Monday, February 21, 2022

ಅಂತರಾಷ್ಟ್ರೀಯ ಮಾತೃಭಾಷಾ ದಿನ

ಕನ್ನಡ ಕರ್ನಾಟಕದ ರಾಜ್ಯ ಭಾಷೆ ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.

ಕನ್ನಡ ಬಳಕೆಯಲ್ಲಿರುವ  
ಪ್ರದೇಶಗಳು:
ಕರ್ನಾಟಕ, ಭಾರತ, ಕೇರಳಕ್ಕೆ ಸೇರಿಹೋಗಿರುವ ಕಾಸರಗೋಡು, ಮಹಾರಾಷ್ಟ್ರ, ಆಂಧ್ರಪ್ರದೇಶ,ತೆಲಂಗಾಣ, ಗೋವಾ, ತಮಿಳುನಾಡು ಮುಂತಾದೆಡೆಗಳಲ್ಲಿಯೂ ಭಾರತದಿಂದ ಹೊರಗಿರುವ ಕೆನಡಾ, ಆಸ್ಟ್ರೇಲಿಯ, ಮಲೇಷಿಯಾ, ಸಿಂಗಾಪುರ, ಯು.ಕೆ., ಜರ್ಮನಿ, ಹಾಂಗ್ ಕಾಂಗ್, ನ್ಯೂಜಿಲ್ಯಾಂಡ್, ಮೌರೀಷಿಯಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಥಾಯ್‍ಲ್ಯಾಂಡ್. ಮುಂತಾದೆಡೆಗಳಲ್ಲಿಯೂ ಬದುಕಿರುವ ಜನಗಳು ಕನ್ನಡ ಭಾಷೆಯನ್ನು ಬಳಸುತ್ತಾರೆಂಬುದರ ಬಗ್ಗೆ ಅಧಿಕೃತ ವಿವರಗಳು ಇವೆ.

ಒಟ್ಟು 
ಮಾತನಾಡುವವರು:
೬೪ ದಶಲಕ್ಷ (೨೦೧೧), ಇವರಲ್ಲಿ ೫೫ ದಶಲಕ್ಷ ಜನರಿಗೆ ಕನ್ನಡ ಮಾತೃಭಾಷೆಯಾಗಿದೆ.

ಭಾಷಾ ಕುಟುಂಬ:

ದ್ರಾವಿಡ ಭಾಷೆಗಳು
ದಕ್ಷಿಣ ದ್ರಾವಿಡ
ತಮಿಳು - ಕನ್ನಡ
ಕನ್ನಡ – ಬಡಗ
ಕನ್ನಡ ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಕರ್ನಾಟಕ.

ಭಾರತ ನಿಯಂತ್ರಿಸುವ ಪ್ರಾಧಿಕಾರ:
ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು.

ಭಾಷೆಯ ಸಂಕೇತಗಳು
ISO 639-1:
kn
ISO 639-2:
kan
ISO/FDIS 639-3:

ಭಾಷಿಕ ಚರಿತ್ರೆ
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;

ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ,
ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು
ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.
ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.

ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ;
ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ;
ನಡುಗನ್ನಡ – ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ;
ಹೊಸಗನ್ನಡ – ೧೮ನೆಯ ಶತಮಾನದ ಆದಿಯಿಂದ ಈಚೆಗೆ.
ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.

ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ. ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥದ್ದಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ.

ಸಂಸ್ಕೃತದ ಪ್ರಭಾವ
ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು.
ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳ್ಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ.
ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ.
ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.

ನಮ್ಮ ಕನ್ನಡವನ್ನು ಉಳಿಸೋಣ ಇನ್ನೂ ಎತ್ತರಕ್ಕೆ ಬೆಳೆಸೋಣ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.

Saturday, February 19, 2022

ಸಮಯ ಸರಿದಾಗ....

            
                   ಕೆಲವೊಮ್ಮೆ ಅನ್ನಿಸುವುದುಂಟು, ನಾನು ಒಬ್ಬಂಟಿಯಾಗಿ ಇದ್ದೇನೆಂದು. ಸತ್ಯವೇನೆಂದರೆ ನೀವು ಯಾವಾಗಲೂ ಒಬ್ಬಂಟಿ. ಆ ಸತ್ಯದ ಅರಿವನ್ನು ಹುಡುಕುವುದೇ ಈ ಲೇಖನದ ಉದ್ದೇಶ. ಹೌದು ಮನುಷ್ಯ ಸಂಘಜೀವಿ ಎಲ್ಲಿಯವರೆಗೆ ಎಂದು ಕೇಳಿದರೆ ಕೆಲವರಿಗೆ ಉತ್ತರ ದೊರಕುವುದಿಲ್ಲ. ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಸಂಘದಲ್ಲೇ ಇರುತ್ತಾನೆ ಆದರೆ ಯಾವಾಗಲೂ ಒಬ್ಬಂಟಿಯಾಗಿ ಇರುತ್ತಾನೆ ಹೌದು ತನ್ನ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಹಾಗು ತನ್ನ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅವನಿಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದೆ. ಆವಾಗ ಮನುಷ್ಯ ಸಂಘಜೀವಿಯಾಗುತ್ತಾನೆ ತಾನು ತನ್ನವರು ನನ್ನವರು ಎಂದು ಎಲ್ಲರೂ ಬೇಕಾಗುತ್ತಾರೆ. ಏಕೆಂದರೆ ಅಲ್ಲಿ ಅವನಿಗೆ ಬೇಕಾಗಿದ್ದನ್ನು  ಸಾಧಿಸುವ ಉದ್ದೇಶವಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತಾನೆ. ಆವಾಗಲೇ ಹುಟ್ಟುವುದು ಸಂಬಂಧಗಳೆಂಬ ಕೊಂಡಿ ಅದಕ್ಕೆ ಹಲವಾರು ಹೆಸರುಗಳು ಸ್ನೇಹ, ರಕ್ತಸಂಬಂಧಿ,ಜಾತಿ ಸಂಬಂಧಿ, ನೆಂಟರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹೀಗೆ ಹಲವಾರು ಸಂಬಂಧಗಳು.
            ಈ ಸಂಬಂಧಗಳು ಅನಿವಾರ್ಯತೆಗೆ ಅವಶ್ಯಕತೆಗೆ ಸೃಷ್ಟಿಯಾಗುತ್ತವೆ. ಉದಾಹರಣೆಗೆ ಹೇಳುವುದಾದರೆ ಕಾಲೇಜಿನಲ್ಲಿ ಸಹಪಾಠಿ ಎಂಬ ಸಂಬಂಧದಿಂದ ಆರಂಭವಾಗಿ ಸಂಬಂಧಗಳು  ಸ್ನೇಹಕ್ಕೆ ತಿರುಗುತ್ತದೆ ಆನಂತರ ಕೆಲ ವರ್ಷಗಳ ನಂತರ ಒಮ್ಮೆ ಹಿಂದೆ ತಿರುಗಿ ನೋಡಿ ಕಾಲೇಜು ದಿನಗಳಲ್ಲಿ ಗುಂಪುಗುಂಪಾಗಿ ಹುಡುಗರನ್ನು ಹುಡುಗಿಯರನ್ನು ಕಟ್ಟಿಕೊಂಡು ತಿರುಗುತ್ತಿದ್ದವ ಇಂದು ಒಂಟಿಯಾಗಿ ನಿಂತಿರುತ್ತಾನೆ, ಇನ್ನು ರಾಜಕೀಯದಲ್ಲಿ ಜಾತಿ ಸಂಬಂಧಗಳು, ಬದ್ಧ ವೈರಿಗಳಾಗಿರುತ್ತಾರೆ. ಅಂದರೆ ಅಲ್ಲಿ ರಾಜಕೀಯ ಲಾಭದ ಲೆಕ್ಕಾಚಾರಗಳಿರುತ್ತವೆ. ಇನ್ನು ನೆಂಟರಿಗೆ ಒಮ್ಮೆ ಸಾಲವನ್ನು ಕೊಟ್ಟು ನೋಡಿ ಹಣವನ್ನು ವಾಪಸ್ ಕೇಳಿದಾಗ ಅವರ ಮುಖವನ್ನು ಒಮ್ಮೆ ನೋಡಬೇಕು ಆವಾಗ ರಕ್ತ ಸಂಬಂಧಗಳು ಏನು ಎನ್ನುವುದು ಗೊತ್ತಾಗುತ್ತದೆ. ಇನ್ನು ಅಣ್ಣ-ತಮ್ಮಂದಿರ ದಾಯಾದಿ ಕಲಹ ಇಂದು-ನಿನ್ನೆಯದಲ್ಲ ಯುಗಗಳ ಇತಿಹಾಸವಿದೆ ಇನ್ನು ಅಕ್ಕತಂಗಿಯರು ಮದುವೆಯಾಗಿ ಹೋಗುವವರೆಗೂ ಸುಮ್ಮನಿದ್ದು ಗಂಡನ ಮನೆಗೆ ಹೋದ ಕೂಡಲೇ ಅಪ್ಪನ ಆಸ್ತಿಯ ಮೇಲೆ ಕಣ್ಣಿಟ್ಟಿರುತ್ತಾರೆ.
             ಇನ್ನು ಪ್ರೀತಿಯ ವಿಷಯವಂತೂ ಇತ್ತೀಚಿನ ದಿನಗಳಲ್ಲಿ ದೈಹಿಕ ಆಕರ್ಷಣೆಯ ಕೇಂದ್ರಬಿಂದು. ಪ್ರೀತಿ ಎಂಬ ಎರಡು ಅಕ್ಷರ ಇಟ್ಟುಕೊಂಡು ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಕೊಂಡು ದೈಹಿಕ ಅವಶ್ಯಕತೆ ಮುಗಿದ ಮೇಲೆ ಆಕರ್ಷಣೆ ಕಡಿಮೆಯಾಗಿ ಪ್ರೀತಿಯೆಂಬ ಎರಡಕ್ಷರ ಕಡಿಮೆಯಾಗುತ್ತದೆ. ಇನ್ನೂ ವಿಶೇಷವಾದ ಪ್ರೀತಿ ಗಳಿರುತ್ತವೆ ಲೆಕ್ಕಚಾರದ ಪ್ರೀತಿಗಳು ಹುಡುಗ ಸರ್ಕಾರಿ ನೌಕರದಲ್ಲಿದ್ದಾರೆ ಅವನ ಹತ್ತಿರ ಹಣವೊ, ಕಾರು, ಬಂಗಲೆಗಳು ಇದ್ದರೆ ಪ್ರೀತಿಯು ಉಕ್ಕಿ ಹರಿಯುತ್ತದೆ. ಇನ್ನು ಹುಡುಗಿಯರು ದೈಹಿಕ ಆಕರ್ಷಣೆಗೆ ಮರುಳಾಗುತ್ತಾರೋ ಎಂದು ನೋಡಿ ಕೆಲವು ಹುಡುಗರ ಪ್ರೀತಿ ಹುಟ್ಟುತ್ತದೆ.
           ಒಟ್ಟಿನಲ್ಲಿ ಸಂಬಂಧಗಳ ಅನಿವಾರ್ಯತೆ ಅವಶ್ಯಕತೆ ಮುಗಿದ ಮೇಲೆ ಸಂಬಂಧಗಳು ಬೇಡವಾಗುತ್ತವೆ. ಒಮ್ಮೆ ಪ್ರೀತಿಪಾತ್ರರಾದವರು ಇದ್ದಕ್ಕಿದ್ದಂತೆ ಬೇಡವೆನ್ನಿಸಿ ಬಿಡುತ್ತಾರೆ. ಕೆಲವು ಜನ ಅವರಿಗೆ ಬೇಕಾದಂತೆ ಸಂಬಂಧಗಳನ್ನು ಸಮಯಕ್ಕೆ ಅನುಗುಣವಾಗಿ ಸ್ನೇಹಕ್ಕೂ ಪ್ರೀತಿಗೂ ತಿರುಗಿಸಿ ಬೇಕಾದಂತೆ ಸಂಬಂಧಗಳನ್ನು ಬಳಸಿಕೊಂಡು ಮುಂದೆ ಸಾಗುತ್ತಾರೆ. ಒಟ್ಟಿನಲ್ಲಿ ಎಲ್ಲಾ ಸಂಬಂಧಗಳ ಹಿಂದೆ ಒಂದು ಸಣ್ಣ ಪ್ರಮಾಣದ ಸ್ವಾರ್ಥವಿರುತ್ತದೆ. ಅದಕ್ಕೆ ಸ್ನೇಹವೆಂದು, ಪ್ರೀತಿಯೆಂದು, ಸಂಬಂಧವೆಂದು ನಾಮಕರಣ ಮಾಡಿರುತ್ತಾರೆ.
             ಸಮಯ ಸರಿದಾಗ ಸಂಬಂಧಗಳು ಬೇಡವಾಗುತ್ತವೆ. ಏಕೆಂದರೆ ಅನಿವಾರ್ಯತೆಯಾಗಲಿ, ಅವಶ್ಯಕತೆಯಾಗಲಿ, ಇರುವುದಿಲ್ಲ.ಒಮ್ಮೆ ಕಣ್ಣು ಮುಚ್ಚಿಕೊಂಡು ಎಲ್ಲ ಸಂಬಂಧಗಳನ್ನು ನೆನಪಿಸಿಕೊಳ್ಳಿ ನಿಮಗೆ ಬೆರಳೆಣಿಕೆಯಷ್ಟು ಸಂಬಂಧಗಳು ಉಳಿದಿರುವುದು ತಿಳಿಯುತ್ತದೆ. ಏಕೆಂದರೆ ಅಲ್ಲಿ ಇನ್ನೂ ನಿಮ್ಮ ಅನಿವಾರ್ಯತೆ ಹಾಗೂ ಅವಶ್ಯಕತೆ ಇರುತ್ತದೆ. ಅನಿವಾರ್ಯತೆ ಇಲ್ಲವೆಂದರು  ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಎಂಬ ಕೃತಕತೆಯಲ್ಲಿ ಇಂದಲ್ಲ ನಾಳೆ ಇವರಿಂದ ಯಾವುದಾದರೂ ಸಹಾಯವಾಗಬಹುದೇನೋ ಎಂಬ ಲೆಕ್ಕಾಚಾರದಲ್ಲಿ ಆ ಸಂಬಂಧಗಳು ಇರುತ್ತವೆಯೋ ಹೊರತು ನಿಮ್ಮ ಮೇಲಿನ ಗೌರವದಿಂದ ಅಲ್ಲ. ಸಮಯ ಸರಿದಂತೆ ಸಂಬಂಧಗಳು ನಿಧಾನವಾಗಿ ಹೋಗುತ್ತವೆ. ಕೊನೆಗೆ ಉಳಿಯುವುದು ನೀವು ಒಬ್ಬಂಟಿ ಎಂಬುವ ಸತ್ಯ ಮಾತ್ರ. ನೀವು ಹುಟ್ಟಿದಾಗ ಇದ್ದದ್ದು ಒಬ್ಬರೇ ಸಾಯುವಾಗ ಇರುವುದು ಒಬ್ಬರೇ ಆದರೆ ಮಧ್ಯ ಬಂದವರೆಲ್ಲರೂ ಅವರ ಅನಿವಾರ್ಯತೆ ಮತ್ತು ಅವಶ್ಯಕತೆಯ ಭಾಗವಾಗಿದ್ದರೆಂದು.