Monday, October 19, 2020

ನಿಷ್ಕಲ್ಮಶ ಸ್ನೇಹ ಹೇಗಿರಬೇಕು ?


ಸ್ನೇಹ ಜಗತ್ತಿನ ಅದ್ಭುತವಾದ ಸಂಬಂಧ ಅಲ್ಲಿ ಯಾವ ಅಳತೆಗಳು ಇರುವುದಿಲ್ಲ .ಕುಚೇಷ್ಟೆಯಿಂದ ಹಿಡಿದು ಪ್ರೀತಿ ,ಮಮತೆ ,ವಿಶ್ವಾಸ ಎಲ್ಲ ಇರುತ್ತದೆ .ಅದು ನಿಷ್ಕಲ್ಮಶ, ಎಲ್ಲಾ ಸಂಬಂಧಗಳಿಗೆ ಮೀರಿದ ಬಂದವದು. ಸ್ನೇಹ ಪ್ರತಿಯೊಂದು ಜೀವಿಗೆ ಬದುಕಿನಲ್ಲಿ ಅವಶ್ಯವಾಗಿ ಬೇಕಾಗಿರುವ ಅನುಭೂತಿ, ಅನುಬಂಧ. ಅಂತಹ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಸಂಬಂಧಗಳು ಜಾಗತೀಕರಣದ ಪ್ರಭಾವದಿಂದ ತಮ್ಮ ಸಂಬಂಧದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದವೆ. ಅದರೊಳಗೆ ಸ್ನೇಹ ಸೇರಿರುವುದು ಇಂದಿನ ಸಮಾಜದ ದುರಂತ. ಇಂದಿನ ದಿನಮಾನದಲ್ಲಿ ಸಂಬಂಧಗಳು ಲಾಭದ ಆಧಾರದಲ್ಲಿ ನಡೆಯುತ್ತಿರುವುದರಿಂದ ನಿಷ್ಕಲ್ಮಶ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಕೃತಕತೆ ಸತ್ಯವಾಗಿ ಕಾಣುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರೊಳಗೆ ನಾವು ಉತ್ತಮ ಸ್ನೇಹಿತರನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ನೋಡೋಣ. ಉತ್ತಮ ಸ್ನೇಹಿತರನ್ನು ತಿಳಿಯುವ ಮೊದಲು ನಾವು ಉತ್ತಮ ಸ್ನೇಹಿತರಾಗಿದೇವ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಉತ್ತಮ ಸ್ನೇಹವೆಂದರೆ ಏನು ಎಂಬ ಪ್ರಶ್ನೆ ಕಾಡುವುದು ಸಹಜ. ಬದುಕಿನಲ್ಲಿ ಹಲವಾರು ಜನರು ಬರುತ್ತಾರೆ. ಕೆಲವರು ವರವಾಗಿ ಬಂದರೆ ಕೆಲವರು ಶಾಪವಾಗಿ ಬರುತ್ತಾರೆ .ಕೆಲವರು ನಿಮ್ಮ ಸತ್ವವನ್ನೇ ಹೀರಿದರೆ ಮತ್ತೆ ಕೆಲವರು ನಿಮ್ಮ ಅಂತರಂಗದ ಶಕ್ತಿಯನ್ನು ಪ್ರಚೋದಿಸುತ್ತಾರೆ.
                  ನಾವು ಇಲ್ಲಿ ಹುಡುಕ ಬೇಕಾಗಿರುವುದು ನಿಜ ಸ್ನೇಹಿತರನ್ನು ,ನಿಜ ಸ್ನೇಹಿತರು ಎಂದರೆ ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ನಮ್ಮ ಜೊತೆ ಊಟ ಮಾಡಿ ಹರಟೆ ಹೊಡೆದವರೆಲ್ಲ ಹಾಗೂ ನಮ್ಮ ಜೊತೆ ಸುತ್ತುವವರೆಲ್ಲ ನಿಜ ಸ್ನೇಹಿತರಾಗಲು ಸಾಧ್ಯವಿಲ್ಲ. ನಿಜ ಸ್ನೇಹದಲ್ಲಿ ಸ್ನೇಹಿತನ ಏಳಿಗೆಯನ್ನು ಪ್ರಚೋದಿಸುವಂತ ಶಕ್ತಿ ಇರಬೇಕು. ಅವನ ಅಂತರಂಗದ ಶಕ್ತಿಯನ್ನು ತಿಳಿದು ಅವನ ಉನ್ನತಿಗೆ ಸಹಕಾರ ಕೊಡುವ ಮನೋಭಾವವಿರಬೇಕು. ಅದು ಬಿಟ್ಟು ಅವನ ಮುಂದೆ ನಯವಾಗಿ ಮಾತನಾಡಿ ಅವನ ಬೆನ್ನ ಹಿಂದೆ ಮಾತನಾಡುವ ಚಾಳಿ ಇರಬಾರದು, ಬೇರೆಯವರ ಮುಂದೆ ತಾವು ಒಳ್ಳೆಯವರಾಗಲು ಅವರು ಕೆಟ್ಟವರಂತೆ ಚಿತ್ರಿಸಬಾರದು. ಸ್ನೇಹದ ಏಳಿಗೆಯನ್ನು ಸಹಿಸದೆ ಹಿತ ಶತ್ರುವಿನ ರೀತಿ ಇರಬಾರದು. ಅಂತಹ ಸಂಬಂಧಗಳು ಸುದೀರ್ಘಕಾಲ ಬಾರದಂತೆ ಮುರಿದು ಬೀಳುತ್ತವೆ.
                 ಸ್ನೇಹವೆಂಬುದು ಒಂದು ಮಧುರ ಸಂಬಂಧ. ಅದನ್ನು ನಾವು ಪುರಾಣ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ಅದಕ್ಕೆ ಉತ್ತಮ ಉದಾಹರಣೆ ಕೃಷ್ಣ ಕುಚೇಲನ ಸ್ನೇಹ. ಕೃಷ್ಣ ರಾಜಪರಂಪರೆಯಲ್ಲಿ ಬಂದಿದ್ದರು . ಆತನ ಬಡ ಸ್ನೇಹಿತನನ್ನು ಮರೆಯಲಿಲ್ಲ ಅದು ಶ್ರೇಷ್ಠ ಸ್ನೇಹ. ಸ್ವಾರ್ಥ ಸ್ನೇಹಕ್ಕೆ ಉತ್ತಮ ಉದಾಹರಣೆ ದುರ್ಯೋಧನ ಹಾಗೂ ಕರ್ಣನ ಸ್ನೇಹ. ಅದು ಲಾಭಕ್ಕಾಗಿ ಆದ ಸ್ನೇಹ ಹಾಗಾಗಿ ಕರ್ಣ ಧರ್ಮ ಮಾರ್ಗದಲ್ಲಿ ನಡೆದರು ಅವನ ಸಾವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮತ್ತು ಮುಂದುವರೆದು ಹೇಳುವುದಾದರೆ ದ್ರುಪದ ಹಾಗೂ ದ್ರೋಣಾಚಾರ್ಯರ ಸ್ನೇಹ. ಅವರಿಬ್ಬರೂ ಸಹಪಾಠಿಗಳು ಒಂದೇ ಗುರುಕುಲದಲ್ಲಿ ಬೆಳೆದವರು. ಸ್ನೇಹಕ್ಕೆ ಬೆಲೆ ಕೊಡದ ದ್ರುಪದ ತನ್ನ ಅಧಿಕಾರದ ಅಹಂನಿಂದ ಸಹಾಯ ಕೇಳಿಬಂದ ದ್ರೋಣಾಚಾರ್ಯರನ್ನು ಅವಮಾನಿಸಿದ ಅದರ ಪ್ರತಿಫಲವೇ ದ್ರೋಣಾಚಾರ್ಯರ ಕ್ಷಮೆ ಕೇಳುವಂತಹ ಸಂದರ್ಭ ಒದಗಿ ಬಂತು.  ಐತಿಹಾಸಿಕ ಕಥೆಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಸ್ನೇಹವಿದ್ದರೆ ಕೃಷ್ಣ ಕುಚೇಲನಂತೆ ಇರಬೇಕು. ಅದು ನಿಷ್ಕಲ್ಮಶ ಸ್ವಾರ್ಥದ ಸ್ನೇಹ ವಾಗಲಿ ,ಲಾಭದ ಸ್ನೇಹವಾಗಲಿ ಬಹಳ ಕಾಲ ಉಳಿಯುವುದಿಲ್ಲ .ಕಾಲಕಳೆದಂತೆ ಸ್ವಾರ್ಥದ ಲಾಭದ ಸ್ನೇಹಗಳು ಅಳಿಯುತ್ತವೆ .ಆದರೆ ನಿಜ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ .ಸ್ನೇಹದಲ್ಲಿ ಅಪೇಕ್ಷೆಯು ಇರಬಾರದು. ಅಪೇಕ್ಷೆಯೂ ಸ್ನೇಹವನ್ನು ಮಾತ್ರವಲ್ಲ ಎಲ್ಲಾ ಸಂಬಂಧಗಳನ್ನು ಹಾಳು ಮಾಡಿಬಿಡುತ್ತದೆ. ಎಲ್ಲ ಸಂಬಂಧಗಳ ಜೀವಾಳ ನಂಬಿಕೆ. ನಂಬಿಕೆ ಕಳೆದುಹೋಗದಂತೆ ನಡೆದುಕೊಂಡರೆ ಸ್ನೇಹವು ಸುದೀರ್ಘವಾಗಿ ಉಳಿಯುತ್ತದೆ. ನಂಬಿಕೆ ಕಳೆದುಕೊಂಡ ಸಂಬಂಧಗಳು ಉಳಿಯುವುದು ಅಸಾಧ್ಯ .ಯಾವುದೇ ಸಂಬಂಧ ಉಳಿಯಬೇಕಾದರೆ ಎರಡು ಕಡೆಯ ಪ್ರಯತ್ನದಿಂದ ಮಾತ್ರ ಸಾಧ್ಯ .ಯಾವುದೇ ಸಂಬಂಧಗಳನ್ನು ಒತ್ತಾಯಪೂರ್ವಕವಾಗಿ ಉಳಿಸಿಕೊಳ್ಳುವಂತ ಕೆಲಸ ಮಾಡಬಾರದು. ನಂಬಿಕೆ ಇಲ್ಲದ ಮೇಲೆ ಅವು ಕೃತಕ ಸಂಬಂಧಗಳ ಆಗಿಬಿಡುತ್ತವೆ. ಕೃತಕತೆಯ ಬದುಕು ಮನಸ್ಸಿಗೆ ಮುದ ನೀಡಲು ಸಾಧ್ಯವಿಲ್ಲ . ಆ ಸಂಬಂಧಗಳು ಇದ್ದೂ ಇಲ್ಲದಂತೆ ಇರುತ್ತವೆ. ಇದ್ದು ಇಲ್ಲದಿರುವುದಕ್ಕಿಂತ ಇಲ್ಲದಿರುವುದೇ ಉತ್ತಮ. ಉತ್ತಮ ಸ್ನೇಹಿತರನ್ನು ಕಳೆದುಕೊಂಡರೆ ವಜ್ರವನ್ನು ಎಸೆದ ಕಲ್ಲನ್ನು ಎತ್ತಿ ಕೊಂಡಂತೆ. ಕೃತಕ ಸ್ನೇಹ ಉಳಿಯುವುದಿಲ್ಲ .ನಿಜ ಸ್ನೇಹ ಅಳಿಯುವುದಿಲ್ಲ....

Sunday, October 11, 2020

ಪ್ರೇಮದ ಅನ್ವೇಷಣೆ ಭಾಗ-17


ಹೇಗಿದ್ದರೂ ಕುಶಾಲ್ ನಿಂದ ದೂರಸರಿಯಲು ನಿಶ್ಚಯಿಸಿದ್ದ ವಿಧುವಿಗೆ ಇದು ಒಂದು ರೀತಿಯ ಅನುಕೂಲವೇ ಆಯಿತು. ಇನ್ನು ಅಂತರವನ್ನು ಕಾಯ್ದುಕೊಳ್ಳಲು ಸುಲಭವಾಯಿತು. ವಿಧು ಎರಡನೆಯ ಬಾರಿಯೂ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಕುಶಾಲ್ಗೆ ತಡೆಯಲಾಗಲಿಲ್ಲ ಹೇಗಾದರೂ ಮಾಡಿ ಪ್ರಥಮಸ್ಥಾನ ಗಳಿಸಿದಂತೆ ತಡೆಯಬೇಕು ಎಂದು ನಿಶ್ಚಯಿಸಿ ನೇರವಾಗಿ ಎದುರಿಸಲು ಸಾಧ್ಯವಾಗದೆ ಕುಶಾಲ್ ವಿಧುವಿಗೆ ಯಾವುದೇ ರೀತಿಯ ಶೈಕ್ಷಣಿಕ ನೆರವು ಸಿಗದಂತೆ ಮಾಡಬೇಕು ಎಂದು ಯೋಚಿಸಿ ತನ್ನ ಸಹಪಾಠಿಗಳಿಗೆ ಯಾವುದೇ ಕಾರಣಕ್ಕೂ ಅವನಿಗೆ ಗೊತ್ತಿಲ್ಲದ್ದನ್ನು ಹೇಳಿ ಕೊಡಬೇಡಿ ಎಂದು ತಾಕೀತು ಮಾಡುತ್ತಿದ್ದ ಅವನ ಸಹಪಾಠಿಗಳು ಕುಶಾಲ್ ನ ಅರಿವಿಗೆಬಾರದೆ ಹೇಳಿಕೊಡುತ್ತಿದ್ದರು. ಅದನ್ನು ತಿಳಿದ ಕುಶಾಲ್ ವಿಧುವಿನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಅವನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದ .ಆ ವಿಚಾರವಾಗಿ ಕೆಲವು ಸಹಪಾಠಿಗಳು ವಿಧುವಿನ ಹತ್ತಿರ ಚರ್ಚೆ ಮಾಡುತ್ತಿದ್ದರು. ವಿಧುವಿಗೆ ಗೊತ್ತಿಲ್ಲದ ಪಾಠದ ವಿಷಯಗಳನ್ನು ಹೇಳಿ ಕೊಡಲು ಹಿಂದೇಟು ಹಾಕುವಂತೆ ಮಾಡಿದ. ಆಗ ಅವನ ನೆರವಿಗೆ ಬಂದಿದೆ ಅವನ ಗುರುಗಳು. ಗುರುಗಳ ಬಳಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಯಾರು ನನಗೆ ಪಠ್ಯಪುಸ್ತಕದ ವಿಚಾರಗಳನ್ನು ಹೇಳಿಕೊಡುತ್ತಿಲ್ಲ ಸರ್ .ನಿಮ್ಮ ಸಹಾಯ ಬೇಕು ಎಂದಾಗ ಅವನು ಗುರುಗಳು ದಿನದ 24 ಗಂಟೆಗಳು ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ ಎಂದು ಹೇಳಿ ಆತ್ಮಸ್ಥೈರ್ಯವನ್ನು ತುಂಬಿ ಕಳುಹಿಸಿದರು. ಹರ ಮುನಿದರೂ ಗುರು ಕಾಯುವನು ಎಂಬ ನಾಡು-ನುಡಿ ಅವನ ವಿಷಯದಲ್ಲಿ ಸತ್ಯವಾಯಿತು. ಸರ್ವ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಿದ್ದ ಗುರುಗಳಿಗೆ ಕುಶಾಲ್ ಅವಮಾನ ಮಾಡಿಬಿಟ್ಟ. ವಿದು ಗುರುವಿಗೆ ಪ್ರಿಯವಾದ ಶಿಷ್ಯ ಹಾಗಾಗಿ ಇವನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತಾರೆಂದು ತರಗತಿಯ ಸಹಪಾಠಿಗಳನ್ನು ಗುರುಗಳ ವಿರುದ್ದ ಎತ್ತಿಕಟ್ಟಿ ಬಿಟ್ಟ. 
           ಕುಶಾಲ್ ನ ನಿಜಮುಖ ಗೋಚರಿಸಿದ್ದು ತರಗತಿಯಲ್ಲಿ. ವಿಧುವಿಗೆ ಹೆಚ್ಚಿನ ಅಂಕವನ್ನು ನೀವು ಕೊಡುತ್ತಿದ್ದೀರಾ ಎಂದು ತರಗತಿಯಲ್ಲಿ ಗುರುಗಳ ವಿರುದ್ಧದ ಆರೋಪವನ್ನು ಮಾಡಿದ ಗುರುಗಳು ಪುಸ್ತಕ ಮುಟ್ಟಿ ಪ್ರಮಾಣ ಮಾಡುವಂತಹ ಪರಿಸ್ಥಿತಿಗೆ ತಂದು ಬಿಟ್ಟ. ಇಂತಹ ಆರೋಪ ನಿರೀಕ್ಷಿಸದ ಗುರುಗಳು ಮನಸ್ಸಿನಲ್ಲಿ ನೊಂದುಕೊಂಡು ನೋವುಂಡು ತರಗತಿಯಲ್ಲಿ ಪುಸ್ತಕವನ್ನು ಹಿಡಿದು ಪ್ರಮಾಣ ಮಾಡಿಬಿಟ್ಟರು. ಯಾವುದೇ ಕಾರಣಕ್ಕೂ ವಿಧುವಿಗೆ ನಾನು ಹೆಚ್ಚು ಅಂಕಗಳನ್ನು ನೀಡಿಲ್ಲ ಅವನು ಸ್ವಂತ ಶಕ್ತಿಯನ್ನು ಅನುಸಾರ ಅಂಕಗಳನ್ನು ಪಡೆಯುತ್ತಿದ್ದಾನೆ. ಅದರಲ್ಲಿ ನನ್ನ ಪಾತ್ರವಿಲ್ಲ ಎಂದು ತರಗತಿಯಲ್ಲಿ ವಿದ್ಯಾರ್ಥಿಗಳ ಎದುರಿಗೆ ಪ್ರಮಾಣ ಮಾಡಿಬಿಟ್ಟರು. ಬದುಕಿನಲ್ಲಿ ಗಟ್ಟಿತನವನ್ನು ರೂಡಿಸಿಕೊಂಡಿದ್ದ ವಿಧುವಿನ ಕಣ್ಣಿನ ಅಂಚಿನಲ್ಲಿ ನೀರು ಜಿನುಗಿತು. ಅವನ ಮನಸ್ಸಿನಲ್ಲಿ ಆ ಚಿತ್ರಣ ಅಚ್ಚಳಿಯದೇ ಉಳಿಯಿತು. 
                    ನನ್ನ ಮೇಲೆ ಇದ್ದ ದ್ವೇಷ ಗುರುಗಳ ಮೇಲೆ ತೀರಿಸಿ ಬಿಟ್ಟನಲ್ಲ ಎಂದು ಮನಸ್ಸಿನಲ್ಲೇ ಕೊರಗಿದನು. ಗುರುಗಳು ಪುಸ್ತಕ ಮುಟ್ಟಿ ಪ್ರಮಾಣಿಸುವ ಅಂತಾಯಿತಲ್ಲ ಎಂದು ದುಃಖಿಸಿದನು. ಕುಶಾಲ್ ಗೆ ವಿಧುವಿನ ಮೇಲೆ ಇದ್ದ ದ್ವೇಷಭಾವನೆ ಹೊರಜಗತ್ತಿಗೆ ಪ್ರಕಟಗೊಂಡಿತು. ಅಲ್ಲಿಗೆ ಕುಶಾಲ್ನ ನಾಟಕೀಯತೆ ಪೂರ್ಣಪ್ರಮಾಣದಲ್ಲಿ ತಿಳಿಯಿತು.  ಕುಶಾಲ್ ನ ಸ್ವಾರ್ಥ ಹಿತದ ಸ್ನೇಹ ತಿಳಿದು ವಿಧು ಸ್ನೇಹವನ್ನು ಅಂತ್ಯಗೊಳಿಸಿದನು. ಅಲ್ಲಿಗೆ ಕುಶಾಲ್ ಮೇಲೆ ಇದ್ದ ನಿಷ್ಕಲ್ಮಶವಾದ ಸ್ನೇಹ ಪ್ರೀತಿ ವಿಶ್ವಾಸ ಕಳೆದುಹೋಯಿತು. ವಿಧುವಿಗೆ ಸತ್ಯದ ಅರಿವಾಯಿತು. ಮನೆಯಲ್ಲಿ ಸಿಗದ ಪ್ರೀತಿ ವಿಶ್ವಾಸ ಸ್ನೇಹಿತನಲ್ಲಿ ಸಿಕ್ಕಿದೆ ಎಂದು ಅಂದುಕೊಂಡಿದ್ದ ವಿಧುವಿಗೆ ಸ್ನೇಹದ ಹೆಸರಿನಲ್ಲಿ ಮೋಸ ಹೋಗಿದ್ದ ಅವನಿಗೆ ಅವನ ಬಗ್ಗೆ ಜಿಗುಪ್ಸೆಯಾಯಿತು. ಲಾಭಕ್ಕಾಗಿ ಅನುಕೂಲತೆಗಾಗಿ ನೋಡಿ ಸಂಬಂಧಗಳನ್ನು ಬೆಳೆಸುತ್ತಾರೆ ಎಂಬುದನ್ನು ಮನಗಂಡನು. ನಿಜವಾದ ಸಂಬಂಧಗಳಿಗೆ ಬೆಲೆ ಇಲ್ಲ ಎಂಬ ಸತ್ಯದ ಅರಿವಾಯಿತು. ಸಂಬಂಧವೆಂಬುದು ಅನಿವಾರ್ಯತೆ , ಅವಶ್ಯಕತೆ ಮೇಲೆ ಮಾಡುವುದು ಎಂಬ ಸತ್ಯವನ್ನು ತಿಳಿದುಕೊಂಡನು. ಅಲ್ಲಿಂದ ಸಂಬಂಧಗಳ ಮೇಲಿನ......

Friday, October 9, 2020

ಹಿಂದುತ್ವದ ರಾಯಭಾರಿಗಳು ಯಾರು ?


ಹಿಂದುತ್ವ ಜಗತ್ತಿಗೆ ಪ್ರಕೃತಿಯೊಂದಿಗೆ ಬದುಕುವ ಪಾಠವನ್ನು ಹೇಳಿಕೊಟ್ಟ ಧರ್ಮ. ಅದು ಸನಾತನ ಹಿಂದುತ್ವ ಎಂಬ ಪದವೆ ಒಂದು ರೋಮಾಂಚನ ತನ್ನ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ವಿಶ್ವದಲ್ಲೆಡೆ ಪಸರಿಸಿ ಭಾರತದ ಮಣ್ಣಿನ ಪರಂಪರೆಯನ್ನು ವಿಶ್ವಕ್ಕೆ ತಿಳಿಸಿದ ಧರ್ಮ. ಹಿಂದುತ್ವ ಪದದ ಮೂಲವನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವುದು ಸಿಂಧೂ ನಾಗರಿಕತೆ, ಆ ನಾಗರಿಕತೆಯ ಫಲವೇ ಅನ್ಯ ಖಂಡಗಳ ಜನರು ಭಾರತದ ಭೂಭಾಗವನ್ನು ಸಿಂಧೂ ನಾಗರಿಕತೆಯ ನಾಡು ಎಂದು ಕರೆದದ್ದು. ಅದು ಕಾಲಕ್ರಮೇಣ ಜನಗಳ ಉಚ್ಚಾರ ಸ್ಥಿತಿಯಲ್ಲಿ ಹಿಂದೂ ಆಯಿತು. ಹಿಂದೂ ಧರ್ಮಕ್ಕೆ ಆದಿಯಾಗಲಿ ಅಂತ್ಯವಾಗಲಿ ಇಲ್ಲ ಅದು ಸನಾತನ. ಸನಾತನ ಎಂದರೆ  ಅಂತ್ಯವಿಲ್ಲದ್ದು ಎಂದು ಅರ್ಥ. ಹಿಂದೂ ಪದ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಇಂದಿನ ದಿನಮಾನದಲ್ಲಿ ಕರೆಯುವ ಹಿಂದೂ ಸಂಪ್ರದಾಯದ ರೀತಿ-ರಿವಾಜುಗಳು ಅಸ್ತಿತ್ವದಲ್ಲಿದ್ದವು.
            ಹಿಂದೂ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಸನಾತನ ಎಂದು ಕೂಡ ಕರೆಯಬಹುದು.  ಅದು ಯಾರಿಂದಲೂ ಸ್ಥಾಪಿತವಾದ ಅಥವಾ ಯಾರದೋ ಮಾರ್ಗದರ್ಶನದಲ್ಲಿ ಮೂಡಿಬಂದ ಸಂಸ್ಕಾರ ಸಂಸ್ಕೃತಿ ಪರಂಪರೆಯಲ್ಲ .ಅದು ಪ್ರಾಕೃತಿಕವಾಗಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಒಂದು ಜೀವನ ವಿಧಾನ. ಆ ಜೀವನ ವಿಧಾನ ಸಹಬಾಳ್ವೆ, ಸಮೃದ್ಧಿ ಹಾಗೂ ಶಾಂತಿಯನ್ನು ಬದುಕಿನೊಂದಿಗೆ ಜೋಡಿಸಿ ಕೊಟ್ಟಿದ್ದು .ಅದರ ಪರಿಣಾಮವೇ ಇಂದು ನಾವು ನಮ್ಮ ದೇಶದಲ್ಲಿ ವಿವಿಧತೆಯನ್ನು ಕಾಣಬಹುದು. ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಿರುವುದು. ಹಿಂದೂ ಸಂಸ್ಕೃತಿಯು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತೆ ಹೇಳಿಕೊಡುವ ಧರ್ಮ .ಅದೇ ಕಾರಣ ಇಂದು ಭಾರತದಲ್ಲಿ ವಿವಿಧ ಧರ್ಮದ ( ಮತದ ) ಜನರು ವಾಸಿಸಲು ಸಾಧ್ಯವಾಗಿರುವುದು. ಈ ಪರಂಪರೆ ಪ್ರಕೃತಿಯೊಂದಿಗೆ ಬದಲಾವಣೆಯಾಗುತ್ತಾ ಹೋಗಿದ್ದರ ಫಲವೇ ಇಂದು ಕೂಡ ತನ್ನ ಸಂಸ್ಕೃತಿಯನ್ನು ಹಾಗೂ ತನ್ನ ಇತಿಹಾಸವನ್ನು ಉಳಿಸಿಕೊಳ್ಳಲು ಹಿಂದೂ ಧರ್ಮಕ್ಕೆ ಸಾಧ್ಯವಾಗಿರುವುದು.
             ಇಂತಹ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಅನ್ಯ ಮತಗಳು ನಿರಂತರವಾಗಿ ಆಕ್ರಮಣ ನಡೆಸುತ್ತಾ ಸಂಸ್ಕೃತಿಯನ್ನು ನಾಶ ಮಾಡಲು ಅವಣಿಸುತ್ತಾ ಬಂದರು ಏನು ಮಾಡಲು ಸಾಧ್ಯವಾಗಿಲ್ಲ ಕಾರಣ ಹುಡುಕುತ್ತ ಹೊರಟರೆ ನಮಗೆ ಸಿಗುವುದು ಹಿಂದುತ್ವವನ್ನು ಉಳಿಸಿಕೊಂಡು ಬರುತ್ತಿರುವ ಸಮಾಜ ಅಂದರೆ ಅದನ್ನು ವಾಸ್ತವದ ರೂಪದಲ್ಲಿ ಅನುಷ್ಠಾನಕ್ಕೆ ತಂದು ಅದರೊಟ್ಟಿಗೆ ಬದುಕನ್ನು ನಡೆಸುತ್ತಿರುವ ಸಾಮಾನ್ಯ ಜನರಿಂದ ಇಂದು ಹಿಂದೂ ಧರ್ಮವು ಉಳಿದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಾವು ಹಿಂದೂ ಧರ್ಮದ ರಾಯಭಾರಿಗಳು ಎನ್ನುವಂತೆ ಬಿಂಬಿಸಿಕೊಂಡು ಧರ್ಮವನ್ನೇ ಹೈಜಾಕ್ ಮಾಡಿ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ನಮ್ಮ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ಯಾವುದೇ ರಾಜಕೀಯ ಪಕ್ಷದಿಂದ ಧರ್ಮ ಉಳಿಯಲಾರದು ಏಕೆಂದರೆ ರಾಜಕೀಯ ಪಕ್ಷ ಹುಟ್ಟುವ ಮೊದಲೇ ಹಿಂದೂ ಧರ್ಮವು ಅಸ್ತಿತ್ವದಲ್ಲಿತ್ತು .ಮುಂದಿನ ದಿನಗಳಲ್ಲಿ ಹಿಂದುತ್ವದ ಹೆಸರನ್ನು ಹೇಳಿಕೊಂಡು  ಅಧಿಕಾರಕ್ಕೆ ಬರುವ ರಾಜಕೀಯ  ಪಕ್ಷ ಇಲ್ಲದಿದ್ದರೂ  ಹಿಂದುತ್ವ ಉಳಿಯುತ್ತದೆ. ಆದಿ-ಅಂತ್ಯ ಇಲ್ಲದ್ದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಇಂದಿಗೂ ನಿಜವಾದ ಹಿಂದುತ್ವದ ರಾಯಭಾರಿಗಳು ಸಾಮಾನ್ಯ ಜನರೇ. ಹಿಂದುತ್ವವು ರಾಜಕೀಯ ವಿಚಾರವಾಗದೆ ಸಾಮಾನ್ಯ ಜನರೊಳಗೆ ಶಾಶ್ವತವಾಗಿ ಉಳಿಯಲಿ.

Sunday, October 4, 2020

ಪ್ರೇಮದ ಅನ್ವೇಷಣೆ ಭಾಗ - 16


ನನಗೆ ಪ್ರೀತಿ ತೋರದ ತಂದೆ-ತಾಯಿ ಸಿಗದಿದ್ದರೂ ಪರವಾಗಿಲ್ಲ ಪ್ರೀತಿ ಹಾಗೂ ಕಾಳಜಿ ತೋರುವ ಸ್ನೇಹಿತ ಸಿಕ್ಕಿದನಲ್ಲ ಎಂಬುದೇ ದೊಡ್ಡ ವಿಷಯವಾಗಿತ್ತು. ಆದರೆ ಅವನ ಮನಸ್ಸಿನಲ್ಲಿ ಪ್ರೀತಿಯ ಹಿಂದೆ ಇದ್ದ ದ್ವೇಷ, ಕಾಳಜಿ ಹಿಂದೆ ಇದ್ದ ಸ್ವಾರ್ಥ ಅವನ ನಾಟಕೀಯತೆಯ ಪ್ರೀತಿ ಮತ್ತು ಕಾಳಜಿ ತಿಳಿದು ವಿಧುವಿಗೆ ದೊಡ್ಡ ಆಘಾತವಾಯಿತು. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದ ವಿಧುವಿನ ಏಳಿಗೆ ಸಹಿಸದ ಕುಶಾಲ್ ವಿಧುವಿನ ಜೊತೆಗಾರರಿಗೆ ಮತ್ತು ಕಾಲೇಜಿನ ಸಹಪಾಠಿಗಳಿಗೆ ಇಲ್ಲದ ವಿಷಯಗಳನ್ನು ಹೇಳಿ ವಿಧುವಿನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದ ಕುಶಾಲ್ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದ ಅವನಿಗೆ ತಿಳಿಯದಂತೆ ಅವನ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಕುಶಾಲ್ ನ ಮೋಸದ ಹರಿವು ನಿಧಾನವಾಗಿ ತಿಳಿಯಲು ಪ್ರಾರಂಭಿಸಿದ ಕೂಡಲೆ ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದ. ವಿಧು ಉತ್ತಮವಾಗಿ ಓದಬೇಕು ಎಂಬ ಏಕಮಾತ್ರ ಉದ್ದೇಶದಿಂದ ಕಾಲೇಜು ಸೇರಿದ್ದರಿಂದ ಅವನ ಮುಂದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದಷ್ಟೇ  ಆಯ್ಕೆಯಾಗಿತ್ತು. ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು. ಅದರ ಅನಿವಾರ್ಯತೆ ಅವನಿಗಿತ್ತು. ಹಾಗಾಗಿ ವಿದ್ಯಾಭ್ಯಾಸದ ಕಡೆ ಪೂರ್ತಿಯಾಗಿ ಗಮನಹರಿಸಲು  ಉತ್ತಮ ಅಂಕ ಬರಲು ಶುರುವಾಯಿತು. ವಿಧುವಿನ ನಿರೀಕ್ಷೆ ಇಲ್ಲದೆ ತರಗತಿಗೆ ಮೊದಲನೆಯವನಾಗಿ ಬಂದ. ಅದನ್ನು ಸ್ನೇಹಿತ ಎನಿಸಿಕೊಂಡಿದ್ದ ಕುಶಾಲ್ ಗೆ ತಡೆಯಲಾಗಲಿಲ್ಲ ಎಂಬ ಸತ್ಯದ ಅರಿವಾದಾಗ ವಿಧುವಿಗೆ ಆಘಾತವಾಯಿತು. ಅವನನ್ನು ನೇರವಾಗಿ ಎದುರಿಸಲು ಆಗದ ಕುಶಾಲ್ ಬೇರೆ ರೀತಿಯಲ್ಲಿ ಅವನ ಏಳಿಗೆಯನ್ನು ತಡೆಯಬೇಕೆಂದು ಸಹಪಾಠಿಗಳಿಂದ ಯಾವುದೇ ರೀತಿಯ ಶೈಕ್ಷಣಿಕ ಸಹಕಾರ ಸಿಗದಂತೆ ಮಾಡಬೇಕು ಎಂಬ ದೃಷ್ಟಿಕೋನದಲ್ಲಿ ಯೋಚಿಸಿ ಅವನಿಗೆ ಅರ್ಥವಾಗದ ಪಾಠವನ್ನು ಹೇಳಿಕೊಡುವ ಹುಡುಗರಿಗೆ ಪಾಠವನ್ನು ಹೇಳಿಕೊಡಬೇಡಿ ಎಂದು ತಾಕಿತು ಮಾಡುತ್ತಿದ್ದ .
          ಆದರೂ ವಿಧುವಿನ ಸಹಪಾಠಿಗಳು ವಿದ್ಯಾಭ್ಯಾಸದ ವಿಚಾರಗಳನ್ನು ಹೇಳಿಕೊಡುತ್ತಿದ್ದರು. ಕುಶಾಲ್ನ ಒತ್ತಡ ಹೆಚ್ಚಿದ ಮೇಲೆ ಈ ವಿಚಾರವನ್ನು ವಿಧುವಿಗೆ ತಿಳಿಹೇಳಿದರು. ಅವನು ಎರಡನೆಯ ಬಾರಿಯೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿದರು ಫಲವಾಗಿ ತರಗತಿಗೆ ಮೊದಲನೆಯವನಾಗಿ ಬಂದ. ಅಷ್ಟರಲ್ಲಾಗಲೇ ಕಾಲೇಜಿನಲ್ಲಿ ಉತ್ತಮ ಸಹಪಾಠಿಗಳನ್ನು ಎಲ್ಲ ವಿಭಾಗಗಳಲ್ಲಿ ಸಂಪಾದಿಸಿದ್ದ ವಿಧು ಎಲ್ಲ ವಿಭಾಗಗಳಿಗೆ ಚಿರಪರಿಚಿತನಾಗಿದ್ದ. ಡಿಪ್ಲೋಮೋ ತರಗತಿಯ ಮೂರನೇ ವರ್ಷಕ್ಕೆ ಕಾಲಿಟ್ಟಾಗ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯುವ ಚರ್ಚೆಗಳು ಆರಂಭವಾದವು. ಎಲ್ಲಾ ವಿಭಾಗದ ಸ್ನೇಹಿತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರಿಂದ ವಿಧುವಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಬರುತ್ತಿತ್ತು. ಆದರೆ ಅವನಿಗೆ ಯಾವುದೇ ಚುನಾವಣೆ ಬೇಡವಾಗಿತ್ತು. ಏಕೆಂದರೆ ಅವನ ಉದ್ದೇಶ ಓದುವುದರ ಮುಖಾಂತರ ಡಿಪ್ಲೋಮಾ ಮುಗಿಸಿ ಹೋಗುವುದಾಗಿತ್ತು. ಅದೇ ಸಮಯದಲ್ಲಿ ಕುಶಾಲ್ ವಿಧುವಿನ ಹತ್ತಿರ ಸಹಾಯ ಕೇಳಿಕೊಂಡು ಬಂದ, ಅವನು ಉದ್ದೇಶವಿದ್ದು ವಿಧವನ್ನು ಹಿಡಿದರೆ ವೋಟು ತೆಗೆದುಕೊಳ್ಳಲು ಅನುಕೂಲ ಆಗಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಇದನ್ನು ಅರಿಯದ ವಿಧು ಸ್ನೇಹಿತ ಸಹಾಯ ಕೇಳಿಬಂದಾಗ ಸಹಾಯ ಮಾಡುವುದು ನಿಜ ಸ್ನೇಹಿತನ ಲಕ್ಷಣವೆಂದು ಅವನ ಚುನಾವಣೆಗೆ ಸಹಾಯ ಮಾಡಲು ಒಪ್ಪಿದ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕುಶಾಲ್ ನ ಗೆಲುವಿಗೆ ಪ್ರಮುಖ ಕಾರಣನಾದ. ಕುಶಾಲ್ ಗೆಲ್ಲುವೆ ವಿಧುವಿಗೆ ಮುಳುವಾಗಿ ಕಾಡಿತು. ಕುಶಾಲ್ ನ ಇತರೆ ಸ್ನೇಹಿತರೆ ಅವನನ್ನು ಸೋಲಿಸಲು ಸಿದ್ಧವಿದ್ದ ಪರಿಸ್ಥಿತಿಯಲ್ಲಿ ಅವರನ್ನೆಲ್ಲ ಸಂಬಾಳಿಸಿ ಕುಶಾಲ್ ಗೆಲುವಿಗೆ ಕಾರಣನಾದ, ಕುಶಾಲ್ ತನ್ನ ಬುದ್ಧಿಯನ್ನು ಚುನಾವಣೆಯಲ್ಲಿ ಗೆದ್ದ ಮರುದಿನದಿಂದಲೇ ತೋರಿಸಲು ಶುರು ಮಾಡಿದ. ಚುನಾವಣೆಯಲ್ಲಿ ಗೆದ್ದ ಮರುದಿನ ಸಿಹಿ ಹಂಚುವ ಸಮಯದಲ್ಲಿ ಕುಶಾಲ್ ಗೆ ಕೇಡು ಬಯಸಿದವರನ್ನ ವೇದಿಕೆಯ ಮೇಲೆ ಕರೆದು ವಿಧವನ್ನು ಕರೆಯದಂತೆ ಅವಮಾನಿಸಿ ಬಿಟ್ಟ........

Friday, October 2, 2020

ಬಿಜೆಪಿ ಹೊರತಾದ ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶಕ್ಕೆ ಇದೆಯೇ ?

ಭಾರತದ ಭವ್ಯ ಪರಂಪರೆಗೆ ಕಾರಣ, ಈ ನೆಲದ ಮಣ್ಣಿನ ಗುಣವಾದ ಪ್ರಾಕೃತಿಕ ಸೊಬಗಿನ ಸಂಸ್ಕೃತಿ .ಭಾರತ ವಿಶ್ವಕ್ಕೆ ಬದುಕನ್ನು ಹೇಳಿಕೊಟ್ಟ ದೇಶ. ವಿವಿಧತೆಯಲ್ಲಿ ಏಕತೆಯನ್ನು ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದ, ವಿಶ್ವಕ್ಕೆ ಸಹಬಾಳ್ವೆಯ ಮಹತ್ವವನ್ನು ಸಾರಿದ, ವಿಶ್ವವೇ ಒಂದು ಮನೆಯೆಂದು ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯವನ್ನು ಕೊಟ್ಟ ದೇಶ. ಇಂತಹ ದೇಶದ ರಾಜಕೀಯ ಇತಿಹಾಸ ಇಂದು ನೆನ್ನೆಯದಲ್ಲ ಅದಕ್ಕೆ ಅದರದೇ ಆದ ಅಮೋಘ ಇತಿಹಾಸವಿದೆ. ರಾಮಾಯಣ ಕಾಲದಿಂದ ಆರಂಭವಾಗಿ ಮಹಾಭಾರತದಿಂದ ಇಂದಿನ  ಕಲಿಯುಗದಲೂ ತನ್ನದೇ ರಾಜಕೀಯ ಇತಿಹಾಸ ಇರುವ ದೇಶ ಯಾವುದಾದರೂ ಇದ್ದರೆ ? ಅದು ಭಾರತ ಮಾತ್ರ . ಭಾರತವು ಇಂದಿನವರೆಗೆ ಪ್ರೌಢತೆಯ ಪ್ರಬುದ್ಧತೆಯ ರಾಜಕೀಯ ಆಡಳಿತವನ್ನು ಮಾಡಿಕೊಂಡು ಬಂದ ದೇಶ. ಈ ದೇಶವನ್ನು ಇದುವರೆಗೂ ಯಾರೂ ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಲಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು ? ಅದಕ್ಕೆ ಉತ್ತರ ನಮ್ಮ ಭೂತಾಯಿಯ ಆತ್ಮವೇ ಈ ನಮ್ಮ ಭಾರತ ದೇಶ. ಆತ್ಮವಿಲ್ಲದ ದೇಹ ಹೇಗೆ ಕಾರ್ಯಾಚರಿಸುವುದು ಇಲ್ಲವೋ ಅದೇ ರೀತಿ ಭಾರತದ ಬೆಳಕಿಲ್ಲದೆ ವಿಶ್ವವು ಉನ್ನತಿಗೆ ಹೋಗಲು ಸಾಧ್ಯವಿಲ್ಲ. ಭಾರತವು ಪ್ರಕೃತಿಯೊಂದಿಗೆ ಬೆರೆತ ದೇಶ ಪ್ರಕೃತಿಯ ಒಂದು ಭಾಗವೂ ಹೌದು. ಪ್ರಕೃತಿ ಬಯಸುವುದು ಧರ್ಮವನ್ನು, ಧರ್ಮವೆಂದರೆ ಪ್ರಕೃತಿಯೊಂದಿಗೆ ಕೂಡಿಬಾಳುವ ಒಂದು ಅನುಬಂಧ. ಅದೇ  ಸಂಸ್ಕೃತಿಯೇ ಮುಂದೆ ಧರ್ಮವಾಯಿತು.
                ಈ ಅನುಬಂಧ ಏರುಪೇರಾದರೆ ಈ ಪುಣ್ಯಭೂಮಿಯು ತನ್ನ ಸೇವಕರನ್ನು ತನ್ನ ನೆಲದ ಮೇಲೆ ಕರೆಸಿಕೊಳ್ಳುತ್ತದೆ. ಹಾಗೆಯೇ ನಮ್ಮ ದೇಶಕ್ಕೆ ಅವನತಿ ಬಂದಾಗ ಒಬ್ಬರ ಅಧಿಪತ್ಯ ಸಾಧಿಸುವಂತಹ ಪ್ರಸಂಗಗಳು ಎದುರಾದಾಗ ಪರ್ಯಾಯ ನಾಯಕರುಗಳು ಬರುತ್ತಾರೆ. ಹಾಗೆಯೇ ಇತಿಹಾಸ ನೋಡಿಕೊಂಡು ಹೋದಾಗ ನಮಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಹಿಂದುತ್ವ ಅವನತಿಯ ಹಾದಿ ಹಿಡಿಯುವ ಸಮಯದಲ್ಲಿ ಆಧ್ಯಾತ್ಮಿಕ ಕ್ರಾಂತಿಗಳು ಆಗಿದ್ದುಂಟು. ಅದಕ್ಕೆ ಉತ್ತಮ ಉದಾಹರಣೆ  ಶಂಕರಾಚಾರ್ಯರು ಸನಾತನ ಧರ್ಮವನ್ನು ಮತ್ತೆ ಉಳಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದು. ಉತ್ತರಭಾರತದಲ್ಲಿ ಮುಸಲ್ಮಾನರ ದಾಳಿಗಳ ಆದಾಗ ದಕ್ಷಿಣ ಭಾರತದಲ್ಲಿ ನಾರಾಯಣಗುರು ಅವರ ಮುಖಾಂತರ ಆಧ್ಯಾತ್ಮಿಕ ಕ್ರಾಂತಿಯಾಗಿದ್ದು ಉಂಟು. ಒಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಈ ಮಣ್ಣಿನ ಗುಣಲಕ್ಷಣ. ಅದೇ ಕಾರಣ ಇಂದಿನವರೆಗೂ ಈ ದೇಶದಲ್ಲಿ ಯಾರಿಗೂ ಸರ್ವಾಧಿಕಾರಿಯಾಗಿ ಮರೆಯಲು ಸಾಧ್ಯವಾಗಿಲ್ಲ.
                 ಸ್ವಾತಂತ್ರ ಭಾರತದ ನಂತರ ದೇಶವು ಸಂಸ್ಕೃತಿಯ ಹೊರತಾಗಿ ರಾಜಕೀಯ ಧರ್ಮದ ( ಅಂದರೆ ರಾಜಕೀಯ ಸ್ವಾರ್ಥವನ್ನು ಇಟ್ಟುಕೊಂಡು ವೋಟ್ ಬ್ಯಾಂಕಿಗಾಗಿ ಹೆಸರಿಸುವ ಧರ್ಮ ) ವಿಚಾರವಾಗಿ ದೇಶ ಇಬ್ಭಾಗವಾಗಿ ಹೋಯಿತು. ಪಾಕಿಸ್ತಾನ ಮುಸಲ್ಮಾನರ ದೇಶವಾಗಿ ಭಾರತವು ಅರ್ಥವಿಲ್ಲದ ಪದವಾದ ಸೆಕ್ಯುಲರ್ ದೇಶವಾಗಿ ಹೊರಹೊಮ್ಮಿದಾಗ ಸಹಜವಾಗಿ ಹಿಂದುಗಳ ಸಹನೆಯ ಕಟ್ಟೆ ಒಡೆಯಿತು. ಅದರ ಫಲವೇ ಮುಂದಿನ ದಿನಗಳಲ್ಲಿ ಬಂದ ಜನ ಸಂಘ. ಜನ ಸಂಗವು ರೂಪಾಂತರಗೊಂಡು ಭಾರತೀಯ ಜನತಾ ಪಾರ್ಟಿ ಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅದು ಯಾವ ಹೆಸರಿನಲ್ಲಿ ಅಧಿಕಾರ ಹಿಡಿಯಿತೋ ಅದರ ಮೂಲ ಸತ್ವವನ್ನೇ ಮರೆತುಬಿಟ್ಟಿತು. ಹಿಂದುತ್ವಕ್ಕೆ ಪೂರಕವಾದ ಯಾವ ಕೆಲಸಗಳು ಆಗಲಿಲ್ಲ. ಮತ್ತೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿತು. ಆನಂತರ ವಿದೇಶಿ ಮಹಿಳೆ ನಮ್ಮ ಭಾರತ ಭೂಮಿಯನ್ನು ಅನ್ಯಮಾರ್ಗದಿಂದ ಆಳಿದರು. ಅದರ ಪ್ರತಿಫಲ ಎನ್ನುವಂತೆ ದೇಶವು ಅವನತಿ ಹಾದಿಯನ್ನು  ಹಿಡಿಯಿತು. ಕಾಲಕಳೆದಂತೆ ಹಿಂದುತ್ವದ ಆದರ್ಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಪಕ್ಷಕ್ಕಾಗಿ ಹಗಲು ಇರುಳು ಎನ್ನದೆ ದುಡಿದ ಕಾರ್ಯಕರ್ತರು, ನಾಯಕರು ನೈಪಥ್ಯಕ್ಕೆ ಸರಿದರು. ಅನ್ಯ ಪಕ್ಷಗಳಿಂದ ಬಂದು ಬಿಜೆಪಿಯಲ್ಲಿ ಅಧಿಕಾರ ಅನುಭವಿಸುತ್ತಿರುವವರು ಒಂದು ಕಾಲದಲ್ಲಿ ಬಿಜೆಪಿಯ ನಿಷ್ಠಾವಂತರಿಗೆ ನೋವು ಕೊಟ್ಟವರೇ. ನಿಸ್ವಾರ್ಥದಿಂದ ದುಡಿದವರನ್ನು ಬಿಜೆಪಿ ಮರೆಯಿತು. ಜಾತಿ ಆಧಾರದ, ಸ್ವಜನಪಕ್ಷಪಾತದ, ಹಿಂಬಾಲಕರಿಗೆ ಮಣೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜನಸಂಘದ ಧ್ಯೇಯಗಳು ಬಿಜೆಪಿಯಲ್ಲಿ ಉಳಿದಿಲ್ಲ ಎಲ್ಲವೂ ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ.
                  ಇಂದು ಬಿಜೆಪಿಯಲ್ಲಿ ನೈತಿಕತೆ ಕಡಿಮೆಯಾಗಿರುವ ಪರಿಣಾಮ ಕೆಲವರು ಬಿಜೆಪಿ ಬಿಡಲು ಸಿದ್ಧರಿದ್ದರು ಅವರಿಗೆ ಹಿಂದೂ ರಾಷ್ಟ್ರೀಯವಾದದ ನೆಲೆಗಟ್ಟಿನ ಪಕ್ಷ ಸಿಗುತ್ತಿಲ್ಲ. ಹಿಂದೂ ರಾಷ್ಟ್ರೀಯವಾದ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಭಾರತದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರದಲ್ಲಿದ್ದರು ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸುತ್ತಿಲ್ಲ. ಇದು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ. ಅದರ ಹಿಂದುತ್ವದ ಅಜೆಂಡಾ ಬರಿ ವೋಟ್ ಬ್ಯಾಂಕಿಗಾಗಿ ಸೀಮಿತವಾಗಿದೆ. ಇನ್ನೂ ಅದರ ಆರ್ಥಿಕ ನೀತಿಯಲ್ಲಿನ ಅಸಮತೋಲನ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಅದನ್ನು ಪ್ರಶ್ನಿಸುವ ಗಟ್ಟಿ ದ್ವನಿ ಸಂಸತ್ತಿನಲ್ಲಿ ಇಲ್ಲದಂತಾಗಿದೆ. ಅದರ ವೈಫಲ್ಯಗಳನ್ನು ಹೇಳಿದರೆ ಅದು ಹಿಂದುತ್ವ ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಬಿಜೆಪಿಯ ವಿರುದ್ಧ ಮಾತನಾಡಿದರೆ ಅದು ದೇಶ ವಿರುದ್ಧ ಮಾತನಾಡಿದಂತೆ ಎಂದು ಬಿಂಬಿಸಲಾಗುತ್ತಿದೆ. ಅದನ್ನು ಪ್ರಶ್ನಿಸುವ ದೇಶದ ಪರವಾಗಿ ಹೋರಾಡುವ ಇನ್ನೊಂದು ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶದಲ್ಲಿ ಬಹಳ ಇದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾಗಿದೆ. ಹಿಂದುತ್ವವೆಂಬುದು ಬಿಜೆಪಿ ಬರುವುದಕ್ಕಿಂತಲೂ ಮೊದಲೇ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ..... ಏಕೆಂದರೆ ಹಿಂದುತ್ವ ಸನಾತನ ಹಾಗೂ ಅನಂತ.....