Friday, June 26, 2020

ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳ ಕುರಿತು ಚರ್ಚೆ.

ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣಾ ಕ್ರಮಗಳ ಕುರಿತು ಒಂದು ಸಾರ್ವಜನಿಕ ಚರ್ಚೆ.


      ನಮ್ಮ ಭಾರತದಂತಹ ದೇಶದ ಸಂಕೀರ್ಣತೆ ತುಂಬಿರುವ ಈ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳ ಆಶಯವೇ ಅಂತಿಮವಾಗಿ ಚುನಾವಣೆಯ ಗೆಲುವುಗಳಾಗಿ ದಾಖಲಾಗುತ್ತವೆ. ಭಾರತ ದೇಶದ ಲೋಕಸಭಾ ಚುನಾವಣೆ ಎಂದರೆ ವಿಶ್ವದ ಗಮನವನ್ನು ಸೆಳೆಯುವ ಚುನಾವಣೆ. ಇಡೀ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಯ ನಡೆಯುವುದೆಂದರೆ ನಮ್ಮ ಭಾರತ ದೇಶದ ಚುನಾವಣೆ. ಅದನ್ನು ನಡೆಸಿಕೊಡುವ ಚುನಾವಣಾ ಆಯೋಗವು ತುಂಬಾ ಅಚ್ಚುಕಟ್ಟಾಗಿ, ಸ್ವತಂತ್ರವಾಗಿ ಚುನಾವಣೆಯನ್ನು ನಡೆಸುತ್ತದೆ. ಹಳ್ಳಿಯಿಂದ ದಿಲ್ಲಿ ವರೆಗೆ ಚುನಾವಣೆಯೆಂದರೆ ಭಾರತದಲ್ಲಿ ಒಂದು ರೀತಿಯ ಹಬ್ಬವಿದ್ದಂತೆ. ಚುನಾವಣಾ ಆಯೋಗವು ನಡೆಸುವ ಚುನಾವಣೆಯಲ್ಲಿ ಅಂತಿಮವಾಗಿ ಆಯ್ಕೆಯಾದ ನಂತರ ವಿಕೇಂದ್ರೀಕರಣದಿಂದ ಶಕ್ತಿಯುತವಾಗಿ ನಿಲ್ಲಬೇಕಾದ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಆಯ್ಕೆಯ ವಿಚಾರವು ಕುದುರೆ ವ್ಯಾಪಾರದಲ್ಲಿ ಸಮಗೊಳ್ಳುತ್ತದೆ. ಏಕೆಂದರೆ ಗ್ರಾಮಮಟ್ಟದಲ್ಲಿ ಅಭ್ಯರ್ಥಿಯು ಯಾವುದೇ ಪಕ್ಷದ ಚಿನ್ನೆಯಿಂದ ಚುನಾವಣೆ ಸ್ಪರ್ಧಿಸದಿರುವ ಕಾರಣ ಅವನಿಗೆ ಉನ್ನತ ಹಂತಹದ ಚುನಾವಣೆಗಳಂತೆ ಯಾವುದೇ ಪಕ್ಷದ ಕಟ್ಟುಪಾಡುಗಳು ಇರುವುದಿಲ್ಲ.ಅದು ಕುದುರೆ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ಕುದುರೆ ವ್ಯಾಪಾರದಂತಹ ವ್ಯವಸ್ಥೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸದಸ್ಯರಿಂದ ಯಾವ ರೀತಿಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ?

ಅಧ್ಯಕ್ಷನ ಆಯ್ಕೆಯು ಮೇಲ್ನೋಟಕ್ಕೆ ಸದಸ್ಯರಿಂದ ಆದಂತೆ ಕಾನೂನಿನ ಕಣ್ಣಿಗೆ ಕಂಡರೂ, ಆದರ ಹಿಂದಿನ ವ್ಯಾಪಾರ ಅಂತಿಮವಾಗಿ ಬ್ರಷ್ಟಾಚಾರಕ್ಕೆ ಅನುವುಮಾಡಿಕೊಡುತ್ತದೆ. ಹಣ ಬಲದಿಂದ ಆಯ್ಕೆಯಾಗುವ ಅವಕಾಶವಿರುವಾಗ ಉನ್ನತ ವಿದ್ಯಾಭ್ಯಾಸ ಮಾಡಿದವರು ಚುನಾವಣೆಗೆ ನಿಂತರೂ ಸೋಲುತ್ತಾರೆ. ಕೆಳಹಂತದಲ್ಲಿ ವಿದ್ಯಾಭ್ಯಾಸ ಮಾಡಿದವರು ಅಧಿಕಾರ ಗಳಿಸಿದರೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಆಯ್ಕೆಯೂ ನೇರವಾಗಿ ಪ್ರಜೆಗಳ ಮುಖಾಂತರವೇ ನಡೆಯುವುದಾದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತನ್ನದೇ ಆದಂತಹ ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸಲು ಅನುಮಾಡಿಕೊಟ್ಟಂತಾಗುತ್ತದೆ.ನಮ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ಕೂಡ ನನಸು ಮಾಡಲು ನಾವು ಹೆಜ್ಜೆ ಇಟ್ಟಂತೆ ಆಗುತ್ತದೆ.
ಇನ್ನು ತಾಲೂಕು ಪಂಚಾಯಿತಿ ವಿಷಯಕ್ಕೆ ಬರುವುದಾದರೆ, ಗ್ರಾಮಪಂಚಾಯಿತಿಗಳು ಮಾಡುವ ಕೆಲಸಗಳನ್ನೇ ತಾಲೂಕು ಪಂಚಾಯಿತಿಗಳೂ ಮಾಡುವುದು. ತಾಲೂಕು ಪಂಚಾಯಿತಿ ಸದಸ್ಯರ ಅನುದಾನವು ತುಂಬಾ ಕಡಿಮೆ ಇರುವ ಕಾರಣ, ಅವರಿಂದ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗಳನ್ನು ನಿರೀಕ್ಷಿಸುವುದು ಅಸಾಧ್ಯವಾಗುತ್ತದೆ.ಗ್ರಾಮ ಪಂಚಾಯತಿಯನ್ನು ತಾಲೂಕ್ ಪಂಚಾಯಿತಿ ಇಲ್ಲದಂತೆ ನೇರವಾಗಿ ಜಿಲ್ಲಾ ಪಂಚಾಯಿತಿಗೆ ಜೋಡಿಸಿದ ಪಕ್ಷದಲ್ಲಿ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಗ್ರಾಮ ಪಂಚಾಯಿತಿ ನೇರವಾಗಿ ಜಿಲ್ಲಾಪಂಚಾಯಿತಿ ಅವರ ಕೈಗೆ ಸಿಗುವುದರಿಂದ ಜಿಲ್ಲಾ ಪಂಚಾಯಿತಿಗೆ ತನ್ನದೇ ಆದ ಶಕ್ತಿ ಬರುತ್ತದೆ. ಇದು ಆಡಳಿತ ದೃಷ್ಟಿಕೋನದಿಂದ ಸಹಾಯಕಾರಿ.
ಪಂಚಾಯತ್ ರಾಜ್ ವಿಷಯವಾಗಿ ಬರೋಡಲಿ ಸತ್ಯಾಗ್ರಹದಲ್ಲಿ ಹೋರಾಡಿದ ಗುಜರಾತ್ ಮುಖ್ಯಮಂತ್ರಿಯಾಗಿ ಅನುಭವವಿರುವ ಬಲವಂತರಾಯ್ ಮೆಹ್ತಾ ಸಮಿತಿಯನ್ನು 1957 ರಲ್ಲಿ ಕೇಂದ್ರ ಸರ್ಕಾರವು ನೇಮಿಸಿತು. ಆ ಸಮಿತಿಯು ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಗೆ ನಾಂದಿ ಹಾಡಿತು. ಆನಂತರ ಬಂದ ಹಲವಾರು ಸಮಿತಿಗಳು ಶಿಫಾರಸುಗಳನ್ನು ಮಾಡುವುದರ ಮುಖಾಂತರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದವು.ಆದರೆ ಮೊದಲನೆಯ ಹಂತದ ಜಿಲ್ಲಾ ಪಂಚಾಯತ್ ಹಾಗೂ ಕೊನೆಯ ಹಂತದ ಗ್ರಾಮ ಪಂಚಾಯಿತಿ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸಮಿತಿಗಳು ಶಿಫಾರಸು ಮಾಡಿದ್ದವು. ಆದರೆ ತಾಲೂಕು ಪಂಚಾಯಿತಿಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೆಲಸ ಕಾರ್ಯಗಳು ನಡೆಯದಂತೆ ಆದವು. ತಾಲೂಕು ಪಂಚಾಯಿತಿ ಹೆಸರಿಗೆ ಮಾತ್ರ ಉಳಿಯುವಂತಾಯಿತು. ತಾಲೂಕು ಪಂಚಾಯಿತಿ ಚುನಾವಣೆಯು ಬೊಕ್ಕಸಕ್ಕೆ ಆರ್ಥಿಕ ಹೊರೆಯನ್ನು ತಂದೊಡ್ಡುತ್ತದೆ. ತಾಲೂಕು ಪಂಚಾಯಿತಿ ಪ್ರಾಮುಖ್ಯತೆ ಕಾಲಕ್ರಮದಲ್ಲಿ ಕಡಿಮೆಯಾಯಿತು. ತಾಲೂಕು ಪಂಚಾಯಿತಿ ಇರಬೇಕೇ ಅಥವಾ ಅದನ್ನು ವಿಸರ್ಜಿಸಬೇಕೇ ಎನ್ನುವುದು ಸಾರ್ವಜನಿಕವಾಗಿ ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕಿದೆ.
ಇನ್ನು ಚುನಾವಣಾ ಆಯೋಗವು (Amending) rule 90, conduct of election rules 1961 ) ರ ಪ್ರಕಾರ, ಲೋಕಸಭಾ ಚುನಾವಣೆಯನ್ನು 70 ಲಕ್ಷ ರೂ ವೆಚ್ಚದಲ್ಲಿ ಹಾಗೂ ವಿಧಾನಸಭೆ ಚುನಾವಣೆಯನ್ನು 28 ಲಕ್ಷ ರು ವೆಚ್ಚದಲ್ಲಿ ನಡೆಸುವಂತೆ ಹೇಳಿದೆ.ಅದು ನಿಜವಾಗಲೂ ಸಾಧ್ಯವೇ ಎಂಬುದು ನಮ್ಮಲ್ಲಿ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನಾಗಲು ಕನಿಷ್ಠ ಪಕ್ಷ 5 ಲಕ್ಷ ರೂ.ಗಳು, ತಾಲೂಕು ಪಂಚಾಯತಿ ಸದಸ್ಯನಾಗಲು ಕನಿಷ್ಠ ಪಕ್ಷ 20 ಲಕ್ಷ ರೂ.ಗಳು, ಜಿಲ್ಲಾ ಪಂಚಾಯತಿ ಸದಸ್ಯನಾಗಲು ಕನಿಷ್ಠ ಪಕ್ಷ 50 ಲಕ್ಷ ರೂ.ಗಳ ಖರ್ಚು ಮಾಡಬೇಕಾಗುತ್ತದೆ. ಅವರು ಅಷ್ಟು ಖರ್ಚು ಮಾಡದಿದ್ದಲ್ಲಿ ಅವರು ಗೆಲ್ಲುವುದು ಕಷ್ಟವಾಗುವುದು. ಏಕಕಾಲದಲ್ಲಿ ಚುನಾವಣೆ ಮಾಡುವುದರಿಂದ ಈ ಮೇಲಿನ ಖರ್ಚುಗಳು ಪ್ರತಿಹಂತದಲ್ಲಿ ಮಾಡುವುದು ತಪ್ಪುತ್ತದೆ. ಅದು ದೇಶದ ಆರ್ಥಿಕ ಹೊರೆಯನ್ನು ಕೂಡ ತಗ್ಗಿಸಿದಂತಾಗುತ್ತದೆ. ಜೊತೆಯಲ್ಲಿ ಉತ್ತಮ ಸದಸ್ಯರು ಆಯ್ಕೆಯಾಗುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ. ಒಟ್ಟು ನಮ್ಮ ಭಾರತ ದೇಶದಲ್ಲಿ 4120 ವಿಧಾನಸಭಾ ಸದಸ್ಯರು ಖರ್ಚು ಮಾಡುವ ಅಂದಾಜು ಮೊತ್ತ ಹನ್ನೊಂದು ಬಿಲಿಯನ್. ಕನಿಷ್ಠಪಕ್ಷ ಏನಿಲ್ಲವೆಂದರೂ ವರ್ಷದಲ್ಲಿ ಐದು ರಾಜ್ಯಗಳ ಚುನಾವಣೆಗಳು ನಡೆಯುತ್ತವೆ. ನಮ್ಮ ಲೋಕಸಭಾ, ಗ್ರಾಮಸಭಾ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಖರ್ಚು ಮಾಡುವ ಮೊತ್ತದಲ್ಲಿ ಮೂರು ಬಾರಿ ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆ ಮಾಡಬಹುದು. ಏಕಕಾಲದಲ್ಲಿ ಚುನಾವಣೆ ಮಾಡುವುದರಿಂದ ನೀತಿ ಸಂಹಿತೆಗಾಗಿ ಸರ್ಕಾರಿ ಕೆಲಸಗಳು ನಿಲ್ಲುವುದು ತಪ್ಪುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಹಣ ಬಿಳಿಯಾಗುವುದು ಚುನಾವಣೆಗಳಲ್ಲಿ ಅದು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ಕೆಳಗಿನ ಗ್ರಾಮ ಪಂಚಾಯಿತಿಯಿಂದ ಮೇಲಿನ ಲೋಕಸಭಾ ಹಂತದವರೆಗೆ ಏಕಪಕ್ಷ ಅಧಿಕಾರಕ್ಕೆ ಬರುವ ಸಂಭವವೂ ಇರುವುದರಿಂದ ಅಭಿವೃದ್ಧಿಯ ವೇಗವೂ ಹೆಚ್ಚುತ್ತದೆ.ಈಗಾಗಲೇ ಹಲವಾರು ದೇಶಗಳು ಏಕಕಾಲದಲ್ಲಿ ಚುನಾವಣೆಯನ್ನು ಮಾಡುತ್ತಿವೆ. ಇಂಡೋನೇಷಿಯಾ, ಸೌತ್ ಆಫ್ರಿಕಾ,ಜರ್ಮನಿ, ಸ್ಪೇನ್ ಬೆಲ್ಜಿಯಂ, ಪೋಲ್ಯಾಂಡ್ ಹೀಗೆ ಹಲವಾರು ದೇಶಗಳು ದೇಶಗಳು ಏಕಕಾಲದಲ್ಲಿ ಚುನಾವಣೆ ನಡೆಸುತ್ತಿವೆ. ಅದರಲ್ಲಿ ಯಶಸ್ಸು ಕಂಡಿವೆ. ಏಕಕಾಲದಲ್ಲಿ ಚುನಾವಣೆ ನಡೆಸುವುದು ಭಾರತಕ್ಕೆ ಹೊಸದಲ್ಲ. ಹಿಂದೆ 1952, 1957, 1962, 1967 ರಲ್ಲಿ ಏಕಕಾಲದಲ್ಲಿ ಚುನಾವಣೆ ಮಾಡಿ ಭಾರತವು ಯಶಸ್ಸನ್ನು ಕಂಡಿದೆ.ಆದರೆ ಆನಂತರದ ಸ್ಥಿತ್ಯಂತರಗಳಲ್ಲಿ ಅದು ಸಾಧ್ಯವಾಗದೇ ಹೋಗಿದೆ. ಮತದಾರರಾದ ನಾವು ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿ, ದೇಶದ ಆರ್ಥಿಕತೆಗೆ ನಿರಂತರ ಚುನಾವಣೆಗಳು ಕೊಡುತ್ತಿರುವ ಪೆಟ್ಟನ್ನು ಸರಿಪಡಿಸಲು ಇದು ಸಕಾಲವಾಗಿದೆ.

Author : Rakesh Bhagiratha.

No comments: