ಈ ಜನ್ಮದಲ್ಲಿ ಮದುವೆಯಾಗಬಾರದೆಂದು ನಿಶ್ಚಯಿಸಿದಕ್ಕೆ ಪ್ರತಿಯಾಗಿ ಇವರು ಮದುವೆಯ ಪ್ರವಚನ ಮಾಡುತ್ತಿದ್ದಾರಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ನಾನು ಈ ಜನ್ಮದಲ್ಲಿ ಮದುವೆಯಾಗುವುದಿಲ್ಲ ಎಂದು ಹೇಳುವಷ್ಟರಲ್ಲಿ ಚಿದಾನಂದ ಅವರು ಈ ರೀತಿ ಮಗನ ವಯಸ್ಸಿನ ಮಕ್ಕಳನ್ನು ಕಂಡರೆ ಮದುವೆ ಬಗ್ಗೆ ಮಾತನಾಡುತ್ತಾಳೆ ಎಂದರು. ಇವರನ್ನು ಹೀಗೆ ಬಿಟ್ಟರೆ ಬರೀ ಮದುವೆಯ ಬಗ್ಗೆ ಮಾತನಾಡುತ್ತಾರೆ ಎಂದು ಗೊತ್ತಾದ ಕೂಡಲೇ ಅವರ ಚಿತ್ತವನ್ನು ಪ್ರಕೃತಿಯ ಕಡೆಗೆ ಸೆಳೆಯಬೇಕು ಎಂಬ ಉದ್ದೇಶದಿಂದ ಯೋಚಿಸುತ್ತಿರಬೇಕಾದರೆ ರೈಲು ಅರಸೀಕೆರೆ ನಿಲ್ದಾಣ ತಲುಪಿತ್ತು. ಅರಸೀಕೆರೆ ನಿಲ್ದಾಣ ಜಂಕ್ಷನ್ ಆಗಿರುವುದರಿಂದ ರೈಲು ಸ್ವಲ್ಪ ಸಮಯ ಅಲ್ಲಿ ನಿಲ್ಲುತ್ತದೆ ಎಂದು ತಿಳಿದು ವಿಧು ರೈಲಿನಿಂದ ಕೆಳಗೆ ಇಳಿದು ಸ್ವಲ್ಪ ಸಮಯ ಅತ್ತಿಂದಿತ್ತಾ ಓಡಾಡಿದ, ರೈಲಿನಲ್ಲಿ ಅರಸೀಕೆರೆ ಮಾರ್ಗ ಸಂಚರಿಸುವಾಗ ಯಾವಾಗಲೂ ಬಾದಾಮಿಹಾಲನ್ನು ಕುಡಿಯುತ್ತಿದ್ದ. ಅದರಂತೆ ಈ ಬಾರಿಯೂ ಹಾಲನ್ನು ತೆಗೆದುಕೊಂಡು ಕುಡಿಯುತ್ತಿರುವಾಗ ಹೊಸದಾಗಿ ಮದುವೆಯಾದ ನವ ಜೋಡಿ ನೋಡಿ ಅವನಿಗೆ ನಗು ಬಂತು. ಕುರಿ ಹಳ್ಳಕ್ಕೆ ಬಿದ್ದಿದೆ ಎಂದು ಮನಸ್ಸಿನಲ್ಲೇ ನಕ್ಕು ಮುಂದೆ ಹೆಜ್ಜೆ ಹಾಕಿದ. ಇನ್ನೇನು ರೈಲುಗಾಡಿಯ ಒಳಗೆ ಬರಬೇಕು, ಅಷ್ಟರಲ್ಲಿ ಸಾಧುಗಳ ದರ್ಶನವಾಯಿತು. ಸಾಧುಗಳ ಕಣ್ಣಿನಲ್ಲಿ ಪ್ರಕಾಶಮಾನವಾದ ತೇಜಸ್ಸು ಕಂಗೊಳಿಸುತ್ತಿತ್ತು. ಸಾಧುಗಳು ವಿಧುವನ್ನು ಹತ್ತಿರ ಬರುವಂತೆ ಕೈಸನ್ನೆ ಮಾಡಿದರು. ಅವರ ಬಳಿ ಹೋಗುತ್ತಿದ್ದಂತೆ ನೋಡಿ ನಕ್ಕು ನಿನ್ನ ಮುಂದಿನ ಕಾರ್ಯಕ್ಕೆ ಶುಭವಾಗಲಿ, ಬದಲಾವಣೆಗೆ ಸಿದ್ಧನಾಗು ಎಂದು ಹರಸಿದರು. ಅವರ ಆಶೀರ್ವಾದದ ಮರ್ಮ ಏನೆಂದು ಕೇಳಬೇಕು ಅನ್ನುವಷ್ಟರಲ್ಲಿ ರೈಲುಗಾಡಿ ಹೊರಟಿತು ಕೂಡಲೇ ಸಾಧುಗಳ ಆಶೀರ್ವಾದ ಸ್ವೀಕರಿಸಿದ ವಿಧು ರೈಲುಗಾಡಿಯನ್ನು ಹತ್ತಿದ, ರೈಲು ಗಾಡಿಯು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸಿತು.
ಅವರ ಮುಗುಳುನಗು ಹಲವಾರು ಗೂಢಾರ್ಥವನ್ನು ಸೂಚಿಸುತ್ತಿತ್ತು ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಇಟ್ಟುಕೊಂಡು ರೈಲಿನಲ್ಲಿ ಕುಳಿತು ತನ್ನದೇ ಆದ ಯೋಚನಾಲಹರಿಯಲ್ಲಿ ಬಿದ್ದ. ಪ್ರತಿಬಾರಿ ಯಾವುದೋ ಒಂದು ಮಹಾಶಕ್ತಿ ತನ್ನ ಬದುಕಿನ ಪಥವನ್ನು ನಿರ್ಧರಿಸುತ್ತದೆ ಎಂದು ಯೋಚಿಸುತ್ತ ಕುಳಿತಿರಬೇಕಾದರೆ ಮತ್ತೆ ಸತ್ಯವತಿ ಅವರ ಮಾತು ಪ್ರಾರಂಭವಾಯಿತು. ಓ ಇವರು ಬಿಟ್ಟರೆ ಇನ್ನು ಮದುವೆ ಪ್ರವಚನ ಹೊಡೆಯುತ್ತಾರೆ ಎಂದವನೇ ನೋಡಿ ಅರಸೀಕೆರೆ ಭಾಗದಲ್ಲಿ ಮಳೆ ಇಲ್ಲದೆ ತೆಂಗಿನ ಮರಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಹಾಕಿದ ಅಡಿಕೆ ಮರಗಳು ಒಣಗುತ್ತಿವೆ ಅಲ್ಲವೇ ? ಎಂದು ಈ ಬಾರಿ ಅವರ ಗಮನವನ್ನು ಪ್ರಕೃತಿಯ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾದ. ಹೌದಪ್ಪ ಮಳೆಗಾಲ ಚೆನ್ನಾಗಿ ನಡೆಸುತ್ತಿಲ್ಲ ಎಂದು ತಮ್ಮ ಹಿಂದಿನ ಅನುಭವದ ಮಾತುಗಳನ್ನು ಮತ್ತೆ ತೆಗೆದರು ಅಬ್ಬ ಒಂದು ಮದುವೆಯ ಪ್ರವಚನಕ್ಕೆ ಬ್ರೇಕ್ ಬಿತ್ತಲ್ಲ ಎಂದು ಮನಸ್ಸಿನಲ್ಲೇ ಸಂತೋಷಗೊಂಡ.
ಸತ್ಯವತಿಯವರು ತಮ್ಮ ಬದುಕು ಕಟ್ಟಿಕೊಂಡ ರೀತಿಯನ್ನು ವಿವರಿಸ ತೊಡಗಿದರು. ಅದನ್ನು ಕೇಳುವ ಹೊತ್ತಿಗೆ ರೈಲು ಕಡೂರು ನಿಲ್ದಾಣವನ್ನು ತಲುಪಿತು. ಅಬ್ಬ ಇವರ ಜೊತೆಗೆ ಅರ್ಧದಾರಿ ಕ್ರಮಿಸುವ ಹೊತ್ತಿಗೆ ರೈಲಿನಿಂದ ಇಳಿಯುತ್ತಿರುವುದು ಸರಿಹೋಯಿತು. ಇಲ್ಲವೆಂದರೆ ಇವರು ಹತ್ತಿರ ಮದುವೆ ವಿಚಾರದಲ್ಲಿ ಮೊಳೆಯನ್ನು ಇನ್ನು ಹೊಡೆಸಿ ಕೊಳ್ಳಬೇಕಾಗಿತ್ತು ಎಂದು ಮನಸ್ಸಿನಲ್ಲಿ ಅಂದುಕೊಂಡ. ಅಮ್ಮ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು ಸ್ವಲ್ಪ ಜಾಗವನ್ನು ಕೊಡಿ ನಾನು ನನ್ನ ಬ್ಯಾಗುಗಳನ್ನು ತೆಗೆದುಕೊಳ್ಳಬೇಕು ಎಂದು ಎದ್ದುನಿಂತ, ಕೂಡಲೇ ಸತ್ಯವತಿಯವರು ಅಜ್ಜಂಪುರದಲ್ಲಿ ಇಳಿಯುತ್ತೇನೆ ಎಂದು ಇಲ್ಲೇ ಇಳಿಯುತ್ತಿದ್ದಿಯಲ್ಲ ಎಂದರು. ಇಲ್ಲಮ್ಮ ನನ್ನ ಸ್ವಂತ ಊರು ಅಜ್ಜಂಪುರ ನಾನು ಬೇರೆ ಕಾರ್ಯದ ಮೇಲೆ ಶಿವಮೊಗ್ಗಕ್ಕೆ ಹೋಗಬೇಕಾಗಿದೆ ಹಾಗಾಗಿ ಇಲ್ಲೇ ಇಳಿಯುತ್ತಿದ್ದೇನೆ ಎಂದು ಹೇಳಿದ. ಓ ಆಯ್ತು ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹರಸಿದರು. ಬೀರೂರಿನ ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ರೈಲು ಬಂದಿತು. ವಿಧು ಮಾತೃಹೃದಯಿ ಸತ್ಯವತಿ ಅವರಿಗೆ ಧನ್ಯವಾದಗಳನ್ನು ತಿಳಿಸಿ ರೈಲಿನಿಂದ ಇಳಿದ. ಮನಸ್ಸಿನಲ್ಲಿ ಎಲ್ಲೋ......
Author : Rakesh Bhagiratha.
No comments:
Post a Comment