Sunday, June 19, 2022

ಅಪ್ಪ ಕಾಣದ ದೇವರಾದ...

               ಅಪ್ಪ ಅವನು ಕಣ್ಣಮುಂದೆ ಇದ್ದರೂ ಕಾಣದ ದೇವನಾದ. ಅವನು ಸಮಾಜಕ್ಕೂ ಸಿಗಲಿಲ್ಲ ಕುಟುಂಬಕ್ಕೂ ಸಿಗಲಿಲ್ಲ. ಆದರೆ ಅದೆಲ್ಲವೂ ಅವನಿಂದಲೇ  ನಿರ್ಮಾಣವಾದದ್ದು. ಸಮಾಜಕ್ಕೆ ಅರಿವೇ ಆಗಲಿಲ್ಲ ಅವನಿಲ್ಲದಿದ್ದರೆ ಎಲ್ಲವೂ ಶೂನ್ಯವೆಂದು. ಅವನಿಂದಲೇ ಸೃಷ್ಟಿಯ ಸಮತೋಲನ. ಆದರೂ ಅವನು ಯಾರಿಗೂ ಕಾಣದಾದ. ಅವನ ಬೆವರಿನ ಹನಿ ಮನೆಗಳಲ್ಲಿ ಕಾಣಲಿಲ್ಲ. ಬೆಳಿಗ್ಗೆ ಸೂರ್ಯೋದಯದಲ್ಲಿ ಮನೆ ಬಿಟ್ಟು ಮನೆಗೆ ಬರುವುದು ಸಂಜೆಯ ಸಮಯದಲ್ಲಿ, ಅಮ್ಮ ಎಲ್ಲಾ ಕಡೆ ಗೋಚರಿಸಿದಳು. ಏಕೆಂದರೆ ಅವಳು ಮನೆಯಲ್ಲಿಯೇ ಇದ್ದಳು. ಅವಳು ಮನೆಯಲ್ಲಿ ಮಕ್ಕಳನ್ನು ಹಾರೈಕೆ ಮಾಡುವಂತೆ ಮಾಡಿದ ಅಪ್ಪ ಕಾಣದಾದ. ಮಕ್ಕಳಿಗಾಗಿ ಪರಿಶ್ರಮಿಸಿ ತಾಯಿಯಂತೆ ಅವನು ಮಾಡಿದ ಸೇವೆಗಳು ಅದೇಷ್ಟು ಆದರೂ ಅವನು ಕಾಣದಾದ.
               ತಾಯಿ ಮನೆಯಲ್ಲಿ ಆರೈಕೆ ಮಾಡಿದರೆ ಹೊರಗಡೆ ವಯಸ್ಸಿಗೆ ಬಂದ ಮಕ್ಕಳು ದಾರಿ ತಪ್ಪಬಾರದು ಎಂದು ಕಣ್ಗಾವಲಿನಲ್ಲಿ ಚಿಪ್ಪಿನೊಳಗಿನ ಮುತ್ತಿನಂತೆ ಹಗಲು ರಾತ್ರಿ ಎನ್ನದೆ ನೋಡಿಕೊಂಡ ಅಪ್ಪ ಕಾಣದಾದ. ದುಡಿದು ತಿನ್ನುವ ಬದುಕಿನ ದಾರಿಯನ್ನು ಹೇಳಿಕೊಟ್ಟ ಅಪ್ಪ. ಮಕ್ಕಳಿಗೆ ಶಕ್ತಿ ಬರುತ್ತಿದ್ದಂತೆ ಕಾಣದಾದ. ತಾನು ಮಾಡಿದ ತಪ್ಪು ತನ್ನ ಮಕ್ಕಳ ಬದುಕಿನಲ್ಲಿ ಆಗಬಾರದೆಂದು ಬುದ್ಧಿ ಹೇಳಿದ ಅಪ್ಪ ತನ್ನ ಮಕ್ಕಳು ಬೇರೆಯವರ ಬಾಯಿಗೆ ಆಹಾರ ವಾಗಬಾರದು ಎಂದು ಬಯಸಿದ್ದ ಅಪ್ಪ ನಿಷ್ಟುರನಾದ. ದಾರಿತಪ್ಪಿದ ಮಕ್ಕಳನ್ನು ಸರಿದಾರಿಗೆ ತರಲು ಪ್ರಯತ್ನಿಸಿದ ಅಪ್ಪ ಸಮಾಜದ ನಿಂದನೆ ಒಳಗಾದ.
             ತಾನು ಬರೆಯುತ್ತಿರುವ ಪುಸ್ತಕದ ಹಾಳೆಗಳ ಹಿಂದೆ ಅಪ್ಪನ ಬೆವರಿನ ಹನಿ ಇದೆಯೆಂದು ತಿಳಿಯದ ಹುಡುಗ ತಾನು ಓಡಿಸುತ್ತಿರುವ ಬೈಕಿನ ಹಿಂದೆ ಅಪ್ಪನ ಬೆವರಿನ ಹನಿ ಸುಡುವುದನ್ನು ಕಾಣದ ಮಗ ತನ್ನ ಹೊಸ ಬಟ್ಟೆಗಳ ಹಿಂದೆ ಅಪ್ಪನ ಪರಿಶ್ರಮ ಇದೆ ಎಂದು ತಿಳಿಯದ ಮಗ ಅಪ್ಪನನ್ನ ದೂರ ತೊಡಗಿದ. ಇದೆಲ್ಲವನ್ನೂ ಕೊಡಿಸಿದ ಅಪ್ಪ ಕಾಣದಾದ. ತನ್ನ ಹೆಂಡತಿ ಮಕ್ಕಳಿಗಾಗಿ ಕೆಲವೊಮ್ಮೆ ಸಮಾಜದಲ್ಲಿ ಅವಮಾನ ಅಪಮಾನಗಳನ್ನು ಎದುರಿಸಿದ ಅಪ್ಪ ಮನೆಯಲ್ಲಿ ಮಕ್ಕಳಿಂದಲೂ ತಿರಸ್ಕೃತಗೊಂಡು ದೂರದಲ್ಲಿ ನಿಂತು ತನ್ನ ಹೆಂಡತಿ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬಯಸುತ್ತ ದೂರವಾದ ಕೊನೆಯಲ್ಲಿ ದೇವರಾದ.....