Sunday, February 26, 2023

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ.

                ನಿಮಗೆ ಭೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂದರೆ ಯಾರು ಎಂದು ತಿಳಿಯಲು ಸ್ವಲ್ಪ ಯೋಚಿಸಬಹುದು. ಅದೇ ಬಿ.ಎ.ವೈ ಎಂದರೆ ಥಟ್ ಎಂದು ನೆನಪಾಗುವುದು ರಾಜ್ಯ ಕಂಡ ಧೀಮಂತ ನಾಯಕ, ಹುಟ್ಟು ಹೋರಾಟಗಾರ,  ಹಠವನ್ನು ಬಿಡದ ಛಲವಂತ, ನಂಬಿ ಬಂದವರನ್ನು ಎಂದು ಕೈ ಬಿಡದ, ಹಲವಾರು ನಾಯಕರನ್ನು ಬೆಳೆಸಿದ ಯಡಿಯೂರಪ್ಪನವರು. ಬದುಕೇ ಹಾಗೆ ಹಲವಾರು ಸವಾಲುಗಳನ್ನು ಎಸೆಯುತ್ತಿರುತ್ತದೆ. ಅವುಗಳನ್ನು ಮೆಟ್ಟಿ ನಿಲ್ಲುವುದೇ ಒಂದು ಸವಾಲು. ಅಂತಹದರಲ್ಲಿ ರಾಜಕೀಯ ಎಂದರೆ ಹೇಗಿರಬೇಡ ! ಅಲ್ಲಿ ಎಲ್ಲಾ ರೀತಿಯ ಸವಾಲನ್ನು ಸ್ವೀಕರಿಸಲು ನಾವು ಸಿದ್ಧರಿರಬೇಕು. ಅದು ಎಲ್ಲರಿಂದ ಸಾಧ್ಯವಿಲ್ಲ ಆ ಸವಾಲನ್ನು ಸ್ವೀಕರಿಸಿ ನಿಂತವರು ಶ್ರೀಯುತ ಯಡಿಯೂರಪ್ಪನವರು ಅವರು ಬೆಳೆದು ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ.
           ಬಿಎಸ್ ವೈ ಅವರು 27 ನೇ ಫೆಬ್ರವರಿ 1943ರಲ್ಲಿ ಮಂಡ್ಯ ಜಿಲ್ಲೆಯ ಭೂಕನಕೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಪ್ಪ ತಾಯಿ ಪುಟ್ಟತಾಯಮ್ಮ. ನಾಲ್ಕು ವರ್ಷಗಳಲ್ಲೇ ತಾಯನ್ನು ಕಳೆದುಕೊಂಡ ಯಡಿಯೂರಪ್ಪನವರು, ಮಂಡ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1960ರಲ್ಲಿ ವಿದ್ಯಾಭ್ಯಾಸ ಮುಗಿಸಿದರು. 1965 ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸವು ಸಿಕ್ಕಿತ್ತು. ತನಗೆ ಒಗ್ಗದ ಕೆಲಸ ಬಿಟ್ಟು ಅಲ್ಲಿಂದ ನೇರವಾಗಿ ಶಿಕಾರಿಪುರಕ್ಕೆ ಹೋದರು. ಅಲ್ಲಿ ವೀರಭದ್ರ ಶಾಸ್ತ್ರಿಯವರ ಶಂಕರ ರೈಸ್ ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಅವರ ಪ್ರಾಮಾಣಿಕತೆ ಕಾರ್ಯ ವೃತ್ತಿಯನ್ನು ಗಮನಿಸಿದ ಮಾಲೀಕರು ತಮ್ಮ ಮಗಳಾದ ಮೈತ್ರಿದೇವಿಯನ್ನು ಕೊಟ್ಟು ಮದುವೆ ಮಾಡಿದರು.
          ತಮ್ಮ ರಾಜಕೀಯ ಜೀವನವನ್ನು ಶಿಕಾರಿಪುರದಿಂದ ಆರಂಭಿಸಿದ ಬಿಎಸ್‌ವೈ 1972ರ ಶಿಕಾರಿಪುರದ ಪುರಸಭೆಗೆ ಆಯ್ಕೆಯಾಗುವುದರ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ಎಮರ್ಜೆನ್ಸಿಯ ಸಮಯದಲ್ಲಿ ಅವರನ್ನು ಬಳ್ಳಾರಿಯ ಹಾಗೂ ಶಿವಮೊಗ್ಗ ಜೈಲಿನಲ್ಲಿ ಇರಿಸಲಾಯಿತು. 1983ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ಜಯಗಳಿಸಿದರು. 1985ರಲ್ಲಿ ಅವರನ್ನು ಬಿಜೆಪಿಯ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಯಿತು. 1994ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ನಿರಂತರ ಹೋರಾಟದ ಪ್ರತಿಫಲವಾಗಿ ಅಕ್ಟೋಬರ್ 2007ರಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲು ಕಾರಣಿಭೂತರಾದರು. ಯಡಿಯೂರಪ್ಪನವರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ತೆರೆದಂತಾಯಿತು. ಬಿಜೆಪಿಯಲ್ಲಿನ ಕೆಲವು ಕುತಂತ್ರಿಗಳ ಫಲವಾಗಿ 30 ನವಂಬರ್ 2012ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದರು. ಅಲ್ಲೂ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ ಬಿಎಸ್ ವೈ ಬಿಜೆಪಿ ಒಳಗಿದ್ದ ಕುತಂತ್ರಿಗಳಿಗೆ ತಾನು ಏನೆಂದು ತೋರಿಸಿಕೊಟ್ಟರು. ಆನಂತರ ಬಿಜೆಪಿಯ ಕೇಂದ್ರ ನಾಯಕರು ಹಾಗೂ ರಾಜ್ಯದ ಹಲವು ನಾಯಕರು ಒತ್ತಾಸೆಯ ಮೇರೆಗೆ ಪುನ ಬಿಜೆಪಿಗೆ ಸೇರ್ಪಡೆಯಾದರು. ಮತ್ತೆ ಮುಖ್ಯಮಂತ್ರಿಗಾದಿ ಅವರಿಗೆ ಒಲಿದು ಬಂತು. ಅವರು ಹಲವಾರು ನಾಯಕರನ್ನು ಬೆಳೆಸಿದ್ದಾರೆ. ಒಬ್ಬ ಉತ್ತಮ ನಾಯಕ ಮಾತ್ರ ಹಲವರನ್ನು ಬೆಳೆಸಲು ಸಾಧ್ಯ. ಕಾರ್ಯಕರ್ತರನ್ನು ಬಳಸಿಕೊಳ್ಳುವ ಹಲವು ಸ್ವಯಂಘೋಷಿತ ನಾಯಕರ ಮಧ್ಯೆ, ಕಾರ್ಯಕರ್ತರನ್ನು ಬೆಳೆಸುವ ಮನಸ್ಥಿತಿ ಇರುವಂತ ಯಡಿಯೂರಪ್ಪನವನಂತವರು ತುಂಬಾ ಅಪರೂಪ. ಅದಕ್ಕಾಗಿ ಅವರು ಇಂದು ನೆಚ್ಚಿನ ನಾಯಕರಾಗಿ ಉಳಿದಿರುವುದು. ಅವರನ್ನು ಹೊರಗಿನವರಿಗಿಂತ ಅವರ ಜೊತೆಗಿದ್ದು ಹಿತ ಶತ್ರುಗಳಾಗಿ ಕೆಲಸ ಮಾಡಿದ ವಿರೋಧಿಗಳ ಕೈಯಲ್ಲಿ ಏನು ಸಾಧಿಸಲಾಗಲಿಲ್ಲ. ನೇರ ಶತ್ರುಗಳನ್ನು ಗೆಲ್ಲಬಹುದು ಹಿತ ಶತ್ರುಗಳನ್ನು ಸಂಭಾಳಿಸುವುದು ಸುಲಭವಲ್ಲ. ಅವರನ್ನು ವಿರೋಧಿಸಿದ ಗುಂಪು ಇಂದು ಅವರ ಮುಂದೆ ಕೈಕಟ್ಟಿ ನಿಂತಿದೆ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ದೊಡ್ಡ ಮಟ್ಟದ ಅಭಿವೃದ್ಧಿಯನ್ನು ಕಂಡಿತು. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಯಾಗುತ್ತಿದೆ. ಅದು ಅವರ ಕನಸು, ಅವರಿಗೆ ಗೊತ್ತಿತ್ತು ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆಂದು ಹಾಗಾಗಿ ಅವರು ಟೀಕೆಗಳಿಗೆ ಕಿವಿ ಕೊಡಲಿಲ್ಲ ಕೆಲಸದ ಬಗ್ಗೆ ನಿಗವಹಿಸಿದರು.

Friday, February 17, 2023

ವಿದ್ಯಾರ್ಥಿಗಳ ಗುರುವಿಗೆ ಅಕ್ಷರ ನಮನ

                 ಗುರುವಿನ ಪದದ ಅನ್ವರ್ಥನಾಮ ನಮ್ಮ ನಿಮ್ಮೆಲ್ಲರ ನೆಚ್ಚಿನ ಗುರುಗಳಾದ ಅಂತಹ ಡಾ! ಜಿ ಆರ್ ಜಗದೀಶ್ ಸರ್. ನಮಗೆ ನಮ್ಮ ಬದುಕಿನಲ್ಲಿ ಹಲವಾರು ಉಪನ್ಯಾಸಕರುಗಳು ಸಿಗಬಹುದು ಅದರಲ್ಲಿ ಕೆಲವರು ಮಾತ್ರ ವಿಶೇಷವಾಗಿ ನಿಲ್ಲುತ್ತಾರೆ. ವಿಶೇಷವಾಗಿ ನಿಲ್ಲಲು ಅವರ ವಿಶೇಷ ವ್ಯಕ್ತಿತ್ವ ಕಾರಣವಾಗಿರುತ್ತದೆ. ವ್ಯಕ್ತಿ ಹೇಗೆ ವಿಶೇಷವಾಗುತ್ತಾರೆ ಎಂದು ನೋಡುವುದಾದರೆ ಅವರು ಬೇರೆಯವರನ್ನು ಹೇಗೆ ನಡೆಸಿಕೊಂಡರು ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಅವರು ಬೇರೆಯವರ ಬದುಕಿನಲ್ಲಿ ಸ್ಪೂರ್ತಿಯ ಚಿಲುಮೆಯಾಗುತ್ತಾರೆ. ಅವರ ಮಾರ್ಗದರ್ಶನ ಬದುಕಿನ ಪಥವನ್ನು ಬದಲು ಮಾಡಿರುತ್ತದೆ. ಆಗಿದ್ದಾಗ ಮಾತ್ರ ಅವರು ಉಪನ್ಯಾಸಕರಿಂದ  ಗುರುಗಳು ಆಗಲು ಸಾಧ್ಯವಾಗುತ್ತದೆ. ಈ ರೀತಿಯ ಗುರುಗಳು ಸಿಗುವುದು ದುರ್ಲಭ ಅಂತಹ ವಿಶೇಷ ವ್ಯಕ್ತಿತ್ವದವರು ಡಾ! ಜಿ ಆರ್ ಜಗದೀಶ್ ಸರ್. ಅವರು ಬೇರೆ ಉಪನ್ಯಾಸಕರಂತೆ ಇರಲಿಲ್ಲ. ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರು, ಉಪನ್ಯಾಸಕರು, ಮಾರ್ಗದರ್ಶಕರು ಹಾಗೂ ಸ್ಪೂರ್ತಿಯ ಚಿಲುಮೆಯಂತಿದ್ದರು. ಒಂದು ಕಾಲೇಜಿನಲ್ಲಿ ಅವರನ್ನು ವಿರೋಧಿಸುವಂತಹ ಉಪನ್ಯಾಸಕರ ಗುಂಪಾಗಲಿ ಅಥವಾ ವಿದ್ಯಾರ್ಥಿಗಳ ಗುಂಪಾಗಲಿ ಇಲ್ಲವೆಂದ ಮೇಲೆ ಅವರು ಎಷ್ಟು ಆದರ್ಶಪ್ರಿಯರಾಗಿದ್ದರು ಎಂದು ತಿಳಿಯಬಹುದು.

               ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ನಾಯಕತ್ವದ ಗುಣವನ್ನು ಹೊಂದಿದ್ದ ಅವರು ಇತರ ಸ್ನೇಹಿತರಿಗೆ ಮಾರ್ಗದರ್ಶಕರಾಗಿದ್ದರು ಹಾಗೂ ಅವರಲ್ಲಿ ಹೋರಾಟ ಮನೋಭಾವವಿತ್ತೆಂದು ಅವರ ಸ್ನೇಹಿತರಾದ ಮಹೇಶ್ ರವರು ಸ್ಮರಿಸಿರುತ್ತಾರೆ. ಅವರನ್ನು ಅವರ ಸ್ನೇಹಿತ ವಲಯವು ಜಗ್ಗಣ್ಣ ಎಂದು ಪ್ರೀತಿಯಿಂದ ಕರೆಯುತ್ತಿತ್ತು. ಅವರು ಇಂದು ನಮ್ಮನ್ನು ಅಗಲಿದ್ದಾರೆ. ಬದುಕೇ ಹಾಗೆ ಯಾವ ಸುಳಿವನ್ನು ಕೊಡದೆ ತನ್ನ ಕಾರ್ಯವನ್ನು ಮುಗಿಸಿರುತ್ತದೆ. ಅಂತ ಸುಳಿವು ಕೊಡದೆ ಬರುವ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂದು ಹೇಳುತ್ತಿದ್ದವರು ಇಂದು ವಿಧಿಯ ಆಟಕ್ಕೆ ಭೂತಾಯಿಯ ಮಡಿಲಲ್ಲಿ ಲೀನವಾಗಿದ್ದಾರೆ. ಒಳ್ಳೆಯವರೆಂದರೆ ದೇವರಿಗೂ ಬಲು ಪ್ರೀತಿ ಹೆಚ್ಚು ದಿನ ಭೂಮಿಯ ಮೇಲೆ ಇರಲು ಬಿಡುವುದಿಲ್ಲ ಏಕೆಂದರೆ ಎಲ್ಲಿ ಇವರ ಒಳ್ಳೆಯತನದಿಂದ ದೇವರನ್ನೇ ಮರೆಸಿ ಬಿಡುತ್ತಾರೆ ಎನ್ನುವ ಭಯ ಇದ್ದರೂ ಇರಬಹುದು. ಒಟ್ಟಿನಲ್ಲಿ ಎಲ್ಲರೂ ಭೂಮಿಯ ಮೇಲಿನ ಕರ್ತವ್ಯ ಮುಗಿಸಿ ಹೊರಡಬೇಕು. ಆ ಕರ್ತವ್ಯವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ಹೇಳಿಕೊಡುತ್ತಿದ್ದವರು ನಮ್ಮ ಗುರುಗಳು. ಬದುಕಿನ ಮೌಲ್ಯ ಹಾಗೂ ಮಾನವ ತತ್ವದ ಆಧಾರದ ಮೇಲೆ ಸಮಾಜವನ್ನು ಕಟ್ಟಬೇಕಾಗುತ್ತದೆ ಎಂದು ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿದವರು, ಬರಿ ಕಾನೂನಿನಿಂದ ಬದಲಾವಣೆಯಿಂದ ಸಾಧ್ಯವಿಲ್ಲ ಅದನ್ನು ಅನುಷ್ಠಾನದಲ್ಲಿ ತರಬೇಕೆಂದು ಅದಕ್ಕೆ ಪೂರಕವಾಗಿ ಎಲ್ಲಾ ರಂಗದಲ್ಲೂ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಮಾಜಮುಖಿಯಾಗಿ ಬದುಕಬೇಕೆಂದು ಮಾರ್ಗದರ್ಶನ ಮಾಡುತ್ತಿದ್ದವರು. ಅವರಲ್ಲಿ ಅಪಾರವಾದ ಜ್ಞಾನ ಸಂಪತ್ತಿದ್ದರು ಬಸವಣ್ಣನವರು ಹೇಳಿದಂತೆ ತನಗಿಂತ ಕಿರಿಯರಿಲ್ಲ ಎಂಬ ನಾಡು ನುಡಿಯಂತೆ ನಡೆದವರು. ನಮ್ಮಂತಹ ಕಿರಿಯರು ತಪ್ಪು ಮಾಡಿದಾಗ ತಿದ್ದಿ ತೀಡಿದವರು. ಅವರು ಸಂವಿಧಾನವನ್ನು ವಿಶ್ಲೇಷಣೆ ಮಾಡುತ್ತಿದ್ದೆ ವಿಶಿಷ್ಟವಾಗಿತ್ತು ಸಂವಿಧಾನದ ಬಗ್ಗೆ ಅಪಾರಜ್ಞಾನವುಳ್ಳವರಾಗಿದ್ದವರು ಮನುಷ್ಯತ್ವ ಮಾನವೀಯತೆಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಕೊಟ್ಟವರು. ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿ, ಹೋರಾಟಕ್ಕೆ ಬೆನ್ನೆಲುಬಾಗಿ ನಿಂತು ಸದಾ ಪ್ರೋತ್ಸಾಹ ನೀಡುತ್ತಿದ್ದವರು.

          ಅವರು ತನ್ನ ಸಹಪಾಠಿ ಉಪನ್ಯಾಸಕರುಗಳಿಗೆ ನೀಡುತ್ತಿದ್ದ ಗೌರವ, ಪಠ್ಯ ಹಾಗೂ ಪಠ್ಯೇತರ  ಚಟುವಟಿಕೆಗಳಲ್ಲಿ ಅವರುಗಳನ್ನು ತೊಡಗಿಸುತ್ತಿದ್ದ ರೀತಿ ವಿಶೇಷ. ಸಹಪಾಠಿ ಉಪನ್ಯಾಸಕರಿಗೂ ಬದುಕಿನ ಪಾಠವನ್ನು ಹೇಳುತ್ತಾ ಮಾರ್ಗದರ್ಶನ ಮಾಡುತ್ತಾ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತಾ ಆಕಾಶದಲ್ಲಿನ ನಕ್ಷತ್ರವು ಮಾಯವಾದಂತೆ ಮಾಯವಾಗಿ ಬಿಟ್ಟರು. ಶರಣರ ಸಾವು ಮರಣದಲ್ಲಿ ಕಾಣು ಎನ್ನುವ ನಾಡು ನುಡಿಯಂತೆ ಅವರ ಸಾವಿನಲ್ಲಿ ಬಂದ ಜನ ಸಮೂಹ ಅವರ ಹಳೆಯ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು ಅವರ ಮಹತ್ವವನ್ನು ಸಾರಿ ಹೇಳುತ್ತಿದ್ದವು. ಗುರುವಿಗೆ ವಿದ್ಯಾರ್ಥಿಯ ಉನ್ನತಿಯೇ ಸಾರ್ಥಕತೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಉನ್ನತಿಯನ್ನು ಸಾಧಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಮಾಡಬೇಕಾದ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳಾದ ನಮ್ಮ ನಿಮ್ಮೆಲ್ಲರ ಮೇಲಿದೆ. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು. ಇಂತಹ ಗುರುವಿಗೆ ನನ್ನದೊಂದು ಅಕ್ಷರ ನಮನ......