ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಬದುಕು ನಡೆಯುವುದು ನಮ್ಮ ಕರ್ತವ್ಯದ ಮೇಲೆ ನಮ್ಮ ಬದುಕಿನಲ್ಲಿ ಒಂದು ಕರ್ತವ್ಯ ಇದ್ದೇ ಇರುತ್ತದೆ. ಅದೇ ನಾವು ಪ್ರಾಣಿ ಪಕ್ಷಿಗಳಾಗಿ ಇದ್ದಿದ್ದರೆ ಸ್ವಾತಂತ್ರವಾಗಿ ಸ್ವಚ್ಛಂದವಾಗಿ ಯಾವುದೇ ದೇಶ ಭಾಷೆ ಕಾನೂನಿನ ಮಿತಿ ಇಲ್ಲದೆ ಬದುಕಲು ಅವಕಾಶವಾಗುತ್ತಿತ್ತು. ಆದರೆ ಮನುಷ್ಯನು ಆಗಿ ಬದುಕಲು ಸಾಧ್ಯವಿಲ್ಲ ಅವನು ಎಲ್ಲದರ ಪರಿಮಿತಿಯಲ್ಲಿ ಬದುಕಬೇಕಾಗುತ್ತದೆ. ಅದರಲ್ಲೂ ಅವನಿಗೆ ಇತಿಮಿತಿಗಳಿವೆ . ನಾವು ಯಾವುದೇ ಕರ್ತವ್ಯ ಮಾಡುವಾಗ ಅದರ ಸಾಧಕ ಬಾದಕ ಬಗ್ಗೆ ಯೋಚಿಸುತ್ತೇವೆ. ಹಾಗೂ ನಾವು ಮಾಡುವ ಕೆಲಸದಿಂದ ಬೇರೆಯವರು ನಮ್ಮನ್ನು ಗುರುತಿಸಲಿ ಎಂದು ಭಾವಿಸುತ್ತೇವೆ ಅವರ ಗುರುತುಸುವಿಕೆ ನಮ್ಮ ಅಹಂ ಅನ್ನು ಸಮಾಧಾನ ಪಡಿಸುವುದಕ್ಕೆ ಸೀಮಿತವಾಗುತ್ತದೆ. ನಮಗೆ ನಮ್ಮ ಕರ್ತವ್ಯದ ಬಗ್ಗೆ ಅತಿಯಾದ ಮೋಹವಿರಬಾರದು. ನಾವು ಮಾಡುವ ಕೆಲಸ ಮೊದಲು ನಮಗೆ ಆತ್ಮ ತೃಪ್ತಿಯನ್ನು ನೀಡುವಂತಿರಬೇಕು. ಆತ್ಮತೃಪ್ತಿ ಇಲ್ಲದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಿಲ್ಲ ನಮ್ಮ ಕೆಲಸಗಳು ನಮ್ಮ ಜೊತೆಗಾರರಿಗೆ ಹಾಗೂ ನಮ್ಮನ್ನು ನಂಬಿ ಬಂದವರಿಗೆ ಅನುಕೂಲಗಳಾಗುವಂತಿರಬೇಕು. ನಮ್ಮಿಂದ ಅನುಕೂಲ ಆಗುವ ಸಂಭವವಿದ್ದರೆ ಮಾತ್ರ ನಮ್ಮನ್ನು ಬಳಸಿಕೊಳ್ಳುವ ಜನರಿಂದ ದೂರವಿರಬೇಕು. ನಮ್ಮನ್ನು ಶ್ಲಾಘಿಸುವವರು ಮತ್ತು ನಿಂದಿಸುವವರು ಯಾರು ಶಾಶ್ವತವಲ್ಲ. ಎರಡನ್ನು ತೀರ ಹಚ್ಚಿಕೊಳ್ಳದೆ ನಮ್ಮ ಸಮಯ ಮುಗಿಯುವ ಮುನ್ನ ಆತ್ಮ ವಂಚನೆ ಇಲ್ಲದೆ ನಮ್ಮ ಪಾಲಿನ ಕರ್ಮವನ್ನು ( ಕೆಲಸವನ್ನು ) ನಮಗೆ ನಾವು ವಂಚಿಸಿಕೊಳ್ಳದೆ ಮಾಡಿ ಹೊರಡಬೇಕಷ್ಟೆ.
Rakesh Bhagiratha.
Saturday, July 12, 2025
Saturday, May 31, 2025
ಡಾ ಬಸಪ್ಪ ( ಕಾನೂನು ಉಪನ್ಯಾಸಕರು )
ಪ್ರತಿ ಆರಂಭಕ್ಕೂ ಒಂದು ಅಂತ್ಯವಿರುತ್ತದೆ. ಅಂತ್ಯವೆಂದರೆ ಮತ್ತೊಂದು ಹೊಸ ಆರಂಭಕ್ಕೆ ನಾಂದಿ. ಅಂತಹ ನಿವೃತ್ತಿ ಜೀವನಕ್ಕೆ ಕಾಲಿಟ್ಟುತ್ತಿರುವ ನನ್ನ ಪ್ರೀತಿಯ ಗುರುಗಳಿಗೆ ಅನಂತ ಧನ್ಯವಾದಗಳು. ಬದುಕಿನಲ್ಲಿ ಹಲವಾರು ಗುರುಗಳನ್ನು ನಾವು ಕಾಣಬಹುದು ಆದರೆ ಆ ಗುರುವಿನ ಅರ್ಥವನ್ನು ಪರಿಪೂರ್ಣಗೊಳಿಸುವುದು ಕೆಲವರು ಮಾತ್ರ ಅಂತಹ ಗುರುಗಳಲ್ಲಿ ನೀವು ಒಬ್ಬರು. ಉತ್ತಮ ಗುರುವಿನ ಮಾರ್ಗದರ್ಶನ ನನ್ನ ಎಲ್.ಎಲ್. ಬಿ ಜೀವನ ದುದ್ದಕ್ಕೂ ತುಂಬಾ ಅವಶ್ಯಕವಾಗಿ ಬೇಕಾಗಿತ್ತು. ರಾಜಕೀಯ ಹಿನ್ನಲೆಯಿಂದ ಬಂದು ಎಲ್.ಎಲ್.ಬಿ ಸೇರಿದಾಗ ರಾಜಕೀಯಕ್ಕಾಗಿಯೇ ಕಾನೂನನ್ನು ಓದಲು ನಿಶ್ಚಯಿಸಿ ಬಂದೆ. ಕಾನೂನು ಪದವಿಯನ್ನು ಸೇರಿದಾಗ ಯಾವುದೇ ಕಾರಣಕ್ಕೂ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುವ ಯಾವುದೇ ಯೋಚನೆ ಕೂಡ ಇರಲಿಲ್ಲ. ಆದರೆ ನಿಮ್ಮ ಮಾರ್ಗದರ್ಶನದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಮೊದಲನೆಯ ವರುಷ ಕಾಲೇಜಿನ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವಿರೋಧವಾಗಿ ಕ್ಲಾಸ್ ರೆಪ್ರೆಸೆಂಟೇಟಿವ್ ಆಗಿ ಆಯ್ಕೆಯಾಗಿದ್ದು ನನ್ನ ರಾಜಕೀಯ ಆಸೆಗಳಿಗೆ ಕೊನೆ ಎಂಬಂತೆ ಆಯಿತು. ನಿಮ್ಮ ಪ್ರತಿ ಹಂತದ ಮಾರ್ಗದರ್ಶನ ಅದರಲ್ಲೂ ಕರಾರು ಅಧಿನಿಯಮದ ಉಪನ್ಯಾಸಗಳು ಇಂದು ಗುಯ್ಗೂಡುತ್ತಿದೆ . ನೀವು ಹೇಳಿಕೊಟ್ಟ ಎಷ್ಟು ಉದಾಹರಣೆಗಳು ಯಾವುದೇ ಬಾಯಿ ಪಾಠ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳದೆ ಹಾಗೆ ಅಜರಾಮಜರಾಮವಾಗಿ ಉಳಿದಿದೆ. ಕಾರಣ ನಿಮ್ಮ ಅದ್ಭುತವಾದ ಪಾಠ. ಕನ್ನಡ ಹಾಗೂ ಇಂಗ್ಲಿಷ್ ಎರಡರಲ್ಲೂ ಉಪನ್ಯಾಸದ ಪ್ರಾವಿಣ್ಯ ಹೊಂದಿದ್ದ ನೀವು ಕನ್ನಡದ ಮಕ್ಕಳಿಗೆ ಅನ್ಯಾಯವಾಗಬಾರದೆಂದು ಕನ್ನಡದಲ್ಲಿ ಹಾಗೂ ಇಂಗ್ಲಿಷ್, ಎರಡು ಭಾಷೆಯಲ್ಲಿ ನಮಗೆ ಪಾಠ ಹೇಳುತ್ತಿದ್ದಿದ್ದು ಇವತ್ತಿಗೂ ಪ್ರತಿ ಅಕ್ಷರವು ನೆನಪಿನಲ್ಲಿ ಉಳಿಯುವಂತೆ ಮಾಡಿದೆ.
ನೀವು ಎಂದರೆ ಇಡೀ ಕಾಲೇಜಿನಲ್ಲಿ ಒಂದು ರೀತಿಯ ಭಯ ಇದ್ದೇ ಇತ್ತು. ಆದರೆ ನನಗದು ಇರಲಿಲ್ಲ ಏಕೆಂದರೆ ಪ್ರಾಮಾಣಿಕತೆಗೆ ನೀವು ಕೊಡುವ ಬೆಲೆಯ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದ್ದೇನು. ಪ್ರಾಮಾಣಿಕವಾಗಿ ಓದು ಹಾಗೂ ಬರಹದಲ್ಲಿ ಮುಂದಿದ್ದ ನನಗೆ ಹೆಚ್ಚಿನ ಅಂಕಗಳನ್ನು ನೀಡಿದಾಗ ಬೇರೆ ಉಪನ್ಯಾಸಕರು ಸೋಜುಗದಿಂದ ಆ ಅಂಕಗಳನ್ನು ತಿರುವಿ ನೋಡಿದಾಗ ನನಗೆ ಸ್ಪಷ್ಟವಾಗಿತ್ತು ನಾನು ನಿಮಗೆ ಪ್ರಿಯ ಶಿಷ್ಯನಾಗಿದ್ದೇನೆಂದು. ಅದನ್ನು ಉಳಿಸಿಕೊಳ್ಳಲು ನಾನು ಕೊನೆವರೆಗೂ ಹೋರಾಡಿದೆ. ನೀವು ಮಾಡಿದ ಪಾಠ, ವಕೀಲರು ಹೇಗೆ ವರ್ತಿಸಬೇಕೆಂಬುದು ನನಗೆ ಒಂದು ಉತ್ತಮ ದಾರಿಯಾಗಿ ತೋರಿದೆ. ನಿಮ್ಮ ಮಾರ್ಗದರ್ಶನದಲ್ಲಿ ನಾನು ಉತ್ತಮ ಅಂಕಗಳನ್ನು ಗಳಿಸುತ್ತ ಹೋದೆ. ನೀವು ಎಂದೂ ಯಾವ ವಿದ್ಯಾರ್ಥಿಗಳಲ್ಲಿ ಭೇದ ಭಾವ ಮಾಡಿದವರಲ್ಲ ಬೇರೆಯವರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದವರಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ತುಂಬ ಅಚ್ಚುಕಟ್ಟಾದ ಶಿಸ್ತಿನ ಜೀವನದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ, ಅಂತಹ ಮಾರ್ಗದರ್ಶನವೇ ನಮ್ಮನ್ನು ಉತ್ತಮ ದಾರಿಗೆ ಕೊಂಡೊಯ್ಯುತ್ತಿದೆ.
ನಾನು ಅಂತಿಮ ವರ್ಷ ತಲುಪಿದಾಗ ನಿಮ್ಮ ಸಲಹೆ ಮೇರೆಗೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಎಲ್ಲಾ ಅವಕಾಶಗಳಿದ್ದು ಹಾಗೂ ಒತ್ತಾಯಗಳಿದ್ದರೂ ಹಿಂದೆ ಸರಿದೆ. ನೀವು ಬದುಕಿನ ಪಾಠವನ್ನು ಹೇಳುತ್ತಾ ಬದುಕನ್ನು ಕಟ್ಟಿಕೊಳ್ಳಲು ಉಪಯುಕ್ತವಾಗುವಂತಹ ಸಲಹೆಗಳನ್ನು ಕೊಡುತ್ತಾ ಬಂದಿರಿ. ನನ್ನ ಮೇಲಿನ ನಂಬಿಕೆಯಿಂದ ಕಾಲೇಜಿನಲ್ಲಿ ಹಲವಾರು ಕಾರ್ಯಕ್ರಮಗಳ ಉಸ್ತುವಾರಿಯನ್ನು ಕೂಡ ನನಗೆ ವಹಿಸಿದಿರಿ, ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದಿರಿ. ಕಾಲೇಜಿಗೆ ಸೇರಿದಾಗ ಇದ್ದ ರಾಜಕೀಯ ಆಸಕ್ತಿ ಕಾಲೇಜು ಮುಗಿದು ಹೊರಗೆ ಬರುವುದರಲ್ಲಿ ನಿಮ್ಮ ಮಾರ್ಗದರ್ಶನದಿಂದ ಕಡಿಮೆಯಾಗಿತ್ತು. ನಿಮ್ಮ ಬದುಕಿನ ಪಾಠ ಬದುಕು ಕಟ್ಟಿಕೊಳ್ಳಲು ದಾರಿಯನ್ನು ತೋರುತ್ತಿತ್ತು. ಹಾಗಾಗಿ ಕಾನೂನಿನಲ್ಲಿ ನನ್ನ ವೃತ್ತಿ ಜೀವನವನ್ನು ಕಂಡುಕೊಂಡೆ . ಅದರಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದೇನೆ. ಒಬ್ಬ ಶಿಷ್ಯನಿಗೆ ಸೂಕ್ತವಾದ ಮಾರ್ಗವನ್ನು ತೋರಿಸುವ ಗುರುವಾದ ನೀವು ನನಗೆ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಕೊನೆಯದಾಗಿ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಶ್ಲೋಕದಿಂದ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ನಿಮ್ಮ ವೃತ್ತಿಗೆ ಜೀವನವು ಮತ್ತಷ್ಟು ವಿದ್ಯಾರ್ಥಿಗಳಿಗೆ ಬೆಳಕಾಗಲಿ.
Wednesday, April 30, 2025
ಧರ್ಮದ ಗುರುಗಳು
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಸದ್ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತೊಂದಿದೆ. ಗುರು ಎಂದರೆ ಯಾರು ಎಂದು ಹುಡುಕುತ್ತ ಹೊರಟರೆ ಹಲವಾರು ಮಂದಿ ಸಿಗಬಹುದು. ಆದರೆ ನಿಜವಾದ ಧರ್ಮವನ್ನು ಪಾಲಿಸುವ ಸದ್ಗುರು ಸಿಗಲು ಹಲವು ಜನ್ಮಗಳ ಪುಣ್ಯವೇ ಬೇಕಾಗುತ್ತದೆ. ಬದುಕಿನಲ್ಲಿ ಈ ಪ್ರತಿಯೊಂದುಕ್ಕೂ ಅರ್ಹತೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಒಬ್ಬ ಉತ್ತಮ ಗುರುವಾಗಲು ಅರ್ಹತೆ ಬೇಕೇ ಬೇಕು ಎಂಬ ಪರಿಜ್ಞಾನ ಇಲ್ಲದ ಹಲವಾರು ಜನರು ಸಿಕ್ಕಸಿಕ್ಕವರನ್ನು ಗುರುಗಳೆಂದು ಸಂಬೋಧಿಸುತ್ತಾರೆ ಹಾಗೂ ಹೋಗಿ ಅವರ ಕಾಲಿಗೆ ದೀರ್ಘದಂಡ ನಮಸ್ಕಾರವನ್ನು ಹಾಕುತ್ತಾರೆ. ಇಂದು ಗುರುಗಳ ರೂಪದಲ್ಲಿ ಹಲವಾರು ಜನರು ಇರಬಹುದು ಅವರಿಗೆ ಬೇಕಾದಂತೆ ಬೋಧನೆಗಳನ್ನು ಮಾಡುತ್ತ ಹಣ ಸಂಪಾದಿಸಿಕೊಂಡು ಇಂದು ಮಹಾನ್ ವ್ಯಕ್ತಿಗಳಂತೆ ಬಿಂಬಿಸಿಕೊಳ್ಳುತ್ತಾ ಧರ್ಮ ಕಾರ್ಯವನ್ನು ಮರೆತು ನಿಂತಿದ್ದಾರೆ. ಕಲಿಯ ಪ್ರಭಾವ ಎಲ್ಲಿಯವರೆಗೆ ಬಂದಿದೆ ಎಂದರೆ ಅಂಥವರಿಗೆ ಜನರು ದೀರ್ಘ ದಂಡ ನಮಸ್ಕಾರವನ್ನು ಹಾಕುತ್ತ ಕೈಮುಗಿಯುತ್ತ ತಮ್ಮ ಪಾಪಕರ್ಮಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಧರ್ಮ ದಾರಿಯಿಂದ ವಿಮುಖರಾಗಿ ವಿಲಾಸಿ ಜೀವನದಲ್ಲಿ ಮುಳುಗಿ ನಾವು ಮಹಾನ್ ಗುರುಗಳ ಭಕ್ತರು ಎಂಬಂತೆ ಬಿಂಬಿಸಿಕೊಳ್ಳುತ್ತಾ ನಾವು ಮಹಾನ್ ದೈವದ ಭಕ್ತರೆಂದು ತೋರಿಸಿಕೊಳ್ಳುತ್ತಾ ಅತ್ಯಾಚಾರ ಅನಾಚಾರಗಳನ್ನು ಮಾಡುತ್ತಾ ಯಥಾ ಗುರು ತಥಾ ಶಿಷ್ಯ ಎನ್ನುವಂತೆ ಇರುತ್ತಾರೆ. ಧರ್ಮ ಕಾಯುವ ಗುರುಗಳನ್ನು ನಮ್ಮ ನಾಡು ಕಂಡಿರುವುದು ಬಲ ಅಪರೂಪವೆಂದೆ ಹೇಳಬಹುದು. ಅಂತಹ ಧರ್ಮ ಗುರುಗಳನ್ನು ಹುಡುಕುತ್ತಾ ಹೊರಟಾಗ ಸಿಗುವುದು ಕೇವಲ ಇಬ್ಬರು ಮಾತ್ರ.
ಕರ್ನಾಟಕ ಕಂಡ ಶ್ರೇಷ್ಠ ಗುರುಗಳು ಈ ನಾಡಿನಲ್ಲಿ ಸತ್ಯ ನ್ಯಾಯದಿಂದ ಧರ್ಮವನ್ನು ಉಳಿಸಿದ್ದಾರೆ ಅಂತಹ ಧರ್ಮಗುರುಗಳ ಪೈಕಿ ನಾಯಕನಹಟ್ಟಿಯ ತಿಪ್ಪೇರುದ್ರ ಸ್ವಾಮಿಯವರು ಹಾಗೂ ರಾಜ ಬಪ್ಪನಗೌಡಪುರದ ಮಂಟೇಸ್ವಾಮಿಗಳು ಪ್ರಮುಖರು. ಧರ್ಮದ ಮಜಲುಗಳನ್ನು ತಿಳಿದ ಗುರುಗಳಾಗಿದ್ದವರು ಅವರ ಧರ್ಮ ಪರಿಪಾಲನೆ ಯಾವ ಪರಿಯ ಇತ್ತು ಎನ್ನುವುದು ಕೆಲವು ಘಟನೆಗಳಿಂದ ತಿಳಿಯಬಹುದಾಗಿದೆ.
ಮೊದಲನೆಯದಾಗಿ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ಅವರ ಧರ್ಮ ಪ್ರಜ್ಞೆ ಬಗ್ಗೆ ತಿಳಿಯೋಣ. ಅವರು ಶಿವ ಕೈಲಾಸದಿಂದ ಬಂದ ಶಿವಗಣದವರೆಂದು ಹೇಳುವುದುಂಟು, ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ಸಾಮಾನ್ಯ ಜನರಿಗೆ ಬದುಕನ್ನು ಕಟ್ಟಿಕೊಟ್ಟವರಲ್ಲಿ ಪ್ರಮುಖರು. ಹೀಗೆ ಅವರು ಕೈಲಾಸದಿಂದ ಲೋಕ ಕಾರ್ಯ ಮಾಡುತ್ತಾ ಬಂದು ನಮ್ಮ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿ ಬರಡಾಗಿದ್ದ ಪ್ರದೇಶದಲ್ಲಿ ಒಂದು ದೊಡ್ಡ ಕೆರೆಯನ್ನು ಕಟ್ಟಲು ಸಂಕಲ್ಪವನ್ನು ಮಾಡಿದರು. ಅದರಂತೆ ಕೆಲಸವೂ ಶುರುವಾಯಿತು. ಅವರು ಯಾರಿಂದಲೂ ಉಚಿತವಾಗಿ ಕೆಲಸ ಮಾಡಿಸಿಕೊಂಡವರಲ್ಲ. ಕೆರೆಯನ್ನು ಕಟ್ಟಲು ಕೂಲಿ ಆಳುಗಳನ್ನು ನೇಮಿಸಿದರು. ಕೆಲಸ ಮುಗಿಸಿ ಸಂಬಳ ಪಡೆಯಲು ಗುರುಗಳ ಹತ್ತಿರ ಕೂಲಿ ಆಳುಗಳು ಹೋದಾಗ ಅವರು ಕೂಲಿ ಆಳುಗಳಿಗೆ ನಿಮ್ಮ ಮುಂದೆ ಎಲ್ಲರೂ ಮಣ್ಣಿನ ಗುಡ್ಡೆ ( ದಿಬ್ಬ) ಯನ್ನು ಮಾಡಿಕೊಳ್ಳಿ ಎಂಬ ಆದೇಶವನ್ನು ಇದ್ದರು. ಅದರಂತೆ ಎಲ್ಲರೂ ಮಣ್ಣಿನ ಗುಡ್ಡೆಯನ್ನು ಮಾಡಿದರು. ಆಗ ಗುರುಗಳು ತಮ್ಮ ಕೈಯಲ್ಲಿದ್ದ ಬೆತ್ತದ ಕೋಲಿನಿಂದ ಗುಡ್ಡೆ ಒಳಗೆ ತಿವಿಯುತ್ತಾ ಬಂದರು. ಆನಂತರ ನಿಮ್ಮ ಫಲವನ್ನು ನೀವು ತೆಗೆದುಕೊಂಡು ಹೋಗಬಹುದು ಎಂದರು. ಅದು ಕೂಲಿ ಆಳುಗಳಿಗೆ ಅರ್ಥವಾಗಲಿಲ್ಲ. ನಂತರ ಗುರುಗಳು ನಿಮ್ಮ ಫಲ ಅದರಲ್ಲಿ ಅಡಕವಾಗಿದೆ ತೆಗೆದುಕೊಂಡು ಹೋಗಿ ಎನ್ನಲು ಕೂಲಿ ಆಳುಗಳು ಗುಡ್ಡೆಯನ್ನು ಕದಡಿದಾಗ ಕೆಲವರಿಗೆ ಅದರಲ್ಲಿ ಹೆಚ್ಚು ಹಣ ಮತ್ತು ಕೆಲವರಿಗೆ ಕಡಿಮೆ ಹಣವು ಇದ್ದೀತು. ಇದನ್ನು ನೋಡಿ ಎಲ್ಲರೂ ಆಶ್ಚರ್ಯ ಚಿಕಿತರಾದರು. ಅದರಲ್ಲಿ ಒಬ್ಬ ಭಕ್ತ ಕೇಳಿಯೇ ಬಿಟ್ಟ ಎಲ್ಲರೂ ಕೆಲಸ ಮಾಡಿದರು ಏಕೆ ಒಬ್ಬರಿಗೆ ಹೆಚ್ಚು ಮತ್ತೆ ಒಬ್ಬರಿಗೆ ಕಡಿಮೆ ಹಣವು ಬಂದಿದೆ ಎಂದು, ಅದಕ್ಕೆ ಗುರುಗಳು ಹೇಳಿದರು ಅವರವರ ಬೆವರಿನ ಫಲ ಅವರಿಗೆ ಸಂದಾಯವಾಗಿದೆ. ಕಷ್ಟಪಟ್ಟು ನಿಯತ್ತಾಗಿ ಕೆಲಸ ಮಾಡಿದವನಿಗೆ ಹೆಚ್ಚು ಹಣ ಹಾಗೂ ಕಳ್ಳಾಟ ಮಾಡಿದವನಿಗೆ ಕಡಿಮೆಯಾಗಿದೆ ಬೇಕಿದ್ದರೆ ಅವರವರನ್ನೇ ಕೇಳಿ ನೋಡಿ ಎಂದರು ಇದರಿಂದ ಕಳ್ಳಾಟ ಆಡಿ ಕೆಲಸವನ್ನು ಕದ್ದಂತಹ ಕೂಲಿ ಆಳುಗಳಿಗೆ ಮುಖ ಇಲ್ಲದಂತಾಯಿತು. ಒಟ್ಟಿನಲ್ಲಿ ನ್ಯಾಯದ ತೀರ್ಪನ್ನಿತ್ತರು. ತಪ್ಪಿಗೆ ಶಿಷ್ಯರಾದರೂ ಶಿಕ್ಷೆ, ಅಂದರೆ ನ್ಯಾಯದ ಫಲವನ್ನು ಮಾತ್ರ ನೀಡಿದರು ಹೀಗೆ ಧರ್ಮ ಸಂರಕ್ಷಣೆಯಲ್ಲಿ ರಾಜಿ ಇಲ್ಲದಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು.
ಇನ್ನು ಮಂಟೇಸ್ವಾಮಿಯವರ ಧರ್ಮದ ಬಗ್ಗೆ ತಿಳಿಯುತ್ತ ಹೋಗೋಣ, ಅವರು ಮತ್ತಾರು ಅಲ್ಲ ಇಂದು ನಾವು ಏನು ಜಗಜ್ಯೋತಿ ಬಸವಣ್ಣವೆಂದು ಕರೆಯುತ್ತೇವೆ. ಅಂತಹ ಬಸವಣ್ಣನವನಿಗೆ ಗುರುಗಳಾಗಿದ್ದವರು. ಅವರಿಗೆ ಅಲ್ಲಮಪ್ರಭು ಎಂದು ಕರೆಯುವುದುಂಟು. ಅವರು ಶಿವ ಸ್ವರೂಪದ ಜ್ಯೋತಿಯಾಗಿ ಬಸವಣ್ಣನಿಗೆ ಕಂಡು ಕಾಲಜ್ಞಾನವನ್ನು ಹೇಳಿ ಬಸವಣ್ಣನು ಐಕ್ಯ ಆಗಲು ನೆರವಾದವರು. ಅವರು ಯಾತ್ರೆಯನ್ನು ಮಾಡುತ್ತ ತನ್ನ ಪ್ರಿಯ ಶಿಷ್ಯನನ್ನು ಹುಡುಕುತ್ತಾ ದಕ್ಷಿಣದ ಕಡೆ ಹೆಜ್ಜೆ ಇಡಲು ಪ್ರಿಯ ಶಿಷ್ಯ ಸಿಗುತ್ತಾನೆ. ಅವನು ಚಿನ್ನ ಮಾಡುವ ಕುಲದಲ್ಲಿ ಹುಟ್ಟಿ ಅಹಂಕಾರ, ಮದ ಮತ್ಸರದಲ್ಲಿ ತನ್ನ ಹುಟ್ಟಿನ ಗುಟ್ಟನ್ನೇ ತಿಳಿಯದವನಾಗಿರುತ್ತಾನೆ. ತನ್ನ ಪ್ರಿಯ ಶಿಷ್ಯನನ್ನು ಕಾಣಲು ಹೋದಾಗ ಅವನು ಆಡಿದ ತಾಳಿಗೆ ಅಪಮಾನ ಆಗುವಂತೆ ಆಡಿದ ಮಾತಿನ ಅವನ ದುರಂಕಾರವನ್ನು ತಿಳಿದ ಗುರುಗಳು. ತನ್ನ ಶಿಷ್ಯನು ಇವನು ಎನ್ನುವುದನ್ನು ನೋಡದೆ ಅವನು ಜೀವನ ಪರ್ಯಂತ ಮದುವೆಯಾಗದಂತೆ ಹಾಗೂ ಆ ಮಾತನ್ನು ಅಂದ ಮಾತಿಗೆ ತಪ್ಪಿಗೆ ಶಿಕ್ಷೆಯಾಗಿ ಅವನನ್ನು ಗವಿಯೊಳಗೆ ಕೂಡಿ ಅವನ ಅಹಂಕಾರವನ್ನು ಭಸ್ಮ ಮಾಡಿ ಅವನನ್ನು ಪರಿಪೂರ್ಣನಾಗಿ ಮಾಡುತ್ತಾರೆ. ಅವರೇ ಮುಂದೆ ಸಿದ್ದಪ್ಪಾಜಿ ಆಗಿ ಹಳೆ ಮೈಸೂರು ಭಾಗದಲ್ಲಿ ಹಲವಾರು ಮನೆಗಳ ಕುಲದೈವವಾಗಿ ಇಂದಿಗೂ ಪೂಜ್ಯರಾಗಿದ್ದಾರೆ. ಹೀಗೆ ಧರ್ಮವೆಂಬುವುದು ಪಾಲಿಸುವುದು ಬಲು ಕಠಿಣವಾದ ಕೆಲಸ ತನ್ನ ಶಿಷ್ಯರೇ ಆಗಲಿ ಸಂಬಂಧಿಕರೇ ಆಗಲಿ ತಪ್ಪಿಗೆ ಶಿಕ್ಷೆಯನ್ನು ನೀಡಬಲ್ಲವನಿಂದ ಮಾತ್ರ ಧರ್ಮ ರಕ್ಷಣೆ ಸಾಧ್ಯ. ಹೀಗೆ ಧರ್ಮವನ್ನು ಎತ್ತಿ ಹಿಡಿದು ಕೆಲಸ ಮಾಡಿದ ಗುರುಗಳು ಮಾತ್ರ ಸರ್ವಕಾಲಕ್ಕೂ ಪೂಜೆಗೆ ಹಾಗೂ ಅನುಕರಣೆಗೆ ಅರ್ಹರಾಗಿರುತ್ತಾರೆ. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು.
ಪ್ರೀತಿ ಸುಧೀರ್ಘವಾಗಿ.....
ಪ್ರೀತಿ ಎಂಬುದು ಪ್ರತಿ ಮನುಷ್ಯನಲ್ಲೂ ಉಂಟಾಗುವ ಒಂದು ಭಾವನಾತ್ಮಕ ಪ್ರಕ್ರಿಯೆ. ಪ್ರೀತಿ ಇಲ್ಲದ ಜೀವ ಇಲ್ಲವೆಂದರೆ ತಪ್ಪಾಗಬಹುದು. ಪ್ರಾಣಿ ಪಕ್ಷಿಗಳಿಂದ ಹಿಡಿದು ಮನುಷ್ಯನವರೆಗೂ ಎಲ್ಲರೂ ಒಂದಲ್ಲ ಒಂದು ರೀತಿಯ ಪ್ರೀತಿಯ ಸಂಕೋಲೆಯಲ್ಲಿ ಬದುಕು ನಡೆಯುತ್ತದೆ. ಪ್ರೀತಿ ಎಂಬುದು ಒಂದು ಶಕ್ತಿ ಚೈತನ್ಯ. ಅದು ಕೂಡ ಒಂದು ಹೆಣ್ಣು ಗಂಡಿನ ಪ್ರೀತಿಯಿಂದ ಅಸಾಧ್ಯವಾದದ್ದನ್ನು ಸಾಧಿಸಲು ನೆರವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ನಿಷ್ಕಲ್ಮಶವಾದ ಪ್ರೀತಿಯು ಕಡಿಮೆಯಾಗುತ್ತಿದೆ. ಇಂದು ಸ್ವಾರ್ಥ ಲಾಭ ನಷ್ಟದ ಲೆಕ್ಕಾಚಾರವನ್ನು ನೋಡಿಕೊಂಡು ಪ್ರೀತಿಯನ್ನು ಮಾಡುವ ಸಂಬಂಧಗಳು ಹೆಚ್ಚಾಗಿವೆ.
ನಿಜ ಪ್ರೀತಿಯನ್ನು ಸುಧೀರ್ಘವಾಗಿ ಉಳಿಸಿಕೊಳ್ಳಬೇಕೆಂದರೆ ಪ್ರೀತಿಸುವ ಮೊದಲೇ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಅದು ಸುಧೀರ್ಘವಾಗಿರಲು ಸಾಧ್ಯ. ಪ್ರೀತಿ ಮಾಡುವಾಗ ಎದುರುದಾರರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಸುವುದು ಒಳಿತು. ಹುಡುಗ ಹುಡುಗಿ ಯಾರೇ ಆದರೂ ಪ್ರೀತಿಯನ್ನು ತಕ್ಷಣ ವ್ಯಕ್ತಪಡಿಸಬಾರದು. ಪ್ರೀತಿ ಮೊದಲು ಸ್ನೇಹವಾಗಬೇಕು ಸ್ನೇಹ ಸುಧೀರ್ಘವಾಗಿ ನೆಲೆ ನಿಂತರೆ ಮಾತ್ರ ಪ್ರೀತಿ ಉಳಿಯಲು ಸಾಧ್ಯ. ಸ್ನೇಹ ಸಾಧ್ಯವಾಗದಿದ್ದಾಗ ಪ್ರೀತಿ ಉಳಿಯಲು ಹೇಗೆ ಸಾಧ್ಯ.....? ಪ್ರೀತಿಯಲ್ಲಿ ಬೀಳುವಾಗ ನೀವು ನಿಮ್ಮತನವನ್ನು ಉಳಿಸಿಕೊಂಡರೆ ಪ್ರೀತಿ ಸುದೀರ್ಘವಾಗಿ ಉಳಿಯುತ್ತದೆ.
ಕೆಲವರು ಪ್ರೀತಿಯಲ್ಲಿ ಬಿದ್ದಾಗ ಅವರ ನೈಜತೆಯನ್ನು ಅಂದರೆ ಇಲ್ಲದ ಗುಣಗಳನ್ನು ರೂಡಿಸಿಕೊಂಡು ಪ್ರೀತಿಯನ್ನು ಮಾಡುತ್ತಾರೆ. ಪರಸ್ಪರ ಜೊತೆ ಎಲ್ಲಿ ಇದ್ದಾಗ ಅವರ ನೈಜ ಗುಣಗಳು ಅನಾವರಣಗೊಂಡು ಪ್ರೀತಿಯಲ್ಲಿ ಬಿರುಕು ಮೂಡಿ ಮದುವೆ ನಂತರ ವಿಚ್ಛೇದನಗಳು ಆಗುತ್ತವೆ. ಅದಕ್ಕೆ ಹೇಳುವುದು ಪ್ರೀತಿಗೂ ಮುಂಚೆ ಸುದೀರ್ಘಸ್ನೇಹ ಅನಿವಾರ್ಯ ವೆಂದು, ನಿಮ್ಮ ಪ್ರೀತಿ ಸುಧೀರ್ಘವಾಗಿ ಉಳಿಯಬೇಕೆಂದರೆ ನೈಜತೆ ಅದಕ್ಕೆ ಶ್ರೀರಕ್ಷೆ. ಪ್ರೀತಿಯಲ್ಲಿ ನಿಷ್ಕಲ್ಮಶ ಭಾವವಿರಲಿ ಸ್ವಾರ್ಥ ಲೆಕ್ಕಾಚಾರದ ಪ್ರೀತಿಗಳು ಬಹಳ ದಿನಗಳ ಕಾಲ ಉಳಿಯುವುದಿಲ್ಲ. ಕಾಲಚಕ್ರದಲ್ಲಿ ಅವು ಮಾಯವಾಗಿ ಬಿಡುತ್ತವೆ. ಪ್ರೀತಿ ಮಾಡಿದಾಗ ಎಂತಹ ಕಷ್ಟದ ಸಮಯದಲ್ಲೂ ಜೊತೆಯಾಗಿ ನಿಲ್ಲಬೇಕು ಆಗ ಮಾತ್ರ ನಿಮ್ಮ ಪ್ರೀತಿಗೂ ಒಂದು ಬೆಲೆ ಸಿಗುತ್ತದೆ. ನಿಮ್ಮ ಪ್ರೀತಿ ಕೊನೆವರೆಗೂ ಉಳಿಯಬೇಕೆಂದರೆ ನಿಮ್ಮ ಭಾವ ಶುದ್ಧವಿರಲಿ ಅಂತರಂಗದಿಂದ ಮಾಡುವ ಪ್ರೀತಿ ಶಾಶ್ವತ. ಪ್ರೀತಿಯನ್ನು ಸುಧೀರ್ಘವಾಗಿ ಉಳಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿದೆ ಹೊರತು ಅದು ಹೊರಗಿನ ಏರುವಂತದ್ದಲ್ಲ. ಸುದೀರ್ಘವಾದ ಪ್ರೀತಿಗೆ ತ್ಯಾಗದ ಅವಶ್ಯಕತೆಯಂತೂ ಇದ್ದೇ ಇದೆ. ಆ ತ್ಯಾಗ ಇಬ್ಬರಿಂದಾದರೂ ಅಂತೂ ಇನ್ನೂ ಒಳಿತು. ನಿಷ್ಕಲ್ಮಶವಾದ ಪ್ರೀತಿಗೆ ಸಾವಿಲ್ಲ......
Subscribe to:
Posts (Atom)