Thursday, September 24, 2020

ಪ್ರೇಮದ ಅನ್ವೇಷಣೆ ಭಾಗ-13

ಆ ನಾಡು ನುಡಿ ಸತ್ಯವೆನಿಸಿತು. ಪುಸ್ತಕ ಓದುವ ಗೀಳು ಪ್ರಬುದ್ಧನ್ನಾಗಿ ಮಾಡಿತು. ಗ್ರಂಥಾಲಯ ಅದೊಂದು ವಿದ್ಯೆಯನ್ನು ನೀಡುವ ಶಾರದೆಯ ಸ್ಥಾನ ಎನ್ನುವ ಅರಿವು ಅವನಿಗಾಯಿತು. ಗ್ರಂಥಾಲಯದಲ್ಲಿದ್ದ ವ್ಯಕ್ತಿತ್ವ ವಿಕಸನದ ಪುಸ್ತಕವು ವಿಧುವಿನ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದವು. ಹೀಗೆ ವ್ಯಕ್ತಿತ್ವ ವಿಕಾಸದ ಕಡೆಗೆ ಹೆಜ್ಜೆ ಇಟ್ಟ ಅವನಿಗೆ ಒಂದು ವರ್ಷಗಳ ಕಾಲ ಜ್ಞಾನ ಸಂಪಾದನೆಯಲ್ಲಿ ಕಳೆದುಹೋಗಿದ್ದು ಗೊತ್ತಾಗಲಿಲ್ಲ. ಆತನಿಗೆ ಗ್ರಂಥಾಲಯವೇ ಮನೆಯಾಗಿ ಹೋಯಿತು. ಒಂದು ವರ್ಷಗಳ ಕಾಲ ಸತತ ಅಭ್ಯಾಸ ಅವನಿಗೆ ಪುಸ್ತಕ ಓದುವ ಗೀಳನ್ನು ಇನ್ನೂ ಹೆಚ್ಚು ಮಾಡಿತು. ಜ್ಞಾನ ಹೆಚ್ಚಿದಂತೆ ಅವನು ಪ್ರಬುದ್ಧನಾಗುತ್ತ ಹೋದ. ಮನೆಯ ಹತ್ತಿರವೇ ಇದ್ದ ಸರ್ಕಾರಿ ಡಿಪ್ಲೋಮೋ ಕಾಲೇಜಿನಲ್ಲಿ ಸೀಟು ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದನ್ನು ಪತ್ರಿಕೆಯಲ್ಲಿ ನೋಡಿ, ನೋಡೋಣ ಒಂದು ಅರ್ಜಿಯನ್ನು ಹಾಕಿದರೆ ಆಯಿತು ಎಂದು ಅರ್ಜಿಯನ್ನು ಡಿಪ್ಲೋಮಾ ಕೋರ್ಸ್ಗೆ ಹಾಕಿ ಬಂದ. ಅದು 10ನೇ ತರಗತಿಯ ಅಂಕಗಳಿಗೆ ಅನುಗುಣವಾಗಿ ( ಗಣಿತ ಹಾಗೂ ವಿಜ್ಞಾನ )ದ ಒಟ್ಟು ಅಂಕಗಳ ಆಧಾರದ ಮೇಲೆ ಕೊಡಮಾಡುವ ಸೀಟ್. ಅವನದು ಹೇಳಿಕೊಳ್ಳುವಂತಹ ಅಂಕಗಳು ಹತ್ತನೇ ತರಗತಿಯಲ್ಲಿ ಇಲ್ಲದಿದ್ದ ಕಾರಣ ಡಿಪ್ಲೋಮೋ ಸೀಟು ಸಿಗುವ ಯಾವ ನಿರೀಕ್ಷೆಯೂ ಇರಲಿಲ್ಲ. ನೋಡೋಣ ಕೊನೆಯಬಾರಿ ಡಿಪ್ಲೋಮೋ ಸೀಟು ಸಿಕ್ಕರೆ ಹೋಗೋಣ ಇಲ್ಲದಿದ್ದರೆ ಮನೆ ಬಿಟ್ಟು ಹೋಗಿ ಬದುಕನ್ನು ಕಟ್ಟೋಣ. ಹಂಗಿನ ಅರಮನೆಗಿಂತ ಬಂಗದ ಕೂಳು ಲೇಸು ಎನ್ನುವ ನಾಣ್ಣುಡಿಯಂತೆ ಬದುಕುವ ದೃಢ ನಿಶ್ಚಯ ಮಾಡಿ ಮುನ್ನಡೆದ. ಅವನ ಅದೃಷ್ಟವೇನು ಎನ್ನುವಂತೆ ತಾಂತ್ರಿಕ ವಿದ್ಯಾಲಯದಲ್ಲಿ ಅಂತಿಮ ಸುತ್ತಿನಲ್ಲಿ ಎರಡು ಸೀಟುಗಳು ಉಳಿದವು. ಒಂದು ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತೊಂದು ಆಟೋಮೊಬೈಲ್ ಕ್ಷೇತ್ರದ ವಿಭಾಗ. ಮೂರು ಮಂದಿ ಅಂತಿಮ ಸುತ್ತಿನಲ್ಲಿ ಉಳಿದರು. ಅದರಲ್ಲಿ 15ನೇ ವಯಸ್ಸಿನ ಇಬ್ಬರು ಹಾಗೂ 16ನೇ ವಯಸ್ಸಿನ ಒಬ್ಬರು ಉಳಿದರು. ಮೊದಲನೆಯದಾಗಿ 15ನೇ ವಯಸ್ಸಿನವರನ್ನು ಕರೆದರು ಅದರಲ್ಲಿ ಹೆಚ್ಚಿಗೆ ಅಂಕವನ್ನು ಯಾರು ತೆಗೆದಿದ್ದರೋ ಅವರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಕೊಡಲಾಯಿತು. ಮತ್ತೊಬ್ಬನಿಗೆ ಉಳಿದಿದ್ದು ಒಂದು ಸೀಟು. ಅದು ಆಟೋಮೊಬೈಲ್ ಕ್ಷೇತ್ರ. ಆಟೋಮೊಬೈಲ್ ವಿಭಾಗ ಸೇರಬೇಕೆಂದರೆ 16ವಯಸ್ಸು ತುಂಬಿರಬೇಕು ಎಂಬ ಸರ್ಕಾರಿ ನಿಯಮ ಇದ್ದುದರಿಂದ ಆ ಹುಡುಗನಿಗೆ ಆಟೋಮೊಬೈಲ್ಸ್ ಸೀಟ್ ಸಿಗದಂತಾಯಿತು. ಉಳಿದಿದ್ದು ವಿಧು ಮಾತ್ರ. 16ನೇ ವಯಸ್ಸು ತುಂಬಿದ ಕಾರಣ ಅವನಿಗೆ ಆಟೋಮೊಬೈಲ್ ವಿಭಾಗದಲ್ಲಿ ಕೊನೆಯವನಾಗಿ ಸೇರಿಸಿಕೊಳ್ಳಲಾಯಿತು. ಅವನ ಅದೃಷ್ಟ ಎನ್ನುವಂತೆ 50 ಮಂದಿಯನ್ನು ಮಾತ್ರ ತೆಗೆದುಕೊಳ್ಳುವ ವಿಭಾಗದಲ್ಲಿ 50ನೇ ಯಾವನು ಆಗಿ ಆಯ್ಕೆ ಪತ್ರವನ್ನು ನೀಡಲಾಯಿತು. ಸಿಕ್ಕ ಆಯ್ಕೆ ಪತ್ರವನ್ನು ಅಲ್ಲಿನ ಸೂಪರಿಂಟೆಂಡೆಂಟ್ ಅವರಿಂದ ಅನುಮೋದನೆ ಪಡೆಯಬೇಕು. ಅನುಮೋದನೆ ಪಡೆಯಲು ಹೋದಾಗ ಅವರು ವ್ಯಂಗ್ಯವಾಗಿ ಸೀಟು ಪಡೆಯುವುದು ಮುಖ್ಯವಲ್ಲ ಮೊದಲು ಇಲ್ಲಿಂದ ಉತ್ತೀರ್ಣನಾಗಿ ಹೋಗಬೇಕು, ಎಂದು ಅಲ್ಲಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇವಲವಾಗಿ ಹೇಳುತ್ತಿದ್ದರು.  ಅಂದೇ ವಿಧು ಮನಸ್ಸಿನಲ್ಲಿ ನಿರ್ಧರಿಸಿದ. ಈ ಕಾಲೇಜಿನಲ್ಲಿ ಕೊನೆಯ ಹಂತದಲ್ಲಿ ಆಯ್ಕೆಯಾದ ಹುಡುಗರು ಎಂದು ಅಪಹಾಸ್ಯ ಮಾಡುತ್ತಿದ್ದ ವ್ಯಕ್ತಿಯ ಮುಂದೆ ತುಂಬಾ ಚೆನ್ನಾಗಿ ಓದಿ ಉನ್ನತ ಅಂಕವನ್ನು ಪಡೆಯಬೇಕು. ನಾನೇ ಈ ವ್ಯಕ್ತಿಗೆ ಉತ್ತರವಾಗಿ ನಿಲ್ಲಬೇಕು ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಮುನ್ನಡೆದ. ಅಲ್ಲಿಗೆ ಸರಿಯಾಗಿ ಒಂದು ವಾರದ ನಂತರ ಕಾಲೇಜು ಪ್ರಾರಂಭವಾಯಿತು. ಬದುಕಿನ ಹೊಸ ಆಸೆ ಕನಸು ನಿರೀಕ್ಷೆಗಳೊಂದಿಗೆ ಕಾಲೇಜಿಗೆ ಮೊದಲ ದಿನ ಭೇಟಿಕೊಟ್ಟ ಬದುಕು ಇನ್ನಾದರೂ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ.....

No comments: