Sunday, February 11, 2024

ಅವಳು ಬಂದಿದ್ದಾದರೂ ಏಕೆ...?

                ಅವಳು ಹೇಳಿಕೊಳ್ಳುವಂತಹ ರೂಪವಂತೆನೂ ಏನು ಅಲ್ಲ. ಅವಳೇ ಹೇಳಿದಂತೆ. ಅವಳು ಬಂದಿದ್ದು ಆಕಸ್ಮಿಕವಾಗಿ. ಸ್ನೇಹಿತನಿಗೆ ವಹಿಸಿದ್ದ  ಜವಾಬ್ದಾರಿಯನ್ನು ನಿಭಾಯಿಸಲಾಗದ ಅವನು ಅವಳಿಗೆ ಆ ಜವಾಬ್ದಾರಿಯನ್ನು ನೀಡಿ ಸುಮ್ಮನಾಗಿದ್ದ. ದಿನಗಳು ಕಳೆದಿದ್ದವು. ಇ-ಮೇಲ್ ಮುಖಾಂತರ ಮೆಸೇಜ್ ಬಂದಿತ್ತು. ಆ ಮೆಸೇಜ್ ತೆಗೆದು ನೋಡಿದವನಿಗೆ ನನ್ನ ಬರಹಕ್ಕೆ ಸೂಕ್ತ ಸ್ಪಂದನೆ ಸಿಕ್ಕಿದೆ ಎಂಬುವ ಖುಷಿ. ತನ್ನ ಬರಹವನ್ನು ತಿದ್ದುತ್ತಿರುವ ವ್ಯಕ್ತಿ ಯಾರೆಂದು ನೋಡಬೇಕೆಂಬ ಹಂಬಲ. ಆದರೆ ಹೆಣ್ಣಿನ ಸವಾಸ ಬೇಡವೇ ಬೇಡ ಎಂದು ದೂರ ಇದ್ದವನಿಗೆ ಆ ಬದಿಯಲ್ಲಿ ತನ್ನ ಬರಹ ತಿದ್ದುತ್ತಿರುವುದು ಹೆಣ್ಣೆಂದು ಗೊತ್ತಾದ ಮೇಲೆ ಅದರ ಗೋಜಿಗೆ ಹೋಗಬಾರದೆಂದು ಸುಮ್ಮನಿದ್ದ. ದಿನಗಳು ಕಳೆದವು ಇ-ಮೇಲ್  ನಲ್ಲಿಯೇ ಸಂವಹನ ಮುಂದುವರೆಯಿತು. ಒಂದು ದಿನ ಆಕೆಯೇ ನಂಬರನ್ನು ಕೇಳಿದಳು. ನಂಬರನ್ನು ಕೊಟ್ಟಿದ್ದಾಯಿತು. ಅವನ ಅವಳ ಸ್ನೇಹದ ಬೀಜ ಚಿಗುರೊಡೆಯುವ ಅಂತವು  ತಲುಪಿದಂತಾಯಿತು. ಸಮಾನ ಅಭಿರುಚಿಯ ವ್ಯಕ್ತಿತ್ವ ಹಾಗಿದ್ದರಿಂದ ಸ್ನೇಹವೂ ಚೆನ್ನಾಗಿ ಮುಂದುವರೆಯಿತು. ಮೊದಮೊದಲು ಆಕೆಯ ಸ್ನೇಹಕ್ಕೆ ಪರಿಮಿತಿ ಹಾಕುತ್ತಿದ್ದ ಅವನು ಆಕೆಯ ಸ್ನೇಹದಲ್ಲಿ ಮುಳುಗಿ ಹೋದನು. ಅವಳಿಗೆ ಅವನನ್ನು ಅರಿಯುವ ಹಂಬಲ. ಅವನಿಗೆ ನಾನು ಎಲ್ಲಿ ಅವಳ ಪ್ರೀತಿಯಲ್ಲಿ ಬೀಳುತ್ತೇನೆ ಎಂಬ ಭಯ. ಗೆದ್ದಿತ್ತು ಅವಳ ಹಂಬಲತನ. ಅವನಿಗೆ ಸ್ನೇಹವೂ ಪ್ರೀತಿಯ ಕಡೆಗೆ ತಿರುಗಲು ಬಹಳ ಸಮಯ ಹಿಡಿಯಲಿಲ್ಲ. ಅವನು ಅವಳ ಪ್ರೀತಿಯಲ್ಲಿ ಬಿದ್ದರೂ ಅದನ್ನು ತೋರ್ಪಡಿಸಿಕೊಳ್ಳಲು ಬಹಳ ವರ್ಷಗಳೇ ಕಾದುದ್ದಾಯಿತು. ಅಚಾನಕ್ಕಾಗಿ ಆ ದಿನವೂ ಬಂದಿದ್ದಾಯಿತು. ಪ್ರೀತಿ ನಿವೇದನೆಯೂ ಆಯ್ತು. ಆಕೆ ತಣ್ಣಗೆ ಪ್ರೀತಿಯನ್ನು ನಿರಾಕರಿಸಿದ್ದಳು. ಅವನಿಗೆ ತುಂಬಾ ಹೆಣ್ಣು ಮಕ್ಕಳ ಸ್ನೇಹವಿರಲಿಲ್ಲ, ಬಹುಶಃ ಸ್ನೇಹವಿದ್ದಿದ್ದರೆ ಅತಿಯಾದ ಕಾಳಜಿಯಂತೆ ತೋರ್ಪಟ್ಟ ವಿಚಾರಗಳು ಪ್ರೀತಿಯ ಸ್ವರೂಪ ಪಡೆಯುತ್ತಿರಲಿಲ್ಲವೇನೋ....
        ಸಂಬಂಧಗಳೇ ಹಾಗೆ ಹೊಸತರಲ್ಲಿ ಬೇರೆಯವರನ್ನು ತಿಳಿಯುವ ಹಂಬಲವಿರುತ್ತದೆ. ಕಾಲ ಕಳೆದಂತೆ ಅವರ ಮೇಲಿನ ಕಾಳಜಿ ಆಕರ್ಷಣೆ ಎಲ್ಲವೂ ಮರೆಯಾಗುತ್ತದೆ. ಅವನಿಗೆ ಹಲವಾರು ಪ್ರಶ್ನೆಗಳು ಕಾಡಲು ನಿಂತವು. ಅವಳಿಗೆ ಮೊದಲಿದ್ದ ಬಾವ ಹೀಗಿಲ್ಲ. ಅವಳು ಆತ್ಮೀಯತೆಯ, ಕಾಳಜಿ ಪ್ರೀತಿಯನ್ನು ಸ್ನೇಹವೆಂದು ಶರ ಬರೆದಳು. ಆಕೆ ಅವನಿಗೆ ನೇರವಾಗಿ ಸಿಗುವ ಗೋಜಿಗೂ ಹೋಗಲಿಲ್ಲ. ಕೊನೆ ಪಕ್ಷ  ಸ್ನೇಹವೆಂದ ಮೇಲೆ ಪರಸ್ಪರ ಕಾಳಜಿ ತೋರುವುದು ಭೇಟಿಯಾಗುವುದು ಇದ್ದೇ ಇರುತ್ತದೆ. ಆಕೆ ಮೊದಲಿನಂತೆ ಏಕೆ ಇಲ್ಲ ಎಂದು ಯೋಚಿಸ ತೊಡಗಿದ. ಹೌದು ಸ್ನೇಹದ ಹೊಸತರಲ್ಲಿ ಅವಳು ಮನೆಯಲ್ಲಿದ್ದಳು. ಸಮಯ ಕಳೆಯಲು ಸಾಂಗತ್ಯದ ಅವಶ್ಯಕತೆ ಇತ್ತು.ಈಗ ಕೆಲಸಕ್ಕೆ ಹೋಗುತ್ತಿದ್ದಾಳೆ. ಆದರೆ ಈಗ ಅವಶ್ಯಕತೆ ಇಲ್ಲ. ಅಲ್ಲಿ ಹೊಸ ಸ್ನೇಹಿತರು ಆಗಮನವಾಗಿದೆ. ಅವನ ಅವಶ್ಯಕತೆ ಇಲ್ಲ. ಅವಶ್ಯಕತೆ ಇಲ್ಲವೆಂದ ಮೇಲೆ ವಿಚಾರಗಳ ವಿನಿಮಯ ಯಾತಕ್ಕೆ. ಅವನು ಮತ್ತೆ ಸ್ನೇಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಅವಳದು ತಾತ್ಸಾರ ಭಾವ. ಕೊನೆಗೆ ಸತ್ಯದ ಅರಿವಾಗ ತೊಡಗಿತ್ತು. ನನ್ನವಳಲ್ಲದವಳಿಗಾಗಿ ನಾನು ಬದಲಾಗಿದ್ದೇನೆಂದು. ಮನಸ್ಸು ಪ್ರಶ್ನೆಯನ್ನು ಕೇಳುತೊಡಗಿತ್ತು. ನಿನ್ನ ಜೀವನದಲ್ಲಿ ಅವಳು ಬಂದಿದ್ದಾದರೂ ಏಕೆ ಎಂದು....? ಅವನಿಗೆ ಸಿಕ್ಕ ಉತ್ತರ ಬದುಕಿನ ಪಾಠ ಕಲಿಸಲೆಂದು.
             ಬದುಕೇ ಹಾಗೆ ನಿರೀಕ್ಷೆಯಿಲ್ಲದವರ ಆಗಮನ ಬದುಕಿಗೆ ತಿರುವುಗಳನ್ನು ಕೊಟ್ಟುಬಿಡುತ್ತದೆ. ಕಾಲ ಧರ್ಮದಲ್ಲಿ ವಿಧಿಯ ವಿರುದ್ಧವೇ ಹೋರಾಡಲು ಸಿದ್ದನಿದ್ದವನನ್ನು ಪ್ರೀತಿ ಎಂಬ ಮಾಯೆ ಅವನ ಅಂತರಂಗದ ಶಕ್ತಿಯನ್ನೇ ಕದಡುತ್ತದೆ. ಕೊನೆಯಲ್ಲಿ ಉಳಿಯುವುದು ಸರಿದ ಸಮಯ ಹಾಗೂ ಅಂತರಂಗದ ಕದನ..