Thursday, July 23, 2020

ಪ್ರೇಮದ ಅನ್ವೇಷಣೆ ಭಾಗ-7

ಮನಸ್ಸಿನಲ್ಲಿ ಎಲ್ಲೋ ಪ್ರತಿಯೊಂದುನ್ನು ಪಡೆಯಲು ಅದೃಷ್ಟ ಮಾಡಿರಬೇಕು ಎಂದು ಕೆಲವರು ಹೇಳುವ ಮಾತು ಸತ್ಯವೆನಿಸಿತು. ರೈಲಿನಿಂದ ಇಳಿದು ನೇರವಾಗಿ ರೈಲಿನ ವಿಚಾರಣೆಯ ತಿಳಿಯುವ ಸಲುವಾಗಿ ಅಲ್ಲಿದ್ದವರನ್ನು ಕೇಳಿದ ಅವರು ಶಿವಮೊಗ್ಗದ ಕಡೆ ಸಂಜೆಯತನಕ ಯಾವುದೇ ರೈಲು ಗಾಡಿಗಳು ಇರುವುದಿಲ್ಲ ಎಂದರು. ಬೀರೂರಿನಿಂದ ಬಸ್ ನಿಲ್ದಾಣಕ್ಕೆ ಒಂದುವರೆ ಕಿಲೋಮೀಟರ್ ದೂರ, ಬೇಸಿಗೆಯ ಬಿಸಿಲು ಬೇರೆ, ಬಿಸಿಲು ಕಣ್ಣಿಗೆ ರಾಚುತ್ತಿತ್ತು . ಆಟೋಗಾಗಿ ಕಾದರೂ ಒಂದು ಆಟೋ ಬಾರದೆ ಹೋಯಿತು. ಇದ್ದ ಎರಡು ಆಟೋಗಳು ಮೊದಲೇ ಬುಕ್ ಆಗಿದ್ದವು. ರೈಲು ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಾಗಲು ಬೇರೆ ಅವಕಾಶವಿಲ್ಲದ ಕಾರಣ ವಿಧು ತನ್ನ ಮಣಬಾರದ ಬ್ಯಾಗಿನೊಂದಿಗೆ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಲು ಶುರು ಮಾಡಿದ, ಬರುವ ದಾರಿಯಲ್ಲಿ ಬಹಳ ಬಾಯಾರಿಕೆಯಾಗಿ ನೀರಿನ ಬಾಟಲ್ ನಿಂದ ನೀರು ಕುಡಿಯಲು ತೆಗೆದರೆ ನೀರು ಕೂಡ ಸಣ್ಣ ಪ್ರಮಾಣದ ಬಿಸಿಯಾಗಿದ್ದ ಅನುಭವ.  ಅಬ್ಬಾ ಎಂತಹ ಬಿಸಿಲಿನ ಝಳ ಎಂದುಕೊಂಡು ಮುಂದೆ ಹೆಜ್ಜೆ ಇಡಬೇಕಾದರೆ ವಿಧುವಿನ ಗೆಳೆಯನಾದ ಅನಿಕೇತ ಸಿಕ್ಕಿದ.
            ವಿಧು ನೀನೇನು ಇಲ್ಲಿ ಎಂದು ಕೇಳಿದ ? ವಿಧು ತಮಾಷೆಗಾಗಿ ಮದುವೆಯ ಪ್ರವಚನ ಗುಂಗಿನಿಂದ ಹೊರಬಂದಿರಲಿಲ್ಲದವನ ಆಗಿದ್ದರಿಂದ ಇಲ್ಲೇ ಮದುವೆಯಾಗಲು ಹೆಣ್ಣು ನೋಡಲು ಬಂದಿದ್ದೇನೆ ಎಂದು ತಮಾಷೆ ಮಾಡಿದ. ಅದಕ್ಕೆ ನಕ್ಕ ಅನಿಕೇತ್ ತುಂಬಾ ದಿನಗಳ ನಂತರ ಸಿಕ್ಕಿದಿಯಾ ಬಾ ಏನಾದರೂ ತಿಂಡಿಯನ್ನು ತಿಂದು ಕಾಫಿಯನ್ನು ಕುಡಿಯೋಣ ಎಂದ. ವಿಧು ಕೂಡ ತುಂಬಾ ದಿನಗಳ ನಂತರ ಸಿಕ್ಕ ಸ್ನೇಹಿತನ ಖುಷಿಗಾಗಿ ಸರಿ ನಡಿ ಹೋಗೋಣವೆಂದ. ಅನಿಕೇತ್ ತನ್ನ ಬೈಕಿನಲ್ಲಿ ಮಣಭಾರದ ಬ್ಯಾಗನ್ನು ಇಟ್ಟುಕೊಂಡು ಕೇಳಿದ ಹೆಣ್ಣು ನೋಡಲು ಬಂದೆ ಎಂದು ಹೇಳಿದೆ ,ನೋಡಿದರೆ ಇಷ್ಟು ದೊಡ್ಡದಾದ ಭಾರವಾದ ಬ್ಯಾಗನ್ನು ಇಟ್ಟುಕೊಂಡಿದಿಯಲ್ಲ ಎಂದ. ಅವನ ಮಾತಿಗೆ ನಕ್ಕ ವಿಧು ಅಯ್ಯೋ ಸುಮ್ಮನೆ ಹೇಳಿದೆ ಮಾರಾಯ ಎಂದ. ನಾನು ಹೌದು ಅಂದುಕೊಂಡೆ ಇಷ್ಟು ದೊಡ್ಡದಾದ ಬ್ಯಾಗನ್ನು ಹಾಕಿಕೊಂಡು ಯಾರು ಹೆಣ್ಣನ್ನು ನೋಡಲು ಬರುತ್ತಾರೆ ಎಂದು ? ಆದರೂ ನೀನು ತುಂಬಾ ಗಂಭೀರ ವ್ಯಕ್ತಿ ಅಲ್ಲವೇ ಹಾಗಾಗಿ ಇದ್ದರೂ ಇರಬಹುದು ಎಂದು ಅಂದುಕೊಂಡೆ ಎಂದ ನಸುನಕ್ಕ ವಿಧು ಯಾರಾದರೂ ಹೆಣ್ಣು ನೋಡಲು ಹೋಗುವವರು ಒಂಟಿಯಾಗಿ ಅದು ಮಣಬಾರದ ಬ್ಯಾಗಿನೊಂದಿಗೆ ಬರುವುದುಂಟಾ ?  ಎಂದು ಹೇಳುತ್ತಾ ಸರಿ ಬಿಡು ಮತ್ತೆ ಏನು ಸಮಾಚಾರ ಎಂದು ಕೇಳಿದ. ಅದಕ್ಕೆ ಅನಿಕೇತ್ ನನ್ನದೇನು ಇಲ್ಲ ಎಲ್ಲಾ ನೀನೆ ಹೇಳಬೇಕು ಬೆಂಗಳೂರು ಹುಡುಗ ಎಂದು ಮಾತು ಮುಂದುವರಿಸಿದ. ಅನಿಕೇತ್ ನಾನೇನು ನಮ್ಮ ಊರಿನಲ್ಲಿ ಬಂದು ಸೆಟಲ್ ಆಗಿದ್ದೀನಿ. ನೀನು ಇನ್ನೂ ಲೋಕ ಸಂಚಾರ ಮಾಡಿಕೊಂಡು ಇದ್ದಿಯೋ ಅಥವಾ ಎಲ್ಲಾದರೂ ಒಂದು ಕಡೆ ಬದುಕು ಕಟ್ಟಿ ಕೊಂಡಿದ್ದೀಯಾ ? ಎಂದು ಕೇಳಿದ.  ವಿಧುವಿನ ನಗುವನ್ನು ನೋಡಿದ ಕೂಡಲೇ ಅದರಲ್ಲೂ ವಿಧವಿನ ಮುಗುಳು ನಗುವಿನ ಹಿಂದೆ ನೂರಾರು ಅರ್ಥವನ್ನು ಹುಡುಕುವ ಅನಿಕೇತ್ ಇನ್ನೂ ಒಂದು ಕಡೆ ನೆಲೆ ನಿಂತಿಲ್ಲ ಅನಿಸುತ್ತಿದೆ ಎಂದು ನೇರವಾಗಿ ಹೇಳಿದ. ವಿಧು ತನ್ನ ನಗುವಿನೊಂದಿಗೆ ಇಲ್ಲ ಬೆಂಗಳೂರಿನಲ್ಲಿ ಇವಾಗ ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದು ಹೇಳಿದ. ಕೂಡಲೇ ಮಾತು ತಡೆದ ಅನಿಕೇತ್ ನಿಲ್ಲು ! ನಿಜವಾಗಲೂ ಯಾವಾಗಲೂ ನೋಡಿದರೆ ದೇಶ ದೇಶ ಎಂದು ಊರೂರು ಸುತ್ತುವ ನೀನು ಸ್ವಂತ ಉದ್ಯೋಗ ಮಾಡುತ್ತಿದ್ದೀಯಾ ಎಂದರೆ ನಂಬಲು ಕಷ್ಟವಾಗುತ್ತಿದೆ .
           ನೀನು ಇಂತಹ ನಿರ್ಧಾರಕ್ಕೆ ಬಂದಿದ್ದೀಯಾ ಎಂದರೆ ಎಲ್ಲೋ ಪ್ರೀತಿಯಲ್ಲಿ ಬಿದ್ದಿರಬೇಕು ಮದುವೆಯ ಬಗ್ಗೆ ವಿಚಾರ ಮಾಡಿರಬೇಕು ಹಾಗಾಗಿ ಒಂದು ಕಡೆ ನೆಲೆ ನಿಂತಿರುವೆ ! ನೀನು ಎಂದು  ಅನುಮಾನದಿಂದ ಕೇಳಿದ ಇನ್ನೇನು ಇದು ಮಾತು ಮುಂದುವರೆಸಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮಾತು ಮುಂದುವರಿಸಿದ ಅನಿಕೇತ್ ನಾವು ಎಲ್ಲರೂ ಪ್ರೀತಿಯಲ್ಲಿ ಬಿದ್ದರೂ ನೀನು ಮಾತ್ರ ಯಾರನ್ನು ಪ್ರೀತಿಸುವ ಮನಸ್ಸು ಮಾಡಲಿಲ್ಲ ಎಂದ. ವಿಧು ಮಾತು ಮುಂದುವರಿಸುತ್ತಾ ಪ್ರೀತಿ ಮನಸ್ಸಿನಿಂದ ಬರಬೇಕು. ಅದು ಬೇರೆಯವರು ಪ್ರೀತಿಸಿದರೆಂದು ನಾವು ಪ್ರೀತಿಸಲು ಶುರು ಮಾಡಿದರೆ ಅದು ನಿಜವಾದ ಪ್ರೀತಿ ಆಗಲು ಸಾಧ್ಯವೇ ? ಏಕೆ ! ನಾನು ಪ್ರೀತಿಸುತ್ತಿದ್ದೇನೆ ನಾನು ನನ್ನ ದೇಶವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ. ಇನ್ನು ಏನು ಆಗಬೇಕು ಎಂಬ ಪ್ರಶ್ನೆಗೆ ಅನಿಕೇತ್ ವಿಧು ನೀನು ಹೇಳುವುದು ಸತ್ಯ ಆದರೆ....
Author : Rakesh Bhagiratha.

Monday, July 13, 2020

ಪ್ರೇಮದ ಅನ್ವೇಷಣೆ ಭಾಗ-6

ಈ ಜನ್ಮದಲ್ಲಿ ಮದುವೆಯಾಗಬಾರದೆಂದು ನಿಶ್ಚಯಿಸಿದಕ್ಕೆ ಪ್ರತಿಯಾಗಿ ಇವರು ಮದುವೆಯ ಪ್ರವಚನ ಮಾಡುತ್ತಿದ್ದಾರಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ನಾನು ಈ ಜನ್ಮದಲ್ಲಿ ಮದುವೆಯಾಗುವುದಿಲ್ಲ ಎಂದು ಹೇಳುವಷ್ಟರಲ್ಲಿ ಚಿದಾನಂದ ಅವರು ಈ ರೀತಿ ಮಗನ ವಯಸ್ಸಿನ ಮಕ್ಕಳನ್ನು ಕಂಡರೆ ಮದುವೆ ಬಗ್ಗೆ ಮಾತನಾಡುತ್ತಾಳೆ ಎಂದರು. ಇವರನ್ನು ಹೀಗೆ ಬಿಟ್ಟರೆ ಬರೀ ಮದುವೆಯ ಬಗ್ಗೆ ಮಾತನಾಡುತ್ತಾರೆ ಎಂದು ಗೊತ್ತಾದ ಕೂಡಲೇ ಅವರ ಚಿತ್ತವನ್ನು ಪ್ರಕೃತಿಯ ಕಡೆಗೆ ಸೆಳೆಯಬೇಕು ಎಂಬ ಉದ್ದೇಶದಿಂದ ಯೋಚಿಸುತ್ತಿರಬೇಕಾದರೆ ರೈಲು ಅರಸೀಕೆರೆ ನಿಲ್ದಾಣ ತಲುಪಿತ್ತು. ಅರಸೀಕೆರೆ ನಿಲ್ದಾಣ ಜಂಕ್ಷನ್ ಆಗಿರುವುದರಿಂದ ರೈಲು ಸ್ವಲ್ಪ ಸಮಯ ಅಲ್ಲಿ ನಿಲ್ಲುತ್ತದೆ ಎಂದು ತಿಳಿದು ವಿಧು ರೈಲಿನಿಂದ ಕೆಳಗೆ ಇಳಿದು ಸ್ವಲ್ಪ ಸಮಯ ಅತ್ತಿಂದಿತ್ತಾ ಓಡಾಡಿದ, ರೈಲಿನಲ್ಲಿ ಅರಸೀಕೆರೆ ಮಾರ್ಗ ಸಂಚರಿಸುವಾಗ ಯಾವಾಗಲೂ ಬಾದಾಮಿಹಾಲನ್ನು  ಕುಡಿಯುತ್ತಿದ್ದ. ಅದರಂತೆ ಈ ಬಾರಿಯೂ ಹಾಲನ್ನು ತೆಗೆದುಕೊಂಡು ಕುಡಿಯುತ್ತಿರುವಾಗ ಹೊಸದಾಗಿ ಮದುವೆಯಾದ ನವ ಜೋಡಿ ನೋಡಿ ಅವನಿಗೆ ನಗು ಬಂತು. ಕುರಿ ಹಳ್ಳಕ್ಕೆ ಬಿದ್ದಿದೆ ಎಂದು ಮನಸ್ಸಿನಲ್ಲೇ ನಕ್ಕು ಮುಂದೆ ಹೆಜ್ಜೆ ಹಾಕಿದ. ಇನ್ನೇನು ರೈಲುಗಾಡಿಯ ಒಳಗೆ ಬರಬೇಕು, ಅಷ್ಟರಲ್ಲಿ ಸಾಧುಗಳ ದರ್ಶನವಾಯಿತು. ಸಾಧುಗಳ ಕಣ್ಣಿನಲ್ಲಿ ಪ್ರಕಾಶಮಾನವಾದ ತೇಜಸ್ಸು ಕಂಗೊಳಿಸುತ್ತಿತ್ತು. ಸಾಧುಗಳು ವಿಧುವನ್ನು ಹತ್ತಿರ ಬರುವಂತೆ ಕೈಸನ್ನೆ ಮಾಡಿದರು. ಅವರ ಬಳಿ ಹೋಗುತ್ತಿದ್ದಂತೆ  ನೋಡಿ ನಕ್ಕು ನಿನ್ನ ಮುಂದಿನ ಕಾರ್ಯಕ್ಕೆ ಶುಭವಾಗಲಿ, ಬದಲಾವಣೆಗೆ ಸಿದ್ಧನಾಗು ಎಂದು ಹರಸಿದರು. ಅವರ ಆಶೀರ್ವಾದದ ಮರ್ಮ ಏನೆಂದು ಕೇಳಬೇಕು ಅನ್ನುವಷ್ಟರಲ್ಲಿ ರೈಲುಗಾಡಿ ಹೊರಟಿತು ಕೂಡಲೇ ಸಾಧುಗಳ ಆಶೀರ್ವಾದ ಸ್ವೀಕರಿಸಿದ ವಿಧು ರೈಲುಗಾಡಿಯನ್ನು ಹತ್ತಿದ, ರೈಲು ಗಾಡಿಯು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸಿತು.
           ಅವರ ಮುಗುಳುನಗು ಹಲವಾರು ಗೂಢಾರ್ಥವನ್ನು ಸೂಚಿಸುತ್ತಿತ್ತು ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಇಟ್ಟುಕೊಂಡು ರೈಲಿನಲ್ಲಿ ಕುಳಿತು ತನ್ನದೇ ಆದ ಯೋಚನಾಲಹರಿಯಲ್ಲಿ ಬಿದ್ದ. ಪ್ರತಿಬಾರಿ ಯಾವುದೋ ಒಂದು ಮಹಾಶಕ್ತಿ ತನ್ನ ಬದುಕಿನ ಪಥವನ್ನು ನಿರ್ಧರಿಸುತ್ತದೆ ಎಂದು ಯೋಚಿಸುತ್ತ ಕುಳಿತಿರಬೇಕಾದರೆ ಮತ್ತೆ ಸತ್ಯವತಿ ಅವರ ಮಾತು ಪ್ರಾರಂಭವಾಯಿತು. ಓ ಇವರು ಬಿಟ್ಟರೆ ಇನ್ನು ಮದುವೆ ಪ್ರವಚನ ಹೊಡೆಯುತ್ತಾರೆ ಎಂದವನೇ ನೋಡಿ ಅರಸೀಕೆರೆ ಭಾಗದಲ್ಲಿ ಮಳೆ ಇಲ್ಲದೆ ತೆಂಗಿನ ಮರಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಹಾಕಿದ ಅಡಿಕೆ ಮರಗಳು ಒಣಗುತ್ತಿವೆ ಅಲ್ಲವೇ ? ಎಂದು ಈ ಬಾರಿ ಅವರ ಗಮನವನ್ನು ಪ್ರಕೃತಿಯ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾದ. ಹೌದಪ್ಪ ಮಳೆಗಾಲ ಚೆನ್ನಾಗಿ ನಡೆಸುತ್ತಿಲ್ಲ ಎಂದು ತಮ್ಮ ಹಿಂದಿನ ಅನುಭವದ ಮಾತುಗಳನ್ನು ಮತ್ತೆ ತೆಗೆದರು ಅಬ್ಬ ಒಂದು ಮದುವೆಯ ಪ್ರವಚನಕ್ಕೆ ಬ್ರೇಕ್ ಬಿತ್ತಲ್ಲ ಎಂದು ಮನಸ್ಸಿನಲ್ಲೇ ಸಂತೋಷಗೊಂಡ.
              ಸತ್ಯವತಿಯವರು ತಮ್ಮ ಬದುಕು ಕಟ್ಟಿಕೊಂಡ ರೀತಿಯನ್ನು ವಿವರಿಸ ತೊಡಗಿದರು. ಅದನ್ನು ಕೇಳುವ ಹೊತ್ತಿಗೆ ರೈಲು ಕಡೂರು ನಿಲ್ದಾಣವನ್ನು ತಲುಪಿತು. ಅಬ್ಬ ಇವರ ಜೊತೆಗೆ ಅರ್ಧದಾರಿ ಕ್ರಮಿಸುವ ಹೊತ್ತಿಗೆ ರೈಲಿನಿಂದ ಇಳಿಯುತ್ತಿರುವುದು ಸರಿಹೋಯಿತು. ಇಲ್ಲವೆಂದರೆ ಇವರು ಹತ್ತಿರ ಮದುವೆ ವಿಚಾರದಲ್ಲಿ ಮೊಳೆಯನ್ನು ಇನ್ನು ಹೊಡೆಸಿ ಕೊಳ್ಳಬೇಕಾಗಿತ್ತು ಎಂದು ಮನಸ್ಸಿನಲ್ಲಿ ಅಂದುಕೊಂಡ. ಅಮ್ಮ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು ಸ್ವಲ್ಪ ಜಾಗವನ್ನು ಕೊಡಿ ನಾನು ನನ್ನ ಬ್ಯಾಗುಗಳನ್ನು ತೆಗೆದುಕೊಳ್ಳಬೇಕು ಎಂದು ಎದ್ದುನಿಂತ, ಕೂಡಲೇ ಸತ್ಯವತಿಯವರು ಅಜ್ಜಂಪುರದಲ್ಲಿ ಇಳಿಯುತ್ತೇನೆ ಎಂದು ಇಲ್ಲೇ ಇಳಿಯುತ್ತಿದ್ದಿಯಲ್ಲ ಎಂದರು. ಇಲ್ಲಮ್ಮ ನನ್ನ ಸ್ವಂತ ಊರು ಅಜ್ಜಂಪುರ ನಾನು ಬೇರೆ ಕಾರ್ಯದ ಮೇಲೆ ಶಿವಮೊಗ್ಗಕ್ಕೆ ಹೋಗಬೇಕಾಗಿದೆ ಹಾಗಾಗಿ ಇಲ್ಲೇ ಇಳಿಯುತ್ತಿದ್ದೇನೆ ಎಂದು ಹೇಳಿದ. ಓ ಆಯ್ತು ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹರಸಿದರು. ಬೀರೂರಿನ ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ರೈಲು ಬಂದಿತು. ವಿಧು ಮಾತೃಹೃದಯಿ ಸತ್ಯವತಿ ಅವರಿಗೆ ಧನ್ಯವಾದಗಳನ್ನು ತಿಳಿಸಿ ರೈಲಿನಿಂದ ಇಳಿದ. ಮನಸ್ಸಿನಲ್ಲಿ ಎಲ್ಲೋ......

Author : Rakesh Bhagiratha.

Sunday, July 5, 2020

ಪ್ರೇಮದ ಅನ್ವೇಷಣೆ ಭಾಗ - 5

ಅಷ್ಟರಲ್ಲೇ ಅವರ ಸೊಸೆ ಹರ್ಷಿತ ಅಣ್ಣ ನೀವು ಯಾವ ಕೆಲಸವನ್ನು ಮಾಡಿಸುತ್ತೀರಾ ಎಂದು ಕೇಳಿದಳು. ಅಯ್ಯೋ ! ಇವರ ಅತ್ತೆಯ ಸರದಿ ಆಯ್ತು ಈವಾಗ ಸೊಸೆಯ ಸರದಿಯಲ್ಲ ಎಂದು ಮನದಲ್ಲೇ ಅಂದುಕೊಂಡ. ನಾವು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡಿಸುತ್ತೇವೆ ಎಂದು ಹೇಳಿ ಸುಮ್ಮನಾದ. ಹರ್ಷಿತಾ ಮಾತು ಮುಂದುವರೆಸಿ ಹಾಗಾದರೆ ಒಳ್ಳೆಯದೇ ದುಡಿಮೆ ಇದೆ ಮದುವೆ ಆಗಬಹುದಲ್ಲ ಎಂದು ಕೇಳಿದ ಕೂಡಲೇ ವಿಧು ಅಯ್ಯೋ ಇವರೇನು ಹೀಗೆ ಗುರುತು ಪರಿಚಯ ಇಲ್ಲದವರಿಗೆ ಇವರು ಈಗೆಲ್ಲ ಮಾತನಾಡುತ್ತಾರಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅತ್ತೆ ಆಯ್ತು ಸೊಸೆ ಆಯ್ತು ಇವಾಗ ಹುಡುಗಿಯ ಮಾವ ಏನು ಹೇಳುತ್ತಾರೋ ಎಂದುಕೊಳ್ಳುವಷ್ಟರಲ್ಲಿ ಮಾವನ ಮುಖದಲ್ಲಿ ಮುಗುಳ್ನಗೆ ಕಂಡಿತು. ಅಬ್ಭಾ... ಇವರಿಂದ ಮದುವೆ ಪ್ರವಚನ ನಡೆಯಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟು ಉಸಿರು ಎಳೆದುಕೊಳ್ಳುವರೊಳಗಾಗಿ ಅವರ ಮಾತು ಆರಂಭವಾಯಿತು. ಓಹೂ.. ಇನ್ನು ಸುಮ್ಮನಿದ್ದರೆ ಮದುವೆ ಬಗ್ಗೆ ಪ್ರವಚನ ಕೇಳಬೇಕಲ್ಲ ಎಂದುಕೊಂಡು, ಸತ್ಯವತಿಯವರು ಮಾತನಾಡುವ ಭಾವ ಕಂಡ ಕೂಡಲೇ ಅಮ್ಮ ನೋಡಿ ರೈಲುಗಾಡಿಯು ತಿಪಟೂರು ನಿಲ್ದಾಣವನ್ನು ಪ್ರವೇಶಿಸುತ್ತಿದೆ ಎಂದು ಗಮನವನ್ನು ಬೇರೆಡೆಗೆ ಸೆಳೆದ. 
           ಓಹೋ.. ಹೌದಲ್ಲಪ್ಪ ನೋಡು ಮಾತನಾಡುತ್ತ ಹೋದಂತೆಲ್ಲ ಸಮಯ ಸರಿದು ಹೋಗುವುದು ಗೊತ್ತಾಗುವುದಿಲ್ಲ ಎಂದು ಹೇಳುತ್ತಾ ರೈಲಿನ ಮೇಲಿನ ಬರ್ತ್ ಇಂದ ಒಂದು ಬಾಕ್ಸ್ ಅನ್ನು ತೆಗೆಯಲು ಮುಂದಾದರು. ಅದು ಅಷ್ಟು ಸುಲಭವಾಗಿ ಸಿಗುವಂತಿರಲಿಲ್ಲ ಹಾಗಾಗಿ ವಿಧು ಎದ್ದು ಅವರಿಗೆ ಆ ಬಾಕ್ಸನ್ನು ತೆಗೆದುಕೊಟ್ಟ, ಧನ್ಯವಾದ ಅರ್ಪಿಸಿದ ಅವರು ಅದನ್ನು ತೆಗೆದುಕೊಂಡರು.  ಅದನ್ನು ತೆಗೆದ ಮೇಲೆ ತಮ್ಮ ಕೆಳಗೆ ಇದ್ದ ಬ್ಯಾಗ್ ಇಂದ ಒಂದು ಕವರನ್ನು ತೆಗೆದರು ಅದರಲ್ಲಿದ್ದ ಚಪಾತಿಯನ್ನು ಕೊಡಲು ಬಂದರು. ಅದಕ್ಕೆ ಬೇಡಮ್ಮ ಊಟವನ್ನು ಮುಗಿಸಿ ನಾನು ರೈಲನ್ನು ಹತ್ತಿರುವುದು ಎಂದು ಹೇಳಿದ ಆಗ ಮಧ್ಯಪ್ರವೇಶಿಸಿದ ಸತ್ಯವತಿ ಗಂಡನಾದ ಚಿದಾನಂದ ಅವರು ಏನಪ್ಪಾ ನೀನು, ನಿನ್ನ ವಯಸ್ಸಿನಲ್ಲಿ ನಾನು ದಿನಕ್ಕೆ ನಾಲ್ಕು ಬಾರಿ ಊಟ ಮಾಡುತ್ತಿದ್ದೆ .ತೆಗೆದುಕೋ ಎಂದರು ಅದಕ್ಕೂ ಬೇಡ ಅಣ್ಣ ನಿಮ್ಮ ಕಾಲದಲ್ಲಿ ಎಲ್ಲಾ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದರು ನಿಮ್ಮ ಕಾಲದ ಊಟ ಆರೋಗ್ಯವನ್ನು ವೃದ್ಧಿಸುತ್ತಿತು ಇವಾಗ ಎಸಿಡಿಟಿ ಯನ್ನು ಉಂಟುಮಾಡುತ್ತದೆ, ಎಂದು ತಮಾಷೆ ಮಾಡಿದ. ಅದಕ್ಕೆ ಮುಗುಳ್ನಕ್ಕ ಚಿದಾನಂದ ಅವರು ನೀವು ಈಗಿನ ಕಾಲದ ಹುಡುಗರು ಹಾಗೂ ಹುಡುಗಿಯರು ಡಯಟ್ ಡಯಟ್ ಅಂತ ಚೆನ್ನಾಗಿ ತಿಂದು ಚೆನ್ನಾಗಿ ಇರುವುದಿಲ್ಲ. ನಮ್ಮ ಕಾಲದ ಊಟನೇ ಬೇರೆ ಎಂದರು ಅದಕ್ಕೊ ಮುಗುಳು ನಕ್ಕು ಸುಮ್ಮನಾದ.
           ಸತ್ಯವತಿಯವರು ಒಂದು ದಾಳಿಂಬೆ ಹಣ್ಣನ್ನು ಕೊಟ್ಟು ಕೊನೆಪಕ್ಷ ಈ ದಾಳಿಂಬೆ ಹಣ್ಣನ್ನು ಆದರೂ ತಿನ್ನು ಎಂದು ಹೇಳಿದರು ಸರಿ ಇನ್ನೇನು ಹಣ್ಣಿನ ಸಿಪ್ಪೆಯನ್ನು ಬಿಡಿಸಿ ತಿನ್ನಬೇಕು ಅನ್ನುವಷ್ಟರಲ್ಲಿ ಮತ್ತೆ ಮದುವೆ ಪ್ರವಚನ ಶುರುವಾಯಿತು. ನೋಡಪ್ಪ ವಿಧು ವಯಸ್ಸಿಗೆ ತಕ್ಕಂತೆ ಮದುವೆಯಾಗಬೇಕು ನೋಡಿ ತೆಳ್ಳಗೆ ಸುಂದರವಾಗಿ ಬೆಳ್ಳಗಿರುವ ಹೆಣ್ಣನ್ನು ನೋಡಿ ಮದುವೆಯಾಗು ಏಕೆಂದರೆ ನೀನು ಸುಂದರವಾಗಿರುವ ಹುಡುಗಿಯನ್ನು ಮದುವೆಯಾದರೆ ಸುಂದರವಾದ ಮಕ್ಕಳು ಹುಟ್ಟುತ್ತಾರೆ. ಇಲ್ಲ ಕಪ್ಪು ಹುಡುಗಿ ಮದುವೆಯಾದರೆ ಹುಟ್ಟುವ ಮಗು ಗಂಡಾದರೆ ಪರವಾಗಿಲ್ಲ ಹೆಣ್ಣಾದರೆ ಮತ್ತೆ ವರದಕ್ಷಿಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟು ಅವಳಿಗೆ ಮದುವೆ ಮಾಡಬೇಕಾಗುತ್ತದೆ. ಅದಕ್ಕೆ ಇವಾಗಲೇ ಒಳ್ಳೆಯ ಬೆಳ್ಳಗಿನ ಹುಡುಗಿಯನ್ನು ನೋಡಿ ಮದುವೆಯಾದರೆ ಒಳ್ಳೆಯದಲ್ಲವೇ ನೋಡು ನನ್ನ ಸೊಸೆಯನ್ನು ಅದಕ್ಕೆ ಹುಡುಕಿ ಹುಡುಕಿ ಇಂತಹ ಸೊಸೆಯನ್ನು ನನ್ನ ಮಗನಿಗೆ ತಂದಿದ್ದೇನೆ ಎಂದರು. ವಿಧು ಮನಸ್ಸಿನಲ್ಲೇ ಸತ್ಯವತಿ ಬಹಳ ಲೆಕ್ಕಾಚಾರದ ವ್ಯಕ್ತಿತ್ವದ ಅಮ್ಮನವರು ಎಂದುಕೊಂಡ.ಈ ಜನ್ಮದಲ್ಲಿ ನಾನು....
Author : Rakesh Bhagiratha.

Friday, July 3, 2020

ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯಲ್ಲಿ ನಿಜವಾದ ಹಿಂದುತ್ವದ ಜೇಂಕಾರ ಯಾವಾಗ ?

ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದಿದ್ದರೂ ಅನ್ಯಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದೆ ಅದರ ಸಾಧನೆಯಾಯಿತು. ಮೊದಲ ಬಾರಿಗೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ದಕ್ಷಿಣ ಭಾರತದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಪಕ್ಷ ಮೊದಲು ಒಳ್ಳೆಯ ಅಧಿಕಾರ ನೀಡುವ ಭರವಸೆಯನ್ನು ನೀಡಿ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿತ್ತು. ಅದರ ಬರವಸೆಯನ್ನು ನಂಬಿದ ಜನ ಒಳ್ಳೆಯ ಆಡಳಿತ ನೀಡಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 20- 20 ಮ್ಯಾಚ್ ಆಡಿದ ಅಂದಿನ ಜೆಡಿಎಸ್ ಹಾಗೂ ಬಿಜೆಪಿ ಪರಸ್ಪರ ತೆಗಳುವುದರೊಂದಿಗೆ ಆರಂಭವಾಗಿ ಕೊನೆಗೆ ಸರ್ಕಾರ ಪತನದೊಂದಿಗೆ ಅಂತ್ಯವಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡು ಪಕ್ಷಗಳ ಕಾರ್ಯಕರ್ತರ ಪರಿಶ್ರಮ ಜೆಡಿಎಸ್ ಸಂಸ್ಕೃತಿಗೂ ಹಾಗೂ ಬಿಜೆಪಿ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ.
           ಬಿಜೆಪಿಯದ್ದು ಸಿದ್ಧಾಂತಾಧರಿತ ಪಕ್ಷವೆಂದು ಹೇಳಲಾಗುತ್ತಿತ್ತು. ಜೆಡಿಎಸ್ ನದು ಜಾತ್ಯತೀತವೆಂದರೂ ಅಲ್ಲಿ ಜಾತಿಗಳದೇ ಕಾರುಬಾರು. ಬಿಜೆಪಿ ಹಿಂದುತ್ವದ ಆಧಾರದಲ್ಲಿ ಅಧಿಕಾರ ಹಿಡಿಯುವ ಇಚ್ಛೆಯೊಂದಿಗೆ ಇದ್ದು ತನ್ನ ಎರಡನೇ ಅವಧಿಯ ಚುನಾವಣೆ ಪ್ರಚಾರದಲ್ಲಿ ಹಿಂದುತ್ವವನ್ನು ಮರೆಯಿತು. ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಡದಿದ್ದೇ ದೊಡ್ಡ ವಿಚಾರವೆಂಬಂತೆ ಬಿಂಬಿಸಿತು. ಕರ್ನಾಟಕದ ಪ್ರಜ್ಞಾವಂತ ಮತದಾರ ಆಗಲೂ ಕೂಡ ಬಿಜೆಪಿಗೆ ಪೂರ್ಣಬಹುಮತ ಕೊಡಲಿಲ್ಲ. ಏಕೆಂದರೆ ಬಿಜೆಪಿ ಅಷ್ಟರಲ್ಲಾಗಲೇ ಹಿಂದುತ್ವದಿಂದ ಜಾತಿಯ ಕಡೆಗೆ ವಾಲಿಯಾಗಿತ್ತು. ಬಿಜೆಪಿಯಲ್ಲೂ ಜಾತಿ ಆಧಾರದ ಮೇಲೆ ಟಿಕೆಟ್ ನೀಡುವ ಸಂಸ್ಕೃತಿ ಆರಂಭವಾಯಿತು. ಪಕ್ಷಕ್ಕಾಗಿ ತ್ಯಾಗಮಾಡಿದ ನಾಯಕರು ಮನೆ ಸೇರುವಂತಾಯಿತು. ಹೊಗಳು ಭಟ್ಟರಿಂದ ಕೂಡಿದ ಮಂದಿಗೆ ಮಣ್ಣೆ ಹಾಕಲು ಬಿಜೆಪಿಯ ದೇವದುರ್ಲಭ ಕಾರ್ಯಕರ್ತರನ್ನು ಬಲಿಕೊಡಲು ಹಿಂದುಮುಂದು ನಾಯಕರು ಯೋಚಿಸಲಿಲ್ಲ. ಸಂಸ್ಕೃತಿ ಸಂಸ್ಕಾರ ಇಲ್ಲದವರ ಪಕ್ಷವಾಗುವತ್ತ ಬಿಜೆಪಿ ತನ್ನ ಕಾರ್ಯವನ್ನು ಶುರು ಮಾಡಿತು. ಮೂಲ ಬಿಜೆಪಿಗರು ಕಾಣೆಯಾಗತೊಡಗಿದರು. ಬಿಜೆಪಿಯ ಒಳಗೆ ಜಾತಿಗಳ ಕಾರುಬಾರು ಶುರುವಾಯಿತು. ದೇಶಕ್ಕಾಗಿ ರಾಜಕಾರಣ ಎಂದು ಹೇಳುತ್ತಾ ಭ್ರಷ್ಟರು ಬಿಜೆಪಿಯನ್ನು ಅಳಲು ಶುರುಮಾಡಿದರು. ಕೊನೆಗೆ ಎಲ್ಲಾ ಪಕ್ಷಗಳಂತೆ ಬಿಜೆಪಿಯು ವಿಶೇಷವಾಗಿ ಕರ್ನಾಟಕದ ಬಿಜೆಪಿ ಅಧಿಕಾರಕ್ಕೆ  ಕೇಂದ್ರೀಕೃತ ಪಕ್ಷವಾಗಿ ಹೊರಹೊಮ್ಮಿತು. ನಿಜವಾದ ಹಿಂದುತ್ವ ತೆರೆಮರೆಗೆ ಸರಿದು ಜಾತಿ ನಾಯಕರು ಬಿಜೆಪಿಯನ್ನು ಅಳಲು ಶುರುಮಾಡಿದರು ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ರೋಸಿಹೋದ ಬಿಜೆಪಿಯ ನಿಷ್ಠರು ಸುಮ್ಮನಾದರು.
           ಮೊದಲೇ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡ ಅಧಿಕಾರಕ್ಕೆ ಬರಲು ಸಾಧ್ಯವೇ! ಜಾತಿಗಳ ಪ್ರತಿಷ್ಠೆಯಲ್ಲಿ ಎಲ್ಲಾ ಪಕ್ಷಗಳಂತೆ ಆಗಿ ಬಿಜೆಪಿಯು ಮತ್ತೆ ಅಧಿಕಾರ ಹಿಡಿಯಲು ವಿಫಲವಾಯಿತು. ಹಿಂದುತ್ವದ ಹೆಸರು ಹೇಳಿಕೊಂಡು ಜಾತಿ ರಾಜಕಾರಣ ಮಾಡಿದ ಪಕ್ಷದ ನಾಯಕರು ಕೊನೆಗೇ ಪೂರ್ಣಬಹುಮತ ತರುವಲ್ಲಿ ವಿಫಲವಾದರು. ಕಾರ್ಯಕರ್ತರು ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡರು. ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಯಿತು. ಜಾತಿ ನಾಯಕರು ಬಿಜೆಪಿಯ ಮುಂಚೂಣಿಯಲ್ಲಿ ನಿಂತಿದ್ದೆ ಪಕ್ಷಕೇ ಬಹುಮತ ಬರದಿರಲು ಕಾರಣವಾಯಿತು. 
              ಇನ್ನು ತನ್ನ ಮೂರನೇ ಅವಧಿಯನ್ನು ಆಪರೇಷನ್ ಕಮಲದ ಮೂಲಕ ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡ ನಾಯಕರಿಗೆ ಬಿಜೆಪಿಯ ಕಾರ್ಯಕರ್ತರು ಬೇಡವಾದರು. ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಲು ಸಹಕಾರವಾಗುವಂತಹ ಗ್ರಾಮ ಪಂಚಾಯಿತಿ ಹಂತದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ನೇಮಿಸುವ ಅವಕಾಶವಿದ್ದರೂ ಪ್ರಜಾಪ್ರಭುತ್ವ-ವಿರೋಧಿ ನಿಲ್ಲುವಾದ ಆಡಳಿತಾಧಿಕಾರಿ ನೇಮಿಸುವ ನಿರ್ಧಾರದೊಂದಿಗೆ ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾಮಾನ್ಯ ಕಾರ್ಯಕರ್ತನಿಗೆ ಸಮಾಧಿ ಮಾಡಲಾಯಿತು. ವಂಶಪಾರಂಪರ್ಯ ರಾಜಕಾರಣ ಬಿಜೆಪಿಯಲ್ಲಿ ಶುರುವಾಗಿ ಬಹಳ ಕಾಲವಾಗಿದೆ. ದೇವದುರ್ಲಭ ಕಾರ್ಯಕರ್ತರನ್ನು ಕಳೆದುಕೊಂಡು ಬಿಜೆಪಿ ಬಡವಾಗುತ್ತಿದೆ . ಸಂಸ್ಕಾರ-ಸಂಸ್ಕೃತಿ ಇಲ್ಲದ ಜನರು ಬಿಜೆಪಿಯನ್ನು ಆಳುತ್ತಿದ್ದಾರೆ. ಅದೇ ರೀತಿ ಮುಂದುವರೆದಿದ್ದು ಆದರೆ ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿಯೊಂದು ಉದಯ ಆಗುವುದರಲ್ಲಿ ಸಂಶಯವೇ ಬೇಡ. ಈಗಲಾದರೂ ಬಿಜೆಪಿ ತನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ. ಇಲ್ಲವಾದರೆ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧವಾಗಬೇಕಾಗುತ್ತದೆ.
Author : Rakesh Bhagiratha.