವಾದ ‘ಭಾರತೀಯ ಕ್ಷಾತ್ರ ಪರಂಪರೆ’ ಪುಸ್ತಕವನ್ನು ತೆಗೆದು ಓದಲು ಶುರುಮಾಡಿದ. ಅಷ್ಟರಲ್ಲೇ ಯಾರೋ ಜೋರಾಗಿ ಮಾತನಾಡುತ್ತಿದ್ದ ಶಬ್ದ ಕೇಳಿಸಿತು. ಕಂಚಿನ ಕಂಠದ ಮಾತನ್ನು ಕೇಳಿ ತನ್ನ ತಲೆಯನ್ನು ಎತ್ತಿ ಮುಂದೆ ನೋಡಿದಾಗ ಮಧ್ಯವಯಸ್ಸಿನ ತಂದೆ-ತಾಯಿ ಹಾಗೂ ಅವರ ಮಗಳು ಕುಳಿತಿದ್ದರು. ಅವರು ತಮ್ಮ ಮಗಳಿಗೆ ಊಟದ ಬುತ್ತಿಯನ್ನು ಬಿಚ್ಚಿ ತಿನ್ನಲು ಕೊಡುತ್ತಿದ್ದರು. ಅವರನ್ನು ನೋಡಿದಾಗ ಅವರ ವೇಷಭೂಷಣದಿಂದ ಅವರು ಕರ್ನಾಟಕದ ಉತ್ತರ ಭಾಗದವರು ಎಂದು ತಿಳಿಯಲು ಸುಲಭವಾಗುವಂತೆ ಇತ್ತು. ಅವರು ಬಟ್ಟೆ ಧರಿಸಿದ ರೀತಿ ಇನ್ನೂ ತಮ್ಮತನವನ್ನು ಉಳಿಸಿಕೊಂಡು ಹೋಗುತ್ತಿರುವ, ಕರ್ನಾಟಕದ ಉತ್ತರ ಭಾಗದ ಅವರೆಂದರೆ ಸ್ವಲ್ಪ ಅಭಿಮಾನ ಹಾಗೂ ಹೆಚ್ಚು ಪ್ರೀತಿ. ಆ ತಾಯಿ ಅಗಲವಾದ ಹಣೆಯ ಮೇಲೆ ದೊಡ್ಡ ಕುಂಕುಮ, ಮೂಗಿನ ಎರಡು ಕಡೆ ವಜ್ರಾಭರಣಗಳ ಮೂಗುತಿ, ತುಂಬಾ ವಿಶೇಷವಾಗಿ ಕಾಣುವ ಗುಂಡಿನ ಸರ ಹಾಗೂ ಜರಿಯಂಚಿನ ಚಿನ್ನದ ಬಣ್ಣದ ಕಾಟನ್ ಸೀರೆಯನ್ನು ಉಟ್ಟುಕೊಂಡಿದ್ದಳು. ಆ ತಾಯಿ ಇನ್ನೂ ನಗರೀಕರಣದ ಪ್ರಭಾವಕ್ಕೆ ಒಳಗಾಗದೆ ಗ್ರಾಮೀಣ ಸೊಗಡಿನ ಮೂಲನೆಲೆಯನ್ನು ಉಳಿಸಿಕೊಂಡಿದ್ದು ಎದ್ದು ತೋರುತ್ತಿತ್ತು.
            ಇನ್ನು ಅವರ ತಂದೆಯು ಕುರ್ತಾದೂಂದಿಗೆ ಕಚ್ಚೆ ಪಂಚೆಯನ್ನು ತೊಟ್ಟಿದ್ದು, ಅವರ ಮುಖದ ಮೇಲಿನ ದಪ್ಪನೆಯ ಮೀಸೆ, ಆ ಮುಖದಲ್ಲಿನ ಗಾಂಭೀರ್ಯ ಅವರು ಆ ಕುಟುಂಬದ ಯಜಮಾನ ಎಂಬುದು ಖಾತ್ರಿ ಪಡಿಸುವಂತೆ ಇತ್ತು. ಇನ್ನು ಕೊನೆಯಲ್ಲಿ ಕುಳಿತಿದ್ದ ಹುಡುಗಿಯನ್ನು ನೋಡಿ “ಅರೇ! ಯಾರು ಈ ಹುಡುಗಿ? ಸುಮ್ಮನೆ ಮೌನವಾಗಿ ಕಿಟಕಿಯಾಚೆಗಿನ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಕುಳಿತಿರುವಳಲ್ಲ..?” ಎಂದುಕೊಂಡ. ಇಂದಿನ ಶೈಲಿಯ ಉಡುಗೆ-ತೊಡುಗೆ ತೊಟ್ಟು ಚಿನ್ನದ ಮೂಗುತಿಯನ್ನು ಸರಿ ಮಾಡಿಕೊಳ್ಳುತ್ತಾ ಕುಳಿತಿದ್ದ ಈ ಹುಡುಗಿ ಯಾರಿರಬಹುದು ಎಂದುಕೊಳ್ಳುವಷ್ಟರಲ್ಲಿ ಆ ಹುಡುಗಿಯ ಪಕ್ಕದಲ್ಲಿ ಕುಳಿತಿದ್ದ ತಾಯಿ ಹುಡುಗಿಯ ಕೈಗೆ ರೊಟ್ಟಿ ಊಟವನ್ನು ಕೊಟ್ಟರು. ಅಮ್ಮಾ… ನಾನು ಆನಂತರ ಊಟವನ್ನು ಮಾಡುತ್ತೇನೆ ಎಂದು ಆ ಹುಡುಗಿ ಊಟವನ್ನು ನಿರಾಕರಿಸಿದಳು. ಓ ಇವರು ತಾಯಿ-ಮಗಳು ಎಂದುಕೊಂಡು ತನ್ನ ಪುಸ್ತಕವನ್ನು ಓದಲು ಮುಂದುವರಿಸಿದನು. ರೈಲು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸುತ್ತಾ ಹೋದಂತೆ, ಆ ತಂದೆ ತಾಯಿ ಮತ್ತು ಮಗಳ ನಡುವಿನ ಚರ್ಚೆಯೂ ಹೆಚ್ಚಾಗುತ್ತಾ ಹೋಯಿತು. ಹಲವಾರು ವಿಷಯಗಳನ್ನು ಚರ್ಚಿಸುತ್ತಾ ಕುಳಿತಿದ್ದ ಅವರ ಗದ್ದಲದಲ್ಲಿ ವಿಧು ಓದು ಮುಂದುವರಿಸುವುದು ಕಷ್ಟವಾಯಿತು. ಪುಸ್ತಕವನ್ನು ಮುಚ್ಚಿ ತನ್ನ ಬ್ಯಾಗಿನೊಳಗೆ ಹಾಕಿಕೊಂಡು ಮೌನವಾಗಿ ಕುಳಿತ. ಆದರೂ ತನ್ನ ಮನಸ್ಸಿನ ಆಲೋಚನೆಯನ್ನು ತಡೆಯಲಾದಿತೇ? ಮನಸ್ಸಿನಲ್ಲೇ ತಂದೆ-ತಾಯಿ ಇಷ್ಟು ಊಟಕ್ಕಾಗಿ ಹಿಂಸೆ ಮಾಡಿ ತಿನ್ನಿಸುತ್ತಿರುವುದರಿಂದಲೇ ಆ ಹುಡುಗಿ ತೆಳ್ಳಗೆ ಸಣ್ಣವಾಗಿರುವುದು ಎಂದುಕೊಂಡು ಸುಮ್ಮನಾದ.....

Author : Rakesh Bhagiratha.

No comments: