ಭಾರತ ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ .ತನ್ನ ವಿಶಿಷ್ಟತೆಯಲ್ಲಿ ಜಗತ್ತನ್ನು ಮನಸೂರೆಗೊಂಡ ರಾಷ್ಟ್ರ. ಇಂತಹ ರಾಷ್ಟ್ರವು ಬ್ರಿಟಿಷರ ಆಡಳಿತದಿಂದ 1947 ರಲ್ಲಿ ಸ್ವಾತಂತ್ರ್ಯಗೊಂಡು 26 ಜನವರಿ 1950 ರಂದು ಗಣರಾಜ್ಯವಾಯಿತು. ಒಂದು ರಾಷ್ಟ್ರ ಗಣರಾಜ್ಯವಾಗಲು ಮೂಲತ ಬೇಕಾಗಿರುವುದು ಅದರದೇ ಆದಂತಹ ಕಾನೂನು ಹಾಗೂ ಸುವ್ಯವಸ್ಥೆ. ಒಂದು ರಾಷ್ಟ್ರ ಪರಿಪಕ್ವವಾಗಿ ನಡೆಯಲು ಅದರದೇ ಆದ ರೀತಿ-ರಿವಾಜುಗಳನ್ನು ಮಾಡಿಕೊಂಡಿರುತ್ತದೆ. ಅದೇ ರೀತಿ ಭಾರತವು ಆಯ್ಕೆಮಾಡಿಕೊಂಡ ವಿಧಾನ ಫೆಡರಲ್ ವ್ಯವಸ್ಥೆ. ಅದರ ಪ್ರತಿಫಲವೇ ಹುಟ್ಟಿಕೊಂಡಿದ್ದು ರಾಜ್ಯ ಹಾಗೂ ಕೇಂದ್ರಕೃತ ವ್ಯವಸ್ಥೆ .ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಕಲ್ಪನೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.
ರಾಜ್ಯ ಹಾಗೂ ಕೇಂದ್ರ ಆಡಳಿತ ನಡೆಸಲು ಒಂದು ವ್ಯವಸ್ಥೆ ಬೇಕಾಗುತ್ತದೆ. ಅದೇ ಕಾರ್ಯಂಗ, ಆ ಕಾರ್ಯಾಂಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂದು ನೋಡಿಕೊಳ್ಳಲು ಮತ್ತೊಂದು ವ್ಯವಸ್ಥೆ ಬೇಕಾಗುತ್ತದೆ ಅದೇ ಶಾಸಕಾಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಆಯ್ಕೆಯು ಜನರಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಾರೆ. ಕಾರ್ಯಾಂಗಕ್ಕೆ ನಿರ್ದೇಶನ ನೀಡುವ ಅಧಿಕಾರ ಶಾಸಕಾಂಗಕ್ಕೆ ಇರುತ್ತದೆ. ಕೇಂದ್ರದಲ್ಲೂ ಕೂಡ ಇದೇ ಮಾದರಿಯ ಲೋಕಸಭಾ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ. ಜನಸಂಖ್ಯೆ ಅನುಗುಣವಾಗಿ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳನ್ನು ಮಾಡುತ್ತಾರೆ .ಕಾರ್ಯಾಂಗ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೆ ಜನರ ಒಳಗೆ ಇರುವ ಒಂದು ವ್ಯವಸ್ಥೆ .ಇಲ್ಲಿ ಅಧಿಕಾರ ವರ್ಗ, ಸರ್ಕಾರಿ ನೌಕರರು ಹಾಗೂ ಇತರರು ಇರುತ್ತಾರೆ.
ಇನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಅಧಿಕಾರದ ಅವಧಿ ಐದು ವರ್ಷಗಳು. ಅವರ ಅವಧಿಯಲ್ಲಿ ಜನಪರ ಕೆಲಸಗಳನ್ನು ಮಾಡಿ ಮತ್ತೆ ಅಧಿಕಾರದ ಗದ್ದುಗೆ ಏರಬಹುದು ಇಲ್ಲವಾದಲ್ಲಿ ಜನರಿಗೆ ಅವರನ್ನು ತಿರಸ್ಕರಿಸುವ ಅಧಿಕಾರ ಮತಚಲಾವಣೆಯ ಮುಖಾಂತರ ಭಾರತದ ಸಂವಿಧಾನ ಅವಕಾಶ ಮಾಡಿಕೊಟ್ಟಿರುತ್ತದೆ. ಅಧಿಕಾರಕ್ಕೆ ಬಂದ ಮಾತ್ರಕ್ಕೆ ಅವರು ಕಾನೂನಿನ ಹಾಗೂ ಸಂವಿಧಾನಿಕ ಚೌಕಟ್ಟನ್ನು ಮೀರಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಂತಿಲ್ಲ . ಸಂವಿಧಾನದ ಅರಿವಿಲ್ಲದ ಜನಪ್ರತಿನಿಧಿಗಳು ಅಂತಹ ಕೆಲಸಗಳನ್ನು ಮಾಡಿ ಕೈಸುಟ್ಟುಕೊಂಡ ನಿದರ್ಶನಗಳು ಭಾರತದಲ್ಲಿ ಬಹಳ ಇವೆ.
ಇನ್ನು ಕಾರ್ಯಂಗ ಸುಸೂತ್ರ ಆಡಳಿತ ನಿರಂತರವಾಗಿ ನಡೆಯಲು ಇರುವ ಒಂದು ಉತ್ತಮ ವ್ಯವಸ್ಥೆ ಆದರೆ ಕೆಲವೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಗುಣವಾಗಿ ತಮ್ಮ ಕಾರ್ಯವನ್ನು ಕಾರ್ಯಂಗದವರು ತೋರುತ್ತಾರೆ. ಅಥವಾ ಒತ್ತಡದ ನಿಮಿತ್ತ ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಾರೆ . ಶಾಸಕಾಂಗ ಹಾಗೂ ಕಾರ್ಯಾಂಗ ತಮ್ಮ ವ್ಯಾಪ್ತಿಯನ್ನು ಮೀರಿ ವರ್ತಿಸಿದಾಗ ನ್ಯಾಯಾಂಗವು ಸಂವಿಧಾನಾತ್ಮಕ ರಕ್ಷಣೆಯ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಬಹುದು.
ಇನ್ನು ನ್ಯಾಯಾಂಗ ವ್ಯವಸ್ಥೆಯು ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿರುವುದು ಇಡೀ ವಿಶ್ವದಲ್ಲಿ ಭಾರತದಲ್ಲಿ ಮಾತ್ರ ಏಕೆಂದರೆ ಇಲ್ಲಿ ನ್ಯಾಯಾಧೀಶರನ್ನು ಯಾವುದೇ ರಾಜಕೀಯ ವ್ಯವಸ್ಥೆ ಆಯ್ಕೆ ಮಾಡುವುದಿಲ್ಲ . ಭಾರತದಲ್ಲಿ ನ್ಯಾಯಾಧೀಶರನ್ನು ನ್ಯಾಯಾಧೀಶರೇ ಆಯ್ಕೆ ಮಾಡುವ ವಿಧಾನ ಚಾಲ್ತಿಯಲ್ಲಿದೆ. ಅದು ನ್ಯಾಯಾಂಗವನ್ನು ಪಕ್ಷತೀತವಾಗಿ ಕಾರ್ಯನಿರ್ವಹಿಸಲು ಅನುವುಮಾಡಿಕೊಡುತ್ತದೆ. ನ್ಯಾಯಾಂಗ ತೀರ್ಪುಗಳು ಭಾರತದ ಸಂವಿಧಾನ ರಕ್ಷಣೆಗೆ ಒಳಪಟ್ಟು ತಮ್ಮ ತೀರ್ಪನ್ನು ನೀಡುತ್ತ ಬಂದಿವೆ. ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಈ ನೆಲದ ಅಂತಿಮ ಕಾನೂನಾಗಿ ರೂಪಗೊಂಡಿರುವ ಇತಿಹಾಸವಿದೆ.
ಭಾರತದ ರಾಷ್ಟ್ರೀಯ ಲಾಂಛನದಲ್ಲಿ ಕಾಣುವ ಮೂರು ಸಿಂಹಗಳಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಕಾರ್ಯನಿರ್ವಹಿಸುತ್ತವೆ ಕಾಣದೆ ಇರುವ ಸಿಂಹವೇ ಪ್ರಜಾಪ್ರಭುತ್ವ .ಈ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೂರು ವ್ಯವಸ್ಥೆಗಳು ಸುಗಮವಾಗಿ ಸಾಗಬೇಕು. ಅದರಲ್ಲೂ ನ್ಯಾಯಾಂಗ ವ್ಯವಸ್ಥೆಯು ಶಾಸಕಾಂಗ ಹಾಗೂ ಕಾರ್ಯಾಂಗದ ತಪ್ಪುಗಳನ್ನು ತಿದ್ದುಪಡಿ ಮಾಡಿ ಸಂವಿಧಾನವನ್ನು ರಕ್ಷಣೆ ಮಾಡುತ್ತ ನಡೆಯಬೇಕಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಏರುಪೇರಾದರೆ ಪ್ರಜಾಪ್ರಭುತ್ವದ ರಕ್ಷಣೆ ಅಸಾಧ್ಯ . ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆಯಾದರೆ ರಾಷ್ಟ್ರೀಯ ಏಕತೆಗೆ ಭಂಗ ಉಂಟಾಗುತ್ತದೆ. ಅಂತಿಮವಾಗಿ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುವ ಸಂಭವವಿರುತ್ತದೆ ಅಂತಹ ಒಂದು ಸಂದರ್ಭವನ್ನು ತಡೆಯುವಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಸಫಲವಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ಮೂರು ವ್ಯವಸ್ಥೆಯು ಸಮನಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ..