Sunday, August 16, 2020

ಪ್ರೇಮದ ಅನ್ವೇಷಣೆ ಭಾಗ-9.

ಹಿರಿಯ ಮಗನ ಹೆಸರು ವಿಧು, ಕಿರಿಯ ಮಗನ ಹೆಸರು ತೇಜಸ್. ತಂದೆಯವರದು ಬೆಲೆಯನ್ನೇ ಕಟ್ಟಲಾಗದ ಶ್ರೇಷ್ಠ ವೃತ್ತಿಯಾದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು. ತಾಯಿಯವರು ಗೃಹಿಣಿ ಒಂದು ಚಿಕ್ಕ ಸಂಸಾರ ಆದರೆ ಗುಣ ವಿಶೇಷತೆಗಳು ಬೇರೆ. ವಿಧು ಹಠಮಾರಿ ಸ್ವಭಾವದ ಹುಡುಗ ತೇಜಸ್ ಮೃದುಸ್ವಭಾವದ ಹುಡುಗ ಗಾದೆಮಾತು ಹೇಳುವಂತೆ ಕಿರಿಯ ಮಕ್ಕಳು ಕಿವಿ ಕಚ್ಚಿದರು ಪ್ರೀತಿ ಎನ್ನುವಂತೆ, ಕಿರಿಯ ಮಗ ತೇಜಸ್ ಮೇಲೆ ವಿಶೇಷವಾದ ಪ್ರೀತಿ .ಆ ಪ್ರೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ ಆಗುವ ಅನಿಷ್ಟಕ್ಕೆಲ್ಲ ವಿಧು ಕಾರಣ ಅದೃಷ್ಟಕ್ಕೆ ಎಲ್ಲಾ ತೇಜಸ್ ಕಾರಣ ಎನ್ನುವ ಮಟ್ಟಿಗೆ. ಈ ಮಟ್ಟಿನ ತಾತ್ಸರ ವಿಧುವಿಗೆ ಮನೆಯವರ ಮೇಲೆ ಪ್ರೀತಿ ಇಲ್ಲದಂತೆ ಮಾಡಿತು. ತಂದೆ-ತಾಯಿ ತಮ್ಮ ಎಲ್ಲರೂ ಇದ್ದರೂ ಇಲ್ಲದಂತಿತ್ತು ಆತನ ಜೀವನ. ಅವನ ಮನಸ್ಸಿನಲ್ಲಿ  ಗಾಡ ನೋವಿನೊಂದಿಗೆ ಮನಸ್ಸಿನಲ್ಲಿ ಯೋಚನೆ ಮಾಡುತ್ತಿದ್ದನು. 
           ಬದುಕು ಬಹಳ ವಿಚಿತ್ರ ಎಲ್ಲ ಇದ್ದು ಇಲ್ಲದಂತೆ ಇರುವುದಕ್ಕಿಂತ ಇಲ್ಲದಂತೆ ಇರುವುದು ಉತ್ತಮ ಎಂದು ಮನಸ್ಸಿನಲ್ಲೇ ನೊಂದು ತಾನೇ ಸಮಾಧಾನಪಡಿಸಿ ಕೊಳ್ಳುತ್ತಿದ್ದನು. ಇದೆಲ್ಲದರ ನಡುವೆ ಅವನದು ವಿದ್ಯಾಭ್ಯಾಸದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನೂ ಇರಲಿಲ್ಲ. ಹಾಗಾಗಿ ಇವನು ಅವರ ತಂದೆ-ತಾಯಿಯ ಪಾಲಿಗೆ ದಡ್ಡ ಶಿಖಾಮಣಿಯಂತೆ ಕಾಣುತ್ತಿದ್ದನು.  ಇನ್ನು ಅವರ ತಂದೆ ಯಾವಾಗಲೂ ಋಣಾತ್ಮಕ ಅಂಶವನ್ನು ನೋಡುತ್ತಿದ್ದರಿಂದ ಆ ಋಣಾತ್ಮಕ ಪರಿಣಾಮವನ್ನು ವಿಧು ಪೂರ್ಣ ಪ್ರಮಾಣದಲ್ಲಿ ಎದುರಿಸಬೇಕಾಯಿತು. ಮನೆಗೆ ಬಂದ ನೆಂಟರು ಸ್ನೇಹಿತರ ಮುಂದೆ ವಿಧುವನ್ನು ತೆಗಳುವುದು, ತೇಜಸ್ಸನ್ನು ಹೊಗಳುವುದು ಇವರ ಕಾಯಕ ಎನ್ನುವಂತೆ ವರ್ತಿಸುತ್ತಿದ್ದರು. ವಿಧುವಿನ ಜೀವನದಲ್ಲಿ ಪ್ರೀತಿ ತೋರಿಸುವ ವ್ಯಕ್ತಿಗಳು ಚಿಕ್ಕವಯಸ್ಸಿನಿಂದಲೇ ಅವನಿಗೆ ಸಿಗಲಿಲ್ಲ ಅವನ ದುರದೃಷ್ಟವೋ ಏನೋ ಭಾವನೆಗಳು ಅರಳುವ ಸಮಯದಲ್ಲಿ ಭಾವನೆಗಳು ಸತ್ತು ಹೋಗಿದ್ದವು. ಬದುಕು ಬೇಡ ಎನ್ನುವಷ್ಟುರ ಮಟ್ಟಿಗೆ ಜಿಗುಪ್ಸೆ ಪ್ರತಿ ಹಂತದಲ್ಲೂ ಮೂದಲಿಕೆಯ ಮಾತುಗಳು, ಅವನ ತಂದೆ-ತಾಯಿ ನಡೆಸಿಕೊಳ್ಳುತ್ತಿದ್ದ ರೀತಿ ನಾನು ಇವರ ಮಗನೋ ಅಲ್ಲವಾ ಎಂದು ಅನುಮಾನ ಉಂಟುಮಾಡುವಂತೆ ಇರುತ್ತಿತ್ತು. ಅವರ ನಡವಳಿಕೆಗಳು ವಿಧುವಿಗೆ ಒಂಟಿತನದಿಂದ ಬದುಕುವ ಪಾಠವನ್ನು ಕಲಿಸಿ ಬಿಟ್ಟಿದ್ದವು.
                  ಎಲ್ಲಾ ಹೇಳುತ್ತಾರೆ ಕೆಟ್ಟ ಮಕ್ಕಳು ಹುಟ್ಟಬಹುದು. ಆದರೆ ಕೆಟ್ಟ ತಂದೆ-ತಾಯಿ ಇರುವುದಿಲ್ಲವೆಂದು ಆದರೆ ವಿಧುವಿಗೆ ಈ ಮಾತು ಎಷ್ಟು ಸತ್ಯವಿರಬಹುದು ಎಂಬ ಜಿಜ್ಞಾಸೆ. ಪ್ರತಿಬಾರಿಯೂ ಇವನು ದಡ್ಡ ಶಿಖಾಮಣಿ ಇವನು ಹತ್ತನೇ ತರಗತಿಯನ್ನು ಕೂಡ ಪಾಸ್ ಮಾಡಲಾರ ಎಂದು ತಿಳಿದಿದ್ದ ಹಾಗೂ ಎಲ್ಲರ ಮುಂದೆ ಮೂದಲಿಸುತ್ತಿದ್ದ ಅವನ ತಂದೆ ತಾಯಿಗೆ ಅಚ್ಚರಿಯಾಗುವಂತೆ ಹತ್ತನೆಯ ತರಗತಿಯಲ್ಲಿ ಉತ್ತೀರ್ಣನಾದ. ತಾನು ಅನುಭವಿಸುತ್ತಿದ್ದ ಮೂದಲಿಕೆ ಅಪಹಾಸ್ಯ ಇಂತಹದನ್ನೆಲ್ಲ ವಿರೋಧಿಸುತ್ತಿದ್ದ ಕಾರಣಕ್ಕೋ ಏನೋ, ಸಹಪಾಠಿಗಳು ಬೇರೆಯವರಿಗೆ ಮಾಡುತ್ತಿದ್ದ ಅಪಹಾಸ್ಯ ,ಅವಮಾನ ಕಟುವಾಗಿ ವಿರೋಧಿಸುತ್ತಿದ್ದ .ಮನುಷ್ಯರ ಹೊಟ್ಟೆಕಿಚ್ಚಿನ ಗುಣ ಇವನನ್ನು ಯಾವಾಗಲೂ ಗೊಂದಲದಲ್ಲಿ ಇರುವಂತೆ ಮಾಡುತ್ತಿತ್ತು. ಬೇರೆಯವರನ್ನ ಮೂದಲಿಸಿ ಅಪಹಾಸ್ಯ ಮಾಡಿ ಇವರು ಗಳಿಸುವುದಾದರೂ ಏನನ್ನು ಎಂಬ ಪ್ರಶ್ನೆ ಕಾಡುತ್ತಿತ್ತು .10ನೇ ತರಗತಿ ಮುಗಿದ ಮೇಲೆ 11ನೇ ತರಗತಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಕಾಲೇಜಿಗೆ ಸೇರಿಕೊಂಡ. ಅಲ್ಲಿ ತನ್ನ ಬದುಕಿನ ಹೊಸ ಚಿಂತನೆಗಳು ಹೊಸ ವಿಚಾರಗಳು ಹೊಸ ಕನಸುಗಳೊಂದಿಗೆ ತನ್ನ ಬದುಕಿನ ಯಾತ್ರೆಯನ್ನು ಹೊಸ ಹುಮ್ಮಸ್ಸಿನಿಂದ ಮುಂದುವರಿಸಿಕೊಂಡು ಹೋಗುವುದಾಗಿ ನಿಶ್ಚಯಿಸಿಕೊಂಡು, ಹೊಸ ಬದುಕಿಗೆ ತನ್ನನ್ನು ತಾನು ತೆರೆದುಕೊಂಡು ಮುನ್ನಡೆದ. ಆದರೆ ಅವನ ಮನೆಯಲ್ಲಿ ಯಾವ ಬದಲಾವಣೆಯನ್ನು ಕಾಣಲಿಲ್ಲ ಮನೆಯಲ್ಲಿ ಮಕ್ಕಳು ದೊಡ್ಡವರಾದಮೇಲೆ ಮಕ್ಕಳಿಗಿಂತ ಹೆಚ್ಚಾಗಿ ಸ್ನೇಹಿತರಂತೆ ಕಾಣಬೇಕು ಎಂಬ ಅರಿವಿಲ್ಲದ ಅವರ ತಂದೆ ಇನ್ನೂ ಅವನನ್ನು ಹೊಡೆಯುವುದು ಬಡಿಯುವುದು ಮುಂದುವರಿಸಿದರು. ಇನ್ನು ಇವರ ನಡವಳಿಕೆ ಇಂದ ನೋವನ್ನು ಅನುಭವಿಸಿ ಅವನ ಸಹನೆಯ ಕಟ್ಟೆ ಒಡೆದು ಹೋಗಿತ್ತು. ಇದೇ ರೀತಿ ಮುಂದುವರೆದರೆ ನನ್ನನ್ನು......

Tuesday, August 11, 2020

ಪ್ರೇಮದ ಅನ್ವೇಷಣೆ ಭಾಗ-8

          ನೀನು ಹೇಳುವುದು ಸತ್ಯ; ಆದರೆ ದೇಶವನ್ನು ನಿನ್ನಂತೆ ತುಂಬಾ ಜನರು ಪ್ರೀತಿಸುತ್ತಾರೆ. ನಿನ್ನ ದೇಶಪ್ರೇಮದ ಬಗ್ಗೆ ಸಂಶಯವೇ ಬೇಡ ಎಂದು ಹೇಳುತ್ತಾ ಅನಿಕೇತ್ ಈಗಲಾದರೂ ಹೇಳು ಯಾರನ್ನಾದರೂ ಪ್ರೀತಿಸುತ್ತಿದ್ದೀಯ ಎಂದು ? ಅವನ ಪ್ರಶ್ನೆಗೆ ಉತ್ತರ ಎನ್ನುವಂತೆ ವಿಧು ಇಲ್ಲ ಯಾರನ್ನೂ ನಾನು ಇನ್ನು ಪ್ರೀತಿಸಿಲ್ಲ ಎಂದು ಹೇಳುವಾಗಲೇ ಕೊನೆಪಕ್ಷ ಮದುವೆ ಯೋಚನೆ ಏನಾದರೂ ಇದೆಯೇ ? ಎಂದು ಕೇಳಿದ, ಹಾಗೇನು ಇಲ್ಲ ನೋಡೋಣ ಕಾಲ ಬಂದಾಗ ಏನೇನು ಆಗಬೇಕು ಅದು ಆಗೇ ತಿರುತ್ತದೆ. ಸರಿ ಈಗ ಎಲ್ಲಿ ಹೋಗುತ್ತಿರುವೆ ಈ ಸಮಯದಲ್ಲಿ ಶಿವಮೊಗ್ಗಕ್ಕೆ ಹೋಗಲು ಕಾರಣವಾದರೂ ಏನು ? ನಿನ್ನ ವ್ಯವಹಾರದ ದೃಷ್ಟಿಯಿಂದ ಅದಕ್ಕೆ ಸಂಬಂಧಪಟ್ಟಂತೆ ಹೋಗುತ್ತಿರುವೆಯ ಹೇಗೆ ಎಂದು ಪ್ರಶ್ನಿಸಿದ. ಇಲ್ಲ ನಾನು ರಾಷ್ಟ್ರೀಯ ಸೇವಾ ಸಮಿತಿಯಿಂದ ಚುನಾವಣಾ ಕಾರ್ಯಕ್ಕಾಗಿ ರಾಷ್ಟ್ರೀಯ ಸೇವಾ ಪಾರ್ಟಿಯಲ್ಲಿ ಕೆಲಸ ಮಾಡಲು ಹೋಗುತ್ತಿರುವೆ ಎಂದ ವಿಧು. ಓ ನೀನು ಇನ್ನು ನಿನ್ನ ರಾಜಕೀಯ ಒಡನಾಟವನ್ನು ಬಿಟ್ಟಿಲ್ಲ ಎಂದಾಯಿತು, ಹೋಗಲಿ ಬಿಡು ರಾಜಕೀಯದಲ್ಲಿ ಆದರೂ  ನೀನು ಎತ್ತರ ಸ್ಥಾನದಲ್ಲಿ ಬೆಳೆಯಬೇಕು ಎನ್ನುವಷ್ಟರಲ್ಲಿ ಶಿವಮೊಗ್ಗಕ್ಕೆ ಹೋಗುವ ಬಸ್ ಬಂದಿತು. ಅನಿಕೇತ್ ವಿಧುವನ್ನು ಬಸ್ಸಿಗೆ ಹತ್ತಿಸಿ ಹೊರಟ. ವಿಧು ಬಸ್ ಹತ್ತಿದ ಕೂಡಲೇ ಕಿಟಕಿಯ ಪಕ್ಕದ ಜಾಗವನ್ನು ಹುಡುಕಿ ಕುಳಿತ ಬಸ್ ತನ್ನ ಪಯಣವನ್ನು ಆರಂಭಿಸಿತು.
             ಟಿಕೆಟ್ ತೆಗೆದುಕೊಂಡ ವಿಧು ಬಸ್ಸಿನ ಕಿಟಕಿಯನ್ನು ತೆಗೆದ ಆಹ್ಲಾದಕರ ತಂಗಾಳಿ. ಅದು ಮುಸ್ಸಂಜೆಯ ಸಮಯ ಸೂರ್ಯ ಪೂರ್ವದಿಂದ ತನ್ನ ಪಥವನ್ನು ಪಶ್ಚಿಮದ ಕಡೆಗೆ ತನ್ನ ಪಯಣವನ್ನು ಬಲು ಜೋರಾಗಿ ನಡೆಸುತ್ತಿದ್ದಾನೆ ಎನ್ನುವಂತೆ ಭಾಸವಾಗುತ್ತಿತ್ತು. ಆ ಕಿತ್ತಲೆ ಬಣ್ಣದ ಕಿರಣಗಳು ತನ್ನ ಅಂದಿನ ಕರ್ತವ್ಯವನ್ನು ಮುಗಿಸಿ ಮನೆಗೆ ಸೇರುವ ತವಕದಲ್ಲಿ ಮಕ್ಕಳು ಶಾಲೆಯನ್ನು ಬಿಟ್ಟು ಕೂಡಲೇ ಮನೆಗೆ ಹೋಗುವಂತೆ ಹೋಗುವ ರೀತಿಯಲ್ಲಿ ಕಾಣುತ್ತಿತ್ತು. ಬೆಳ್ಳಕ್ಕಿ ಹಿಂಡು ತನ್ನ ಮನೆಗಳಿಗೆ ತೆರಳುವ ದೃಶ್ಯ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು .ಇನ್ನೇನು ಸಂಜೆ ಕತ್ತಲು ಆವರಿಸುತ್ತಿದ್ದಂತೆ ಪ್ರಕೃತಿಯ ಸೌಂದರ್ಯ ಹಂತಹಂತವಾಗಿ ಮರೆಯಾಗುತ್ತಿತ್ತು. ಕತ್ತಲು ಕವಿಯುತ್ತಿದ್ದಂತೆ ತನ್ನ ಬದುಕಿನ ಕತ್ತಲಿನ ಬಗ್ಗೆ ಯೋಚಿಸಲು ಶುರುಮಾಡಿದ ವಿಧು. ಹೌದು ನಾನು ಏಕೆ ಹೀಗೆ ? ನನ್ನ ಸ್ನೇಹಿತರೆಲ್ಲ ಏಕೆ ನನ್ನನ್ನು ನೀನು ತುಂಬಾ ವಿಭಿನ್ನ ಎಂದು ಕರೆಯುತ್ತಾರೆ, ಎಂದು ಯೋಚಿಸತೊಡಗಿದ.  ಮನುಷ್ಯನ ಬದುಕಿನ ಹಾಗೂ ಪರಿಸರದ ಆಧಾರದ ಮೇಲೆ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎನಿಸಿತು ಮನಸ್ಸಿನಲ್ಲಿ. ವಿಧುವಿನ ಮನಸ್ಸಿನಲ್ಲಿ ಹಲವಾರು ವಿಚಾರಗಳು ಸುಳಿದವು. ನಾನೇಕೆ ಹೀಗೆ ನಾನು ಬೆಳೆದು ಬಂದ ಪರಿಸರವೇ ? ಏಕೆ ನಾನು ಎಲ್ಲರಿಗಿಂತ ಭಿನ್ನವಾಗಿ ಬೆಳೆದೆ. ನಾನೇ ಬಿನ್ನವ ಅಥವಾ ಈ ಲೋಕ ಬಿನ್ನವಾಗಿದೆಯಾ? ಅಥವಾ ನನ್ನ ಬಾಲ್ಯದ ಪ್ರಭಾವ ನಾ ? ಅಥವಾ ಅನುಭವಕ್ಕೆ ಮಾತ್ರ ತಿಳಿಯುವಂತಹ ಯಾವುದಾದರೂ ಅತೀಂದ್ರಿಯ ಶಕ್ತಿ ಆಟದಲ್ಲಿ ಸಿಲುಕಿ ಕೊಂಡಿದ್ದೇನ ? ಎಂಬ ಜಿಜ್ಞಾಸೆ. ಮನಸ್ಸಿನಲ್ಲಿ ಹೀಗೆ ಹತ್ತು ಹಲವಾರು ಯೋಜನೆಗಳು ಹರಿದವು. ಬದುಕಿನ ಪಯಣ ವಿಚಿತ್ರ ಮನುಷ್ಯ ಹುಟ್ಟಿದಾಗ ಇರುವ ಮುಗ್ಧ ಮನಸ್ಸಿನಿಂದ ಹಿಡಿದು ಬದುಕಿನ ಪರಿಪಕ್ವತೆ ತಿಳಿಯುವ ಒಳಗೆ ಬದುಕು ಮುಗಿದು ಹೋಗಿರುತ್ತದೆ. ಅಲ್ಲವಾ ? ಮನಸ್ಸಿನಲ್ಲಿ ಬದುಕಿನ ಪುಟಗಳನ್ನು ತಿರುವು  ಹಾಕಲು ಶುರುಮಾಡಿದ. ಅವನ ಮನಸ್ಸು ತಾನು ಬೆಳೆದ ಚಿಕ್ಕಮಗಳೂರಿನ ಕಡೆ ಹೋಯಿತು. ಚಿಕ್ಕಮಗಳೂರು ಎಂದರೆ ಕೇಳಬೇಕಾ ಪ್ರಕೃತಿ ಸೌಂದರ್ಯ ಮೈಮೇಲೆ ಹೊತ್ತು ನಿಂತಂತಹ ಸೌಂದರ್ಯ ಗಿರಿಶಿಖರಗಳ ನೆಲೆಬೀಡು ಎಂಥವರನ್ನು ತನ್ನ ಸೌಂದರ್ಯದಿಂದ ಮನಸೂರೆಗೊಳ್ಳುವಂತೆ ಮಾಡುವ ಪ್ರದೇಶ. ಚಿಕ್ಕಮಗಳೂರು ಜಿಲ್ಲೆ ಬಯಲುಸೀಮೆ ಹಾಗೂ ಮಲೆನಾಡಿನ ಸಂಗಮ ಅಲ್ಲಿಯ  ಕಾಫಿಯ ಘಮ ವಿಶ್ವವ್ಯಾಪಿ ಇಂತಹ ಸೌಂದರ್ಯದ ಮಡಿಲಿನಲ್ಲಿ ಒಂದು ಪುಟ್ಟ ಸಂಸಾರ, ಗಂಡ ಹೆಂಡತಿ ಮತ್ತು ಮಕ್ಕಳು  ಅದರಲ್ಲಿ ಹಿರಿಯ ಮಗನ ಹೆಸರು.....