Thursday, November 26, 2020

ಪ್ರೀತಿ ಪ್ರೇಮ ಪಯಣ

ಪ್ರೀತಿಯೆಂದರೆ ಜಗತ್ತಿನ ಶಕ್ತಿ ಆ ಶಕ್ತಿಯಿಂದಲೇ ಜಗತ್ತು ನಡೆಯುವುದು ಎಂದರೆ ತಪ್ಪಾಗಲಾರದು. ಪ್ರೀತಿ ಎಂಬುದು ಇದೇ ರೀತಿ ಇರುತ್ತದೆ ಎಂದು ಹೇಳಲಾಗದು. ಅದರ ಶಕ್ತಿ ಅನಂತ, ಆಗಾದ ಎಷ್ಟು ಅಗಾದವೆಂದರೆ ಮಹಾನ್ ಸಾಮ್ರಾಜ್ಯಗಳನ್ನು ಕಟ್ಟುವಷ್ಟು ಹಾಗೂ ಮಹಾನ್ ಸಾಮ್ರಾಜ್ಯಗಳನ್ನು ಪತನ ಮಾಡುವಷ್ಟು .ಪ್ರೀತಿಯೆಂಬುದು ಬರಿ ಮನುಷ್ಯನಿಗೆ ಸಂಬಂಧಪಟ್ಟ ವಿಷಯವಲ್ಲ .ಪ್ರೀತಿ ಸಕಲ ಜೀವರಾಶಿಗಳಲ್ಲಿ ಇರುತ್ತದೆ. ಪ್ರೀತಿ ಇಲ್ಲದ ಬದುಕು ಶೂನ್ಯ ಎಂಬ ಭಾವನೆ ಮೂಡುತ್ತದೆ. ಅದರಲ್ಲೂ ಹದಿಹರಿಯದ ಪ್ರೀತಿಯಂದರೆ ಕೇಳಬೇಕಾ ? ಪ್ರೀತಿಯಂದರೆ ಅದು ಬರೀ ಹದಿಹರೆಯದವರ ನಡುವೆ ಮಾತ್ರ ಇರುವಂತಹದ ? ಅಥವಾ ಸಕಲ ಜೀವರಾಶಿಗಳಲ್ಲಿ ಇರುವಂತಹದ ? ಎಂದು ನೋಡುತ್ತಾ ಹೋದರೆ ನಮಗೆ ಪ್ರೀತಿ ಏಕೆ ಹುಟ್ಟುತ್ತದೆ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಸಾಮಾನ್ಯವಾಗಿ ಕಾಡುವ ಪ್ರಶ್ನೆ ? ಮೊದಲು ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ನೋಡೋಣ ಪ್ರೀತಿ ಎಲ್ಲಾ ಸಂಬಂಧಗಳಲ್ಲಿ ಇರುವಂತಹ ಸಾಮಾನ್ಯ ವಿಷಯ ಆದರೆ ಅದನ್ನು ದೀರ್ಘಕಾಲದಲ್ಲಿ ಉಳಿಸಿಕೊಳ್ಳುವ ಬಗೆ ಹೇಗೆ ?
                   ಪ್ರೀತಿಯಲ್ಲಿ ಹಲವು ಬಗೆ ಅದು ತಂದೆ ತಾಯಿಯ ಪ್ರೀತಿಯಿಂದ ಹಿಡಿದು ತಮ್ಮ ತಂಗಿಯಂದಿರು ಹಾಗೂ ಸಂಬಂಧಿಕರಿಂದ ಸಿಗುವ ಪ್ರೀತಿ ಅಮೂಲ್ಯವಾದದ್ದು. ಒಂದು ಹುಡುಗ ಹುಡುಗಿ ಹಾಗೂ ನಿಷ್ಕಲ್ಮಶ ಸ್ನೇಹದ ಪ್ರೀತಿ ಇನ್ನೂ ಅಮೋಘ. ಸ್ನೇಹದ ಪ್ರೀತಿಯಲ್ಲಿ ಕಾಳಜಿ ಇರುತ್ತದೆ. ಸ್ನೇಹ ಎಲ್ಲ ಸಂಬಂಧಗಳ ಸಮ್ಮಿಲನ ಅಲ್ಲಿ ತಂದೆಯ ಕಾಳಜಿ ತಾಯಿಯ ಮಮತೆ, ತಮ್ಮ ಹಾಗೂ ತಂಗಿಯಂದಿರ ಕುಚೇಷ್ಟೆ ಇರುತ್ತದೆ. ಇನ್ನು ಹದಿಹರೆಯದ ಪ್ರೀತಿಯಲ್ಲಿ ಹಲವು ಬಗೆಗಳು ಇರುತ್ತವೆ. ಹದಿಹರೆಯದವರು ಎಂದರೆ 15 ವರ್ಷದಿಂದ 23 ವರ್ಷದೊಳಗಿನ ಪ್ರೀತಿಯನ್ನು ಹದಿಹರೆಯದ ಪ್ರೀತಿಯೆಂದು ಕರೆಯಬಹುದು. 15ವರ್ಷದ ಪ್ರೀತಿ ಆಕರ್ಷಣೆಯಿಂದ ಹುಟ್ಟುವಂತಹ ಒಂದು ಕ್ರಿಯೆ, ಅದು ನಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದ ಆಗುವಂತಹ ಆಕರ್ಷಣೆ ದೈಹಿಕ ಆಕರ್ಷಣೆಯಿಂದ ಶುರುವಾಗಿ ಅರ್ಥಮಾಡಿಕೊಳ್ಳುವ ಮಟ್ಟಿಗೆ ಮುಂದುವರೆದರೆ ಆ ಪ್ರೀತಿ  ದೀರ್ಘಕಾಲ ಉಳಿಯುತ್ತದೆ. ಇಲ್ಲವಾದಲ್ಲಿ ಆಕರ್ಷಣೆ ಕಡಿಮೆಯಾದಂತೆ ಪ್ರೀತಿ ಕಡಿಮೆಯಾಗುತ್ತ ಹೋಗುತ್ತದೆ. ಅಂದರೆ ಅದು ಪ್ರೀತಿಯಲ್ಲ ಆಕರ್ಷಣೆ ಎಂದಾಯಿತು.
                 ಇನ್ನು ಕಾಲೇಜು ದಿನಗಳಲ್ಲಿ ಆಗುವ ಪ್ರೀತಿ ಆಕರ್ಷಣೆ ಜೊತೆಗೆ ಭ್ರಮಾತ್ಮಕ ಲೋಕದೊಂದಿಗೆ ಬೆಸೆದಿರುತ್ತದೆ. ಅಂದರೆ ಯಾವುದೋ ಸಿನಿಮಾದ ಪ್ರಭಾವ ಆಗಿರಬಹುದು ಅಥವಾ ಪ್ರೀತಿಸುವ ವ್ಯಕ್ತಿಯ ಆ ಸಮಯದ ನಡವಳಿಕೆ ಆಗಿರಬಹುದು ಅದನ್ನು ಇಷ್ಟಪಡುತ್ತಿದಂತೆ ಹುಟ್ಟುವ ಪ್ರೀತಿ, ಅದು ವಾಸ್ತವಿಕತೆಗೆ ದೂರವಾಗಿರುವಹಂತಹದ್ದು. ಇನ್ನು 23ರ ನಂತರ ಆಗುವ ಪ್ರೀತಿ ವಾಸ್ತವಿಕತೆಗೆ ಸಮೀಪ ಇರುವ ವಯಸ್ಸಿನಲ್ಲಿ ಆಗುವ ಪ್ರೀತಿ ಅಲ್ಲಿ ಭ್ರಮಾತ್ಮಕ ಹಾಗು ವಾಸ್ತವಿಕತೆಯ ಸಣ್ಣ ಎಳೆಯ ಅಂತರವಿರುತ್ತದೆ. ಆ ಅಂತರ ತಿಳಿಯುವುದು 23ರ ನಂತರ, ಬದುಕಿನ ಹಾಗು ಮನೆಯಲ್ಲಿನ ಜವಾಬ್ದಾರಿ ವ್ಯಕ್ತಿಯನ್ನು ಭ್ರಮಾತ್ಮಕದಿಂದ ವಾಸ್ತವಿಕತೆಗೆ ತಂದು ನಿಲ್ಲಿಸುತ್ತದೆ. ಆನಂತರದ ವಯಸ್ಸಿನಲ್ಲಿ ಪ್ರೀತಿ ಹುಟ್ಟುವ ಪ್ರಮಾಣ ಕಡಿಮೆ ಆದರೆ ಅದು ದೀರ್ಘಕಾಲ ಉಳಿಯುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾದರೆ ಹದಿಹರೆಯದ ಪ್ರೀತಿ ಉಳಿಯುವುದಿಲವಾ ? ಎಂದು ಪ್ರಶ್ನೆ ಕಾಡುವುದು ಸಹಜ. ಹದಿಹರೆಯದ ಪ್ರೀತಿಯು ಉಳಿಯುತ್ತದೆ. ಆದರೆ ಅದು ಆಕರ್ಷಕ ಹಾಗೂ ಬ್ರಹ್ಮ ತ್ಮಕ ಹಂತವನ್ನು ದಾಟಿರಬೇಕು. ಆಗ ಮಾತ್ರ ಅಂತಹ ಪ್ರೀತಿ ಉಳಿಯಲು ಸಾಧ್ಯ.
                 ಪ್ರೀತಿಯಲ್ಲಿ ಮೂಲವಾಗಿ ಬೇಕಾಗಿರುವುದು ನಂಬಿಕೆ .ಅದು ಪ್ರೀತಿಯಲ್ಲಿ ಮಾತ್ರವಲ್ಲ ಎಲ್ಲ ಸಂಬಂಧಗಳಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಅಂಶ, ನಂಬಿಕೆ ಇಲ್ಲದೆ ಯಾವ ಪ್ರೀತಿಯು ಉಳಿಯುವುದಿಲ್ಲ ನಂಬಿಕೆ ಎಲ್ಲಾ ಸಂಬಂಧಗಳ ಜೀವಾಳ. ನಂಬಿಕೆ ಹೊರತಾದ ಸಂಬಂಧ ಒಂದು ರೀತಿ ಯಾಂತ್ರಿಕ ಬದುಕಿನಂತೆ, ಬದುಕು ನಡೆಯುತ್ತದೆ ಆದರೆ ಒಳಗಿನಿಂದ ಅಂದರೆ ಅಂತರಂಗದಿಂದ ಮನುಷ್ಯ ಖುಷಿಯಾಗಿರುವುದು ಇಲ್ಲ ,ಆದರೆ ಬದುಕಿರುತ್ತಾನೆ. ಪ್ರೀತಿ ದೀರ್ಘಕಾಲ ಉಳಿಯಲು ನಂಬಿಕೆ ಒಂದೆ ಸಾಲದು ಪರಸ್ಪರ ಅರ್ಥಮಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಪರಸ್ಪರ ಅರ್ಥಮಾಡಿಕೊಂಡು ನಂಬಿಕೆ ಆಧಾರದ ಮೇಲೆ ಬದುಕಿದರೆ ಸಂಬಂಧಗಳು ಖುಷಿಯನ್ನು ನೆಮ್ಮದಿಯನ್ನು ಸಂತೃಪ್ತಿಯನ್ನು ನೀಡಿ ಬದುಕನ್ನು ಅರ್ಥಪೂರ್ಣಗೊಳಿಸುತ್ತವೆ.

Thursday, November 19, 2020

ಪ್ರೇಮದ ಅನ್ವೇಷಣೆ ಭಾಗ - 25.

ಅವರ ಕುಟುಂಬವನ್ನು ಕಳುಹಿಸಿಕೊಡುವಾಗ ಮೊದಲಬಾರಿ ಮನಸ್ಸಿಗೆ ತುಂಬಾ ಬೆಲೆ ಬಾಳುವುದನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಾವ ವಿಧುವನ್ನು ಬಹಳವಾಗಿ ಕಾಡಿತು. ಜಾನಕಿ ಅಮ್ಮನವರು ಅತ್ತುಬಿಟ್ಟರು ಅಷ್ಟು ಅನನ್ಯವಾಗಿತ್ತು ಅವರ ಸಂಬಂಧ ಅವರನ್ನು ಕಳುಹಿಸಿದ ದಿನ ತುಂಬಾ ದುಃಖದ ದಿನವಾಗಿತ್ತು .ಆದರೂ ವಿಧುವಿಗೆ ಒಂದು ಸಮಾಧಾನಕರ ವಿಷಯ, ಏನೆಂದರೆ ಅದಿತಿಯ ಫೋನ್ ನಂಬರ್ ಸಿಕ್ಕಿದ್ದು ಇಂದು ಸಂಜೆಯಾದರೂ ನಾನು ನನ್ನ ಪ್ರೀತಿಯ ವಿಷಯವನ್ನು ಹೇಳಿಬಿಡಬೇಕು ಎಂದು ನಿರ್ಧರಿಸಿದ ವಿಧು.
                  ಅಂದು ವಿಧು ತನ್ನ ಸ್ನೇಹಿತನಾದ ಸಾಗರ್ ಒಟ್ಟಿಗೆ ಏಂದಿನಂತೆ ಸಂಜೆ ವಾಯು ವಿಹಾರಕ್ಕೆ ಹೋದನು ದಿನ ನಿತ್ಯದ ವಾಯುವಿಹಾರಕ್ಕೆ ಮತ್ತುರಿನಿಂದ ಹೊಸಳ್ಳಿಗೆ ಕಾಲು ಸೇತುವೆ ಮೇಲೆ ಹೋಗಿ ಹೊಸಳ್ಳಿ ದಡವನ್ನು ಮುಟ್ಟಿ ಬರುತ್ತಿದ್ದರು. ಅಂದು ಎಂದಿನಂತೆ ಕಾಲು ಸೇತುವೆ ಮೇಲೆ ಸಣ್ಣದಾಗಿ ಹರಿಯುವ ನೀರಿನ ಮೇಲೆ ನಡೆದು ಹೋಗುವಾಗ ವಿಧುವಿನ ಫೋನ್ ರಿಂಗಣಿಸಿತು.  ಫೋನನ್ನು ತೆಗೆದುಕೊಳ್ಳವ ಸಮಯದಲ್ಲಿ ಕಾಲುಜಾರಿದ ವಿಧು. ಸಾಗರ್ ವಿಧುವಿನ ಕೈಯನ್ನು ಹಿಡಿದ, ಜಾರಿದ ರಭಸಕ್ಕೆ ಫೋನ್ ನೀರಿನ ಅಂತರಾಳವನ್ನು ಸೇರಿತು. ಸಾಗರ್ ತಕ್ಷಣ ನೀರಿಗೆ ಜಿಗಿದ ಫೋನ್ ತರಲೆಂದು. ಆದರೆ ಫೋನ್ ಸಿಗಲಿಲ್ಲ ಅದಾಗಲೇ ನೀರಿನ ಅಂತರಾಳದಲ್ಲಿ ಫೋನ್ ಮುಳುಗಿಹೋಯಿತು. ವಿಧು ಹಾಗೂ ಅದಿತಿಯ ನಡುವೆ ಇದ್ದ ಏಕಮಾತ್ರ ಕೊಂಡಿ ಅಂತಿದ್ದ ಫೋನ್ ನೀರಿಗೆ ಜಾರಿದ ಕೂಡಲೇ ವಿಧುವಿನ ಮನವು ನೀರಿನಲ್ಲಿ ಜಾರಿತು ವಿಧು ಮೌನವಾದ.

   *                   *                 *

ಕೃತಜ್ಞತೆಗಳು

ನನ್ನ ಮೊಟ್ಟ ಮೊದಲ ಕೃತಜ್ಞತೆ ನಿಮಗೆ ಓದುಗರಿಗೆ ಸಲ್ಲುತ್ತದೆ. ಈ ಕಥೆಯು ನಿಮ್ಮಲ್ಲಿ ಆಸಕ್ತಿಯನ್ನು ಕೆರಳಿಸಿತು ಎನ್ನುವುದು ನನಗೆ ತುಂಬಾ ಪ್ರಿಯವಾದ ಸಂಗತಿಯಾಗಿದೆ. ಒಂದು ಕಥೆ ತುಂಬಾ ಅಮೋಘವಾಗಿ ಬರಬೇಕಾದರೆ ಅದರ ಹಿಂದೆ ಹಲವಾರು ಕಾಣದ ಕೈಗಳು ತಮ್ಮ ಕೆಲಸಗಳನ್ನು ಮಾಡಿರುತ್ತವೆ. ಈ ಕಥೆಯನ್ನು ಮೊದಲ ಬಾರಿ ಓದಿದ ಸಾಹಿತ್ಯ ಪ್ರಿಯರಾದ ಪುಟ್ಟಮಾರರಶೆಟ್ಟಿ ಅಣ್ಣನವರು ಕಥೆಯಲ್ಲಿ ಇದ್ದ ಹಲವಾರು ಪುನರಾವರ್ತಿತ ಪದಗಳನ್ನು ತೆಗೆಯಲು ಹೇಳಿ ಅದಕ್ಕೆ ಸ್ಪಷ್ಟ ರೂಪವನ್ನು ಕೊಟ್ಟರು.
                ಇನ್ನು ನನ್ನ ಕಥೆಯನ್ನು ಮೆಚ್ಚಿ ನ್ಯೂಸ್ ಮೈಸೂರ್ ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತಿದ್ದ ಹೊಸದಿಗಂತ ಪತ್ರಿಕೆಯ ಅಂಕಣಕಾರ ಹಾಗೂ ಲೇಖಕರಾದ ಪ್ರವೀಣ್ ಕುಮಾರ್ ಮಾವಿನಕಾಡು ಅಣ್ಣನವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.
               ಅಂತಿಮ ರೂಪದಲ್ಲಿ ಈ ಕಥೆಯನ್ನು ನೀವು ಓದುವಂತೆ ಮಾಡಿದ ಕಥೆಯ ಅಭಿಮಾನಿಗಳಿಗೆ ಅನಂತ ಅನಂತ ಧನ್ಯವಾದಗಳು.

Wednesday, November 18, 2020

ಪ್ರೇಮದ ಅನ್ವೇಷಣೆ ಭಾಗ - 24

ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ. ತಮಾಷೆ ಮಾಡಿದ ಕೂಡಲೇ ಅವರು, ಅದಿತಿ ನನ್ನ ಕೈರುಚಿಯನ್ನು ವಿಧು ನೋಡಲಿ ನಾನು ಇವತ್ತು ಅಡುಗೆಯನ್ನು ಮಾಡುತ್ತೇನೆ ಬಿಡಿ ಎಂದು ಹೇಳಿ ಅಡಿಗೆಯನ್ನು ಮಾಡಿ ಇಟ್ಟಿದ್ದಾಳೆ . ನಸುನಕ್ಕ ವಿಧು ಅದಕ್ಕೆ ಊಟದಲ್ಲಿ ಉಪ್ಪು ಖಾರ ಇಲ್ಲದ ಈ ರಸಂ ಅನ್ನು ಆ ದೇವರೇ ಮೆಚ್ಚಬೇಕು ಎಂದು ತಮಾಷೆ ಮಾಡುತ್ತ ಊಟವನ್ನು ಮಾಡಿದ. ದಿನವು ಹತ್ತಿರದಲ್ಲೇ ಇದ್ದ ಶಿವನ ಆಲಯಕ್ಕೆ ಹೋಗುವ ಅಭ್ಯಾಸವಿದ್ದ ವಿಧು ದೇವಸ್ಥಾನಕ್ಕೆ ಹೋಗಿ ಬರುವ ಸಮಯದಲ್ಲಿ ರೂಮಿನ ಹೊರಭಾಗದಲ್ಲಿ ಇದ್ದ ಅದಿತಿ ನೀವು ಬೆಳಗ್ಗೆ ಎಷ್ಟೊತ್ತಿಗೆ ಎದ್ದು ವ್ಯಾಯಾಮ ಮಾಡಲು ಹೋಗುತ್ತೀರಿ ಎಂದು ಕೇಳಿದಾಗ ನಗು ತಾಳಲಾರದೆ ನಕ್ಕು ನುಡಿದಿದ್ದ ವಿಧು ಹೌದು ದೇವಸ್ಥಾನದಲ್ಲಿ ಜಿಮ್ ಮಾಡುತ್ತೇನೆ ಎಂದು. ಶುಬ್ರ ವಸ್ತ್ರದಲ್ಲಿ ಯಾರುತಾನೇ ವ್ಯಾಯಾಮ ಮಾಡಲು ಹೋಗುತ್ತಾರೆ ಅಷ್ಟು ತಿಳಿಯದೆ ಈ ಹುಡುಗಿಗೆ !  ಮುಗ್ಧ ಪ್ರಶ್ನೆಗಳು ಅವಳ ಮುಗ್ದಮನಸ್ಸಿನ ಸೂಚಕ ವಾಗಿರುವಂತೆ ಇರುತ್ತಿದ್ದವು ಅದಿತಿಯ ಪ್ರಶ್ನೆಗಳು. ಕಲ್ಲಿನಂತಿದ್ದ ವಿಧುವಿನ ಮನಸ್ಸು  ಮಗುವಿನಂತೆ ಮೃದುವಾಗುತ್ತ ಹೋಯಿತು. ಅದಿತಿಯ ಮುಗ್ಧ ಮಾತುಗಳು ಅವಳ ಹತ್ತಿರ ಮಾತನಾಡಲು ತವಕಿಸುತ್ತಿತ್ತು. ಮೊದಲ ಬಾರಿ ಬೇರೆ ಒಂದು ಜೀವಕ್ಕಾಗಿ ವಿಧುವಿನ ಮನಸ್ಸು ಚಡಪಡಿಸುತ್ತಿತ್ತು. ಅದಿತಿಯನ್ನು ಬೆಳಿಗ್ಗೆ ಸಂಜೆ ನೋಡಲಿಲ್ಲ ವೆಂದರೆ ಏನೋ ಕಳೆದುಕೊಂಡ ಅನುಭವ ಆದಂತೆಯೇ ! ವಿಧು ತನ್ನ ಜೀವನದಲ್ಲಿ ಬೇರೆ ಹುಡುಗಿ ಹತ್ತಿರ ಮುಕ್ತವಾಗಿ ಮಾತನಾಡಿದನೆಂದರೆ ಅದು ಅದಿತಿಯ ಹತ್ತಿರ ಮಾತ್ರ. ಆದಿತ್ಯ ಹಂತಹಂತವಾಗಿ ಸುಧಾರಿಸುತ್ತಾ ಗುಣವಾಗುತ್ತ ಹೋದ.
            ಅದಿತಿಯ ಪ್ರೀತಿಯಲ್ಲಿ ಬಿದ್ದ ವಿಧುವಿಗೆ ದಿನಗಳು ಕಳೆದಿದ್ದು ಅವನ ಅರಿವಿಗೆ ಬರಲಿಲ್ಲ . ಆದಿತ್ಯ ಸುಧಾರಿಸುತ್ತಿದ್ದಂತೆ ವೈದ್ಯರು ಅವನಿಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದರು. ಅದಿತಿ ಕುಟುಂಬದವರು ಇನ್ನು ಮೂರು ದಿನಗಳಲ್ಲಿ ಅವರು ಕರ್ನಾಟಕವನ್ನು ಬಿಟ್ಟು ಹೊರಡುವವರಲ್ಲಿದ್ದರು. ಅದು ವಿಧುವಿಗೆ ತಿಳಿದ ಕೂಡಲೇ ಹೇಗಾದರೂ ಧೈರ್ಯಮಾಡಿ ತನ್ನ ಪ್ರೀತಿಯನ್ನು ಅದಿತಿಯಲ್ಲಿ ಹೇಳಿಬಿಡಬೇಕು ಎಂದು ನಿಶ್ಚಯಿಸಿ ಅದಿತಿಯ ಹತ್ತಿರ ಹೋದ. ಆದರೆ ಅವನಿಗೆ ಧೈರ್ಯ ಸಾಲದೆ ಹೋಯಿತು. ಆದರೂ ಧೈರ್ಯ ಮಾಡಿ ಇನ್ನೇನು ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಅದಿತಿಗೆ ಫೋನ್ ಬಂತು, ಕರೆಯನ್ನು ಸ್ವೀಕಾರ ಮಾಡಿ ನಾನು ನಿಮಗೆ ಆಮೇಲೆ ಸಿಗುತ್ತೇನೆ ಎಂದು ಹೇಳಿ ಹೋದಳು. ಓಹೋ ನನಗೆ ಧೈರ್ಯವಾಗಿ ನೇರವಾಗಿ ಹೇಳಲು ಆಗುತ್ತಿಲ್ಲವಲ್ಲ ಸರಿ ಆಗದಿದ್ದರೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ಅದಿತಿ ಜಾನಕಿ ಅಮ್ಮನವರ ಜೊತೆ  ಅಡುಗೆ ಮಾಡಿ ತರಲು ಹೋಗಿರುವುದು ತಿಳಿಯಿತು. ಹೇಗಿದ್ದರೂ ಜಾನಕಿ ಅಮ್ಮನವರಿಗೆ ವಿಧು ಅದಿತಿ ಮಾತನಾಡುವುದು ತಿಳಿದ ವಿಚಾರವೇ ಎಂದು ತಿಳಿದಿದ್ದ ವಿಧು ಜಾನಕಿ ಅಮ್ಮನವರಿಗೆ ಫೋನ್ ಮಾಡಿ ಅದಿತಿಗೆ ಕೊಡಲು ಹೇಳಿದರೆ ಕೊಡುತ್ತಾರೆ ಎಂದು ಜಾನಕಿ ಅಮ್ಮನವರಿಗೆ ಫೋನ್ ಮಾಡಿದ ಆ ಕಡೆಯಿಂದ ಇಂಗ್ಲಿಷ್ನಲ್ಲಿ ಮಾತು ನಾನು ಅದಿತಿ ಮಾತನಾಡುತ್ತಿರುವುದು ಎಂದು ಓಹೋ ಅದಿತಿ ಫೋನ್ ತೆಗೆದುಕೊಂಡಿರುವುದರಿಂದ ನೇರವಾಗಿ ಹೇಳಿ ಬಿಡಬೇಕೆಂದು, ಅದಿತಿಯವರೇ ಎಂದ ವಿಧು ಅದಿತಿ ಏನು ಹೇಳಿ ಎಂದಳು ನಾನು ನಿಮಗೆ ಒಂದು ಮಾತನ್ನು ಹೇಳಬೇಕೆಂದಿದ್ದನೇ ಎಂದ ಇನ್ನೇನು ಧೈರ್ಯವಾಗಿ ಹೇಳಬೇಕು ಅನ್ನುವಷ್ಟರಲ್ಲಿ ಫೋನ್ ನಿಶಬ್ದವಾಯಿತು.
                   ಹಲೋ ಹಲೋ ಎಂದು ವಿಧು,  ಆ ಕಡೆಯಿಂದ ಯಾರು ಮಾತನಾಡದಂತಾಯಿತು. ಕೆಲವು ಸಮಯದ ನಂತರ ಜಾನಕಿ ಅಮ್ಮನವರು ಹಾಗೂ ಅದಿತಿ ಅಡುಗೆಯನ್ನು ತಯಾರಿಸಿಕೊಂಡು ಬಂದರು. ಬಂದವರೇ ಅದಿತಿ ವಿಧುವಿಗೆ ಊಟವನ್ನು ಕೊಟ್ಟು ಕೇಳಿದಳು. ನೀವು ಫೋನಿನಲ್ಲಿ ಏನೋ ಹೇಳಲು ಬಂದಿರಿ. ಆದರೆ ಫೋನಿನಲ್ಲಿ ಬ್ಯಾಟರಿ ಕಡಿಮೆ ಇದ್ದ ಕಾರಣ ಫೋನ್ ಸ್ವಿಚ್ ಆಫ್ ಆಯಿತು, ಏನು ಹೇಳಿ ಎಂದಳು. ಅದಿತಿಯ ಪಕ್ಕ ಜಾನಕಿ ಅಮ್ಮನವರು ಇದ್ದಿದ್ದರಿಂದ ವಿಧು ಏನು ಇಲ್ಲ ಸ್ವಲ್ಪ ಊಟವನ್ನು ಕಡಿಮೆ ತರಲು ಹೇಳೋಣವೆಂದು ಫೋನ್ ಮಾಡಿದೆ ಎಂದು ಸುಮ್ಮನಾದ. ಅವರು ಹೋಗುವ ಮೂರು ದಿನಗಳ ಒಳಗಾಗಿ ಹೇಳಲು ವಿಧುವಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಅದಿತಿ ಹಾಗೂ ಅವರ ಕುಟುಂಬ ಹೋಗುವ ದಿನ ಬಂದೇ ಬಿಟ್ಟಿತು ಅವರು ಹೋಗುವವರಿದ್ದರು. ಜಾನಕಿ ಅಮ್ಮನವರು ನಾನು ಇನ್ನು ಹೇಗೆ ಅವರನ್ನು ನೋಡಲಿ ಮಾತನಾಡಿಸಲಿ ಇಲ್ಲಿ ಅವರನ್ನು ಮನೆಯ ಮಕ್ಕಳಂತೆ ನೋಡಿಕೊಂಡಿದ್ದೇನೆ. ಇನ್ನು ಹೇಗೆ ಎಂಬ ಚಿಂತೆಯನ್ನು ಹೊರಹಾಕಿದರು. ಈಗ ಫೋನಿನಲ್ಲೇ ನೋಡಿ ನೇರವಾಗಿ ಮಾತನಾಡಬಹುದು ಅಂತಹ ಅವಕಾಶವಿದೆ ಎಂದು ಹೇಳಿದ ವಿಧು. ಅದಿತಿಯನ್ನು ಕರೆದು ವಿಧುವಿನ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅದಿತಿ ಒಪ್ಪಿದಳು. ಆಕೆಯ ಫೋನ್ ನಂಬರನ್ನು ವಿಧುವಿಗೆ ನೀಡಿದಳು. ಮರುದಿನ ಬೆಳಗಿನ ಜಾವ ಐದು ಮೂವತ್ತರ ಸಮಯದಲ್ಲಿ ಅವರಿಗೆ ಹೋಗಲು ವಾಹನದ ವ್ಯವಸ್ಥೆ ಮಾಡಲಾಯಿತು. ಅದಿತಿಯನ್ನು ಅವರ ಕುಟುಂಬವನ್ನು ಕಳುಹಿಸಿಕೊಡುವಾಗ.......

Tuesday, November 17, 2020

ಪ್ರೇಮದ ಅನ್ವೇಷಣೆ ಭಾಗ - 23


ನನ್ನ ಹೆಸರು ಅದಿತಿ ಎಂದು ಪರಿಚಯ  ಮಾಡಿಕೊಂಡಳು. ವಿಧುವಿಗೆ ಅವಳನ್ನು ನೋಡುತ್ತಿದ್ದರೆ ಮೊದಲೇ ಅದಿತಿ ಹತ್ತಿರ ಮಾತನಾಡಿಸಿದ್ದೇನೆ ಎನ್ನುವಂತೆ ಭಾಸವಾಗುತ್ತಿತ್ತು . ಅದಿತಿಯ ಕಣ್ಣನ್ನು ನೋಡುತ್ತಿದ್ದರೆ ಯಾವುದೋ ಜನುಮದ ನಂತು ಇರುವಂತೆ ಅನಿಸುತ್ತಿತ್ತು. ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಪ್ರಶಾಂತತೆ ಭಾಷೆಯ ಸಂವಹನ ಸಮಸ್ಯೆ ಇದ್ದರೂ ಕೂಡ ಏನೋ ಒಂದು ರೀತಿಯ ಆತ್ಮೀಯತೆಯ ಭಾವ. ಭಾಷೆಯ ಸಂವಹನದ ಸಮಸ್ಯೆ ಇದ್ದಿದ್ದರಿಂದ ಯಾವುದೇ ವಿಚಾರವಾಗಿ ವಿಧವನ್ನು ಕೇಳುವುದು ಅನಿವಾರ್ಯವಾಯಿತು. ಆದಿತ್ಯನ ತಂದೆ ತಾಯಿಯಾದ ಗಾಯತ್ರಿಯವರಿಗೆ ಅಲ್ಪಸ್ವಲ್ಪ ಹಿಂದಿ ಇಂಗ್ಲಿಷ್ ಬರುತ್ತಿದ್ದರಿಂದ ಸಂವಹನದ ಸಮಸ್ಯೆ ಅದಿತಿ ಕುಟುಂಬದವರಿಗೆ ಅಷ್ಟಾಗಿ ಕಾಡಲಿಲ್ಲ. ಆದಿತ್ಯನ ಕುಟುಂಬ ಏನನ್ನಾದರೂ ಕೇಳುವುದಿದ್ದರೆ ವಿಧುವನ್ನು ಕೇಳಬೇಕಾಗಿತ್ತು. ಸ್ಥಳೀಯರಾದ ಜಾನಕಿ ಅಮ್ಮನವರು ಹಾಗೂ ವಿಧುವಿನ ಸ್ನೇಹಿತನಾದ ಸಾಗರ್ ತಮ್ಮ ಕೆಲಸ ಮುಗಿದ ಮೇಲೆ ಸಂಜೆಯಾಗುತ್ತಲೇ ಮನೆಗೆ ಹೋಗುತ್ತಿದ್ದರು . ಜಾನಕಿ ಅಮ್ಮನವರಿಗೆ ಕನ್ನಡ ಬಿಟ್ಟರೆ ತಮಿಳು ಅಲ್ಪಸ್ವಲ್ಪ ಬರುತ್ತಿತ್ತು ಉಳಿದಂತೆ ಅವರಿಗೆ ಬೇರೆ ಭಾಷೆ ಬರುತ್ತಿರಲಿಲ್ಲ ಹಾಗಾಗಿ ವಿಧು ಇವರಿಬ್ಬರ ಸಂಭಾಷಣೆಯನ್ನು ಅನುವಾದ ಮಾಡಿ ಅವರಿಗೆ ಅವರ ಸಂಭಾಷಣೆಯನ್ನು ಇವರಿಗೆ ಅನುವಾದವನ್ನು ಮಾಡಬೇಕಾಗಿತ್ತು. ಹುಡುಗಿಯರೊಂದಿಗೆ ಮೊದಲಿನಿಂದಲೂ ಅಂತರ ಕಾಯ್ದುಕೊಂಡ ಬಂದ ವಿಧುವಿಗೆ ಹುಡುಗಿಯರ ಹತ್ತಿರ ಮಾತನಾಡುವುದಕ್ಕೂ ಸ್ವಲ್ಪ ಹಿಂಜರಿಕೆ, ಆದರೆ ಆದಿತ್ಯನ ತಂಗಿ ಅದಿತಿ ದಿಟ್ಟತನದ ಹುಡುಗಿ ಏನೇ ಹೇಳುವುದಿದ್ದರೆ ನೇರವಾಗಿ ಹೇಳುವ ಹುಡುಗಿ ಮುಗ್ಧ ಮನಸ್ಸಿನ ಹುಡುಗಿ ಅದಿತಿ ಅವಳ ಕಮಲದ ಕಣ್ಣುಗಳು ವಿಧುವನ್ನು ಸೆಳೆಯಲು ತುಂಬ ದಿನ ಬೇಕಾಗಿರಲಿಲ್ಲ ಕಾಡಿಗೆಯನ್ನು ಹಚ್ಚುತ್ತಿದ್ದ ಕಣ್ಣುಗಳು ಮುಕ್ತ ಮನಸ್ಸಿನ ಮಾತುಗಳು ನೇರನುಡಿಯ ಮಾತುಗಳು. ಅದಿತಿಯ ಕಣ್ಣೋಟ ವಿಧು ಅದಿತಿಯನ್ನು ಪ್ರೀತಿಸುವಂತೆ ಮಾಡಿತ್ತು. ವಿಧು ತನ್ನ ಅರಿವಿಲ್ಲದಂತೆ ಅದಿತಿಯನ್ನು ಪ್ರೀತಿಸಲು ತೊಡಗಿದ್ದನು. ದಿನ ಬೆಳಿಗ್ಗೆ ಎದ್ದ ಕೂಡಲೇ ಅದಿತಿ ಮುಖವನ್ನು ನೋಡುವುದು ವಿಧುವಿಗೆ ಸಂತೋಷವನ್ನು ತರಿಸುತ್ತಿತ್ತು. ಆಕೆಯ ಮುಗ್ಧ ಮುಖ ಆಕೆಯ ಬಗ್ಗೆ ಕಾಳಜಿ ಬರುವಂತೆ ಮಾಡಿತ್ತು .ಅವಳ ನಗು ಚಂದ್ರನು ಭೂಮಿಗೆ ಬೆಳದಿಂಗಳು ಸೂಸುವಂತೆ ಬೆಳದಿಂಗಳ ಕಿರಣಗಳಿಗೆ ಭೂಮಿ ತಂಪೆರೆಯುವ ರೀತಿ ಮನಸ್ಸಿಗೆ ಮುದವನ್ನು ನೀಡುತ್ತಿತ್ತು. 
                    ಬದುಕಿನಲ್ಲಿ ಮೊದಲ ಬಾರಿ ಪ್ರೀತಿಯ ಸೆಲೆಯನ್ನು ಕಂಡ ವಿಧು ಪ್ರೀತಿಯಲ್ಲಿ ಬಿದ್ದ ನಂತರ ತನ್ನನ್ನು ತಾನೇ ಮರೆತವನಂತೆ ಇದ್ದನು. ಇದನ್ನೆಲ್ಲ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧು ಹಾಗೂ ಅದಿತಿಯ ಮೇಲೆ ಅನುಮಾನ ಪಡಲು ಆರಂಭಿಸಿದರು. ಇಬ್ಬರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧುವನ್ನು ನೇರವಾಗಿ ಕೇಳಿಯೇ ಬಿಟ್ಟರು. ನಿನ್ನನ್ನು ನೋಡಿದರೆ ಯಾಕೋ ಅದಿತಿಯನ್ನು ಇಷ್ಟಪಟ್ಟಂತೆ ಕಾಣುತ್ತಿದೆ ಎಂದರು . ಅದಕ್ಕೆ ಹಾಗೇನು ಇಲ್ಲ ಪರಸ್ಪರ ಚೆನ್ನಾಗಿ ಮಾತನಾಡಿದ ಮಾತ್ರಕ್ಕೆ ಹೇಗೆ ಪ್ರೀತಿಸಿದಂತೆ ಆಗುತ್ತದೆ ಎಂದು ಜಾನಕಿ ಅಮ್ಮನವರನ್ನು ಕೇಳಿದ. ಅಷ್ಟಕ್ಕೆ ಸುಮ್ಮನಾಗದ ಜಾನಕಿಮ್ಮನವರು ಅದಿತಿಯನ್ನು ನೀನು ಯಾರನ್ನಾದರೂ ಮದುವೆಯಾಗಬೇಕೆಂದು ನಿಶ್ಚಯ ಮಾಡಿದ್ದೀಯಾ ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಅದಿತಿ ಇಲ್ಲ ನಾನು ಯಾರನ್ನು ಮದುವೆಯಾಗಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿದಳು. ವಿಧು ಅದಿತಿ ಮಾತನಾಡಿದರೆ ಸಾಕು ಜಾನಕಿ ಅಮ್ಮನವರಿಗೆ ಅನುಮಾನದ ಭೂತ ಬಂದುಬಿಡುವುದು. ದಿನವೂ ಮನೆಯಿಂದ ಅಡಿಗೆಯನ್ನು ಮಾಡಿ ತರುತ್ತಿದ್ದ ಜಾನಕಿ ಅಮ್ಮನವರು ಅದಿತಿ ಕುಟುಂಬಕ್ಕೂ ಅಡಿಗೆಯನ್ನು ಮಾಡಿ ತರುತ್ತಿದ್ದರು. ಆದರೆ ಅಂದು ಅಡಿಗೆಯಲ್ಲಿ ಏನು ವ್ಯತ್ಯಾಸ ಕಂಡಂತೆ ಆಯ್ತು ವಿಧು ಜಾನಕಿ ಅಮ್ಮನವರಿಗೆ ಕೇಳಿದ ಅಡುಗೆ ರುಚಿಯಲ್ಲಿ ವ್ಯತ್ಯಾಸವಿದೆಯಲ್ಲ ಎಂದ ಅದಕ್ಕೆ ಅವರು ನಿನ್ನ ಹುಡುಗಿ ಮಾಡಿದ್ದು ಎಂದು ಹೇಳಿದರು. ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ ಯಾರವಳು......

Monday, November 16, 2020

ಪ್ರೇಮದ ಅನ್ವೇಷಣೆ ಭಾಗ - 22

ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ ವೈದ್ಯರು ಅವನ ಕಿವಿಯಲ್ಲಿ ತುಂಬಾ ರಕ್ತ ಹೋಗಿದೆ ಸ್ವಲ್ಪದರಲ್ಲಿ ಡ್ಯಾಮೇಜ್ ಆಗುವುದು ತಪ್ಪಿದೆ. ತಲೆಬುರುಡೆಯಲ್ಲಿ ಏರ್ಕ್ರಾಕ್ ಆಗಿದೆ ಇವನು ಬದುಕಿ ಉಳಿದದ್ದೇ ಹೆಚ್ಚು ಅದು ಖಂಡಿತವಾಗಿ ಬದುಕಿ ಉಳಿಯುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಪ್ರಜ್ಞೆ ಬರುವತನಕ ಏನನ್ನು ಹೇಳಲು ಬರುವುದಿಲ್ಲ ಎಂದರು. ಐಸಿಯು ಇಂದ ಹೊರಗೆ ಬಂದವನೇ ಆದಿತ್ಯನ ಸ್ನೇಹಿತರಾದ ಚಿರಾಗ್ ಮತ್ತು ಚಿನ್ಮಯ್ ಅನ್ನು ಕರೆದು ಮನೆಗೆ ವಿಷಯವನ್ನು ತಿಳಿಸಿದ್ದೀರಾ ಎಂದು ಕೇಳಿದ ಅದಕ್ಕವರು ತಿಳಿಸಿದ್ದೇವೆ ಆದಿತ್ಯನ ತಂದೆ-ತಾಯಿ ಬರುತ್ತಾರೆ ಎಂದರು. ಮತ್ತೆ ವೈದ್ಯರ ಬಳಿ ಹೋದ ವಿಧು ಎಷ್ಟೇ ಖರ್ಚು ಆದರೂ ಪರವಾಗಿಲ್ಲ ಅತ್ಯುತ್ತಮ ಚಿಕಿತ್ಸೆಯನ್ನು ನೀಡಿ ಆದಿತ್ಯನನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿ, ಅವರ ತಂದೆ ತಾಯಿ ಸದ್ಯದಲ್ಲಿ ಬರುತ್ತಾರೆ ಒಳ್ಳೆಯ ಔಷಧಿ ಗಳನ್ನು ಕೊಡಿ ಎಂದು ಹೇಳಿ ಹೊರಬರುವಾಗ ವೈದ್ಯರು ನಿಮ್ಮ ಸ್ನೇಹಿತ ಮಧ್ಯಪಾನ ಮಾಡಿದ್ದಾನೆ ಎಂದು ಹೇಳಿದರು. ಓಹೋ ಆದಿತ್ಯ ಹಾಗೂ ಆತನ ಸ್ನೇಹಿತರು ಹಿಂದಿನ ರಾತ್ರಿ ಮಧ್ಯಪಾನವನ್ನು ಮಾಡಿದ್ದಾರೆ ಎಂದು ಅರಿವಿಗೆ ಬರುತ್ತಿದ್ದಂತೆ ವೈದ್ಯರಿಗೆ ವಿಧು ಇವನ್ನೆಲ್ಲ ಅವನ ತಂದೆ ತಾಯಿಗೆ ಹೇಳಬೇಡಿ ಅವರು ನೊಂದುಕೊಳ್ಳುತ್ತಾರೆ ಅವನ ಆರೋಗ್ಯದ ಬಗ್ಗೆ ಮಾತ್ರ ಗಮನ ಕೊಡಿ ಎಂದು ಹೇಳಿ ಬಂದನು. ಚಿರಾಗ್ ಚಿನ್ಮಯ್ ಅವರಿಗೆ ಹಣದ ಅವಶ್ಯಕತೆ ಇದ್ದರೆ ಕೇಳಿ ಎಂದು ಹೇಳಿ ಆಸ್ಪತ್ರೆಯಿಂದ ಹೊರಟ. ಮಧ್ಯಾಹ್ನದ ಹೊತ್ತಿಗೆ ಫೋನ್ ಕರೆ ಬಂದಿತ್ತು ಆದಿತ್ಯನ ತಂದೆ-ತಾಯಿ ಬಂದಿದ್ದಾರೆಂದು ನೀವು ಬರಬೇಕು ಎಂದು. ವಿಧು ಆಸ್ಪತ್ರೆ ತಲುಪಿದಾಗ ಅವರ ತಂದೆ-ತಾಯಿ ಹಾಗು ತಂಗಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ಚಿನ್ಮಯ್ ಆದಿತ್ಯನ ತಂದೆ-ತಾಯಿ ಹಾಗೂ ಅವರ ತಂಗಿಯನ್ನು ಪರಿಚಯ ಮಾಡಿಕೊಟ್ಟ. 
                     ಆದಿತ್ಯ ಅವರಿಗೆ ಒಬ್ಬನೇ ಮಗ ಅವನಿಗೆ ಊರೂರು ಸುತ್ತುವ ಹವ್ಯಾಸ ಅದೇ ರೀತಿ ಊರೂರು ಸುತ್ತುತ್ತ ಬಂದವನು ಸಂಸ್ಕೃತ ಗ್ರಾಮಕ್ಕೆ ಬಂದು ಸಂಸ್ಕೃತ ಕಲಿಯುವ ಇಚ್ಛೆಯಾಗಿ ಉಳಿದಿದ್ದ. ಆದಿತ್ಯನ ತಂದೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ತಾಯಿ ಆಂಧ್ರಪ್ರದೇಶದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು ಬೇರೆ ರಾಜ್ಯದಿಂದ ಬಂದವರಾಗಿದ್ದರಿಂದ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿತ್ತು .ಅವರ ಜೊತೆ ಮಾತನಾಡಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ಮೂಡಿಸಲಾಯಿತು . ಆದಿತ್ಯ ಓಡಿಸಿಕೊಂಡು ಬಂದಿದ್ದ ಅವನ ಸ್ನೇಹಿತನಾದ ಚಿನ್ಮಯ್ ಅವನ ಬೈಕನ್ನು ಪೊಲೀಸರು ತೆಗೆದುಕೊಂಡುಹೋಗಿ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದರು.  ಅದನ್ನು ಬಿಡಿಸಿಕೊಡುವಂತೆ ಕೇಳಿಕೊಂಡರು. ವಿಧು ತನ್ನ ರಾಜಕೀಯ ಪ್ರಭಾವ ಬಳಸಿ ಆದಿತ್ಯ ತಾಯಿಯ ಒಪ್ಪಿಗೆ ಮೇಲೆ ಬೈಕನ್ನು ಬಿಡಿಸಿಕೊಂಡು ಅವರ ಸ್ನೇಹಿತರಿಗೆ ವಾಪಸ್ ಸಿಗುವಂತೆ ಮಾಡಿದನು. ಅದನ್ನು ಅವರಿಗೆ ಕೊಡಿಸಿದ ಮೇಲೆ ರಿಪೇರಿ ಮಾಡಿಸಿಕೊಂಡು ಮತ್ತೆ ಆಂಧ್ರಕ್ಕೆ ತಮ್ಮ ಬೈಕನ್ನು ತೆಗೆದುಕೊಂಡು ಹೋದರು. ಆದಿತ್ಯ ಕಾಲ ಕ್ರಮೇಣ ಹಂತಹಂತವಾಗಿ ಸುಧಾರಿಸುತ್ತ ಬಂದನು. ಆದಿತ್ಯನಿಗೆ ಚಿಕಿತ್ಸೆ ಮುಂದುವರಿಸುವ ಸಲುವಾಗಿ ಮತ್ತೂರಿನಲ್ಲಿ ಉಳಿಯುವ ಪರಿಸ್ಥಿತಿ ಎದುರಾಯಿತು. ಆದಿತ್ಯನ ಕುಟುಂಬ ಮತ್ತೂರಿಗೆ ಬಂದು ಭವನದಲ್ಲಿ ಉಳಿಯುವಂತಾಯಿತು. ಕನ್ನಡ ಭಾಷೆಯ ಅರಿವಿಲ್ಲದ ತಂದೆ-ತಾಯಿ ಹಾಗೂ ಮಗಳು. ವಿಧು ಹಾಗೂ ಅವರ ನಡುವೆ ಇದ್ದ ಏಕೈಕ ಭಾಷೆ ಇಂಗ್ಲಿಷ್, ಅವರ ಸಂವಹನಕ್ಕೆ ಅಡ್ಡಿಯಾಗದ ಭಾಷೆಯಾಯಿತು. ಅವರ ಮಗಳು ಇಂಗ್ಲಿಷ್ ಹಾಗು ಹಿಂದಿಯನ್ನು ಸಲೀಸಾಗಿ ಮಾತನಾಡುತ್ತಿದ್ದಳು. ಬರಿ ಮುಖತಹ ಪರಿಚಯವಿದ್ದ ವಿಧು ಅಷ್ಟಗಿ ಅವರ ಬಗ್ಗೆ ಕೇಳಲು ಹೋಗಲಿಲ್ಲ. ಮಾತು ಮುಂದುವರಿಸಿದ ಆದಿತ್ಯನ ತಂಗಿ ನನ್ನ ತಂದೆ ಹೆಸರು ಜಗನ್ ತಾಯಿಯ ಹೆಸರು ಗಾಯತ್ರಿ ಹಾಗೂ ನನ್ನ ಹೆಸರು.......

Saturday, November 14, 2020

ಪ್ರೇಮದ ಅನ್ವೇಷಣೆ ಭಾಗ - 21


 
ಆ ಭಾಷೆಯೇ ಸಂಕೇತಿ, ಸಂಕೇತಿ ಭಾಷೆಗೆ ಲಿಪಿಯಿಲ್ಲ ಆದರೆ ಮತ್ತೂರಿನ ಅಗ್ರಹಾರದಲ್ಲಿ ಆಡುಭಾಷೆಯಾಗಿ ಪ್ರಚಲಿತದಲ್ಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ವಿಶಿಷ್ಟ ಊರು ಇನ್ನೂ ತನ್ನ ಹಳೆಯ ಆಚಾರ-ವಿಚಾರ ಸಂಪ್ರದಾಯಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಬರುತ್ತಿರುವ ಗ್ರಾಮ. ಅಲ್ಲಿನ ಸ್ಥಳೀಯ ವಿಚಾರಗಳನ್ನು ಸ್ಥಳೀಯ ಸ್ನೇಹಿತನಾದ ಸಾಗರ್ ಇಂದ ತಿಳಿದುಕೊಂಡು ತನ್ನ ರೂಮಿನ ಕಡೆ ಹೆಜ್ಜೆ ಹಾಕಿದ. ಅಂದು ಜಾನಕಿ ಅಮ್ಮನವರು ವಿಧುವಿಗೆ ಮಾತ್ರ ಊಟವನ್ನು ತಂದಿದ್ದರು. ಆದಿತ್ಯ ಹಾಗೂ ಅವರ ಸ್ನೇಹಿತರು ಇಂದು ಹೊರಗಡೆ ಊಟವನ್ನು ಮಾಡುತ್ತಾರೆ .ನೀನು ಊಟವನ್ನು ಮಾಡು ಎಂದು ಹೇಳಿ ಹೋದರು. ಸರಿ ಎಂದು ವಿಧು ತನ್ನ ಊಟವನ್ನು ಮುಗಿಸಿ ಮಲಗಿದ. 
                 ಅಂದು ರಾತ್ರಿ ಸರಿಯಾಗಿ 2:45 ಸಮಯದಲ್ಲಿ ಯಾರೋ ಬಾಗಿಲು ಬಡಿದಂತಾಯಿತು ಯಾರು ಎಂದರು ಉತ್ತರವಿಲ್ಲ ಸರಿ ನೋಡೇಬಿಡೋಣವೆಂದು ಎದ್ದುಹೋಗಿ ಬಾಗಿಲು ತೆಗೆದ. ಚಿನ್ಮಯಿ ಬಾಗಿಲ ಬಳಿ ನಿಂತಿದ್ದ ಯಾಕೆ ಈ ಸಮಯದಲ್ಲಿ ಬಾಗಿಲು ಬಡಿದದ್ದು ಎಂದು ಕೇಳಿದ ವಿಧು. ಚಿನ್ಮಯಿ ನಿನಗೆ ಒಂದು ವಿಷಯವನ್ನು ಹೇಳಬೇಕು ಮನಸ್ಸನ್ನು ಗಟ್ಟಿ ಮಾಡಿಕೋ ಎಂದ ವಿಧು ಆಯ್ತು ಹೇಳಿ ಎಂದಾಗ ಚಿನ್ಮಯ್ ಆದಿತ್ಯನಿಗೆ ಅಪಘಾತವಾಗಿದೆ ಇವಾಗ ಆಸ್ಪತ್ರೆಯಲ್ಲಿದ್ದಾನೆ ಎಂದಾಗ ವಿಧುವಿಗೆ ದಿಗ್ಭ್ರಮೆಯಾಯಿತು. 10:00 ಗಂಟೆಯ ಸಮಯದಲ್ಲಿ ಮೂರು ಜನರು ಮಾತನಾಡುತ್ತಿದ್ದ ಶಬ್ದ ಕೇಳಿಸಿತು. ಇವಾಗ ನೋಡಿದರೆ ಹೀಗೆ ಹೇಳುತ್ತಿದ್ದಾನಲ್ಲ ಎಂದೆನಿಸಿತು. ವಿಧು ಯಾವಾಗ ಎಲ್ಲಿ ಆಗಿದ್ದು ಎಂದ. ಅದಕ್ಕೆ ಚಿನ್ಮಯಿ 10.30 ರ ಸಮಯದಲ್ಲಿ ಆಗಿದೆ ಇವಾಗ ಏನು ಸಮಸ್ಯೆ ಇಲ್ಲ ಎಂದ. ವಿಧು ತಕ್ಷಣ ಆಸ್ಪತ್ರೆಗೆ ಹೊರಡಲು ಅನುವಾದ. ಆದರೆ ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ ಈಗ ಅವನು ಚೆನ್ನಾಗಿದ್ದಾನೆ. ನೀವು ಬೆಳಿಗ್ಗೆ ಬಂದು ನೋಡಬಹುದು ಎಂದು ಹೇಳಿದ. ಆಯ್ತು ಸರಿ ಎಂದು ಮತ್ತೆ ಹೋಗಿ ಮಲಗಲು ಹೋದರೆ ವಿಧುವಿಗೆ ನಿದ್ರೆ ಬರುತ್ತಿಲ್ಲ. ಹಲವಾರು ಪ್ರಶ್ನೆಗಳು ಮನದಲ್ಲಿ ಸುಳಿದವು.
                  ಅಪಘಾತ ಹೇಗಾಯಿತು ? ಏಕಾಯಿತು ? ಮೂರೂ ಜನರು ಒಟ್ಟಿಗೆ ಇದ್ದರಲ್ಲ ? ಅಪಘಾತವಾದಾಗ ಇವರುಗಳು ಜೊತೆಗೆ ಇರಲಿಲ್ಲವೇ ? ಅಥವಾ ಅಪಘಾತವಾದ ಕೂಡಲೇ ಅವನನ್ನು ಬಿಟ್ಟು ಬಂದರ ? ಒಬ್ಬನೇ ಹೋಗಿ ಹೇಗೆ ಅಪಘಾತಕ್ಕೀಡಾದ ? ಆದಿತ್ಯನ ಸ್ನೇಹಿತರ ನಡೆಯನ್ನು ನೋಡಿದರೆ ಇವರ ಮೇಲೆ ಅನುಮಾನ ಬರುವಂತೆ ಮಾತನಾಡುತ್ತಿದ್ದಾನೆ ? ಇವಾಗಲೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದರೂ ಆದಿತ್ಯನ ಆತ್ಮೀಯ ಸ್ನೇಹಿತರು ಅವನೊಟ್ಟಿಗೆ ಇದ್ದಾರೆ. ಈವಾಗ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ ನೋಡೋಣ ಬೆಳಕು ಹರಿಯಲಿ ಎಂದುಕೊಳ್ಳುವಷ್ಟರಲ್ಲಿ ಸೂರ್ಯ ಪೂರ್ವ ದಿಕ್ಕಿನಿಂದ ತನ್ನ ಕರ್ತವ್ಯವನ್ನು ಆರಂಭಿಸಿದ್ದ. ಸ್ಥಳೀಯರಿಂದ ಅವನಿಗೆ ಅಪಘಾತವಾದ ಸ್ಥಳದ ಮಾಹಿತಿ ಪಡೆದು ಹೋಗಿ ನೋಡಿದರೆ, ವಿಧುವಿನ ಅಂದಾಜು ಮೀರಿತ್ತು. ಅವನಿಗೆ ಅಪಘಾತವಾದ ರೀತಿ ವಾತಾವರಣವನ್ನು ಕಲುಷಿತಗೊಳಿಸಿತ್ತು. ರಸ್ತೆಯ ಮೇಲೆ ರಕ್ತ ನೀರಿನಂತೆ ಚೆಲ್ಲಿತ್ತು. ಓಹೋ ಇದು ಸಣ್ಣ ಅಪಘಾತವಲ್ಲ ಇದೊಂದು ದೊಡ್ಡ ಅಪಘಾತ ಎಂಬ ಅರಿವೂ ಆಯಿತು. ವಿಧು ಮತ್ತೆ ತಡಮಾಡಲಿಲ್ಲ ಅಲ್ಲಿಂದ ಸೀದಾ ಆಸ್ಪತ್ರೆಗೆ ಹೋದ ಅಲ್ಲಿ ಆದಿತ್ಯ ಸ್ನೇಹಿತರಿದ್ದರು ಅವರನ್ನು ಕೇಳಿದ ಆದಿತ್ಯ ಎಲ್ಲಿ ಎಂದು. ಐಸಿಯು ಅಲ್ಲಿದ್ದಾನೆ ಎಂದರು. ಇದೇನಪ್ಪಾ ಇದು, ಇವರು ಬೆಳಿಗ್ಗೆ ನೋಡಿದರೆ ಚೆನ್ನಾಗಿದ್ದಾನೆ ಎಂದರು ಈಗ ನೋಡಿದರೆ ಐಸಿಯುನಲ್ಲಿ ಇದ್ದಾನೆ ಎಂದು ಹೇಳುತ್ತಿದ್ದಾರಲ್ಲ ಎಂದುಕೊಂಡ. ಅಷ್ಟರಲ್ಲಿ ವೈದ್ಯರು ಆದಿತ್ಯನ ಕಡೆಯವರು ಬನ್ನಿ ಎಂದು ಕರೆದರು ಆದಿತ್ಯನ ಸ್ನೇಹಿತರಿಬ್ಬರು ವಿಧು ನೀವೇ ಹೋಗಿ ಎಂದರು. ವಿಧು ಒಳಗೆ ಹೋದ. ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ.....

Wednesday, November 11, 2020

ಪ್ರೇಮದ ಅನ್ವೇಷಣೆ ಭಾಗ - 20

ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ ಹೋದರು. ಪುರಾತನ ದೇವಸ್ಥಾನ ಜೀರ್ಣೋದ್ಧಾರದ ನಂತರ ತನ್ನ ಹಳೆಯ ಸೊಬಗನ್ನು ಕಳೆದುಕೊಂಡಿದೆ. ಆದರೆ ಪ್ರಕೃತಿಯ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು ಒಂದು ಕಡೆ ತುಂಗಾನದಿಯ ಭೋರ್ಗರೆತ ಮತ್ತೊಂದು ಕಡೆ ಶಾಂತಚಿತ್ತನಾಗಿ ಕುಳಿತುಕೊಂಡ ಬಸವ, ದೇವಸ್ಥಾನದ ಒಳಗಡೆ ಅದ್ಭುತವಾದ ಶಿವಲಿಂಗ, ದೇವಸ್ಥಾನಕ್ಕೆ ಬೀಗ ಹಾಕಿದರು ಕಿಂಡಿಯಿಂದ ದೇವರ ದರ್ಶನ ಪಡೆದು ಕತ್ತಲು ಕವಿಯುತ್ತಲೇ ವಾಪಸ್ ಮತ್ತೂರಿಗೆ ಬಂದರು. ಜಾನಕಿ ಅಮ್ಮನವರು ಹೆದರಿಸಿ ದಂತೆ ಅಲ್ಲಿ ಯಾವ ಅನುಭವವೂ ವಿಧುವಿಗೆ ಆಗಲಿ ಆದಿತ್ಯನಿಗೆ ಆಗಲಿ ಆಗಲಿಲ್ಲ. ಮತ್ತೆ ಮುಂಜಾನೆ ಬೇಗ ಎದ್ದು ತನ್ನ ಕೆಲಸಕ್ಕೆ ಹೋದ ವಿಧು ಮಧ್ಯಾಹ್ನದ ಸಮಯಕ್ಕೆ ಮತ್ತೂರಿಗೆ ವಾಪಸ್ಸಾದ, ಅಂದು ಆದಿತ್ಯ ಹೂರಗಡೆ ಊಟಕ್ಕೆ ಹೋಗೋಣ ಬನ್ನಿ ಎಂದು ಕರೆದ, ನಡೆಯಿರಿ ಯಾವುದಾದರೂ ಹೊಸರುಚಿಯನ್ನು ನೋಡೋಣವೆಂದು ಹೋಗಿ ಊಟ ಮುಗಿಸಿ ಬಂದರು. ಮಲೆನಾಡಿನ ವಿಶೇಷವಾದ ಉಂಡೆ ಗಡಬು ಆಗು ಚಟ್ನಿ ಅವರ ಊಟದ ಸ್ವಾದವನ್ನು ಇನ್ನು ಹೆಚ್ಚಿಗೆ ಮಾಡಿತ್ತು. ವಿಧು ಆದಿತ್ಯನ ಪರಿಚಯವಾಗಿ ಇನ್ನು ನಾಲ್ಕು ದಿನಗಳು ಕಳೆದಿದ್ದವು. ಅಷ್ಟರಲ್ಲಿ ಆದಿತ್ಯನ ಸ್ನೇಹಿತರು ಆಂಧ್ರದಿಂದ ಬಂದರು ಅವರನ್ನು ಶಿವಮೊಗ್ಗದಲ್ಲಿ ಬರಮಾಡಿಕೊಳ್ಳಲು ಆದಿತ್ಯನನ್ನು ವಿಧುವನ್ನು ಒಟ್ಟಿಗೆ ಕರೆದುಕೊಂಡು ಹೋದ, ಆತನ ಸ್ನೇಹಿತರನ್ನು ಪರಿಚಯ ಮಾಡಿಕೊಟ್ಟ , ಒಬ್ಬನ ಹೆಸರು ಚಿರಾಗ್ ಮತ್ತೊಬ್ಬನ ಹೆಸರು ಚಿನ್ಮಯ ಎಲ್ಲರೂ ಸೇರಿ ಕೊಡಚಾದ್ರಿಗೆ ಹೋಗಲು ಯೋಜನೆಯನ್ನು ರೂಪಿಸಿದರು. ಆ ಯೋಜನೆಯಿಂದ ವಿಧು ದೂರವುಳಿದಿದ್ದ ಅವನಿಗೆ ಅವನ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸಲು ಸಮಯದ ಅಭಾವವಿತ್ತು. 
                    ಅಷ್ಟರಲ್ಲಿ ಸಾಗರ್ ವಿಧುವಿನ ಪರಿಚಯ ಸ್ನೇಹದ ಕಡೆ ತಿರುಗಿತು. ವಿಧು ತನ್ನ ಸ್ನೇಹಿತನಾದ ಸಾಗರ್ ಅವರೊಟ್ಟಿಗೆ ಸಂಜೆಯ ವಾಯು ವಿಹಾರಕ್ಕೆ ಇಲ್ಲಿ ಎಲ್ಲಿ ಹೋಗುವುದು ಉತ್ತಮ ಎಂದು ಕೇಳಿದಾಗ ಸಾಗರ್ ಇಂದು ಸಂಜೆ ಇಬ್ಬರು ಒಟ್ಟಿಗೆ ಹೋಗೋಣ, ನೀವು ಆ ಜಾಗವನ್ನು ಖಂಡಿತ ಇಷ್ಟಪಡುತ್ತೀರಾ ಎಂದು ಹೇಳಿದ. ಸಾಗರ್ ಹೇಳಿದ್ದನ್ನು ಕೇಳಿದ ವಿಧು ವಿಶೇಷ ಜಾಗವೇ ಇರಬೇಕು ಅನಿಸುತ್ತದೆ ನೋಡೋಣ ಎಂದು ಸುಮ್ಮನಾದ. ಸಂಜೆಯಾಗುತ್ತಲೇ ಸಾಗರ್ ವಿಧುವನ್ನು ಕರೆದುಕೊಂಡು ಮತ್ತೂರು-ಹೊಸಳ್ಳಿ ನಡುವೆ ಇರುವ ತುಂಗಾನದಿಯಲ್ಲಿ ನಿರ್ಮಿಸಿರುವ ಕಾಲು ಹೊಳೆಗೆ ಸಂಜೆಯ ವಿಹಾರಕ್ಕೆ ಕರೆದುಕೊಂಡು ಹೋದ. ತುಂಗಾನದಿಯಲ್ಲಿ ಇರುವ ಕಾಲು ಹೊಳೆಗೆ ಹೋದರು. ಪ್ರಕೃತಿಯ ಸೌಂದರ್ಯವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ತುಂಗಾ ನದಿಯ ಎರಡು ತಟದಲ್ಲಿ ಇರುವ ಗ್ರಾಮಗಳು ಮತ್ತೂರು-ಹೊಸಳ್ಳಿ 2 ಗ್ರಾಮಗಳ ಸಂಪರ್ಕವೇ ಆ ಕಾಲು ಹೊಳೆ ಸೇತುವೆ . ಪ್ರಕೃತಿಯ ರಮಣೀಯ ದೃಶ್ಯ ಎಂಥವರನ್ನು ತನ್ನತ್ತ ಸೆಳೆಯಬಲ್ಲದು ಸಂಸ್ಕೃತ ಗ್ರಾಮ ಮತ್ತೂರು, ಹೊಸಳ್ಳಿ ಗಮಕ  ಗ್ರಾಮ ಸಂಸ್ಕೃತವೆಂದರೆ ಗ್ರಾಮದ ಜನರು ಸಂಸ್ಕೃತವನ್ನು ಮಾತನಾಡುತ್ತಾರೆ ಅಲ್ಲಿ ಸಣ್ಣವರಿಂದ ದೊಡ್ಡವರ ತನಕ ಸಂಸ್ಕೃತ ಸಂಭಾಷಣೆಯನ್ನು ಆಡುಭಾಷೆಯಾಗಿ ಬಳಸುತ್ತಾರೆ. ಗಮಕ ಗ್ರಾಮವೆಂದರೆ ಗಮಕ ಒಂದು ವಿಶಿಷ್ಟ ಪ್ರಕಾರದ ಕಲೆ ರಾಮಾಯಣ ಮಹಾಭಾರತವನ್ನು ಆ ಕಲೆಯ ಮುಖಾಂತರ ಮುಂದಿನ ಪೀಳಿಗೆಗೆ ತಿಳಿಸುವ ಒಂದು ಕ್ರಿಯೆ ಅಂತಹ ಗ್ರಾಮದಲ್ಲಿ ವಾಸಮಾಡುವುದು ಒಂದು ಚೈತನ್ಯವನ್ನು ಕೊಡುತ್ತದೆ. ಯಾವುದೇ ಊರಿಗೆ ಹೋದರೂ ಊರಿನ ವಿಶೇಷ ತಿಳಿಯುವುದು ವಿಧುವಿನ ಅಭ್ಯಾಸ ಮತ್ತೂರು ಹೇಗೆ ಅಸ್ತಿತ್ವಕ್ಕೆ ಬಂತು ಎಂದು ಅಲ್ಲಿಯ ಹಿರಿಯರನ್ನು ವಿಚಾರಿಸಿದಾಗ ಇನ್ನೂ ಹಲವು ವಿಚಾರಗಳು ತಿಳಿದು ಬಂದವು ಹಿಂದೆ ದಕ್ಷಿಣ ಭಾರತದಲ್ಲಿ ಇದ್ದ ಹಿಂದೂ ಸಾಮ್ರಾಜ್ಯ ವಿಜಯನಗರ ಕಾಲದಲ್ಲಿ ರಾಜರು ಬ್ರಾಹ್ಮಣರಿಗೆ ಮತ್ತೂರಿನ ಅಗ್ರಹಾರವನ್ನು ನೀಡಿದರು ಎಂದು ತಿಳಿದುಬಂತು. ಮತ್ತೂರಿನ ಇನ್ನೂ ಒಂದು ವಿಶೇಷವೆಂದರೆ ಅಲ್ಲಿ ಕರ್ನಾಟಕದ ತುಳುನಾಡಿನಲ್ಲಿರುವ ತುಳು ಭಾಷೆಯಂತಹ ಮತ್ತೊಂದು ಭಾಷೆ ಅಸ್ತಿತ್ವದಲ್ಲಿರುವುದು ತಿಳಿದು ಆಶ್ಚರ್ಯವಾಯಿತು. ಆ ಭಾಷೆಯೇ.......

Sunday, November 8, 2020

ಪ್ರೇಮದ ಅನ್ವೇಷಣೆ ಭಾಗ - 19


ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೊರಟು ಒಂದು ಕಪ್ ಚಾ ಕುಡಿದು ಮತ್ತೆ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಸರಿಯಾಗಿ 38 ನಿಮಿಷವಾಗಿತ್ತು. ಬಸ್ ನಿಲ್ದಾಣಕ್ಕೆ ಬರುವುದಕ್ಕೂ ಕೃಷ್ಣ ಅವರು ಬಂದರು. ವಿಧುವನ್ನು ಕರೆದುಕೊಂಡು ಹೊರಟರು. ಅವನಿಗೆ ಶಿವಮೊಗ್ಗ ಬಿಟ್ಟು ಬೇರೆ ಎಲ್ಲೋ ಹೋಗುತ್ತಿರುವಂತೆ ಎನಿಸಿತು. ನೇರ ವ್ಯಕ್ತಿತ್ವದ ಹುಡುಗ ಕೃಷ್ಣ ಅಣ್ಣಾವ್ರನ್ನು ಕೇಳಿಯೇಬಿಟ್ಟ ನಾವು ಎಲ್ಲಿಗೆ ಹೋಗುತ್ತಿರುವುದು ಎಂದು. ಅದಕ್ಕೆ ಅವರು ಹೇಳಿದರು ಮತ್ತೂರಿಗೆ. ವಿದು ಮನಸ್ಸಿನಲ್ಲಿ ಅಂದುಕೊಂಡ ಇವರು ಹೇಳುತ್ತಿರುವ ಮತ್ತೂರು ನಾನು ಹಿಂದೆ ಪತ್ರಿಕೆಯಲ್ಲಿ ಓದಿದ ಸಂಸ್ಕೃತ ಮಾತನಾಡುವ ಮತ್ತೂರು ಗ್ರಾಮ ಅಲ್ಲ ತಾನೇ ! ನೋಡೋಣ ಹೇಗಿದ್ದರೂ ಹೋಗುತ್ತಿದ್ದೇನೆ ಎಂದು ಅಂದುಕೊಂಡು ಸುಮ್ಮನಾದ. ಊರು ತಲುಪಿದ ಮೇಲೆ ಅವನಿಗೆ ಆಶ್ಚರ್ಯ ಕಾದಿತ್ತು ಅವನು ಅಂದುಕೊಂಡಂತೆ ಅದು  ಸಂಸ್ಕೃತ ಮಾತನಾಡುವ ಗ್ರಾಮ. ಭಾರತೀಯ ಸಂಸ್ಕೃತಿ ಭಾರತೀಯ ಪರಂಪರೆ ಮೇಲೆ ವಿಶೇಷ ಅಭಿಮಾನವಿದ್ದ  ವಿಧುವಿಗೆ ತುಂಬಾ ಖುಷಿಯಾಯಿತು. ಈ ಗ್ರಾಮಕ್ಕೆ ಒಂದು ಬಾರಿಯಾದರೂ ಭೇಟಿ ಕೊಡಬೇಕು ಅಂದುಕೊಂಡಿದ್ದ ವಿಧು ಇಂದು ಅದೇ ಗ್ರಾಮದಲ್ಲಿ ಇದ್ದಾನೆ. ಕೃಷ್ಣ ಅಣ್ಣನವರು ಅವನಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿದರು. ಅದು ನಾಲ್ಕು ರೂಮುಗಳು ಇರುವ ಒಂದು ಭವನ, ಸಂಸ್ಕೃತ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡುತ್ತಿದ್ದ ಜಾಗ, ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿ ಕೆಲಸ ಮಾಡುತ್ತಿದ್ದ ಜಾನಕಿ ಅಮ್ಮನವರಿಗೆ ಊಟದ ವ್ಯವಸ್ಥೆ ಮಾಡುವಂತೆ ಹೇಳಿ ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಹೋದರು. ವಿಧು ಕೈಕಾಲು ಮುಖ ತೊಳೆದುಕೊಂಡು ಹೊರಬರುವಷ್ಟರಲ್ಲಿ ಜಾನಕಿಮ್ಮನವರು ಮನೆಗೆ ಹೋಗಿ ಊಟವನ್ನು ತಂದಿದ್ದರು. ಊಟವನ್ನು ತಂದು ಮುಂಭಾಗದಲ್ಲಿ ಇಟ್ಟು ನೋಡಪ್ಪ ಎರಡು ಊಟ ಇಟ್ಟಿದ್ದೇನೆ. ಒಂದು ನಿನಗೆ ಮತ್ತೊಂದು ಆದಿತ್ಯನಿಗೆ ಎಂದು ಹೇಳಿದರು. ಜಾನಕಿ ಅಮ್ಮನವರನ್ನು ಯಾರು ಆದಿತ್ಯ ಎಂದು ಕೇಳಿದ್ದಕ್ಕೆ ನಿನ್ನ ಮುಂದಿನ ರೂಂನಲ್ಲಿರುವ ಹುಡುಗನ ಆದಿತ್ಯ .ಅವನು ಬಾಗಿಲು ತೆರೆದು ಹೊರಗೆ ಬಂದಮೇಲೆ ಊಟವನ್ನು ಅವನಿಗೆ ಕೊಡು ಎಂದು ಹೇಳಿ ಹೋದರು. ಕೆಲವು ನಿಮಿಷಗಳನಂತರ ಆದಿತ್ಯ ಹೊರಗೆ ಬಂದನು.
                  ವಿಧು ಮತ್ತು ಆದಿತ್ಯ ಇಬ್ಬರೂ ಸಮಾನ ವಯಸ್ಕರಾಗಿದ್ದರಿಂದ ಇಬ್ಬರಿಗೂ ಇಂಗ್ಲೀಷ್ ಬರುತ್ತಿದ್ದರಿಂದ ಅವರ ಮಾತುಕತೆಗೆ ಸಮಸ್ಯೆ ಏನು ಆಗಲಿಲ್ಲ .ಒಬ್ಬರಿಗೊಬ್ಬರ ಪರಿಚಯ ಆಯಿತು. ಆದಿತ್ಯ ಸಂಸ್ಕೃತ ಕಲಿಯಲು ಮತ್ತೂರಿಗೆ ಆಂಧ್ರದ ವಿಜಯವಾಡದಿಂದ ಬಂದಿದ್ದವನಾಗಿದ್ದನು. ವಿಧು ತಾನು ಬಂದಿದ್ದ ಕೆಲಸದ ವಿಚಾರವನ್ನು ಹೇಳಿದನು. ವಿಧು ಕೃಷ್ಣ ಅಣ್ಣನವರ ಮಾರ್ಗದರ್ಶನದಂತೆ ಜನರಿಗೆ ರಾಷ್ಟ್ರೀಯತೆಯ ಬಗ್ಗೆ ತಿಳಿಹೇಳುವ ಕೆಲಸವನ್ನು ಆರಂಬಿಸಿದನು. ಅವನಿಗೆ ಹೊಸ ಹೊಸ ಜಾಗಗಳನ್ನು ಆವಿಷ್ಕಾರ ಮಾಡುವ ಹಾಗೂ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಸ್ತಿ ಹಾಗಾಗಿ ಸ್ಥಳೀಯರೊಂದಿಗೆ ಕೆಲವು ಸ್ಥಳೀಯ ವಿಷಯಗಳನ್ನು ತಿಳುವ ಪ್ರಯತ್ನ ಮಾಡಿದನು. ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸುವ ವ್ಯಕ್ತಿತ್ವದ ವಿಧುವಿಗೆ ಸ್ಥಳೀಯವಾಗಿ ಒಬ್ಬ ವ್ಯಕ್ತಿಯ ಪರಿಚಯವಾಯಿತು. ಅವನ ಹೆಸರು ಸಾಗರ್ ವಿಧುವಿನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ. ಮತ್ತೂರಿನ ಹತ್ತಿರದಲ್ಲೇ ಒಂದು ಪುರಾತನ ಶಿವನ ದೇವಾಲಯವಿದೆ ಎಂದು ಜನಕಿ ಅಮ್ಮ ಹಾಗೂ ಸಾಗರ್ ಇಂದ ತಿಳಿದ ಅವನಿಗೆ ಆ ದೇವಸ್ಥಾನವನ್ನು ನೋಡುವ ಬಯಕೆ. ಆದರೆ ಆ ದೇವಸ್ಥಾನಕ್ಕೆ ಸಂಜೆಯ ಮೇಲೆ ಯಾರೂ ಹೋಗುವುದಿಲ್ಲ ಅಲ್ಲಿ ದಿವ್ಯಜ್ಯೋತಿಯ ಸಂಚಾರವಿದೆ ಎಂದು ಜಾನಕಿ ಅಮ್ಮನವರು ಹೆದರಿಸುತ್ತಿದ್ದರು. ಹಾಗಾದರೆ ಆ ದೇವಸ್ಥಾನವನ್ನು ಸಂಜೆಯ ಸಮಯದಲ್ಲಿಯೇ ನೋಡಬೇಕು ಎಂದು ನಿಶ್ಚಯಿಸಿದ ವಿಧು ಅದರ ವಿಚಾರವಾಗಿ ಆದಿತ್ಯ ನೊಂದಿಗೆ ಚರ್ಚಿಸಿದನು. ಆದಿತ್ಯನು ಕೂಡ ಹುಚ್ಚುಸಾಹಸಗಳನ್ನು ಮಾಡಲು ಇಷ್ಟ ಪಡುವ ವ್ಯಕ್ತಿ. ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ......

Saturday, November 7, 2020

ಪ್ರೇಮದ ಅನ್ವೇಷಣೆ ಭಾಗ - 18

ಅಲ್ಲಿಂದ ಸಂಬಂಧಗಳ ಮೇಲಿನ ನಂಬಿಕೆಯು ಸಡಿಲವಾಗುತ್ತ ಹೋಯಿತು. ಗುರುಗಳಿಗೆ ಆದ ಅವಮಾನ ನನಗೆ ಆದಂತೆ ಎಂದು ತಿಳಿದು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಿ ಮತ್ತು ತರಗತಿಗೆ ಮೊದಲನೆಯವನಾಗಿ ಬಂದನು. ಎಲ್ಲರಿಗೂ ಉತ್ತರ ಎನ್ನುವಂತೆ ಕಾಲೇಜ್ ಬಿಡುವ ಸಮಯದಲ್ಲಿ ಗುರುವಿನ ಆಶೀರ್ವಾದದೊಂದಿಗೆ ಸಿ.ಇ.ಟಿ ಯಲ್ಲಿ ಉತ್ತಮ ಅಂಕಗಳಿಸಿ ಮೈಸೂರಿನಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲನಾದ, ಆದರೆ ಮತ್ತೆ ಜೀವನದಲ್ಲಿ ಯಾರ ಸಂಬಂಧವೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರಿಂದ ಮತ್ತೆ ಯಾರೊಟ್ಟಿಗೂ ಸ್ನೇಹವನ್ನು ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ಅವನ ನಿರ್ಧಾರ ಅವನನ್ನು ಒಂಟಿಯಾಗಿ ನಿಲ್ಲಿಸಿತ್ತು. ಈ ಬಾರಿ ವಿಧುವಿನ ಮನಸ್ಸು ಇನ್ನೂ ಗಟ್ಟಿಯಾಗಿ ಕಲ್ಲಿನಂತೆ ಬಲಿಷ್ಠವಾಗಿ ಇರುವಂತೆ ಆಗಿತ್ತು. ಸಾಕು ಇನ್ನು ನನ್ನ ಹಣೇಬರದಲ್ಲಿ ಪ್ರೀತಿ ಸಿಗುವ ಹಾಗೆ ಬರೆದಿಲ್ಲ ಅನಿಸುತ್ತದೆ. ತಿಳುವಳಿಕೆ ಬಂದಾಗಿನಿಂದ ಮನೆಯವರ ಪ್ರೀತಿ ಕಾಣದ ಜೀವ ಹೊರಗಿನ ನಾಟಕೀಯ ಸ್ನೇಹವನ್ನು ನಿಜವಾದ ಕಾಳಜಿ ಹಾಗೂ ನಿಷ್ಕಲ್ಮಶವಾದ ಪ್ರೀತಿ ಎಂದು ತಿಳಿದ ಮೂರ್ಖತನಕ್ಕೆ ಬೇಸರವಾಯಿತು. ವಿಧು ಮತ್ತು ತನ್ನ ಬಗ್ಗೆ ತಾನೇ ಪ್ರಶ್ನೆ ಮಾಡಿಕೊಳ್ಳಲು ಆರಂಭಿಸಿದ, ಬದುಕನ್ನು ಸಮಾಜಕ್ಕೆ ಮೀಸಲಿಡುವ ತೀರ್ಮಾನ ಮಾಡಿರುವ ನನಗೆ ಏಕೆ ವ್ಯಕ್ತಿಗತ ಪ್ರೀತಿಯ ಅವಶ್ಯಕತೆ ಇದೆ ? ಎಂದು ಅವನಲ್ಲಿ ಅವನೇ ಕೇಳಿಕೊಂಡನು. ಇಲ್ಲ ಅದರ ಅವಶ್ಯಕತೆ , ಎಂದು ತನ್ನನ್ನೆ ತಾನು ಸಮಾಧಾನಪಡಿಸಿ ಕೊಂಡನು. ಇಂಜಿನಿಯರಿಂಗ್ ಓದುತ್ತಿರಬೇಕಾದರೆ ಸರ್ಕಾರಿ ಕೆಲಸದ ಜಾಹೀರಾತನ್ನು ನೋಡಿದ ಅವನು ಮನೆಯಲ್ಲಿನ ಹಂಗಿನ ಊಟಕ್ಕಿಂತ ದುಡಿಮೆಯ ಊಟವೇ ಮೇಲೆಂದು ಕೆಲಸಕ್ಕೆ ಅರ್ಜಿ ಹಾಕಿದ. ಅವನು ಅದೃಷ್ಟವೋ ಏನೋ ಎನ್ನುವಂತೆ ಅಲ್ಲಿ ಆಯ್ಕೆಯಾದ. ಆದರೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಅವನನ್ನು ಕೆಲಸದಲ್ಲಿ ತುಂಬಾ ದಿನಗಳ ಕಾಲ ಉಳಿಯುವಂತೆ ಅವಕಾಶ ಮಾಡಿಕೊಡಲಿಲ್ಲ.
                ಕೆಲಸಕ್ಕೆ ರಾಜೀನಾಮೆ ನೀಡಿ ಅಲ್ಲಿಂದ ಹೊರನಡೆದ. ಇತ್ತ ಇಂಜಿನಿಯರಿಂಗ್ ಪೂರ್ಣಗೊಳಿಸದೆ ಅತ್ತ ಕೆಲಸವೂ ಇಲ್ಲದೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಂತಹ ಪರಿಸ್ಥಿತಿಯಲ್ಲೂ ತನ್ನ ಬದುಕಿನ ಶಿಸ್ತನ್ನು ಬಿಡದ ಅವನು ಮತ್ತೆ ಸಾಮಾಜಿಕ ಜೀವನದ ಕಡೆ ಮುಖ ಮಾಡಿದ. ಸಮಾಜಸೇವೆಯನ್ನು ಮಾಡಬೇಕು ಎಂದು ಸಮಾಜದಲ್ಲಿ ಹಲವಾರು ಸೇವಾಕಾರ್ಯವನ್ನು ಮಾಡಿಕೊಂಡ ಬಂದಿದ್ದರಿಂದ ಅವನಿಗೆ ಸಾಮಾಜಿಕ ಜನಮನ್ನಣೆ ಇತ್ತು. ಇದರ ಮಧ್ಯೆ ಇಂಜಿನಿಯರಿಂಗ್ ಮಾಡುವಾಗ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದ ರಾಷ್ಟ್ರೀಯ ವಿಚಾರಗಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಇದರ ಮಧ್ಯೆ ಅವನಿಗೆ ಒಂದು ಕರೆಬಂತು ಅದು ರಾಜ್ಯನಾಯಕರ ಕರೆಯಾಗಿತ್ತು. ನಿಮ್ಮಂತಹ ಯುವಕರು ನಮ್ಮ ರಾಷ್ಟ್ರಕ್ಕೆ ಅವಶ್ಯಕತೆಯಿದೆ. ರಾಷ್ಟ್ರೀಯವಾದ ವಿಚಾರಗಳನ್ನು ಮನೆಮನೆಗೆ ತಲುಪಿಸಲು ನಿಮ್ಮ ಅವಶ್ಯಕತೆ ಇದೆ ಬನ್ನಿ ಎಂದು ಕರೆದರು. ವಿಧು ಸಂತೋಷದಿಂದ ಒಪ್ಪಿದ. ಬದುಕನ್ನು ಇನ್ನು ಸಾರ್ವಜನಿಕ ಜೀವನಕ್ಕೆ ಮೀಸಲಿಡಬೇಕೆಂದು ನಿರ್ಧರಿಸಿ ಪ್ರಯಾಣಿಸುತ್ತಿದ್ದ ವಿಧು, ಬದುಕಿನ ಪುಟವನ್ನು ತಿರುವಿ ಹಾಕಿ ಇನ್ನೇನು ನಿದ್ರೆಯ ಮಂಪರಿನಿಂದ ಸಂಪೂರ್ಣವಾಗಿ ನಿದ್ರೆಗೆ ಜಾರಬೇಕು ಅಷ್ಟರಲ್ಲೇ ಯಾರೋ ಶಿವಮೊಗ್ಗ ಬಂತು ಬನ್ನಿ ಎಂದು ಕರೆದಂತೆ ಭಾಸವಾಯಿತು. ಯಾರು ಎಂದು ನೋಡಿದರೆ ಬಸ್ ಕಂಡಕ್ಟರ್ ಕೊನೆಯ ನಿಲ್ದಾಣ ಎಲ್ಲರೂ ಇಳಿಯಲು ಬನ್ನಿ ಎಂದು ಕೂಗುತ್ತಿದ್ದರು. ಮಂಪರು ನಿದ್ರೆಯಿಂದ ಎದ್ದ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಶಿವಮೊಗ್ಗದ ಬಸ್ಟ್ಯಾಂಡಿನಲ್ಲಿ ಬಸ್ ನಿಂತಿತ್ತು. ವಿಧುವನ್ನು ಶಿವಮೊಗ್ಗಕ್ಕೆ ಕಳುಹಿಸಿ ಕೊಟ್ಟ ವರ ಫೋನ್ ನಂಬರ್ ಗೆ ಕರೆ ಮಾಡಿದ ಅವರು ಒಂದು ನಂಬರ್ ಕೊಟ್ಟರು ಆ ನಂಬರ್ಗೆ ಕರೆ ಮಾಡಿದಾಗ ಆ ಕಡೆಯಿಂದ ಹೇಳಿ ನಾನು ಕೃಷ್ಣ ಮಾತನಾಡುತ್ತಿರುವುದು ನಿಮ್ಮ ಬಗ್ಗೆ ನಾರಾಯಣ್ ಅವರು ಎಲ್ಲ ಹೇಳಿದ್ದಾರೆ ಇನ್ನು 20 ನಿಮಿಷ ಕಾಯಿರಿ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ ಎಂದು ಹೇಳಿದರು. ಇನ್ನು 20 ನಿಮಿಷ ಹೇಗಿದ್ದರೂ ಅವರು ಬರುವುದಿಲ್ಲ ನೋಡೋಣ ಇಲ್ಲಿನ ಜನರು ಹೇಗೆ ಎಂಬ ಕುತೂಹಲದಿಂದ ಸುಮ್ಮನೆ ಒಂದು ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೋರಾಟ.......